ಲೋಕಸಭಾ ಚುನಾವಣೆ: ಪ್ರಿಂಟಿಂಗ್ ಪ್ರೆಸ್ ಮಾಲೀಕರ‌ ಸಭೆ; ನಿಯಮ‌ ಪಾಲನೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ

Ravi Talawar
WhatsApp Group Join Now
Telegram Group Join Now
ಬೆಳಗಾವಿ, ಏ.6: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಚುನಾವಣಾ ಪ್ರಚಾರದ ಕರಪತ್ರ, ಪೋಸ್ಟರ್ ಇತ್ಯಾದಿ ಮುದ್ರಣ ಮಾಡುವಾಗ ಜನತಾ ಪ್ರಾತಿನಿಧ್ಯ ಕಾಯ್ದೆಯ ಕಲಂ 127 ಎ ನಿಯಮಾವಳಿಗಳನ್ನು ಎಲ್ಲ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ(ಏ‌.6) ನಡೆದ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಭ್ಯರ್ಥಿಗಳು ಅಥವಾ ಯಾವುದೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ಕರಪತ್ರ ಅಥವಾ ಪೋಸ್ಟರ್ ಗಳನ್ನು ಮುದ್ರಣಕ್ಕೆ ನೀಡಿದಾಗ ಅವುಗಳನ್ನು ಮುದ್ರಿಸುವ ಮುಂಚೆ ನಿಯಮಾನುಸಾರ ಭರ್ತಿ ಮಾಡಿದ ಅಪೆಂಡಿಕ್ಸ್ ‘ಎ’ ನಮೂನೆಯನ್ನು ಅವರಿಂದ ಪಡೆದುಕೊಳ್ಳಬೇಕು.
ಕರಪತ್ರ ಹಾಗೂ ಪೋಸ್ಟರ್ ಗಳನ್ನು ಮುದ್ರಿಸಿದ ಬಳಿಕ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಅಪೆಂಡಿಕ್ಸ್ ‘ಬಿ’ ನಮೂನೆಯನ್ನು ಭರ್ತಿ ಮಾಡಿ ಮುದ್ರಿತ ಕರಪತ್ರ ಅಥವಾ ಪೋಸ್ಟರ್ ಗಳೊಂದಿಗೆ ಜಿಲ್ಲಾ ಚುನಾವಣಾಧಿಕಾರಿ/ಚುನಾವಣಾಧಿಕಾರಿಗಳಿಗೆ ಅಥವಾ ಚುನಾವಣಾ ವೆಚ್ಚ ನೋಡಲ್ ಅಧಿಕಾರಿಗಳಿಗೆ ಸಲ್ಲಿಸಬೇಕು.
ಕರಪತ್ರ ಹಾಗೂ ಪೋಸ್ಟರ್ ಗಳಲ್ಲಿ ಪ್ರಕಾಶಕರ ಹೆಸರು, ಮುದ್ರಕರ ಹೆಸರು, ಮುದ್ರಣಾಲಯ ವಿಳಾಸ, ಮುದ್ರಿತ ಪ್ರತಿಗಳ ಸಂಖ್ಯೆ ಇತ್ಯಾದಿ ವಿವರವನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂದು ತಿಳಿಸಿದರು.
ಮುದ್ರಣದ ವೆಚ್ಚವನ್ನು ಸಂಬಂಧಿಸಿದ ಪಕ್ಷ ಅಥವಾ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರ್ಪಡೆ ಮಾಡಲು ಅನುಕೂಲವಾಗುವಂತೆ ಮುದ್ರಿತ ಕರಪತ್ರ ಅಥವಾ ಪೋಸ್ಟರ್ ಪ್ರತಿಗಳ ಜತೆಗೆ ಅಪೆಂಡಿಕ್ಸ್ ಎ, ಬಿ ಹಾಗೂ ವೆಚ್ಚದ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ಅಥವಾ ಜಿಲ್ಲಾ ವೆಚ್ಚ ನೋಡಲ್ ಅಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ‌ ನಿತೇಶ್ ಪಾಟೀಲ ತಿಳಿಸಿದರು.
WhatsApp Group Join Now
Telegram Group Join Now
Share This Article