This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

ಬೆಳಗಾವಿಯಲ್ಲಿ ಸುಸಜ್ಜಿತ ಸಾಂಸ್ಕೃತಿಕ ಭವನ ಅಗತ್ಯ – ಎಂ.ಕೆ.ಹೆಗಡೆ ನಾದ ಸುಧಾ ಸಂಗೀತ ಶಾಲೆಯ ತ್ರಯೋದಶೋತ್ಸವ ಕಾರ್ಯಕ್ರಮ


ಬೆಳಗಾವಿ ಅ., 18-: ಬೆಳಗಾವಿಯಲ್ಲಿ ಸಂಗೀತ, ನೃತ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಒಂದು ಸುಸಜ್ಜಿತ ಸಭಾಂಗಣದ ಅವಶ್ಯಕತೆ ಇದೆ. ಈ ಕೊರತೆ ನೀಗಿಸಲು ಸಂಘಟಿತ ಪ್ರಯತ್ನ ಅಗತ್ಯ ಎಂದು ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಸಂಪಾದಕ ಎಂ.ಕೆ.ಹೆಗಡೆ ಹೇಳಿದ್ದಾರೆ.

ಇಲ್ಲಿಯ ಬಿ. ಕೆ. ಮಾಡೆಲ್ ಹೈಸ್ಕೂಲ್ ಸಭಾಂಗಣದಲ್ಲಿ ನಾದ ಸುಧಾ ಸುಗಮ ಸಂಗೀತ ಶಾಲೆ ಮತ್ತು ಬದಲಾವಣೆಯ ಬೆಳಕು ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ನಡೆದ ಸಂಗೀತ, ನೃತ್ಯ ಹಾಗೂ ವಿವಿಧ ಕಲೆಗಳನ್ನೊಳಗೊಂಡ ‘ತ್ರಯೋದಶೋತ್ಸವ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸರಕಾರ ಸಾಕಷ್ಟು ಹಣ ಸುರಿದು ಸಭಾಭವನಗಳನ್ನು ನಿರ್ಮಾಣ ಮಾಡಿದರು ಯಾವುದೂ ಸೂಕ್ತವಾದ ರೀತಿ ಮತ್ತು ಸೂಕ್ತವಾದ ಸ್ಥಳದಲ್ಲಿಲ್ಲ. ಹಾಗಾಗಿ ನಿಷ್ಪ್ರಯೋಜಕವಾಗಿವೆ. ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಬೆಳಗಾವಿಯಲ್ಲಿ ಸೂಕ್ತ ಸಭಾಂಗಣ ನಿರ್ಮಾಣವಾಗುವ ದಿಸೆಯ್ಲಿ ಎಲ್ಲರೂ ಸೇರಿ ಪ್ರಯತ್ನಿಸಬೇಕಿದೆ ಎಂದು ಅವರು ಹೇಳಿದರು.

ಸತ್ಯನಾರಾಯಣ ಅವರು ಎಲೆಮರೆಯ ಕಾಯಿಯಂತೆ 13 ವರ್ಷಗಳಿಂದ ಶ್ರಮಿಸುತ್ತಾ ಸಹಸ್ರಾರು ಮಕ್ಕಳಿಗೆ ಸಂಗೀತ ಹಾಗೂ ವಿವಿಧ ಕಲಾ ತರಬೇತಿ ನೀಡಿ ಅವರಿಗೆ ವೇದಿಕೆ ನೀಡುತ್ತಾ ಬಂದಿದ್ದಾರೆ. ಅವರ ಪರಿಶ್ರಮ ಸಾಧನೆ ಗುರುತಿಸಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆಯಬೇಕು. ಈ ಬಗ್ಗೆ ಸರಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಎಂ.ಕೆ.ಹೆಗಡೆ ಹೇಳಿದರು.

ಚಲನಚಿತ್ರ ನಟ ಶಿರೀಷ್ ಮಲಸೀಮೆ ಮತ್ತು ಅಕ್ಷಯ್ ಚಂದ್ರಶೇಖರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಕ್ಷಯ್ ಅವರು, ಉತ್ತರ ಕರ್ನಾಟಕದಲ್ಲಿ ಕಲಾ ವೇದಿಕೆಗಳು ಕಡಿಮೆ. ಹಾಗಿದ್ದಾಗ ಸತತ 13 ವರ್ಷಗಳಿಂದ ಸತ್ಯನಾರಾಯಣ ಅವರು ಇಲ್ಲಿ ಪ್ರತಿಭೆಗಳಿಗೆ ವೇದಿಕೆ ಕೊಟ್ಟು ಪ್ರೋತ್ಸಾಹಿಸುತ್ತಿದ್ದಾರೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಸಂಕೇಶ್ವರದಿಂದ ಆಗಮಿಸಿದ್ದ ಎಸ್. ಡಿ. ವಿ. ಎಸ್. ಕಾಲೇಜು ಪ್ರಾಂಶುಪಾಲರಾದ ಸರ್ವಮಂಗಳ ಹಾಗೂ ಸಮಾಜ ಸೇವಕರಾದ ಗೌರಿ ಅಜ್ಜಣ್ಣವರ್ ಅವರು, ಇಂತಹ ಸಂಗೀತ ಶಾಲೆ ಬೆಳಗಾವಿ ನಗರಕ್ಕಷ್ಟೇ ಸೀಮಿತವಾಗಿರದೇ ಹಳ್ಳಿಗಳಲ್ಲೂ ಬರಬೇಕು ಎಂದರು.

