ಚನ್ನಮ್ಮ ಕಿತ್ತೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ತುಂಬುಕೆರೆಯಲ್ಲಿ ಕಿತ್ತೂರು ಉತ್ಸವದ ಅಂಗವಾಗಿ ಆಯೋಜಿಸಿರುವ ಜಲ ಸಾಹಸ ಕ್ರೀಡೆಗಳು ಮತ್ತು ದೋಣಿ ವಿಹಾರವನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸಿದರು.
ಆಧುನಿಕ ಆಟಗಳ ಭರಾಟೆಯಲ್ಲಿ, ಮನುಷ್ಯನ ಶರೀರ ಮತ್ತು ಬುದ್ಧಿ ವಿಕಾಸಗೊಳಿಸುವ ಕಬಡ್ಡಿ, ಕುಸ್ತಿ, ಜಲಕ್ರೀಡೆಯ ಜೊತೆಗೆ ಇನ್ನಿತರ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸುವ ಕೆಲಸವಾಗಬೇಕಿದೆ. ಪರಿಸರ ಹಾನಿಯಿಂದ ಮಳೆ ಕ್ಷೀಣಿಸಿ, ಕೆರೆಗಳು ಮಾಯವಾಗುತ್ತಿವೆ. ಇವುಗಳ ಉಳಿವಿಗೆ ಪರಿಸರ ಸಂರಕ್ಷಣೆ ನಮ್ಮಿಂದಾಗಬೇಕಿದೆ. ಗತವೈಭವದ ಇತಿಹಾಸವನ್ನು ನೆನಪಿಸುವ ಕಿತ್ತೂರು ಉತ್ಸವ, ವರ್ಷದಿಂದ ವರ್ಷಕ್ಕೆ ಮಹತ್ವ ಪಡೆದು ಉತ್ಸಾಹ ಹೆಚ್ಚಿಸುತ್ತಿದೆ. ಕಿತ್ತೂರಿನ ರಾಣಿ ಚನ್ನಮ್ಮನ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಹಾಗೂ ಅನೇಕ ಮಹನಿಯರು ಮಾಡಿದ ಹೋರಾಟ, ತ್ಯಾಗ, ಪರಿಶ್ರಮ ವ್ಯರ್ಥವಾಗದಂತೆ ಹೆಜ್ಜೆ ಇಡುವ ಅಗತ್ಯತೆ ನಮ್ಮ ಮೇಲಿದೆ ಎಂದರು. ಉತ್ಸವದ ಅಂಗವಾಗಿ ಆಯೋಜಿಸಿರುವ ಜಲ ಕ್ರೀಡೆ, ದೋಣಿ ವಿಹಾರದ ಜನರ ಮನ ತನ್ನಿಸಿ, ಉತ್ತಮ ಅನುಭವ ನೀಡಲಿದೆ ಎಂದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಿತ್ತೂರು ಕ್ಷೇತ್ರದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗೆ ಆಧ್ಯತೆ ನೀಡಿದ್ದೇವೆ. ತುಂಬುಕೆರೆ ಅಭಿವೃದ್ಧಿಗೆ ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಕೆರೆಯಲ್ಲಿ ನಿರಂತರ ದೋಣಿ ವಿಹಾರ, ಸುತ್ತಲು ಅಭಿವೃದ್ಧಿ, ತಿನ್ನಿಸು ಕಟ್ಟೆ ಸೇರಿ ಚನ್ನಮ್ಮಾ ಕೋಟೆಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸಲು ಶ್ರಮಿಸುತ್ತೇನೆ ಎಂದರು. ಕಳೆದ 25ವರ್ಷಗಳಿಂದ ಉತ್ಸವದಲ್ಲಿ ಭಾಗಿಯಾದ ನನಗೆ, ಜನರ ಆಶೀರ್ವಾದದಿಂದ ಶಾಸಕನಾಗಿ ಚನ್ನಮ್ಮಾಜೀ ಸೇವೆ ಮಾಡಲು ಹೆಚ್ಚಿನ ಅವಕಾಶ ಸಿಕ್ಕಿದ್ದು ಹೆಮ್ಮೆಯೆನ್ನಿಸುತ್ತಿದೆ ಎಂದರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ, ಎಸ್ಪಿ ಡಾ. ಡಾ. ಭೀಮಾಶಂಕರ ಎಸ್.ಜಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.