ಇನ್ಮುಂದೆ ವಿಮಾನ ಪ್ರಯಾಣ ದುಬಾರಿ: 200 ವಿಮಾನಗಳು ಸ್ಥಗಿತಗೊಂಡು ಟಿಕೆಟ್ ಏರಿಕೆಗೆ ಕಾರಣ?

Ravi Talawar
WhatsApp Group Join Now
Telegram Group Join Now

ನವದೆಹಲಿ, ಏಪ್ರಿಲ್ 10: ವಿಮಾನ ಪ್ರಯಾಣ ಇನ್ಮುಂದೆ ದುಬಾರಿಯಾಗಲಿದೆ. ದೇಶಾದ್ಯಂತ ವಿಮಾನ ಟಿಕೆಟ್ ದರ ಹೆಚ್ಚಾಗಿದೆ. ಅದರಲ್ಲೂ ಮುಖ್ಯವಾಗಿ ದೇಶದ ಪ್ರಮುಖ ಮಾರ್ಗಗಳಲ್ಲಿ ವಿಮಾನ ಟಿಕೆಟ್ ದರಗಳು ಗಣನೀಯವಾಗಿ ಹೆಚ್ಚಾಗಿವೆ.

ಭಾರತದ ವೈಮಾನಿಕ ಕ್ಷೇತ್ರದಲ್ಲಿ  ನಿರಂತರವಾಗಿ ಒಂದಿಲ್ಲೊಂದು ಸಮಸ್ಯೆಗಳು ವಕ್ಕರಿಸುತ್ತಲೇ ಇವೆ. ಒಂದರ ಹಿಂದೊಂದು ಕಂಪನಿಗಳು ದಿವಾಳಿಯಾಗುವ ಅಂಚಿಗೆ ಹೋಗುತ್ತಿವೆ. 200 ವಿಮಾನಗಳು ಸ್ಥಗಿತಗೊಂಡು ಟಿಕೆಟ್ ಏರಿಕೆಗೆ ಕಾರಣವಾಗಿದೆ. ವಿಸ್ತಾರ ಏರ್ಲೈನ್ಸ್​ನ ಪೈಲಟ್​ಗಳು ಸಾಮೂಹಿಕವಾಗಿ ಡ್ಯೂಟಿ ಬಹಿಷ್ಕರಿಸಿದ್ದಾರೆ. ಇದರಿಂದ ಹಲವು ವಿಮಾನಗಳು ಹಾರಾಟ ನಿಲ್ಲಿಸಿವೆ.

ಗಾಯಕ್ಕೆ ತುಪ್ಪ ಸುರಿಯುವಂತೆ ಏರ್ ಇಂಡಿಯಾ ಕಂಪನಿಯ ಟೆಕ್ನೀಶಿಯನ್​ಗಳೂ ಕೂಡ ಮುಷ್ಕರಕ್ಕೆ ಅಣಿಯಾಗಿದ್ದಾರೆ. ಏಪ್ರಿಲ್ 23ರಂದು ಸ್ಟ್ರೈಕ್ ನಡೆಯಲಿದೆ. ಇನ್ನಷ್ಟು ವಿಮಾನಗಳು ಸ್ಥಗಿತಗೊಳ್ಳಬಹುದು. ವರದಿ ಪ್ರಕಾರ ಈಗಾಗಲೇ ವಿಮಾನ ಟೆಕೆಟ್ ಬೆಲೆ ಶೇ. 30ರವರೆಗೂ ಹೆಚ್ಚಿದೆ.