ಬದಲಾವಣೆಯ ಬೆಳಕು ಸಂಸ್ಥಾಪಕ ಶಿವಾನಂದ ಹಿರಟ್ಟಿ ಅವರು, ಬೆಳಗಾವಿಯಲ್ಲಿ ಇಂತಹ ಒಂದು ಸಂಗೀತ ಶಾಲೆ ನಡೆಸುತ್ತಾ ವಿವಿಧ ರೀತಿಯ ಕಲೆಗಳನ್ನೊಳಗೊಂಡ ಅದ್ಬುತ ಕಾರ್ಯಕ್ರಮ ನೀಡುವ ಮೂಲಕ ಸತ್ಯನಾರಾಯಣ ಅವರು ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಂಗೀತಗಾರ ಎಂ. ಜಿ. ರಾವ್ ಅವರು, ನಾದ ಸುಧಾದ ಕಾರ್ಯಕ್ರಮವು ಯಾವಾಗಲೂ ಸಂಗೀತದ ಜೊತೆಗೆ ನೃತ್ಯ ಹಾಗೂ ವಿವಿಧ ರೀತಿಯ ಕಲೆಗಳನ್ನು ಒಳಗೊಂಡು ಕಾರ್ಯಕ್ರಮಕ್ಕೆ ಮೆರುಗು ತರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ನೆನಪಿಗಾಗಿ ನಾದ ಸುಧಾ ವಿದ್ಯಾರ್ಥಿಗಳು ತಾಯಿ ಭಾರತಿಯ ಹಾಡು ಹಾಗೂ ನೃತ್ಯ ನಿರ್ದೇಶಕಿ ವಿದೂಷಿ ಪ್ರೇಮಾ ಉಪಾಧ್ಯೆ ಮತ್ತು ಅವರ ಶಿಷ್ಯರು ನೃತ್ಯದ ಮೂಲಕ ಭಾರತಾಂಬೆಗೆ ನಮನ ಅರ್ಪಿಸಿದರು.

ಪುಟಾಣಿಗಳಾದ ಸಾತ್ವಿಕ್ ಮತ್ತು ಧನ್ಯಾ ‘ಇದೇ ರಾಗದಲ್ಲಿ’ ಎನ್ನುವ ಹಾಡು ಹಾಗೂ ಶ್ರೇಯಾ , ಧನ್ಯಾ ಅವರ ಹಿಂದಿ ಹಾಡು ‘ಖಜರಾ ಮೊಹಬ್ಬತ್’ ಮತ್ತು ಶುಕ್ಲಾಂಬರ್ ಪತ್ತಾರ ಹಿರಣ್ಯಕಶಿಪುವಿನ ಏಕಪಾತ್ರಾಭಿನಯ, ಸತ್ಯನಾರಾಯಣ ಅವರ ‘ಛೂಕರ್ ಮೇರೆ ಮನ್ ಕೊ’ ಹಾಡಿಗೆ ವಿಶಾರದ ನೃತ್ಯ ಶಾಲೆ ಮಕ್ಕಳ ನೃತ್ಯ ಪ್ರದರ್ಶನ ಹೀಗೆ ವಿವಿಧ ಕಲೆಗಳ ಸಂಗಮ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು.

ವಿದೂಷಿ ಶಾಂತಲಕ್ಷ್ಮಿ ನಾಗೇಂದ್ರನಾಥ್, ಪದ್ಮಾ ಸತ್ಯನಾರಾಯಣ, ಶಾಂತಿನಾಥ ಉಪಾಧ್ಯೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಎ. ಎ. ಸನದಿ, ರಾಜೇಂದ್ರ ಭಂಡಾರಿ ಮತ್ತು ಪೂರ್ಣಿಮಾ ಪತ್ತಾರ ನಿರೂಪಿಸಿದರು. ಆದರ್ಶ ದಂಪತಿ ಕಾರ್ಯಕ್ರಮ ಸಹ ನಡೆಯಿತು. ನಾದ ಸುಧಾ ಸಂಸ್ಥಾಪಕ ಸತ್ಯನಾರಾಯಣ ಅವರು ಸ್ವಾಗತಿಸಿ, ವಂದಿಸಿದರು.


Leave a Reply