ಮಂಡ್ಯದಲ್ಲಿ ಭ್ರೂಣಲಿಂಗ ಪತ್ತೆ, ಹತ್ಯೆ: ಆರೋಗ್ಯ ಇಲಾಖೆ ಕ್ವಾಟರ್ಸ್​​ನಲ್ಲೇ ಕೃತ್ಯ

Ravi Talawar
WhatsApp Group Join Now
Telegram Group Join Now

ಮಂಡ್ಯ, ಮೇ 06: ಪಾಂಡವಪುರ  ಆರೋಗ್ಯ ಇಲಾಖೆ ಕ್ವಾರ್ಟರ್ಸ್​ನಲ್ಲಿ ಭ್ರೂಣಲಿಂಗ ಪತ್ತೆ  ಮತ್ತು ಹತ್ಯೆ ನಡೆಯುತ್ತಿರುವ ವಿಚಾರ ತಿಳಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಅರವಿಂದ್ ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಗರ್ಭಪಾತಕ್ಕೆ ಬಂದಿದ್ದ ಮೈಸೂರು ಮೂಲದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ದಾಳಿ ವೇಳೆ ಗರ್ಭಪಾತ ಮಾಡುವ ಯಂತ್ರೋಪಕರಣಗಳು ‌ಜಪ್ತಿ ಮಾಡಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪಾಂಡವಪುರ ತಾಲೂಕು ಆಸ್ಪತ್ರೆ ಆ್ಯಂಬುಲೆನ್ಸ್​ ಚಾಲಕ ಆನಂದ್, ತಾಲೂಕು ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಡಿ ಗ್ರೂಪ್ ಸಿಬ್ಬಂದಿ ಅಶ್ವಿನಿ ಹಾಗೂ ಮತ್ತೊಬ್ಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕ ಆನಂದ್​ಗೆ ನೀಡಲಾಗಿದ್ದ ಸರ್ಕಾರಿ ನಿವಾಸದಲ್ಲೇ ಕೃತ್ಯ ಎಸಗಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ತಡರಾತ್ರಿ ದಾಳಿ ಮಾಡಿದ್ದಾರೆ. ಈ ದಂಧೆಯಲ್ಲಿ ಕೆಲವು ವೈದ್ಯಾಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ದಾಖಲಾಗಿದೆ.

ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕಳೆದ ವರ್ಷ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಮಂಡ್ಯದಲ್ಲಿ ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕರಾಳ ದಂಧೆ ಬಯಲಾಗಿತ್ತು. ಆಲೆಮನೆ ಮಾತ್ರವಲ್ಲದೆ  ಸ್ಕ್ಯಾನಿಂಗ್ ಸೆಂಟರ್‌ಗಳಲ್ಲೂ ಭ್ರೂಣಲಿಂಗ ಪತ್ತೆ ಹಚ್ಚುವ ಕೃತ್ಯ ನಡೆಯುತ್ತಿತ್ತಾ ಎಂಬ ಅನುಮಾನ ಅಧಿಕಾರಿಗಳಿಗೆ ವ್ಯಕ್ತವಾಗಿದೆ. ತಪಾಸಣೆ ವೇಳೆ ಅಂಥ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿದ್ದವು.

ನಾಗಮಂಗಲದ 2 ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕರಾಳ ದಂಧೆ ನಡೆಯುತ್ತಿತ್ತಾ ಎಂಬ ಅನುಮಾನ ಅಧಿಕಾರಿಗಳಿಗೆ ವ್ಯಕ್ತವಾಗಿತ್ತು. ಅಧಿಕಾರಿಗಳ ಪರಿಶೀಲನೆ ವೇಳೆ ಸಿಬ್ಬಂದಿಗಳ ಕಳ್ಳಾಟ ಆಡಿರುವುದು ಗೊತ್ತಾಗಿತ್ತು. ಸಿಸ್ಟಮ್‌ನಲ್ಲಿದ್ದ ಡೇಟಾ ಡಿಲೀಟ್ ಮಾಡಿ ಅಧಿಕಾರಿಗಳ ಕಣ್ತಪ್ಪಿಸಲು ಅಲ್ಲಿನ ಸಿಬ್ಬಂದಿ ಯತ್ನಿಸಿದ್ದರು.
WhatsApp Group Join Now
Telegram Group Join Now
Share This Article