ಕಂಗನಾ ಕುರಿತು ಕಾಂಗ್ರೆಸ್​ ನಾಯಕಿ ಅವಹೇಳನಕಾರಿ’ ಪೋಸ್ಟ್: ಚುನಾವಣಾ ಆಯೋಗಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಆದೇಶ!

Ravi Talawar
WhatsApp Group Join Now
Telegram Group Join Now

ಹೈದರಾಬಾದ್ ಮಾ26: ಬಿಜೆಪಿ ಲೋಕಸಭಾ ಅಭ್ಯರ್ಥಿ, ನಟಿ ಕಂಗನಾ ರಣಾವತ್ ಕುರಿತು ಕಾಂಗ್ರೆಸ್​ ನಾಯಕಿ ಹಂಚಿಕೊಂಡಿರುವ ‘ಅವಹೇಳನಕಾರಿ’ ಪೋಸ್ಟ್​ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕೈ ಪಕ್ಷದ ನಾಯಕಿ ಸ್ಪಷ್ಟನೆ ನೀಡಿದ್ದು, ನನ್ನ ಅಕೌಂಟ್​ನಿಂದ ಬೇರೊಬ್ಬರು ಇದನ್ನು ಪೋಸ್ಟ್​​ ಮಾಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಆದೇಶಿಸಿದೆ.

ಕಾಂಗ್ರೆಸ್​ ನಾಯಕಿ ಸುಪ್ರಿಯಾ ಶ್ರೀನೇಟ್​ ಅವರ ಎಕ್ಸ್​ ಖಾತೆಯಲ್ಲಿ ಕಂಗನಾ ಅವರ ಚಿತ್ರವೊಂದನ್ನು ಹಂಚಿಕೊಂಡು, ಆಕ್ಷೇಪಾರ್ಹ ಅಡಿಬರಹ ನೀಡಲಾಗಿತ್ತು. ಇದು ವೈರಲ್​ ಆಗುತ್ತಿದ್ದಂತೆ ಕಾಂಗ್ರೆಸ್​ ನಾಯಕಿ ಪೋಸ್ಟ್​ ಅಳಿಸಿ ಹಾಕಿದ್ದಾರೆ.

 ಕಾಂಗ್ರೆಸ್ ನಾಯಕಿಯ ವಿವಾದಾತ್ಮಕ ಪೋಸ್ಟ್​ಗೆ ತಿರುಗೇಟು ನೀಡಿರುವ ನಟಿ ಕಂಗನಾ, “ನನ್ನ 20 ವರ್ಷಗಳ ಸಿನಿಮಾ ವೃತ್ತಿಜೀವನದಲ್ಲಿ ಎಲ್ಲ ಪಾತ್ರಗಳನ್ನು ಮಾಡಿದ್ದೇನೆ. ಮಹಾರಾಣಿ ಪಾತ್ರದಿಂದ ಹಿಡಿದು ಲೈಂಗಿಕ ಕಾರ್ಯಕರ್ತೆಯಾಗಿಯೂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಅವರವರ ವೃತ್ತಿಯಲ್ಲಿ ಗೌರವ ಹೊಂದಿದ್ದೇವೆ. ಮಹಿಳೆಯರ ಬಗ್ಗೆ ಸಮಾಜದಲ್ಲಿನ ಅಭಿಪ್ರಾಯವನ್ನು ಬದಲಿಸಬೇಕು ಎಂಬುದು ನನ್ನ ಉದ್ದೇಶ. ಎಲ್ಲ ಮಹಿಳೆಯರೂ ಗೌರವಕ್ಕೆ ಅರ್ಹರು” ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

 ವಿವಾದ ಉಂಟಾದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್​ ನಾಯಕಿ ಸುಪ್ರಿಯಾ ಶ್ರೀನೇಟ್​, ನನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬಳಸುವ ವ್ಯಕ್ತಿಯೊಬ್ಬರು ಈ ರೀತಿಯ ಕೀಳು ಅಭಿರುಚಿಯ ಪೋಸ್ಟ್​ ಮಾಡಿದ್ದಾರೆ. ತಮ್ಮನ್ನು ಕೆಟ್ಟದಾಗಿ ಬಿಂಬಿಸಲು ನನ್ನ ಖಾತೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಮಹಿಳೆಯರ ವಿರುದ್ಧ ನಾನು ಎಂದಿಗೂ ಅಗೌರವದ ಹೇಳಿಕೆ ನೀಡಿಲ್ಲ. ಇದು ನನ್ನನ್ನು ತಿಳಿದವರಿಗೆ ಗೊತ್ತಿದೆ. ನನ್ನ ಖಾತೆಗಳನ್ನು ನಿರ್ವಹಿಸುತ್ತಿರುವವರು ತಪ್ಪಾಗಿ ಪೋಸ್ಟ್​ ಮಾಡಿ ಅಪಖ್ಯಾತಿ ತಂದಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯವಾಗಿದೆ ಎಂದು ಹೇಳಿದ್ದಾರೆ. ಬಳಿಕ ತಮ್ಮ ಖಾತೆಯಲ್ಲಿನ ವಿವಾದಿತ ಪೋಸ್ಟ್​ ಡಿಲೀಟ್​ ಮಾಡಿದ್ದಾರೆ.

 ಸುಪ್ರಿಯಾ ಶ್ರಿನೇಟ್‌ ಅವರ ಕೀಳು ಅಭಿರುಚಿಯ ಪೋಸ್ಟ್​ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಮಹಿಳಾ ಆಯೋಗ ಚುನಾವಣಾ ಆಯೋಗಕ್ಕೆ ದೂರಿನ ಪತ್ರ ಬರೆದಿದೆ. ಕಿಸಾನ್ ಕಾಂಗ್ರೆಸ್‌ನ ರಾಜ್ಯ ಜಂಟಿ ಸಂಯೋಜಕ ಅಹಿರ್ ಮತ್ತು ಸುಪ್ರಿಯಾ ಅವರು ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇವರ ನಡವಳಿಕೆಗೆ ಮಹಿಳಾ ಆಯೋಗವು ದಿಗ್ಭ್ರಮೆಗೊಂಡಿದೆ. ಇದು ಅಸಹನೀಯವಾಗಿದೆ ಮತ್ತು ಮಹಿಳೆಯರ ಘನತೆಗೆ ವಿರುದ್ಧವಾಗಿದೆ. ಇವರ ವಿರುದ್ಧ ತಕ್ಷಣದ ಮತ್ತು ಕಠಿಣ ಕ್ರಮ ಕೈಗೊಳ್ಳಿ ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಆಗ್ರಹಿಸಿದ್ದಾರೆ

ಇತ್ತ ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು, ಕಂಗನಾ ರಣಾವತ್ ವಿರುದ್ಧದ ಆಕ್ಷೇಪಾರ್ಹ ಹೇಳಿಕೆಗಾಗಿ ಸುಪ್ರಿಯಾ ಶ್ರೀನೇಟ್​ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಕೋರಿದ್ದಾರೆ. ಪಕ್ಷದೊಳಗೆ ಇಂತಹ ನಡವಳಿಕೆಯನ್ನು ಸಹಿಸಬಾರದು ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article