ಒಮನ್‌ನ ಮಸ್ಕತ್‌ನಲ್ಲಿ ವರುಣನ ಅಬ್ಬರಕ್ಕೆ ಮಹಾಪೂರ:  ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿದ್ದು 12 ಮಕ್ಕಳು ಸಾವು

Ravi Talawar
WhatsApp Group Join Now
Telegram Group Join Now

ಮಸ್ಕತ್‌, ಏಪ್ರಿಲ್16:   ಒಮನ್‌ನ ಮಸ್ಕತ್‌ನಲ್ಲಿ ವರುಣನ ಅಬ್ಬರಕ್ಕೆ ಜನರು ಕಂಗಾಲಾಗಿದ್ದಾರೆ. ಭಾನುವಾರ ಸುರಿದ ಭಾರೀ ಮಳೆಯಿಂದ ದಿಢೀರ್‌ ಪ್ರವಾಹ ಉಂಟಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಗೆ ಸುಲ್ತಾನೇಟ್‌ನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸೋಮವಾರ 19ಕ್ಕೆ ಏರಿದ್ದು, ಮೃತಪಟ್ಟವರಲ್ಲಿ 12 ಮಕ್ಕಳು ಕೂಡ ಇವೆ.

ಕೇರಳದ ವ್ಯಕ್ತಿ ಕೂಡ ಒಮನ್‌ನಲ್ಲಿ ಉಂಟಾದ ದಿಢೀರ್‌ ಪ್ರವಾಹದಲ್ಲಿ ಸಾವನ್ನಪ್ಪಿದ್ದಾರೆ. ಕೇರಳದ ಮೆಕ್ಯಾನಿಕ್‌ ಆಗಿರುವ ಸುನಿಲ್‌ ಕುಮಾರ್‌ ಸದಾನಂದನ್‌ ಎಂಬುವವರು ಗೋಡೆ ಕುಸಿದು ದಕ್ಷಿಣ ಶಾರ್ಕಿಯಾದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ದಿಢೀರ್‌ ಪ್ರವಾಹದ ಹಿನ್ನೆಲೆ ಮಸ್ಕತ್‌ನಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಲ್ಲಿ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ಮುಸಾಂದಮ್‌, ಬ್ಯೂರೈಮಿ, ಧಾಹಿರಾ, ಉತ್ತರ ಬಾತಿನಾ ಹಾಗೂ ದಾಖಿಲ್ಯಾ ಪ್ರದೇಶಗಳಲ್ಲಿ ಮಂಗಳವಾರ ರಿಮೋಟ್‌ ವರ್ಕ್‌ ಪಾಲಿಸಿಯನ್ನು ತರಲಾಗಿದೆ. ಇನ್ನು, ಮುನ್ನೆಚ್ಚರಿಕೆ ಕ್ರಮವಾಗಿ ಮುಸಾಂಡಮ್‌ ಪ್ರದೇಶದ ಕಮ್ಜಾರ್‌ ಮತ್ತು ಮಿಮಾ ಗ್ರಾಮಗಳ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಹಠಾತ್‌ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಸಾವಿರಾರು ಜನರನ್ನು ಒಮನ್‌ನಲ್ಲಿ ರಕ್ಷಿಸಲಾಗಿದೆ. ಅಲ್‌ ಮುದಾಹಿಬಿನಲ್ಲಿ ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ. ಇನ್ನು, ಹಲವು ಕಡೆ ಸಿಲುಕಿದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಭಾನುವಾರ ಬೆಳಗ್ಗೆಯಿಂದ ರಾಷ್ಟ್ರೀಯ ತುರ್ತು ಪರಿಸ್ಥಿತಿ ನಿರ್ವಹಣಾ ಕೇಂದ್ರಕ್ಕೆ ಸುಮಾರು 80ಕ್ಕೂ ಅಧಿಕ ಕರೆಗಳು ಬಂದಿದ್ದು, ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ ಎಂದು ಎನ್‌ಸಿಇಎಂ ಹೇಳಿದೆ.

 

ಇನ್ನು, ಮಂಗಳವಾರ ರಾತ್ರಿ ಮಸ್ಕತ್‌ ಮತ್ತು ಸುತ್ತಲಿನ ಪ್ರದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರದ ರಾಷ್ಟ್ರೀಯ ಬಹು ಹಂತದ ಮುನ್ನೆಚ್ಚರಿಕಾ ವ್ಯವಸ್ಥೆ ಎಚ್ಚರಿಕೆ ನೀಡಿದೆ. ಸಿಎಎನ ಹವಾಮಾನ ತಜ್ಞ ಐಶಾ ಬಿಂಟ್‌ ಜುಮಾ ಅಲ್‌ ಕ್ವಾಸೀಮಾ, ಸೋಮವಾರ ಸಂಜೆಯಿಂದ ಮಳೆ ಹೆಚ್ಚಾಗಿದ್ದು, ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗ್ಗೆಯವರೆಗೆ ಭಾರೀ ಮಳೆ ಸುರಿಯಲಿದೆ ಎಂದು ಹೇಳಿದ್ದಾರೆ

ಮುಸಾಂಡಮ್‌ನಲ್ಲಿ ಬಿರುಗಾಳಿ, ಗುಡುಗು ಮಿಂಚು ಸಹಿತ 50 ಮಿಮೀನಿಂದ 150 ಮಿಮೀ ಮಳೆ ಸುರಿಯಲಿದೆ ಎಂದು ಸಿಎಎ ತನ್ನ ವರದಿಯಲ್ಲಿ ಹೇಳಿದೆ. ಇನ್ನು, ಬ್ಯೂರೈಮಿ, ಧಾಹಿರಾ, ಉತ್ತರ ಬಾತಿನಾ ಹಾಗೂ ದಾಖಿಲ್ಯಾ ಪ್ರದೇಶಗಳಲ್ಲಿ 30 ಮಿಮೀನಿಂದ 120 ಮಿಮೀ ಮಳೆಯಾಗಲಿದೆ ಎನ್ನಲಾಗಿದ್ದು, ಇದು ಹಠಾತ್‌ ಪ್ರವಾಹಕ್ಕೆ ಕಾರಣವಾಗುವ ಸಾಧ್ಯತೆ ಇದೆ

ಮಂಗಳವಾರ ಶಾಲೆಗಳಿಗೆ ರಜೆ!

 ಇನ್ನು, ಪ್ರವಾಹದ ಕಾರಣ ದೋಫರ್‌ ಮತ್ತು ಅಲ್‌ ವುಸ್ತಾ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಮಂಗಳವಾರ ರಜೆ ಘೋಷಿಸಿದೆ. ಏಪ್ರಿಲ್‌ 16 ರಂದು‌ ಸರ್ಕಾರಿ, ಖಾಸಗಿ ಮತ್ತು ಅಂತಾರಾಷ್ಟ್ರೀಯ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಲಭ್ಯವಿರುವ ಸಂಪನ್ಮೂಲಗಳ ಆಧಾರದಲ್ಲಿ ತರಗತಿಗಳನ್ನು ಆನ್‌ಲೈನ್‌ನಲ್ಲಿ ನಡೆಸಬಹುದು ಎಂದು ಹೇಳಿದೆ.\

WhatsApp Group Join Now
Telegram Group Join Now
Share This Article