ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ದಿಂಗಾಲೇಶ್ವರ‌ ಸ್ವಾಮೀಜಿ

Ravi Talawar
WhatsApp Group Join Now
Telegram Group Join Now

ಧಾರವಾಡ,ಏಪ್ರಿಲ್ 18: ಕೇಂದ್ರ ಸಚಿವ, ಬಿಜೆಪಿ ಹಿರಿಯ ನಾಯಕ ಪ್ರಹ್ಲಾದ್​​ ಜೋಶಿ ಪ್ರತಿನಿಧಿಸುವ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಇಂದು ಸಲ್ಲಿಸಿದ್ದಾರೆ. ಯಾವುದೇ ಮೆರವಣಿಗೆ ‌ಇಲ್ಲದೇ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸ್ವಾಮೀಜಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಸ್ವಾಮೀಜಿಯಿಂದ ನಗರದ ಟೌನ್​ ಹಾಲ್​ನಿಂದ ಮೆರವಣಿಗೆ ನಡೆಯಬೇಕಿತ್ತು. ಆದರೆ, ಮರೆವಣಿಗೆ ಮಾಡದೆ ಮೊದಲು ಸಾಂಕೇತಿಕವಾಗಿ ಒಂದು ಸೆಟ್ ನಾಮಪತ್ರವನ್ನು ಅವರು ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ‌ ಮತ್ತೊಮ್ಮೆ ಚುನಾವಣಾಧಿಕಾರಿಗಳ ಕಚೇರಿಗೆ ಬರಲಿದ್ದಾರೆ. ಈ ವೇಳೆ, ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಮೆರವಣಿಗೆ ಮಾಡಿ ಭಕ್ತರನ್ನು ಉದ್ದೇಶಿಸಿ ಮಾತನಾಡಿ ಬಳಿಕ ಮಾಧ್ಯಮಗಳಿಗೆ ಹೆಚ್ಚಿನದನ್ನು ಪ್ರತಿಕ್ರಿಯಿಸುತ್ತೇನೆ ಎಂದಷ್ಟೇ ಹೇಳಿ ತೆರಳಿದರು.

ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇತ್ತು. ಇದೀಗ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ತ್ರಿಕೋನ ಸ್ಪರ್ಧೆಯ ಸ್ಥಿತಿ ನಿರ್ಮಾಣವಾಗಿದೆ. ಹಾಲಿ ಸಂಸದರಾದ ಪ್ರಹ್ಲಾದ್​​ ಜೋಶಿ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸುತ್ತಿರುವ ಸ್ವಾಮೀಜಿ, ”ಎಲ್ಲ ವರ್ಗದ ಜನರು ಈಗಿನ ಸಂಸದರಿಂದ ಸಂಕಷ್ಟ ಅನುಭವಿಸಿದ್ದಾರೆ. ಅವರು ನನ್ನ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ನಾಡಿನ ಜಿಲ್ಲೆಯ ಜನರ ಹಿತದೃಷ್ಟಿಯಿಂದ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ” ಎಂದು ಈ ಹಿಂದೆ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್​ ಪಕ್ಷದಿಂದ ವಿನೋದ್​ ಅಸೂಟಿ ಚುನಾವಣಾ ಕಣದಲ್ಲಿದ್ದಾರೆ.

WhatsApp Group Join Now
Telegram Group Join Now
Share This Article