ಇಂಡಿ: ರೋಗಗಳು ಬರುವ ಮನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು. ಎಲ್ಲಾ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಇಂದು ಮನುಕುಲಕ್ಕೆ ಬಹುಮುಖ್ಯವಾಗಿದೆ ಎಂದು ಹಿರೇರೂಗಿ ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ ಬಬಲಾದ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ವಿಜಯಪುರದ ಜಿಲ್ಲಾ ರಕ್ತ ನಿಧಿ ಘಟಕ ಸರ್ಕಾರಿ ಆಸ್ಪತ್ರೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಬಿ ಎಲ್ ಡಿ ಇ ಸಂಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕ ಆರೋಗ್ಯ ಇಲಾಖೆ ಇಂಡಿ, ಉತ್ತರ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣು ತಪಾಸಣೆ ಆಪರೇಷನ್ ಕ್ಯಾಂಪ್, ರಕ್ತದಾನ ಶಿಬಿರ ಮತ್ತು ಮಹಾತ್ಮ ಗಾಂಧಿ ನರೇಗಾ ಕೂಲಿಕಾರ್ಮಿಕರಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಆರೋಗ್ಯ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ವೈ ಎಂ ಪೂಜಾರಿ ಮಾತನಾಡಿ,

ಗ್ರಾಮೀಣ ಜನತೆ ಕಷ್ಟದ ಬದುಕು ಸಾಗಿಸುತ್ತಿದ್ದು, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇಂತಹ ಉಚಿತ ತಪಾಸಣೆ ಶಿಬಿರಗಳ ಮೂಲಕ ಆರೋಗ್ಯ ರಕ್ಷಣೆಯ ಮಹತ್ವವನ್ನು ತಿಳಿಸಿಕೊಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಗಡ್ಡೆಪ್ಪ ಗಿಣ್ಣಿ ಮಾತನಾಡಿ, ಜನಪರ ಕಾರ್ಯಕ್ಕೆ ಹಿರೇರೂಗಿ ಗ್ರಾಮ ಪಂಚಾಯಿತಿ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ. ಹಳ್ಳಿಗಳಲ್ಲಿರುವ ಬಡಜನರ ಆರೋಗ್ಯ ರಕ್ಷಣೆಗೆ ನಾವು ಸದಾ ಸಿದ್ದ. ಎಂದರು.
ಶಿಬಿರದಲ್ಲಿ ಹೃದಯ ರೋಗ, ರಕ್ತದಾನ, ಕಣ್ಣು ಪೊರೆ ಶಸ್ತ್ರ ಚಿಕಿತ್ಸೆ, ಕಣ್ಣು ದೃಷ್ಟಿ ರೆಟಿನಾ, ಸಾಮಾನ್ಯ ಆರೋಗ್ಯ ತಪಾಸಣೆ ಹಾಗೂ ಡಯಾಬಿಟಿಸ್ ಸೇರಿದಂತೆ ಇತರ ಸಮಸ್ಯೆಗಳ ಕುರಿತು ವಿಶೇಷ ತಜ್ಞ ವೈದ್ಯರು ಉಚಿತವಾಗಿ ತಪಾಸಣೆ ಮಾಡಿ,ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮವ್ವ ಹೊಸಮನಿ, ಉಪಾಧ್ಯಕ್ಷೆ ಅಂಬವ್ವ ಕೋಟಗೊಂಡ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಶಿಬಿರದಲ್ಲಿ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ವೈದ್ಯರಾದ ನವೀನ ರೂಗಿ, ನಮತಾ ಹೊನ್ನುಟಗಿ,ಕೆ ಭೀಮಾಶಂಕರ,ಈಶ್ವರ ಸೇರಿದಂತೆ ಅನೇಕರು ತಪಾಸಣೆ ನಡೆಸಿದರು. 300ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು. ಬಿ ಎಲ್ ಡಿ ಇ ಸಂಸ್ಥೆಯಿಂದ ಕಣ್ಣಿನ ಉಚಿತ ತಪಾಸಣೆ ನಡೆಸಲಾಯಿತು.