ಜಮ್ಮ ಮತ್ತು ಕಾಶ್ಮೀರದಲ್ಲಿ ವ್ಯಕ್ತಿ ಹತ್ಯೆ: ಹೈಅಲರ್ಟ್​ ಘೋಷಣೆ

Ravi Talawar
WhatsApp Group Join Now
Telegram Group Join Now

ರಾಜೌರಿ,23: ಸುಂದರ ಕಣಿವೆ ಜಮ್ಮ ಮತ್ತು ಕಾಶ್ಮೀರದಲ್ಲಿ ಗುಂಡಿನ ಮೊರೆತ ಮುಂದುವರಿದಿದೆ. ಇಲ್ಲಿನ ರಾಜೌರಿಯಲ್ಲಿ ವ್ಯಕ್ತಿಯೊಬ್ಬನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇದು ಭಯೋತ್ಪಾದಕರ ಕೃತ್ಯವಾಗಿರುವ ಬಗ್ಗೆ ಶಂಕೆ ಇದ್ದು, ಹೈಅಲರ್ಟ್​ ಘೋಷಿಸಲಾಗಿದೆ.

ಸೋಮವಾರ ಸಂಜೆ ಮೊಹಮದ್​ ರಜಾಕ್​ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದು ಅಲ್ಲಿನ ಜನರನ್ನು ತಲ್ಲಣಗೊಳಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಇದರಿಂದಾಗಿ ಭದ್ರತಾ ಪಡೆಗಳು ರಾಜೌರಿಯಲ್ಲಿ ಹೆಚ್ಚಿನ ನಿಗಾ ವಹಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಕುಂದಾ ಟಾಪ್‌ನಲ್ಲಿ ಈ ದಾಳಿ ನಡೆದಿದೆ. ಮೊಹಮ್ಮದ್ ರಜಾಕ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಅಪರಿಚಿತ ವ್ಯಕ್ತಿಗಳ ಬಂಧನಕ್ಕಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಪ್ರತಿ ವಾಹನಗಳನ್ನೂ ತಪಾಸಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

 ಈಚೆಗೆ ಜಮ್ಮು- ಕಾಶ್ಮೀರದಲ್ಲಿ ಬಿಹಾರ ಮೂಲದ ಕಾರ್ಮಿಕನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾ ಪ್ರದೇಶದ ಜಬ್ಲಿಪೋರಾದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದರು. ಬಿಹಾರ ಮೂಲದ ಕಾರ್ಮಿಕ ರಾಜಾ ಷಾ ಮೃತಪಟ್ಟ ಕಾರ್ಮಿಕನಾಗಿದ್ದ.

10 ದಿನಗಳ ಅಂತರದಲ್ಲಿ ನಡೆದ ಎರಡನೇ ಕಾರ್ಮಿಕನ ಹತ್ಯೆ ಇದಾಗಿತ್ತು. ಏಪ್ರಿಲ್ 8 ರಂದು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಸ್ಥಳೀಯರಲ್ಲದ ಚಾಲಕನನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದರು. ಇದು ಕಾಶ್ಮೀರದಲ್ಲಿನ ವಲಸಿಗರನ್ನು ಆತಂಕಕ್ಕೀಡು ಮಾಡಿದೆ.

ಉನ್ನತ ಪೊಲೀಸ್ ಅಧಿಕಾರಿಗಳ ಪ್ರಕಾರ, ಬಿಹಾರಿ ಕಾರ್ಮಿಕ ರಾಜಾ ಇಲ್ಲಿ ವಸ್ತುಗಳ ಮಾರಾಟ ಕೆಲಸ ಮಾಡಿಕೊಂಡಿದ್ದ. ಉಗ್ರರು ಈತನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ತೀರಾ ಹತ್ತಿರದಿಂದ (ಪಾಯಿಂಟ್​ ಬ್ಲಾಕ್​ ರೇಂಜ್) ಬುಲೆಟ್​ ಹಾರಿಸಲಾಗಿದೆ. ಇದರಿಂದ ಕಾರ್ಮಿಕನ ಹೊಟ್ಟೆ ಮತ್ತು ಕುತ್ತಿಗೆಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮೃತಪಟ್ಟಿದ್ದಾರೆ. ಘಟನೆಯ ನಂತರ, ದಾಳಿಕೋರರ ಪತ್ತೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿವೆ.

WhatsApp Group Join Now
Telegram Group Join Now
Share This Article