ಆ್ಯಪಲ್​ನ ಇಕೋಸಿಸ್ಟಂನಿಂದ  ವಸತಿ ಯೋಜನೆ: ಭಾರತದಲ್ಲೂ ಉದ್ಯೋಗಿಗಳಿಗೆ ಮನೆ

Ravi Talawar
WhatsApp Group Join Now
Telegram Group Join Now

ನವದೆಹಲಿ, ಏಪ್ರಿಲ್ 8: ಭಾರತದಲ್ಲಿ ಆ್ಯಪಲ್​ನ ಇಕೋಸಿಸ್ಟಂನಿಂದ  ವಸತಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಆ್ಯಪಲ್ ಉತ್ಪನ್ನಗಳನ್ನು ತಯಾರಿಸಲಾಗುವ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮನೆಗಳನ್ನು ಕಟ್ಟಿ ಕೊಡಲು  ಯೋಜಿಸಲಾಗಿದೆ.

ಕಳೆದ ಎರಡೂವರೆ ವರ್ಷದಲ್ಲಿ ಆ್ಯಪಲ್​ನಿಂದ ಭಾರತದಲ್ಲಿ ಒಂದೂವರೆ ಲಕ್ಷ ನೇರ ಉದ್ಯೋಗಿಗಳು ಸೃಷ್ಟಿಯಾಗಿವೆ. ಈ ಪೈಕಿ 78,000ಕ್ಕೂ ಹೆಚ್ಚು ಮನೆಗಳನ್ನು ಕಟ್ಟಿಕೊಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಇದರಲ್ಲಿ ತಮಿಳುನಾಡಿನಲ್ಲೇ 58,000 ರೆಸಿಡೆನ್ಷಿಯಲ್ ಯೂನಿಟ್​ಗಳಿರಲಿವೆ ಎಂಬ ಮಾಹಿತಿ ತಿಳಿದುಬಂದಿದೆ. ಆ್ಯಪಲ್ ಸಂಸ್ಥೆ ಚೀನಾ ಮತ್ತು ವಿಯೆಟ್ನಾಂನಲ್ಲೂ ಇದೇ ರೀತಿ ಉದ್ಯೋಗಿಗಳಿಗೆ ವಸತಿ ವ್ಯವಸ್ಥೆಯ ನೀತಿ ಅನುಸರಿಸುತ್ತಿದೆ.

ಭಾರತದಲ್ಲಿ ಆ್ಯಪಲ್ ಕಂಪನಿ ತನ್ನ ಉತ್ಪನ್ನಗಳನ್ನು ನೇರವಾಗಿ ತಯಾರಿಸುವುದಿಲ್ಲ. ಅದಕ್ಕಾಗಿ ಗುತ್ತಿಗೆ ಕಂಪನಿಗಳು, ಸರಬರಾಜುದಾರರಿದ್ದಾರೆ. ಫಾಕ್ಸ್​ಕಾನ್, ಟಾಟಾ, ಪೆಗಾಟ್ರಾನ್ ಕಂಪನಿಗಳು ಐಫೋನ್​ಗಳನ್ನು ಆ್ಯಪಲ್​ಗಾಗಿ ತಯಾರಿಸಿಕೊಡುವ ಗುತ್ತಿಗೆ ಪಡೆದಿವೆ. ಫಿನ್​ಲ್ಯಾಂಡ್ ಮೂಲದ ಸಾಲ್​ಕಾಂಪ್ ಎಂಬ ಕಂಪನಿ ಐಫೋನ್​ನ ಚಾರ್ಜರ್ ಅನ್ನು ಭಾರತದಲ್ಲಿ ತಯಾರಿಸುತ್ತದೆ. ಬೇರೆ ಬೇರೆ ಬಿಡಿಭಾಗಗಳನ್ನು ತಯಾರಿಸಿಕೊಡುವ ಕಂಪನಿಗಳೂ ಇವೆ. ಈ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ವಸತಿ ಭಾಗ್ಯ ಸಿಗಲಿದೆ.

ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮನೆಗಳ ನಿರ್ಮಾಣವಾಗಲಿದೆ. ತಮಿಳುನಾಡಿನಲ್ಲಿ ಕಟ್ಟಲಾಗುವ 58,000 ಮನೆಗಳ ನಿರ್ಮಾಣ ಜವಾಬ್ದಾರಿಯನ್ನು ಸಿಪ್​ಕಾಟ್ ಸಂಸ್ಥೆ ವಹಿಸಿಕೊಂಡಿದೆ. ರಿಯಲ್ ಎಸ್ಟೇಟ್ ಕಂಪನಿ ಎಸ್​ಪಿಆರ್ ಇಂಡಿಯಾ ಮತ್ತು ಟಾಟಾ ಗ್ರೂಪ್ ಈ ಆ್ಯಪಲ್ ಮನೆಗಳ ನಿರ್ಮಾಣದಲ್ಲಿ ಕೈಜೋಡಿಸಲಿವೆ. ಇದಕ್ಕೆ ಬೇಕಾಗುವ ಫಂಡಿಂಗ್ ಅನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಉದ್ಯಮಿಗಳು ಭರಿಸಲಿದ್ದಾರೆ. ವರದಿ ಪ್ರಕಾರ ಶೇ. 10-15ರಷ್ಟು ಫಂಡಿಂಗ್ ಕೇಂದ್ರದಿಂದ ಬರಲಿದೆ.

ಈ ಹಣಕಾಸು ವರ್ಷ ಮುಗಿಯುವುದರೊಳಗೆ, ಅಂದರೆ 2025ರ ಮಾರ್ಚ್ 31ರೊಳಗೆ ಸಿಪ್ಕಾಟ್ ಈ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸುವ ಸಾಧ್ಯತೆ ಇದೆ. ‘ಉದ್ಯೋಗಿಗಳಿಗೆ ವಸತಿ ನಿರ್ಮಿಸಿಕೊಡುವ ಯೋಜನೆಯು ವಲಸಿಗ ಉದ್ಯೋಗಿಗಳಿಗೆ, ಅದರಲ್ಲೂ ಮಹಿಳಾ ಉದ್ಯೋಗಿಗಳಿಗೆ ಭದ್ರತೆಯಾಗಿರುತ್ತದೆ,’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾಗಿ ಎಕನಾಮಿ ಟೈಮ್ಸ್ ವರದಿ ಮಾಡಿದೆ.

 

WhatsApp Group Join Now
Telegram Group Join Now
Share This Article