ಇವಿಎಂ ಮತದಾನ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಚುನಾವಣಾ ಆಯೋಗ ಸುಪ್ರೀಂಕೋರ್ಟ್​ಗೆ  ಮಾಹಿತಿ

Ravi Talawar
WhatsApp Group Join Now
Telegram Group Join Now

ನವದೆಹಲಿ, ಏಪ್ರಿಲ್ 18: ಎಲ್ಲಾ ಇವಿಎಂ ಮೆಷೀನ್​ಗಳನ್ನು  ಪ್ರತಿಯೊಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಅಣಕು ಮತದಾನದ ಮೂಲಕ ಪರಿಶೀಲನೆ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗವು  ಇವಿಎಂ ಮತದಾನ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಸುಪ್ರೀಂಕೋರ್ಟ್​ಗೆ  ಮಾಹಿತಿ ನೀಡಿದೆ.

ಎಲ್ಲಾ ವಿವಿಪ್ಯಾಟ್ ದಾಖಲೆಗಳನ್ನು ಇವಿಎಂನೊಂದಿಗೆ ಪೂರ್ಣವಾಗಿ ತಾಳೆಯಾಗಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ. ಈ ವೇಳೆ ಚುನಾವಣಾ ಆಯೋಗವು ಇವಿಎಂ ಮತದಾನ ವ್ಯವಸ್ಥೆ ಬಗ್ಗೆ ಕೋರ್ಟ್​ಗೆ ವಿವರಣೆ ಕೊಟ್ಟಿದೆ.

ಇವಿಎಂ ಮೆಷೀನ್​ನಲ್ಲಿ ಯಾವ ಬಟನ್ ಯಾವ ಅಭ್ಯರ್ಥಿಗೆ ಹೋಗುತ್ತದೆ ಎಂಬುದು ಇವಿಎಂ ತಯಾರಕರಿಗೆ ಗೊತ್ತಿರುವುದಿಲ್ಲ. ಯಾವ ಇವಿಎಂ ಯಾವ ರಾಜ್ಯಕ್ಕೆ ಹೋಗುತ್ತದೆ, ಯಾವ ಕ್ಷೇತ್ರಕ್ಕೆ ಹೋಗುತ್ತದೆ ಎಂಬ ಮಾಹಿತಿಯೂ ತಿಳಿದಿರುವುದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇವಿಎಂ ವೋಟಿಂಗ್ ಯೂನಿಟ್​ನಲ್ಲಿ ಬ್ಯಾಲಟ್ ಯೂನಿಟ್, ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್ ಯೂನಿಟ್ ಎಂಬ ಮೂರು ವಿಭಾಗಗಳಿರುತ್ತವೆ. ಇದರಲ್ಲಿ ವಿವಿಪ್ಯಾಟ್ ಒಂದು ರೀತಿಯಲ್ಲಿ ಪ್ರಿಂಟರ್ ರೀತಿ. ಮತದಾನ ನಡೆಯಲು ಏಳು ಮುಂಚೆ ವಿವಿಪ್ಯಾಟ್ ಮೆಷೀನ್​ನ ಫ್ಲ್ಯಾಷ್ ಮೆಮೋರಿಯಲ್ಲಿ ಅಭ್ಯರ್ಥಿಗಳಿಗೆ ಅಲಾಟ್ ಆದ ಚಿಹ್ನೆಗಳನ್ನು ಅಪ್​ಲೋಡ್ ಮಾಡಲಾಗುತ್ತದೆ. ಇದು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲೇ ನಡೆಯುತ್ತದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಸುಪ್ರೀಂ ನ್ಯಾಯಪೀಠಕ್ಕೆ ಮಾಹಿತಿ ನೀಡಿದ್ದಾರೆ.

ಬ್ಯಾಲಟ್ ಯೂನಿಟ್​ನಲ್ಲಿ ಮೂಲದಲ್ಲಿ ಕೇವಲ ಬಟನ್​ಗಳು ಇರುತ್ತವೆ. ಇವುಗಳಿಗೆ ಅಭ್ಯರ್ಥಿಗಳ ಚಿಹ್ನೆ ನಂತರದಲ್ಲಿ ನಮೂದಿಸಲಾಗುತ್ತದೆ. ಬಟನ್ ಒತ್ತಿದಾಗ ಬ್ಯಾಲಟ್ ಯೂನಿಟ್​ನಿಂದ ಕಂಟ್ರೋಲ್ ಯೂನಿಟ್​ಗೆ ಸಂದೇಶ ಹೋಗುತ್ತದೆ. ಇದು ವಿವಿಪ್ಯಾಟ್ ಯೂನಿಟ್​ಗೆ ಅಲರ್ಟ್ ಹೊರಡಿಸುತ್ತದೆ. ಒತ್ತಲಾಗಿರುವ ಬಟನ್​ಗೆ ಜೋಡಿತವಾದ ಚಿಹ್ನೆಯನ್ನು ವಿವಿಪ್ಯಾಟ್ ಯೂನಿಟ್ ಪ್ರಿಂಟ್ ಮಾಡುತ್ತದೆ ಎಂದು ಎಲೆಕ್ಷನ್ ಕಮಿಷನ್ ಪ್ರತಿನಿಧಿಗಳು ಕೋರ್ಟ್​ನಲ್ಲಿ ವಿವರಿಸಿದ್ದಾರೆ.

WhatsApp Group Join Now
Telegram Group Join Now
Share This Article