ನವದೆಹಲಿ : ದೇಶದಲ್ಲಿ ದಿನೇ ದಿನೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಲೈಂಗಿಕ ಸ್ವಾಯತ್ತತೆಯು ಬಯಸಿದ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಹಕ್ಕನ್ನು ಮತ್ತು ಅನಗತ್ಯ ಲೈಂಗಿಕ ಆಕ್ರಮಣದಿಂದ ರಕ್ಷಿಸಿಕೊಳ್ಳುವ ಹಕ್ಕನ್ನು ಒಳಗೊಂಡಿದ ಎಂದು ಹೇಳಿದ ಕೋರ್ಟ್, ಸಮ್ಮತಿ ಲೈಂಗಿಕ ಸಂಬಂಧದ ವಯಸ್ಸನ್ನು ಮದುವೆ ವಯಸ್ಸಿಗಿಂತ ಕಡಿಮೆ ಮಾಡುವ ಸಮಯ ಬಂದಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
“ಲೈಂಗಿಕ ಸ್ವಾಯತ್ತತೆಯು ಬಯಸಿದ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಹಕ್ಕನ್ನು ಮತ್ತು ಅನಗತ್ಯ ಲೈಂಗಿಕ ಆಕ್ರಮಣದಿಂದ ರಕ್ಷಿಸಿಕೊಳ್ಳುವ ಹಕ್ಕನ್ನು ಒಳಗೊಂಡಿದೆ. ಹದಿಹರೆಯದವರ ಹಕ್ಕುಗಳ ಈ ಎರಡೂ ಅಂಶಗಳನ್ನು ಗುರುತಿಸಿದಾಗ ಮಾತ್ರ ಮಾನವ ಲೈಂಗಿಕ ಘನತೆಯನ್ನು ಸಂಪೂರ್ಣವಾಗಿ ಗೌರವಿಸಲಾಗುತ್ತದೆ ಎಂದು ಪರಿಗಣಿಸಬಹುದು” ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಹಲವಾರು ದೇಶಗಳು ಹದಿಹರೆಯದವರಿಗೆ ಸಮ್ಮತಿಯ ಲೈಂಗಿಕ ಸಂಬಂಧ ಬೆಳೆಸಲು ವಯಸ್ಸನ್ನು ಕಡಿತಗೊಳಿಸಿವೆ. ಹೆಚ್ಚಿನ ದೇಶಗಳಲ್ಲಿ ಸಮ್ಮತಿಯ ಸಂಬಂಧಕ್ಕೆ ಒಪ್ಪಿಗೆಯ ವಯಸ್ಸನ್ನು 14 ರಿಂದ 16 ವರ್ಷಗಳ ವ್ಯಾಪ್ತಿಯಲ್ಲಿ ಹೊಂದಿವೆ ನಮ್ಮ ದೇಶ ಮತ್ತು ಸಂಸತ್ತು ಕೂಡ ಪ್ರಪಂಚದಾದ್ಯಂತ ನಡೆಯುತ್ತಿರುವ ಘಟನೆಗಳನ್ನು ಅರಿತುಕೊಳ್ಳುವ ಸಮಯ ಬಂದಿದೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಜುಲೈ 10 ರಂದು ನೀಡಿದ ಆದೇಶದಲ್ಲಿ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರ ಏಕ ಸದಸ್ಯ ಪೀಠವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಈ ರೀತಿ ಉಲ್ಲೇಖಿಸಿದೆ. ಇಂತಹ ಪ್ರಕರಣಗಳಲ್ಲಿ ಆರೋಪಿ ಮತ್ತು ಸಂತ್ರಸ್ತೆ ಒಮ್ಮತದ ಸಂಬಂಧದಲ್ಲಿದ್ದರೂ ಅವರನ್ನ ನಿಂದಿಸಲಾಗುತ್ತದೆ ಎಂಬುದನ್ನ ಕೋರ್ಟ್ ಗಮನಿಸಿದೆ.
17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ಫೆಬ್ರವರಿಯಲ್ಲಿ ವಿಶೇಷ ನ್ಯಾಯಾಲಯದ ಶಿಕ್ಷೆಯನ್ನು ಪ್ರಶ್ನಿಸಿ 25 ವರ್ಷದ ಯುವಕ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಹುಡುಗ ಮತ್ತು ಹುಡುಗಿ ತಾವು ಒಮ್ಮತದ ಸಂಬಂಧದಲ್ಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಿದ ತನ್ನ ಸಲ್ಲಿಕೆಯಲ್ಲಿ ಹುಡುಗಿ ಮುಸ್ಲಿಂ ಕಾನೂನಿನ ಅಡಿಯಲ್ಲಿ ತನ್ನನ್ನು ಮೇಜರ್ ಎಂದು ಪರಿಗಣಿಸಿದ್ದಾಳೆ. ಆದ್ದರಿಂದ ಆರೋಪಿಯೊಂದಿಗೆ ಮದುವೆಯಾಗಲು ಬಯಸಿದ್ದಾಗಿ ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
ಹೀಗಾಗಿ ನ್ಯಾಯಮೂರ್ತಿ ಭಾರತಿ ಡ್ಯಾಂಗ್ರೆ ಅವರು ಈ ಪ್ರಕರಣದ ಶಿಕ್ಷೆಯ ಆದೇಶವನ್ನು ರದ್ದುಗೊಳಿಸಿ ಆರೋಪಿಯನ್ನ ಖುಲಾಸೆಗೊಳಿಸಿದರು. ದಾಖಲೆಯಲ್ಲಿನ ಸಾಕ್ಷ್ಯವನ್ನು ಪರಿಗಣಿಸಿ ಪ್ರಕರಣವನ್ನ ಸ್ಪಷ್ಟವಾಗಿ ಸಮ್ಮತಿಯ ಲೈಂಗಿಕತೆಯ ಪ್ರಕರಣವೆಂದು ಪರಿಗಣಿಸಿ ಆರೋಪಿಯನ್ನ ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಿದರು.
