ರಾಜ್ಯದ ನರೇಗಾ ಕಾರ್ಮಿಕರಿಗೆ ವೇತನ ನೀಡುವುದು ಯಾವಾಗ: ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ

Ravi Talawar
WhatsApp Group Join Now
Telegram Group Join Now

ಬೆಂಗಳೂರು29: ಕರ್ನಾಟಕದಲ್ಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, “ಕರ್ನಾಟಕದ ನರೇಗಾ ಕಾರ್ಮಿಕರಿಗೆ ಮೋದಿ ಸರ್ಕಾರ ವೇತನ ನೀಡುವುದು ಯಾವಾಗ” ಎಂದು ಪ್ರಶ್ನಿಸಿದೆ.

ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕರ್ನಾಟಕಕ್ಕೆ ಸಂಬಂಧಿಸಿದ ಹಲವಾರು ಪ್ರಶ್ನೆಗಳನ್ನು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಮುಂದಿರಿಸಿದ್ದಾರೆ. ಜೊತೆಗೆ ಪ್ರಧಾನಿ ಮೋದಿಯ ಸುಳ್ಳಿನ ಪಟ್ಟಿಗಳ ವಿವರವನ್ನೂ ನೀಡಿದ್ದಾರೆ

1. ಬಾಗಲಕೋಟೆ – ಕುಡಚಿ ನಡುವಣ ರೈಲ್ವೇ ಮಾರ್ಗ ನೀಡಲು ಮೋದಿ ಸರ್ಕಾರ ವಿಫಲವಾಗಿದ್ದೇಕೆ?

2. ಮಹಾದಾಯಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಮೋದಿ ಸರ್ಕಾರ ತಡೆ ಹಿಡಿದಿರುವುದೇಕೆ?

3. ಕರ್ನಾಟಕದ ನರೇಗಾ ಕಾರ್ಮಿಕರಿಗೆ ಮೋದಿ ಸರ್ಕಾರ ವೇತನ ನೀಡುವುದು ಯಾವಾಗ?

ಮೋದಿಯ ಸುಳ್ಳಿನ ವಿವರಗಳು ಹೀಗಿವೆ:

1. ಕಳೆದ 8 ವರ್ಷಗಳಿಂದ ನೈಋತ್ಯ ರೈಲ್ವೆಯಲ್ಲಿ ಬಾಗಲಕೋಟೆ ಮತ್ತು ಕುಡಚಿ ನಡುವಣ ರೈಲ್ವೇ ಮಾರ್ಗ ವಿಳಂಬವಾಗಿದೆ. 142 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಕೇವಲ 46 ಕಿ.ಮೀ ಅಂದರೆ ಕೇವಲ 33% ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. 2010-11 ರಲ್ಲಿ ಈ ಯೋಜನೆಗೆ 986 ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಲಾಗಿತ್ತು. ಆದರೆ ಈಗ ಇದರ ಒಟ್ಟಾರೆ ವೆಚ್ಚ 1649 ಕೋಟಿಗೆ ಏರಿದೆ. ಆರಂಭದಲ್ಲಿ 2016ಕ್ಕೆ ಈ ಯೋಜನೆ ಪೂರ್ಣಗೊಳ್ಳಬೇಕು ಎಂಬ ಗಡವು ನಿಗದಿ ಮಾಡಲಾಗಿತ್ತು. ಈಗ ಈ ಯೋಜನೆ 2027ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕರ್ನಾಟಕ ಸರ್ಕಾರ ಈ ಯೋಜನೆಗೆ ಉಚಿತವಾಗಿ ಭೂಮಿ ಹಾಗೂ ಯೋಜನೆಯ ವೆಚ್ಚದಲ್ಲಿ 50% ಅನುದಾನ ನೀಡುತ್ತಿದ್ದರು ಮೋದಿ ಸರ್ಕಾರ ಈ ಯೋಜನೆ ಜಾರಿ ಮಾಡಲು ವಿಫಲವಾಗಿದೆ. ಮಹತ್ವಾಕಾಂಕ್ಷಿ ರೈಲ್ವೆ ಯೋಜನೆ 11 ವರ್ಷಗಳ ವಿಳಂಬ ಎದುರಿಸುತ್ತಿರುವುದೇಕೆ? ಇದು ಮೋದಿ ಸರ್ಕಾರದ ಸಮರ್ಥತೆ ಹಾಗು ಕರ್ನಾಟಕ ವಿರೋಧಿ ಧೋರಣೆಗೆ ಸಾಕ್ಷಿ.