ಯಾತ್ರಾ ಆನ್​ಲೈನ್ ಮತ್ತು ಇಕ್ಸಿಗೋ (ixigo) ಎಂಬ ಎರಡು ಟ್ರಾವಲ್ ಪೋರ್ಟಲ್ ಪ್ರಕಾರ ಕೆಲ ಮುಖ್ಯ ಮಾರ್ಗಗಳಲ್ಲಿ ವಿಮಾನ ಟಿಕೆಟ್ ಬೆಲೆ ಶೇ. 8ರಿಂದ 30ರಷ್ಟು ಹೆಚ್ಚಾಗಿದೆ. ವಿಸ್ತಾರ ಏರ್ಲೈನ್ ಸಂಸ್ಥೆಯ ಶೇ. 10ರಷ್ಟು ವಿಮಾನಗಳು ಕಾರ್ಯಸ್ಥಗಿತಗೊಂಡಿರುವುದು ಎಲ್ಲೆಡೆ ಟಿಕೆಟ್ ಬೆಲೆ ಏರಿಕೆಗೆ ಕಾರಣವಾಗಿದೆ. ಆದರೆ, ವಿಮಾನ ಸಂಸ್ಥೆಗಳು ಈ ಬೆಲೆ ಏರಿಕೆ ಬಗ್ಗೆ ಯಾವ ಅಧಿಕೃತ ಹೇಳಿಕೆ ನೀಡಿರುವುದು ವರದಿಯಾಗಿಲ್ಲ.

ಬಹಳ ಬೇಡಿಕೆ ಇರುವ ದೆಹಲಿ ಗೋವಾ, ದೆಹಲಿ ಕೊಚ್ಚಿ, ದೆಹಲಿ ಜಮ್ಮು, ದೆಹಲಿ ಶ್ರೀನಗರ್ ಇತ್ಯಾದಿ ಮಾರ್ಗಗಳಲ್ಲಿ ಟಿಕೆಟ್ ಬೆಲೆ ಶೇ. 20ರಿಂದ 25ರಷ್ಟು ಹೆಚ್ಚಾಗಿದೆ ಎಂದು ಯಾತ್ರಾ ಆನ್​ಲೈನ್ ಸಂಸ್ಥೆಯ ಹಿರಿಯ ಅಧಿಕಾರಿ ಭರತ್ ಮಲಿಕ್ ಹೇಳುತ್ತಾರೆ.

ಇಕ್ಸಿಗೋ ಪ್ರಕಾರ ದೆಹಲಿ ಮತ್ತು ಬೆಂಗಳೂರು ನಡುವಿನ ಫ್ಲೈಟ್ ಟಿಕೆಟ್ ಬೆಲೆಯಲ್ಲಿ ಸೇ. 39ರಷ್ಟು ಹೆಚ್ಚಾಗಿದೆ. ಮುಂಬೈ ಮತ್ತು ದೆಹಲಿ ನಡುವಿನ ಮಾರ್ಗದ ಟಿಕೆಟ್ ಬೆಲೆಯಲ್ಲಿ ಶೇ. 8ರಷ್ಟು ಹೆಚ್ಚಳವಾಗಿದೆ.

ಈ ಬೆಲೆ ಏರಿಕೆ ತಾತ್ಕಾಲಿಕ ಅವಧಿಯದ್ದಾಗಿರುವುದು ಅನುಮಾನ. ಜುಲೈ ತಿಂಗಳವರೆಗೂ ಟಿಕೆಟ್ ಬೆಲೆ ಹೆಚ್ಚಿನ ಮಟ್ಟದಲ್ಲೇ ಇರುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸುತ್ತಾರೆ. ಈ ಟಿಕೆಟ್ ಬೆಲೆ ಏರಿಕೆ ಅಸಹಜವಾಗೇನೂ ಆಗುತ್ತಿಲ್ಲ. ಬೇಡಿಕೆ ಮತ್ತು ಸರಬರಾಜು ನಿಯಮದಂತೆ ಬೆಲೆ ಏರುತ್ತಿದೆ. ಬಹಳಷ್ಟು ವಿಮಾನಗಳು ಹಾರಾಟ ಸ್ಥಗಿತಗೊಳಿಸಿರುವುದರಿಂದ ಫ್ಲೈಟ್ ಕೊರತೆ ಇದೆ. ಹೀಗಾಗಿ, ಟಿಕೆಟ್ ಬೆಲೆ ಸಹಜವಾಗಿ ಹೆಚ್ಚುತ್ತಿದೆ ಎಂದು ಉದ್ಯಮ ವಲಯದವರು ಹೇಳುತ್ತಿದ್ದಾರೆ.

WhatsApp Group Join Now
Telegram Group Join Now
Share This Article