ಮೂಡಲಗಿ ಸೆ.17: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆಯ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮನೆಯ ಎದುರು ಸೆ. 20ರಂದು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಎಂದು ನಿಂಗಪ್ಪ ಪಿರೋಜಿ ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ, ಮೀಸಲಾತಿಗಾಗಿ ಸಾಕಷ್ಟು ರೀತಿಯ ಹೋರಾಟಗಳನ್ನು ಮಾಡಿದರು ಕೂಡ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಬಿಜೆಪಿ ಸರ್ಕಾರದ ಹಾಲಿ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡುತ್ತೇವೆ ಎಂದು ಸುಳ್ಳು ಹೇಳಿ ವಚನಭ್ರಷ್ಟರಾಗಿದ್ದಾರೆ, ಆದ ಕಾರಣ ಮುಂಬರುವ ಚುನಾವಣೆಯಲ್ಲಿ ಅದರ ಫಲವನ್ನು ಅವರು ಉಣ್ಣ ಬೇಕಾಗುತ್ತದೆ.ವಿಧಾನಸೌಧದಲ್ಲಿ 10 ದಿನಗಳ ಕಾಲ ನಡೆಯುತ್ತಿರುವ ಅಧಿವೇಶನದಲ್ಲಿ ಪಕ್ಷಾತೀತವಾಗಿ ಮತ್ತು ಎಲ್ಲ ಸಮುದಾಯದ ಶಾಸಕರುಗಳು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಂಬಂಧ ಪ್ರಸ್ತಾವಕ್ಕೆ ಬೆಂಬಲ ಸೂಚಿಸಿ ಧ್ವನಿ ಎತ್ತಬೇಕು, ಒಂದು ವೇಳೆ ಪಕ್ಷತೀತವಾಗಿ ಮತ್ತು ಎಲ್ಲ ಸಮುದಾಯದ ಶಾಸಕರು ಬೆಂಬಲ ಸೂಚಿಸದೆ ಹೋದಲ್ಲಿ ಅಂತವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮಾಜ ನಿರ್ದಾಕ್ಷಿಣವಾಗಿ ತಿರಸ್ಕರಿಸಬೇಕಾಗುತ್ತದೆ.
ಪಂಚಮಸಾಲಿ ಸಮುದಾಯದ ರಾಜಕೀಯ ನಾಯಕರು ಬೇರೆ ಸಮುದಾಯದ ಮೀಸಲಾತಿಗೆ ಬೆಂಬಲ ಸೂಚಿಸಿದ್ದಾರೆ ಹೊರತು ಅಡ್ಡಗಾಲು ಹಾಕಿರುವುದಿಲ್ಲ ಆದಕಾರಣ ಬೇರೆ ಸಮುದಾಯದ ಎಂ.ಎಲ್.ಎ, ಎಂಪಿ, ಮಂತ್ರಿಗಳು ನಮ್ಮ ಸಮುದಾಯದ 2ಎ ಮೀಸಲಾತಿಗೆ ಅಡ್ಡಗಾಲ ಹಾಕುತ್ತಿರುವುದು ಅವರವರ ಸೊಕ್ಕಿನ ಪರಮಾವಧಿ ಎನಿಸುತ್ತಿದೆ, ಮತ್ತು ಅಂಥವರು ಮುಂಬರುವ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಚ್ಚರವಿರಲಿ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.