ಮದುವೆಯ ಮಿತಿಯಲ್ಲಷ್ಟೇ ಲೈಂಗಿಕ ಕ್ರಿಯೆಗಳು ನಡೆಯುವುದಿಲ್ಲವಾದ್ದರಿಂದ ಸಮ್ಮತಿಯ ಸಂಭೋಗಕ್ಕೆ ಒಪ್ಪಿಗೆಯ ವಯಸ್ಸನ್ನು ಅಗತ್ಯವಾಗಿ ಮದುವೆಯ ವಯಸ್ಸಿನಿಂದ ಪ್ರತ್ಯೇಕಿಸಬೇಕು ಮತ್ತು ಸಮಾಜ ಮಾತ್ರವಲ್ಲದೆ ನ್ಯಾಯಾಂಗ ವ್ಯವಸ್ಥೆಯು ಈ ಪ್ರಮುಖ ಅಂಶವನ್ನು ಗಮನಿಸಬೇಕು ಎಂದು ಹೈಕೋರ್ಟ್ ಹೇಳಿದೆ.
1940 ರಿಂದ 2012 ರವರೆಗೆ ಸಮ್ಮತಿಯ ಲೈಂಗಿಕ ಸಂಬಂಧಕ್ಕೆ ಸಂಬಂಧಿಸಿದಂತೆ ಒಪ್ಪಿಗೆಯ ವಯಸ್ಸು 16 ವರ್ಷವಿತ್ತು. POCSO ಕಾಯಿದೆ ಜಾರಿ ನಂತರ ಅದನ್ನು 18 ವರ್ಷಗಳಿಗೆ ಏರಿಸಲಾಯಿತು. ಇದು ಜಾಗತಿಕವಾಗಿ ಸಮ್ಮತಿ ಲೈಂಗಿಕ ಸಂಬಂಧಕ್ಕಿರುವ ಅತ್ಯಧಿಕ ವಯಸ್ಸು ಆಗಿದೆ. ಹೆಚ್ಚಿನ ದೇಶಗಳಲ್ಲಿ ಸಮ್ಮತಿಯ ಸಂಬಂಧಕ್ಕೆ ಒಪ್ಪಿಗೆಯ ವಯಸ್ಸನ್ನು 14 ರಿಂದ 16 ವರ್ಷಗಳ ವ್ಯಾಪ್ತಿಯಲ್ಲಿ ಹೊಂದಿವೆ ಎಂದು ಹೈಕೋರ್ಟ್ ಹೇಳಿದೆ.
ಜರ್ಮನಿ, ಇಟಲಿ, ಪೋರ್ಚುಗಲ್ ಮತ್ತು ಹಂಗೇರಿಯಂತಹ ದೇಶಗಳಲ್ಲಿ 14 ವರ್ಷ ವಯಸ್ಸಿನ ಮಕ್ಕಳು ಲೈಂಗಿಕತೆಗೆ ಒಪ್ಪಿಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಕೋರ್ಟ್ ಹೇಳಿದೆ. ಲಂಡನ್ ಮತ್ತು ವೇಲ್ಸ್ ನಲ್ಲಿ ಒಪ್ಪಿಗೆಯ ವಯಸ್ಸು 16 ಮತ್ತು ಜಪಾನ್ನಲ್ಲಿ ಇದು 13 ಎಂದು ನ್ಯಾಯಾಲಯ ಹೇಳಿದೆ.
20 ವರ್ಷ ವಯಸ್ಸಿನ ಹುಡುಗನು 17 ವರ್ಷ ವಯಸ್ಸಿನ ಹುಡುಗಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದರೆ, ಅವನನ್ನು ಅತ್ಯಾಚಾರಿ ಎಂದು ತಪ್ಪಿತಸ್ಥ ಸ್ಥಾನದಲ್ಲಿ ಇರಿಸಲಾಗುತ್ತಿದೆ. ಒಪ್ಪಿಗೆಯಿಂದಲೇ ಲೈಂಗಿಕ ಕ್ರಿಯೆಯಲ್ಲಿ ಯುವತಿ ಸಮಾನವಾಗಿ ತೊಡಗಿಸಿಕೊಂಡಿದ್ದರೂ ಇಲ್ಲಿ ಹುಡುಗನನ್ನಷ್ಟೇ ಆರೋಪಿಯನ್ನಾಗಿಸಲಾಗುತ್ತಿದೆ. ಹದಿಹರೆಯದವರು ಲೈಂಗಿಕ ಸಂಬಂಧಕ್ಕೆ ಪ್ರವೇಶಿಸಿದಾಗ ದೈಹಿಕ ಆಕರ್ಷಣೆ ಅಥವಾ ವ್ಯಾಮೋಹದ ಪ್ರಕರಣವು ಯಾವಾಗಲೂ ಹೊರಬರುತ್ತದೆ ಮತ್ತು ನಮ್ಮ ದೇಶವು ಪ್ರಪಂಚದಾದ್ಯಂತ ನಡೆಯುತ್ತಿರುವ ಘಟನೆಗಳನ್ನು ಅರಿಯುವ ಸಮಯ ಬಂದಿದೆ ಎಂದು ನ್ಯಾಯಾಧೀಶ ಡಾಂಗ್ರೆ ತೀರ್ಪಿನಲ್ಲಿ ಹೇಳಿದರು.