ಸಕಲ ಸಿದ್ಧತೆ ಪೂರ್ಣ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಬೆಳಗಾವಿ, ಅ.23: ರಾಜ್ಯಮಟ್ಟದ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಸಂಭ್ರಮದ ಉತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಹೂವು ಮತ್ತು ದೀಪಾಲಂಕಾರಗೊಂಡ ಮುಖ್ಯ ವೇದಿಕೆ ಉದ್ಘಾಟನಾ ಸಮಾರಂಭಕ್ಕೆ ಸಿದ್ದಗೊಂಡಿದೆ. ವಸ್ತು ಪ್ರದರ್ಶನ ಮಳಿಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳು, ಮಾಧ್ಯಮ ಕೊಠಡಿ ಸಿದ್ದಗೊಂಡಿವೆ.
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಸೇರಿದಂತೆ ಸಕಲ ಸಿದ್ಧತೆಗಳು ಅಚ್ಚುಕಟ್ಟಾಗಿ ಮಾಡಲಾಗಿದೆ.
ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಅವರಿಗೆ ಯಾವ ತೊಂದರೆಯೂ ಆಗದಂತೆ ಪಾರ್ಕಿಂಗ್ ಸೇರಿದಂತೆ ಎಲ್ಲ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ್ದಾರೆ. ಕಿತ್ತೂರಿನ ಪ್ರಮುಖ ಬೀದಿಗಳಲ್ಲಿ ಹಾಗೂ ಚನ್ನಮ್ಮನ ಕೋಟೆಯ ಸುತ್ತಮುತ್ತ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸೋಮವಾರ (ಅ.23) ಚನಮ್ಮನ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಬೆಳಿಗ್ಗೆ ವೀರಜ್ಯೋತಿ ಸ್ವಾಗತಿಸಿ, ಜಾನಪದ ಕಲಾವಾಹಿನಿ, ವಸ್ತುಪ್ರದರ್ಶನ ಮಳಿಗೆ ಉದ್ಘಾಟನೆ ಹಾಗೂ ಮತ್ತಿತರ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಸಂಜೆ 7 ಗಂಟೆಗೆ ಉತ್ಸವದ ಉದ್ಘಾಟನೆ ಸಮಾರಂಭ ನಡೆಯಲಿದೆ.
ಭಾನುವಾರ(ಅ.22) ರಂದು ಉತ್ಸವದ ಸಕಲ ಸಿದ್ಧತೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಚ.ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಅವರು, ಉತ್ಸವದಲ್ಲಿ ಭಾಗವಹಿಸುವ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದೆ. ಆದ್ದರಿಂದ ಸೂಕ್ತ ಮೂಲಸೌಕರ್ಯಗಳ ಜತೆಗೆ ಭದ್ರತಾ ವ್ಯವಸ್ಥೆ, ಪಾರ್ಕಿಂಗ್, ಬಸ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕೋಟೆ ಆವರಣದಲ್ಲಿರುವ ಮುಖ್ಯ ವೇದಿಕೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳು, ವಸ್ತುಪ್ರದರ್ಶನ ಮಳಿಗೆ, ಮಾಧ್ಯಮಕೇಂದ್ರ, ಪಾರ್ಕಿಂಗ್ ಸ್ಥಳಗಳಿಗೆ ಅವರು ಖುದ್ದಾಗಿ ಭೇಟಿ ನೀಡಿ ವೇದಿಕೆಗಳ ದೀಪಾಲಂಕಾರ, ಸಾರ್ವಜನಿಕರಿಗೆ ಆಸನಗಳ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.