ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್, ಹೆಚ್​​ಡಿ ರೇವಣ್ಣ ವಿರುದ್ಧ ಎಫ್ಐಆರ್‌!

Ravi Talawar
WhatsApp Group Join Now
Telegram Group Join Now

ಹಾಸನ, ಏಪ್ರಿಲ್​ 28: ಸಂಸದ ಪ್ರಜ್ವಲ್ ರೇವಣ್ಣರದ್ದು  ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು, ಇದೀಗ ತಂದೆ ಹೆಚ್‌.ಡಿ.ರೇವಣ್ಣ  ವಿರುದ್ಧವೂ ಹೊಳೆನರಸೀಪುರ ನಗರ ಪೊಲೀಸ್‌ ಠಾಣೆಯಲ್ಲಿ‌ ಎಫ್ಐಆರ್‌ ದಾಖಲಾಗಿದೆ.

ಪ್ರಕರಣದ ಎ1 ಆರೋಪಿ ಹೆಚ್‌.ಡಿ.ರೇವಣ್ಣ, ಎ2 ಪ್ರಜ್ವಲ್ ರೇವಣ್ಣ ಆಗಿದ್ದು, ಈ ಹಿಂದೆ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆ ದೂರು ಆಧರಿಸಿ ಪೊಲೀಸರು FIR ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್ 354A (ಲೈಂಗಿಕ ಕಿರುಕುಳ ಆರೋಪ), 354D (ಮಹಿಳೆಗೆ ಮುಜುಗರ ಆಗುವಂತೆ ಮಾಡುವುದು), 506 (ಬೆದರಿಕೆ), 509 (ಮಹಿಳೆ ಮಾನಕ್ಕೆ ಹಾನಿ) ರಡಿ FIR ದಾಖಲಿಸಲಾಗಿದೆ. ಹಲವು ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ದೃಶ್ಯಗಳು ಹರಿದಾಡಿದ್ದವು. ಹೀಗಾಗಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ.

ನಮ್ಮ ಪತಿಗೆ ಹೆಚ್‌.ಡಿ.ರೇವಣ್ಣ ತಮ್ಮ ಡೇರಿಯಲ್ಲಿ ಕೆಲಸ ಕೊಡಿಸಿದ್ದರು. ಬಳಿಕ 2015ರಲ್ಲಿ ಹಾಸ್ಟೆಲ್‌ವೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿಸಿದ್ದರು. ನಂತರ ತಮ್ಮ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬರುವಂತೆ ರೇವಣ್ಣ ಹೇಳಿದ್ದರು. ಅಡುಗೆ ಕೆಲಸಕ್ಕೆ ಸೇರಿಕೊಂಡ ಬಳಿಕ ಭವಾನಿ ರೇವಣ್ಣ ಮನೆಯಲ್ಲಿಲ್ಲದ ವೇಳೆ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೊಠಡಿಯಲ್ಲಿದ್ದಾಗ ಹಣ್ಣು ನೀಡುವ ನೆಪದಲ್ಲಿ ಸೀರೆ ಹಿಡಿದು ಎಳೆದಾಡಿದ್ದಾರೆ. ಅಡುಗೆ ಮನೆಗೆ ಬಂದು ಪ್ರಜ್ವಲ್ ಸಹ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಪ್ರಜ್ವಲ್ ರೇವಣ್ಣ ಅಸಭ್ಯವಾಗಿ ವರ್ತಿಸಿದ್ದಾರೆ. ಮೈಗೆ ಎಣ್ಣೆ ಹಚ್ಚಬೇಕೆಂದು ನನ್ನನ್ನು ಕರೆಸಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ನನ್ನ ಮಗಳಿಗೂ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಪದೇಪದೆ ಕಾಲ್‌ ಮಾಡಿದ್ದಕ್ಕೆ ಪುತ್ರಿ ಪ್ರಜ್ವಲ್ ನಂಬರ್ ಬ್ಲಾಕ್‌ ಮಾಡಿದ್ದರು. ಲೈಂಗಿಕ ಕಿರುಕುಳ ಹೆಚ್ಚಾದಾಗ ಕೆಲಸಬಿಟ್ಟು ಹೋಗಿದ್ದಾಗಿ ಸಂತ್ರಸ್ತೆ ಹೇಳಿದ್ದು, ಅಶ್ಲೀಲ ವಿಡಿಯೋ ವೈರಲ್ ಆದ ಬಳಿಕ ಆತಂಕಗೊಂಡು ದೂರು ನೀಡಿದ್ದೇನೆ ಎಂದು ಉಲ್ಲೇಖಿಸಲಾಗಿದೆ.

ಪ್ರಕರಣದ ಗಂಭೀರ ಸ್ವರೂಪ ಅರಿತ ರಾಜ್ಯ ಮಹಿಳಾ ಆಯೋಗ ತನಿಖೆಗೆ ವಿಶೇಷ ತಂಡ ರಚನೆ ಮಾಡಿ ಎಂದು ಮೂರು ದಿನಗಳ ಹಿಂದೆಯೇ ಪತ್ರ ಬರೆದಿತ್ತು. ನಿನ್ನೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದ ಸಿಎಂ ಎಸ್.ಐ.ಟಿ ರಚನೆ ಬಗ್ಗೆಮಾಹಿತಿ ನೀಡಿದ್ದು ಈ ಬೆಳವಣಿಗೆ ಬೆನ್ನಲ್ಲೇ ಹಾಸನ ಜಿಲ್ಲೆಯ ಹೊಳೆನರಸೀಪುರದ ನಗರ ಠಾಣೆಯಲ್ಲಿ ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ಕಿರುಕುಳ, ಬೆದರಿಕೆ ಹಾಗೂ ಮಾನಹಾನಿ ಮಾಡಿದ ಆರೋಪದಲ್ಲಿ ದೂರು ದಾಖಲಾಗಿದೆ. ಸಂತ್ರಸ್ತ ಮಹಿಳೆ ಖುದ್ದು ಹಾಜರಾಗಿ ನೀಡಿದ ದೂರು ಸ್ವಿಕರಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರೆ. ಈ ದೂರಿನ ತನಿಖೆಯನ್ನ ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳ ವಿಶೇಷ ತಂಡಕ್ಕೆ ವಹಿಸಿ ಆದೇಶ ಮಾಡಿದೆ.

 

WhatsApp Group Join Now
Telegram Group Join Now
Share This Article