ಕೊಟ್ಟ ಮಾತನ್ನು ತಪ್ಪಿಸೋಲ್ಲ, ನಾವೂ ಅಷ್ಟೆ, ನಮ್ಮ ಪಾರ್ಟಿಯೂ ಇಷ್ಟೆ: ಲಕ್ಷ್ಮೀ ಹೆಬ್ಬಾಳಕರ್

Ravi Talawar
WhatsApp Group Join Now
Telegram Group Join Now
ಬೆಳಗಾವಿ,ಏ.03 : ಜನಪ್ರತಿನಿಧಿಗಳಾದವರಿಗೆ ಪ್ರಾಮಾಣಿಕತೆ ಮುಖ್ಯ. ಸಂದರ್ಭಕ್ಕೆ ತಕ್ಕಂತೆ ಮಾತು ಬದಲಾಯಿಸುವವರನ್ನು ಜನರು ನಂಬುವುದಿಲ್ಲ. ನಾವಾಗಲಿ, ನಮ್ಮ ಪಾರ್ಟಿಯಾಗಲಿ ಜನರಿಗೆ ಕೊಟ್ಟ ಮಾತನ್ನು ಎಂದೂ ಹಿಂತೆಗೆಯುವುದಿಲ್ಲ. ಹಾಗಾಗಿಯೇ ಗಳಿಸಿಕೊಂಡಿರುವ ಜನರ ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ತಾಲೂಕಿನ ಕುದ್ರೆಮನಿ, ಕಲ್ಲೇಹೊಳ ಮೊದಲಾದ ಗ್ರಾಮಗಳಲ್ಲಿ ಲೋಕಸಭೆಯ ಚುನಾವಣಾ ಪ್ರಚಾರಾರ್ಥ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರ ಬುಧವಾರ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ನಾನು ಕಳೆದಬಾರಿ ಶಾಸಕಿಯಾಗುವ ಮುನ್ನ ನೀಡಿದ್ದ ಎಲ್ಲ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸಿದ್ದರಿಂದ ಜನರು ಮೊದಲಬಾರಿಗಿಂತ ಹೆಚ್ಚಿನ ಮತ ನೀಡಿ ಆಯ್ಕೆ ಮಾಡಿದರು. ನನ್ನನ್ನು ಮನೆ ಮಗಳು ಎಂದು ಪ್ರೀತಿಸಿದರು. ಇಡೀ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನರು ನಮ್ಮನ್ನು ತಮ್ಮದೇ ಕುಟುಂಬದ ಸದಸ್ಯರಂತೆ ಕಾಣುತ್ತಿದ್ದಾರೆ. ಇಂತಹ ಅವಿನಾಭಾವ ಸಂಬಂಧ ಬೇರೆ ಬಹುತೇಕ ಜನಪ್ರತಿನಿಧಿಗಳು ಮತ್ತು ಜನರ ಮಧ್ಯೆ ಕಾಣಲು ಸಾಧ್ಯವಿಲ್ಲ ಎಂದು ಹೆಬ್ಬಾಳಕರ್ ಹೇಳಿದರು.
ನಾನು ಕೆಲಸದ ನಿಮಿತ್ತ ಬೆಂಗಳೂರಿಗೆ ಮತ್ತು ಉಡುಪಿಗೆ ಹೋದಾಗ ಕೂಡ ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ ಮತ್ತು ಮಗ ಮೃಣಾಲ ಹೆಬ್ಬಾಳಕರ್ ಕ್ಷೇತ್ರದ ಜನರ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಕ್ಷೇತ್ರದ ಜನರಿಗೆ ಎಂದಿಗೂ ಅನಾಥಪ್ರಜ್ಞೆ ಕಾಡದಂತೆ ನೋಡಿಕೊಂಡಿದ್ದೇವೆ. ದಿನದ 24 ಗಂಟೆಯೂ ಸೇವೆಗೆ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ಕೊರೋನಾ, ಪ್ರವಾಹದಂತಹ ಸಂದರ್ಭದಲ್ಲಿ ನಾವು ಮಾಡಿದ ಕೆಲಸವನ್ನು ಕ್ಷೇತ್ರದ ಜನರು ನೋಡಿದ್ದೀರಿ. ಹಾಗಾಗಿ ಬರುವ ಲೋಕಸಭಾ ಚುನಾವಣೆಯಲ್ಲಿ ಮೃಣಾಲ ಹೆಬ್ಬಾಳಕರ್ ಅವರಿಗೆ ಮತ ನೀಡುವ ಮೂಲಕ ನಿಮ್ಮ ಸೇವೆ ಮಾಡುವ ನಮ್ಮ ಕೈಗಳನ್ನು ಇನ್ನಷ್ಟು ಬಲಪಡಿಸಿ ಎಂದು ಅವರು ವಿನಂತಿಸಿದರು.
