ಬಿಎಸ್​ವೈ ಪುತ್ರನ ವಿರುದ್ಧ ಈಶ್ವರಪ್ಪ ಸ್ಪರ್ಧೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ

Ravi Talawar
WhatsApp Group Join Now
Telegram Group Join Now

ಶಿವಮೊಗ್ಗ, ಏ.23: ರಾಜ್ಯ ಬಿಜೆಪಿಯಲ್ಲಿ ಬಿಜೆಪಿ ಕಟ್ಟಾಳು ಕೆಎಸ್ ಈಶ್ವರಪ್ಪ ಬಿರುಗಾಳಿ ಎಬ್ಬಿಸಿದ್ದಾರೆ. ಪುತ್ರ ಕಾಂತೇಶ್​ಗೆ ಹಾವೇರಿ ಟಿಕೆಟ್ ಫಿಕ್ಸ್ ಆಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಇದರಿಂದ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಮೇಲೆ ಕೆಂಡಾಮಂಡಲವಾಗಿದ್ದಾರೆ. ಇದೀಗ ಬದಲಾದ ಪರಿಸ್ಥಿತಿಯಲ್ಲಿ ಪಕ್ಷವೇ ತಾಯಿ ಎನ್ನುತ್ತಿದ್ದ ಈಶ್ವರಪ್ಪ ಅವರು ಅನಿವಾರ್ಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದಾರೆ. ಈ ನಡುವೆ ಈಶ್ವರಪ್ಪ ಅವರಿಗೆ ಚುನಾವಣೆ ಚಿಹ್ನೆ ಕಬ್ಬಿನ ಜೊತೆಗಿನ ರೈತ ಸಿಕ್ಕಿದೆ.

ಇನ್ನು ನಾಮಪತ್ರ ವಾಪಸ್ ಪಡೆಯುತ್ತೇನೆ ಎನ್ನುವರಿಗೆ ಈಶ್ವರಪ್ಪ ತಮ್ಮ ಧಾಟಿಯಲ್ಲೇ ತಿರುಗೇಟು ಕೊಟ್ಟಿದ್ದಾರೆ. ಬಿಜೆಪಿ ಶುದ್ಧೀಕರಣ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಈಶ್ವರಪ್ಪ ಈಗ ತಿರುಗಿಬಿದ್ದಿದ್ದಾರೆ. ಬಿಎಸ್​ವೈ ಪುತ್ರ ರಾಘವೇಂದ್ರನ ಸೋಲಿಸಲು ಈಶ್ವರಪ್ಪ ಪಣ ತೊಟ್ಟಿದ್ದಾರೆ. ಅತ್ತ ಮತ್ತೊಬ್ಬ ಪುತ್ರ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಈಶ್ವರಪ್ಪ ಗುಡುಗಿದ್ದು, ರಾಜ್ಯಾಧ್ಯಕ್ಷ ಕುರ್ಚಿಯನ್ನ ಚುನಾವಣೆ ಬಳಿಕ ವಿಜಯೇಂದ್ರ ಕಳೆದುಕೊಳ್ಳಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈಶ್ವರಪ್ಪ ಪಕ್ಷೇತರ ಅಭ್ಯರ್ಥಿ ಆಗಿ ನಿಲ್ಲಲು ಬಿಎಸ್​ವೈ ಕುಟುಂಬ ಕಾರಣ ಎನ್ನುವ ಸಿಟ್ಟು ದಿನೇ ದಿನೇ ಈಶ್ವರಪ್ಪರನ್ನ ಕೆರಳಿಸುತ್ತಿದೆ. ನಾನೇ ಓರಿಜನಲ್ ಬಿಜೆಪಿ, ಬಿಎಸ್​ವೈ ಡುಪ್ಲೀಕೇಟ್ ಬಿಜೆಪಿ ಎಂದು ಈಶ್ವರಪ್ಪ ವ್ಯಂಗ್ಯ ಮಾಡಿದ್ದಾರೆ. ಕೆಜೆಪಿ ಕಟ್ಟಿ ಯಡಿಯೂರಪ್ಪ ಅವರು ಪಕ್ಷ ಬಿಟ್ಟು ಹೋಗಿದ್ದರು. ಟಿಪ್ಪು ಜಯಂತಿ ಮಾಡಿ ಟೋಪಿ ಹಾಕಿಕೊಂಡಿದ್ದರು. ನಾನು ಪಕ್ಷ ಅಂದ್ರೆ ತಾಯಿ ಇದ್ದಂಗೆ. ಹಾಗಾಗಿ ಈ ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ವಾಪಸ್ ಬಿಜೆಪಿಗೆ ಬರುತ್ತೇನೆಂದು ಈಶ್ವರಪ್ಪ ವಿಶ್ವಾಸ ಹೊರಹಾಕಿದ್ದಾರೆ.

WhatsApp Group Join Now
Telegram Group Join Now
Share This Article