ಸವದತ್ತಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಲಾದ ಕಿಟ್ ಗಳನ್ನು ಬಹುತೇಕ ಅನರ್ಹ ಕಟ್ಟಡ ಕಾರ್ಮಿಕರಿಗೆ ವಿತರಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ಇಲ್ಲಿನ ಕಾರ್ಮಿಕ ಕಚೇರಿಗೆ ಕಟ್ಟಡ ಕಾರ್ಮಿಕರು ಆಗಮಿಸಿ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದರು.
ಕಿಟ್ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ. ಕಾರ್ಮಿಕ ಕಾರ್ಡ್ ಮಾಡಿಕೊಡುವ ಎಜೇಂಟರ ಹಾವಳಿ ಹೆಚ್ಚಾಗಿದ್ದು ಅಧಿಕಾರಿಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಕೆಲಸದ ದಿನಗಳಲ್ಲಿ ಕಚೇರಿಗೆ ಬಿಗ ಹಾಕಿರುತ್ತದೆ. ಕಚೇರಿ ರಜಾ ದಿನ ರವಿವಾರ ಕಿಟ್ ಹಂಚಿಕೆ ಮಾಡಿದ್ದಾರೆಂದು ಕಾರ್ಮಿಕ ಮಹಿಳೆಯರು ಆರೋಪಿಸಿದರು.
ಕಾರ್ಮಿಕರ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸದೆ ಇರುವದು ಕೆಲಕಾಲ ಗೊಂದಲ ವಾತಾವರಣ ಸೃಷ್ಟಿಯಾಗಿತ್ತು.ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬದ್ರತೆ ಒದಗಿಸಲಾಗಿತ್ತು.
ಕಚೇರಿ ಸಿಬ್ಬಂದಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಾರ್ಮಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಇಲಾಖೆಗೆ ಸಂಬಂಧಿಸಿದ ಯಾವದೇ ಮಾಹಿತಿ ಸರಿಯಾಗಿ ನೀಡುವದಿಲ್ಲ. ನೋಟೀಸ್ ಫಲಕದ ಮೇಲೆ ಯಾವದೇ ಮಾಹಿತಿ ಇರುವದಿಲ್ಲ. ಕಿಟ್ ಬಂದಿರುವ ಹಾಗೂ ವಿತರಿಸುವ ಮಾಹಿತಿಯೂ ನೀಡಿಲ್ಲ. ದಲ್ಲಾಲಿಗಳು ಸಾವಿರ ರೂ. ಹಣ ಪಡೆದು ಕಾರ್ಮಿಕ ಕಾರ್ಡ್ ನೀಡುತ್ತಿದ್ದಾರೆ. ಕಾರ್ಮಿಕ ಕಾರ್ಡ್ ಹೆಚ್ಚಾಗಲು ಅಧಿಕಾರಿಗಳೇ ನೇರ ಹೊಣೆ. ಅರ್ಹ ಫಲಾನುಭವಿಗೆ ಸರಿಯಾಗಿ ಸೌಲಭ್ಯ ದೊರೆಯುತ್ತಿಲ್ಲ ಎಂದು ಶಂಕರ ಪತ್ತಾರ ಹಾಗೂ ಪ್ರವೀಣ ಮುನವಳ್ಳಿ ದೂರಿದರು.
ಅಶಿಸ್ತಿನಿಂದ ವರ್ತಿಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಬೇರೆಯವರಿಗೆ ನೇಮಿಸಬೇಕೆಂದು ಜಿಲ್ಲಾ ಕಾರ್ಮಿಕ ಇಲಾಖಾಧಿಕಾರಿಗೆ ಕಟ್ಟಡ ಕಾರ್ಮಿಕರು ಲಿಖಿತ ಮನವಿ ನಿಡಿದರು.