ಕಾಂಗ್ರೆಸ್ ಪಕ್ಷ ಕೂಡ ಚುನಾವಣೆ ಪೂರ್ವ ನೀಡಿದ್ದ ವಚನದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರತಿಯೊಂದು ಕುಟುಂಬಕ್ಕೂ ಒಂದಿಲ್ಲೊಂದು ಯೋಜನೆಯ ಲಾಭ ಸಿಗುವಂತೆ ಮಾಡಿದ್ದೇವೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ಯೋಜನೆ ತಲುಪುವಂತೆ ಮಾಡಿದ್ದೇವೆ. ತನ್ಮೂಲಕ ತಿಂಗಳಿಗೆ 4 -5 ಸಾವಿರ ರೂ. ಉಳಿಸಿಕೊಟ್ಟಿದ್ದೇವೆ. ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಕೂಡ ಕಾಂಗ್ರೆಸ್ ಇನ್ನಷ್ಟು ಗ್ಯಾರಂಟಿಗಳನ್ನು ಘೋಷಿಸಿದೆ. ಬಡ ಕುಟುಂಬದ ಹೆಣ್ಣುಮಗಳಿಗೆ ಒಂದು ಲಕ್ಷ  . ನೀಡುವ ಭರವಸೆ ನೀಡಿದೆ. ಹಾಗಾಗಿ ಹಸ್ತದ ಗುರುತಿಗೆ ಮತ ನೀಡುವ ಮೂಲಕ ,ಸ್ವಚ್ಛ, ಪ್ರಾಮಾಣಿಕ ಮತ್ತು ಅಭಿವೃದ್ಧಿಪರ ಆಡಳಿತಕ್ಕೆ ಸಹಕಾರ ನೀಡಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಕೋರಿದರು.
ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಮಾತನಾಡಿ, ಕಳೆದ 10 ವರ್ಷಗಳಿಂದ ನಾನು ತಾಯಿ ಲಕ್ಷ್ಮೀ ಹೆಬ್ಬಾಳಕರ್ ಅವರ ಜೊತೆಗೆ ನಿಮ್ಮ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ನಮ್ಮದು ನಿಸ್ವಾರ್ಥ ಸೇವೆ. ಕೊರೋನಾ ಸಂದರ್ಭದಲ್ಲಿ ನಮ್ಮ ಕುಟುಂಬಕ್ಕೂ ಕೊರೋನಾ ಬಂದರೂ ಜನರ ಸೇವೆಯಲ್ಲಿ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಿದ್ದೇವೆ. ಔಷಧ, ದಿನಸಿ ಕಿಟ್ ಗಳನ್ನು ತಲುಪಿಸಿದ್ದೇವೆ, ಅಂಬುಲನ್ಸ್ ಸೇವೆ ಒದಗಿಸಿದ್ದೇವೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದೇವೆ. ಪ್ರವಾಹದ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುವ ಕೆಲಸ ಮಾಡಿದ್ದೇವೆ. ಹಾಗಾಗಿ ಈ ಚುನಾವಣೆಯಲ್ಲಿ ತಪ್ಪದೇ ನನಗೆ ಮತ ನೀಡುವ ಮೂಲಕ ಆಶಿರ್ವದಿಸಿ ಎಂದು ವಿನಂತಿಸಿದರು. ಗ್ರಾಮದ ಹಿರಿಯರು, ಯುವರಾಜ ಕದಂ, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
WhatsApp Group Join Now
Telegram Group Join Now
Share This Article