ಇಂಡಿ: ಪರಿಶುದ್ಧ ಬೆಳಕು, ಗಾಳಿ, ನೀರು ಮತ್ತು ಆಹಾರದಿಂದ ಮಾತ್ರ ಗುಣಮಟ್ಟದ ಆರೋಗ್ಯ ಕಾಪಾಡಲು ಸಾಧ್ಯ. ಹೀಗಾಗಿ ಪರಿಸರವನ್ನು ಮಾಲಿನ್ಯ ಮುಕ್ತವಾಗುವಂತೆ ಜಾಗೃತಿ ವಹಿಸಬೇಕು ಎಂದು ಹಿರೇರೂಗಿ ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ ಬಬಲಾದ ಹೇಳಿದರು.
ಅವರು ಶನಿವಾರ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ,ತಾಲೂಕ ಪಂಚಾಯತ್ ಇಂಡಿ,ಗ್ರಾಮ ಪಂಚಾಯಿತಿ ವತಿಯಿಂದ ಜರುಗಿದ ಸ್ವಚ್ಛತೆಯೇ ಸೇವೆ-ತ್ಯಾಜ್ಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ಲಾಸ್ಟಿಕ್ ಮುಕ್ತ ಭಾರತದ ನಿರ್ಮಾಣ ಹಾಗೂ ಗ್ರಾಮದ ಸ್ವಚ್ಚತೆಗೆ ಎಲ್ಲರೂ ಒಟ್ಟಾಗಿ ಕೈಜೋಡಿಸೋಣ. ಮನೆಯಿಂದಲೇ ಸ್ವಚ್ಚತಾ ಕಾರ್ಯ ಆರಂಭಿಸಬೇಕು ಎಂದು ಕರೆ ನೀಡಿದರು.

ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಎಲ್ಲರೂ ತಮ್ಮ ದೈನಂದಿನ ಅಡುಗೆ ತ್ಯಾಜ್ಯವನ್ನು ಮಣ್ಣಿನ ತಳದಲ್ಲಿ ಹಾಕಲು ಪ್ರಾರಂಭಿಸಿ,ಅದು ಕೆಲವೇ ವಾರಗಳಲ್ಲಿ ನೈಸರ್ಗಿಕ ಗೊಬ್ಬರವಾಗಿ ಕೊಳೆಯುತ್ತದೆ,ಅದನ್ನು ತಮ್ಮ ತೋಟಗಳಲ್ಲಿ ಬಳಸಬಹುದು.ಈ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಯ ಮೇಲೆ ನಮ್ಮ ಗುರಿ ಇರಬೇಕು ಅಂದಾಗ ಪರಿಸರ ಸ್ವಚ್ಛವಾಗಿರಲು ಸಾಧ್ಯ ಎಂದರು.
ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ದೇಶದಲ್ಲಿ ಹೆಚ್ಚಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಬಳಕೆಯಿಂದ ವಿಲೇವಾರಿ ಕಷ್ಟವಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಹಾಗೂ ಅನಾರೋಗ್ಯಕ್ಕೆ ಕಾರಣವಾಗುತ್ತದೆ.ಸ್ವಚ್ಛ ಪರಿಸರದ ಮಹತ್ವವನ್ನು ಎಲ್ಲರೂ ಅರಿತು ಮುನ್ನಡೆಯಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಶುರಾಮ ಹೊಸಮನಿ,ಉಪಾಧ್ಯಕ್ಷ ಸಂತೋಷ ಕೋಟಗೊಂಡ, ಸದಸ್ಯ ಗಡ್ಡೆಪ್ಪ ಗಿಣ್ಣಿ,ಚಂದ್ರಯ್ಯ ಹಿರೇಮಠ, ಶಿಕ್ಷಕ ಎಸ್ ಆರ್ ಚಾಳೆಕಾರ, ಸಿಬ್ಬಂದಿ ಅಕ್ಬರ ಕೋರಬು,ಶ್ರೀಧರ ಬಾಳಿ,ಶರಣು ನಾಟೀಕಾರ, ಬಸವರಾಜ ತಳಕೇರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