ಬೆಳಗಾವಿ ಉಪ ವಿಭಾಗ ಕಾರ್ಮಿಕ ಅಧಿಕಾರಿ ತರನುಂ ಬಂಗಾಲೆ ಮಾತನಾಡಿ, ಕಾರ್ಮಿಕ ಕಾರ್ಡ ಸಂಭಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬಂದ ಕಿಟ್ಟುಗಳನ್ನು ಫಲಾನುಭವಿಗಳಿಂದ ಅರ್ಜಿ ಪಡೆದು ಪತ್ರಿಕೆಗಳ ಮೂಲಕ ಪ್ರಕಟಣೆ ನೀಡಿ, ನಂತರ ಪರಿಶೀಲಿಸಿ ಅರ್ಹ ಫಲಾನುಭವಿಗೆ ಕಿಟ್ ನೀಡಲಾಗುವದು. ಇಲಾಖೆಗೆ ಅಧಿಕಾರಿಗಳ ಕೊರತೆ ಇದೆ. ಕಾರಣ ಸರಿಯಾದ ಮಾಹಿತಿ ನೀಡಲು ಆಗುತ್ತಿಲ್ಲ. ತಾಲೂಕಿನಲ್ಲಿ 32 ಸಾವಿರ ಕಾರ್ಮಿಕ ಕಾರ್ಡುಗಳನ್ನು ಪರಿಶೀಲಿಸಿ ಅರ್ಹವುಳ್ಳ ಫಲಾನುಭವಿಗಳನ್ನು ಮಾತ್ರ ಉಳಿಸಿಕೊಳ್ಳಲಾಗುವದು.ಸುಳ್ಳು ಮಾಹಿತಿ ನೀಡಿ ಪಡೆದು ಕೊಂಡ ಕಾರ್ಮಿಕ ಕಾರ್ಡ ರದ್ದುಗೊಳಿಸಲಾಗುವದು.ಮಾಲಿಕರಿಂದ ವೇತನ ಪಡೆದ ರಸಿದಿ ಮತ್ತು ಹಾಜರಾತಿ ಪರಿಶೀಲಿಸಿ ಸರ್ಕಾರದ ಯೋಜನೆ ತಲುಪಿಸಲಾಗುವದು. ಸಮಯಕ್ಕನುಗುಣವಾಗಿ ಕಚೇರಿ ತೆರೆದಿರಬೇಕು. 125 ಕಿಟ್ ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವದು. ಒಮ್ಮೆ ಪಡೆದ ಫಲಾನಿಭವಿಗೆ ಮರಳಿ ನೀಡುವದಿಲ್ಲಾಗುವದಿಲ್ಲ. ಕಾರ್ಮಿಕರ ಸಮಸ್ಯೆ ಆಲಿಸಿ ಮಾಹಿತಿ ನೀಡಬೇಕು.ತಪ್ಪಿದ್ದಲ್ಲಿ ಕ್ರಮ ವಹಿಸಲಾಗುವದು ಎಂದರು.
ಈ ವೇಳೆ ಹಿರಿಯ ಕಾರ್ಮಿಕ ನಿರಿಕ್ಷಕ, ರಾಜೇಶ ಅಸ್ನೋಟಕರ,ಕಾರ್ಮಿಕ ನಿರೀಕ್ಷಕ ಪ್ರಭಾರ ವಿರೇಶ ಮೋರೆಕರ, ಹಾಗೂ ಕರೀಮಸಾಬ ಪರಡೆವಾಲೆ, ಮಡಿವಾಳ ಭದ್ರಶೆಟ್ಟಿ, ನಿಂಗಪ್ಪ ಕಲಗುಡಿ, ಮೈಲಾರಿ ಬಸಿಡೋಣಿ, ಈರಣ್ಣಾ ಕಾಜಗಾರ, ಪಕ್ಕೀರಪ್ಪ ಭೋವಿ, ಸಿದ್ದಪ್ಪ ಭೋವಿ ಹಾಗೂ ಮಹಿಳಾ ಕಾರ್ಮಿಕರು ಇದ್ದರು.