ಬಿಜೆಪಿ ಪ್ರಣಾಳಿಕೆ ಅನುಷ್ಠಾನಕ್ಕೆ ಬರಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ

Ravi Talawar
WhatsApp Group Join Now
Telegram Group Join Now

ಬೆಂಗಳೂರು,ಏಪ್ರಿಲ್16: ಚುನಾವಣೆಗೆ ಪ್ರಣಾಳಿಕೆಯಿಂದ ಶಕ್ತಿ ಯಾವತ್ತು ಬರಲ್ಲ. ಸರ್ಕಾರ ಇದ್ದಾಗ ಜನರ ಪರ ಕೆಲಸ ಮಾಡುವ ಅವಕಾಶ ಇತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೇವಲ ಭಾವನೆ ಬಗ್ಗೆ ಮಾತನಾಡಿದ್ದರು. ಬದುಕಿನ ಬಗ್ಗೆ ಚಿಂತನೆ ಮಾಡಲಿಲ್ಲ. ಹಾಗಾಗಿ, ಅವರ ಪ್ರಣಾಳಿಕೆ ಅನುಷ್ಠಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಕಪ್ಪು ಹಣ ವಾಪಸ್ ತರುವುದಾಗಿ, ಉದ್ಯೋಗ ಸೃಷ್ಟಿಸುವ ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿತ್ತು. ಅದಾವುದೂ ಈಡೇರಲಿಲ್ಲ. ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಮೂರು ಕೃಷಿ ಮಸೂದೆಗಳನ್ನು ಜಾರಿಗೆ ತಂದಿದ್ದರು. ಅದರ ಕಾರ್ಯಸೂಚಿ ಹಿನ್ನಡೆಯಾದಾಗ ಕಾಯ್ದೆಗಳನ್ನು ಹಿಂಪಡೆದರು. ಈ ಹಿಂದಿನ ಭರವಸೆಗಳನ್ನೇ ಈಡೇರಿಸದಿರುವಾಗ ಹೊಸ ಭರವಸೆಗಳನ್ನು ಹೇಗೆ ಈಡೇರಿಸುತ್ತಾರೆ? ಎಂದು ಪ್ರಶ್ನಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾಂಕ್ರಾಮಿಕ ರೋಗ ಸಮಯದಲ್ಲಿ ಜನರನ್ನು ಉಳಿಸಲು 20 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇದೀಗ ಅವರು ಪತ್ರಿಕೆಗಳಲ್ಲಿ ಜಾಹೀರಾತುಗಳ ಮೂಲಕ ವೆಚ್ಚದ ವಿವರಗಳನ್ನು ಬಹಿರಂಗಪಡಿಸಬೇಕು. ಕೋವಿಡ್ -19 ನಿಂದ ಸಾವನ್ನಪ್ಪಿದ ಕೇಂದ್ರ ಸಚಿವ ದಿವಂಗತ ಸುರೇಶ್ ಅಂಗಡಿ ಅವರ ಪಾರ್ಥಿವ ಶರೀರವನ್ನು ಹಸ್ತಾಂತರಿಸಲು ಬಿಜೆಪಿ ಸರ್ಕಾರ ನಿರಾಕರಿಸಿತ್ತು. ಜಗದೀಶ್ ಶೆಟ್ಟರ್ ಮತ್ತು ಇತರ ಬಿಜೆಪಿ ಸಂಸದರು ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಹಿಂತಿರುಗಿಸುವಂತೆ ಮೋದಿಯವರಿಗೆ ಮನವಿ ಮಾಡಲಿಲ್ಲ, ಆದರೆ ಡಿ.ಕೆ.ಸುರೇಶ್ ಅವರು ದೆಹಲಿಯಲ್ಲಿ ಅಂತಿಮ ವಿಧಿವಿಧಾನದವರೆಗೂ ಜೊತೆಗೆ ನಿಂತಿದ್ದರು. ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಭಯವಿದೆ. ಹೀಗಾಗಿ ಕೇಂದ್ರವು ಕರ್ನಾಟಕದ 14 ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಿದೆ ಎಂದರು.

ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಈಗ ಎನ್‌ಡಿಎ ಪಾಲುದಾರರಾಗಿದ್ದಾರೆ. ಆದರೆ ಮಂಡ್ಯದಲ್ಲಿ ಗೆಲ್ಲುವುದಿಲ್ಲ. ಮಹಿಳೆಯರ ಸಬಲೀಕರಣಕ್ಕಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದರೆ ಗೃಹ ಲಕ್ಷ್ಮಿ ಯೋಜನೆಯಡಿ 2000 ರೂ.ಗಳನ್ನು ಪಡೆದು ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಇದು ಮಹಿಳೆಯರ ಸ್ವಾಭಿಮಾನದ ವಿಷಯವಾಗಿದೆ. ಕುಮಾರಸ್ವಾಮಿ ಹೇಳಿಕೆಯನ್ನು ಪ್ರತಿ ತಾಲೂಕಿನ ಮಹಿಳಾ ಸಂಘಟನೆಗಳು ಖಂಡಿಸಬೇಕು ಎಂದರು.

WhatsApp Group Join Now
Telegram Group Join Now
Share This Article