2. ಕಳೆದ ವರ್ಷದ ಕೇಂದ್ರ ಬಜೆಟ್ ನಲ್ಲಿ ಮೋದಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ಘೋಷಣೆ ಮಾಡಿತು. ಒಂದು ವರ್ಷವಾದರೂ ಕೇಂದ್ರ ಸರ್ಕಾರ ಈ ಅನುದಾನದಲ್ಲಿ ನಯಾ ಪೈಸೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಕರ್ನಾಟಕದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆ ಸಮಯದಲ್ಲಿ ಮೋದಿ ಅವರು ಮಹಾದಾಯಿ – ಕಳಸಾ ಬಂಡೂರಿ ಯೋಜನೆ ವಿಘ್ನಗಳನ್ನು ನಿವಾರಿಸುವುದಾಗಿ ಭರವಸೆ ನೀಡಿದ್ದರು. ಆದರೂ ಈ ವರ್ಷದ ಆರಂಭದಲ್ಲಿ ಈ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಅನುಮತಿ ನೀಡಲು ನಿರಾಕರಿಸಿತು. ಬರ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರು ಹಾಗು ನೀರಾವರಿ ಪೂರೈಕೆಗೆ ಈ ಯೋಜನೆ ಮಹತ್ವದ್ದಾಗಿದೆ. ಮೋದಿ ಸರ್ಕಾರ ಇಂತಹ ಮಹತ್ವದ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ತೋರಿರುವುದೇಕೆ? ಕರ್ನಾಟಕದ ಜನತೆ ಮೇಲೆ ಪ್ರಧಾನಮಂತ್ರಿಗಳಿಗೆ ಯಾಕಿಷ್ಟು ದ್ವೇಷ?

3. ಬರ ಪರಿಸ್ಥಿತಿಯಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಕರ್ನಾಟಕ ರಾಜ್ಯ ಸರ್ಕಾರವು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಲ್ಲಿ ಕೂಲಿ ದಿನಗಳ ಪ್ರಮಾಣವನ್ನು 100ರಿಂದ 150ಕ್ಕೆ ಏರಿಕೆ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಬರ ಪೀಡಿತ ಪ್ರದೇಶಗಳಲ್ಲಿ ಕೂಲಿ ದಿನಗಳ ಸಂಖ್ಯೆ ಹೆಚ್ಚಳಕ್ಕೆ ಕಾನೂನಿನಲ್ಲಿ ಅವಕಾಶವಿದ್ದರೂ ಮೋದಿ ಸರ್ಕಾರ ಈ ಯೋಜನೆ ವಿಸ್ತರಣೆ ಮಾಡಲು ವಿಫಲವಾಗಿದೆ. ಇದರ ಜೊತೆಗೆ ಮೋದಿ ಸರ್ಕಾರ ನರೇಗಾ ಕಾರ್ಮಿಕರಿಗೆ ನೀಡಬೇಕಾದ ಕೂಲಿಯ 1600 ಕೋಟಿ ಹಣವನ್ನು ಬಿಡುಗಡೆ ಮಾಡಿಲ್ಲ. ಮೋದಿ ಸರ್ಕಾರ ರಾಜ್ಯದ ನರೇಗಾ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.

WhatsApp Group Join Now
Telegram Group Join Now
Share This Article