ಕೇರಳದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆ: ಎಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ

Ravi Talawar
WhatsApp Group Join Now
Telegram Group Join Now

ಆಲಪ್ಪುಳ(ಕೇರಳ)ಏಪ್ರಿಲ್​ 18: ಕೇರಳದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆಯಾಗಿದೆ. ಆಲಪ್ಪುಳ ಜಿಲ್ಲೆಯಲ್ಲಿ ಏವಿಯನ್ ಇನ್​ಫ್ಲುಯೆನ್ಸ್​ (H5N1) ವೈರಸ್​ ದೃಢಪಟ್ಟಿದೆ. ವಿಲಕ್ಕುಮಾರಂ ಮತ್ತು ಚೆರುತನ ಪಂಚಾಯಿತಿ ವ್ಯಾಪ್ತಿಯಲ್ಲಿನ ಸಾಕಿದ್ದ ಬಾತುಕೋಳಿಗಳಲ್ಲಿ ಈ ರೋಗ ಕಂಡುಬಂದಿದ್ದು, ಎಚ್ಚರಿಕೆ ವಹಿಸಲಾಗಿದೆ.

ಬಾತುಕೋಳಿಗಳು ಅಸ್ವಸ್ಥಗೊಂಡಾಗ ಹಕ್ಕಿಜ್ವರದಂತಹ ರೋಗಲಕ್ಷಣಗಳನ್ನು ತೋರಿಸಿವೆ. ತಕ್ಷಣವೇ ಮಾಲೀಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆರೋಗ್ಯ ಸಿಬ್ಬಂದಿ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಮಧ್ಯಪ್ರದೇಶದ ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ ಮಾದರಿಗಳಲ್ಲಿ ಏವಿಯನ್ ಇನ್​ಫ್ಲುಯೆನ್ಸ​ (H5N1) ವೈರಸ್​ ಇರುವ ಬಗ್ಗೆ ಧನಾತ್ಮಕ ವರದಿ ಬಂದಿದೆ.

ಜಿಲ್ಲಾಧಿಕಾರಿ ತುರ್ತು ಸಭೆ: ಬಾತುಕೋಳಿಗಳಿಗೆ ತಗುಲಿದ್ದು ಹೆಚ್​5ಎನ್​1 ವೈರಸ್​ ಎಂದು ದೃಢಪಟ್ಟ ತಕ್ಷಣವೇ ಜಿಲ್ಲಾಡಳಿತ ಈ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿದೆ. ಕೇಂದ್ರ ಸರ್ಕಾರದ ಕ್ರಿಯಾ ಯೋಜನೆಯ ಪ್ರಕಾರ, ಜಿಲ್ಲಾ ಅಧಿಕಾರಿಗಳು ತುರ್ತು ಪರಿಶೀಲನಾ ಸಭೆ ಕರೆದಿದ್ದಾರೆ. ರೋಗ ಪತ್ತೆಯಾದ ಪ್ರದೇಶದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾಕು ಪಕ್ಷಿಗಳನ್ನು ಕೊಂದು ನಾಶಪಡಿಸುವ ಪ್ರಕ್ರಿಯೆ ಆರಂಭಿಸಲು ಸಭೆ ನಿರ್ಧರಿಸಿದೆ.

ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ಸಂಬಂಧಿತ ಪ್ರಾಣಿ ಕಲ್ಯಾಣ ಇಲಾಖೆಯಿಂದ ಆದಷ್ಟು ಬೇಗ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುವುದು. ಹಕ್ಕಿಜ್ವರ ದೃಢಪಟ್ಟರೆ ಅನಾವಶ್ಯಕವಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ, ಮನುಷ್ಯರಿಗೆ ಹಕ್ಕಿಜ್ವರ ಹರಡಿಲ್ಲ.

ಏನಿದು H5 N1 ವೈರಸ್​?: H5N1 ಎಂಬುದು ಪಕ್ಷಿಗಳಲ್ಲಿ ಹೆಚ್ಚಾಗಿ ಕಂಡುಬರುವ ವೈರಸ್. ಇದು ಕೆಲವು ಸಂದರ್ಭಗಳಲ್ಲಿ ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಸೋಂಕಿತ ಪಕ್ಷಿಗಳೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿದ ಮನುಷ್ಯರಿಗೆ ಈ ವೈರಸ್ ಹರಡುತ್ತದೆ.

ರೋಗ ಲಕ್ಷಣಗಳೇನು?: ಈ ವೈರಸ್​ ಅಂಟಿಕೊಂಡ ಬಳಿಕ ಮನುಷ್ಯನಲ್ಲಿ ಕೆಮ್ಮು, ಗಂಟಲು ನೋವು, ಶೀತ, ದೇಹದ ತುಂಬಾ ನೋವು, ತಲೆನೋವು, ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ವಾಂತಿ, ಡಯೇರಿಯಾ ಇತ್ಯಾದಿ ಬಾಧೆಗಳೂ ಕಾಣಿಸಿಕೊಳ್ಳುತ್ತವೆ. ಈ ಎಲ್ಲಾ ರೋಗಲಕ್ಷಣಗಳು 2 ರಿಂದ 8 ದಿನಗಳಲ್ಲಿ ಉಲ್ಬಣಗೊಳ್ಳುತ್ತವೆ.

WhatsApp Group Join Now
Telegram Group Join Now
Share This Article