ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ… ; ಖರ್ಗೆ ಭಾವನಾತ್ಮಕ ನುಡಿ

Hasiru Kranti
WhatsApp Group Join Now
Telegram Group Join Now

ಕಲಬುರಗಿ: ನಾನು ರಾಜಕೀಯದಿಂದ ಎಂದಿಗೂ ನಿವೃತ್ತನಾಗುವುದಿಲ್ಲ ಎಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು, ನಾವು ಮಾಡಿದ ಕೆಲಸಕ್ಕೆ ನೀವು ಆಶೀರ್ವಾದ ಮಾಡಿ. ರಾಧಾಕೃಷ್ಣ ದೊಡ್ಮನಿ ಅವರನ್ನು ಗೆಲ್ಲಿಸಬೇಕು. ನೀವು ಹಾಗೆ ಮಾಡದಿದ್ದರೆ ನಿಮ್ಮ ಹೃದಯದಲ್ಲಿ ನಾನು ಇಲ್ಲ ಎಂದು ತಿಳಿದುಕೊಳ್ಳುತ್ತೇನೆ. ನಾನು ಸತ್ತರೆ ನನ್ನ ಮಣ್ಣಿಗೆ ನೀವು ಬರಬೇಕು. ನನ್ನನ್ನು ಸುಟ್ಟರೇ ಮೇಣದ ಬತ್ತಿ ಹಚ್ಚಲು ಬನ್ನಿ. ಹೂಳಿದರೆ ಮಣ್ಣು ಹಾಕಲು ಬನ್ನಿ. ಇದಕ್ಕಿಂತ ಹೆಚ್ಚಿಗೆ ನಾನು ಹೇಳುವುದಿಲ್ಲ ಎಂದು ಭಾವುಕರಾಗಿ ನುಡಿದರು.
ಇಂದು ಕಲಬುರಗಿ ಜಿಲ್ಲೆಯ ಅಫಜಲ್‌ಪುರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಈ ಚುನಾವಣೆಗೆ ನಿಲ್ಲುತ್ತೇನೋ ಬಿಡುತ್ತೇನೋ ಆ ಮಾತು ಬೇರೆ. ಆದರೆ ತುಳಿತಕ್ಕೆ ಒಳಗಾದ ಸಮಾಜದ ಪರವಾದ ಹೋರಾಟ ಮಾಡಲು ನಾನು ರಾಜಕೀಯದಲ್ಲಿ ಇರುತ್ತೇನೆ. ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಸೋಲಿಸಲು ನಾನು ಹೋರಾಡುತ್ತಲೇ ಇರುತ್ತೇನೆ. ಪಕ್ಷಕ್ಕೆ ಮತ ಹಾಕಲು ಬಯಸದಿದ್ದರೂ ಪರವಾಗಿಲ್ಲ. ನಾನು ಸತ್ತರೆ ನಮ್ಮ ಕೆಲಸಗಳನ್ನು ನೆನಪು ಮಾಡಿಕೊಂಡು ಮಣ್ಣು ಹಾಕಲು ಬನ್ನಿ. ಸತ್ತಾಗ ಸುಟ್ಟರೇ ಮೇಣದ ಬತ್ತಿ ಹಚ್ಚಲು ಬನ್ನಿ, ಹೂಳಿದ್ರೆ ಒಂದು ಹಿಡಿ ಮಣ್ಣು ಹಾಕಲು ಬನ್ನಿ. ಆಗ ಜನರು ನೋಡಪ್ಪ ಆತನ ಅಂತ್ಯಕ್ರಿಯೆಗೆ ಎಷ್ಟು ಜನ ಬಂದರೂ ಅಂತ ಹೇಳಬೇಕು ಎಂದು ಭಾವುಕರಾದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯ ಸೂತ್ರ ಕಿತ್ತುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ಎಂತಹ ಪ್ರಧಾನಿ ಇವರು. ಕಾಂಗ್ರೆಸ್ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆಯೇ ಹೊರತು, ಮಾಂಗಲ್ಯ ಸೂತ್ರ ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು ಅಧಿಕಾರದಲ್ಲಿ ಇದ್ದಾಗ ಬ್ಯಾರೇಜ್, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೇಲ್ವೆ ಕೋಚ್ ಫ್ಯಾಕ್ಟರಿ, ಕೇಂದ್ರಿಯ ವಿವಿಗಳನ್ನು ಸ್ಥಾಪಿಸಿದ್ದೇನೆ. ಇದನ್ನು ಯಾರೂ ನನಗೆ ಹೇಳಿರಲಿಲ್ಲ. ಆದರೆ ಈ ಭಾಗದ ಅಭಿವೃದ್ಧಿಗಾಗಿ ನಾನು ಮಾಡಿದ್ದೇನೆ. ಕಲಬುರಗಿಯಿಂದ ಬೆಂಗಳೂರಿಗೆ ಚತುಷ್ಪಥ ರಸ್ತೆ ನಿರ್ಮಾಣವಾಗಬೇಕು. ಸಿಎಂ ಸಿದ್ದರಾಮಯ್ಯ ಅದನ್ನು ಮಾಡುತ್ತಾರೆ ಎಂಬ ಭರವಸೆ ಇದೆ. ಮೆಜಾರಿಟಿ ಇಲ್ಲದಿದ್ದರೂ ಕೂಡಾ ಆರ್ಟಿಕಲ್ ೩೭೧ ಎ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಸಾವಿರಾರು ನಿರುದ್ಯೋಗಿಗಳು ನೌಕರಿ ಪಡೆದುಕೊಂಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷರು ಹೇಳಿದರು.
ನಾನು ಅಫಜಲಪುರದಿಂದಲೇ ಸೋತಿದ್ದೇನೆ ಎಂದು ಹೇಳಲಾರೆ. ಯಾಕೆಂದರೆ ನನ್ನ ಸೋಲಿಸಲು ಇಡೀ ದೇಶವೇ ಒಗ್ಗಟ್ಟಾಗಿತ್ತು. ಶಾ, ಆರ್‌ಎಸ್‌ಎಸ್, ಸೂಲಿಬೆಲೆ ಸೇರಿದಂತೆ ಎಲ್ಲರೂ ಇಲ್ಲೇ ಕ್ಯಾಂಪ್ ಮಾಡಿ ನನ್ನನ್ನು ಟಾರ್ಗೆಟ್ ಮಾಡಿದ್ದರು. ಆದರೂ ಕಲಬುರಗಿ ಜನ ನನ್ನ ಕೈಬಿಡಲ್ಲ ಎಂದು ಭಾವಿಸಿದ್ದೆ, ಸೋಲಾಯಿತು. ಈಗಲೂ ಕೂಡಾ ಮೋದಿ ಅಲ್ಲಿ ಇಲ್ಲಿ ಹೇಳಿಕೊಳ್ಳುತ್ತಿದ್ದಾರೆ ಎಂದು ಖರ್ಗೆ ತಿಳಿಸಿದರು.
ಈ ಬಾರಿಯೂ ನಿಮ್ಮ ಮತ ತಪ್ಪಿದ್ರೆ ನಿಮ್ಮಗಳ ಹೃದಯ ಗೆಲ್ಲೋಕೆ ನನಗೆ ಸಾಧ್ಯವಾಗಿಲ್ಲ ಅಂತ ತಿಳಿದುಕೊಳ್ಳುತ್ತೇನೆ. ನಾನು ಹುಟ್ಟಿದ್ದೇ ರಾಜಕಾರಣಕ್ಕಾಗಿ. ಇದು ನನಗೆ ಕೊನೆಯ ಚುನಾವಣೆ ಅಲ್ಲ ಎಂದು ಹೇಳಿದರು.
ಸಂವಿಧಾನದ ತತ್ವ ಉಳಿಸಲು ಕೊನೆ ಉಸಿರು ಇರೋವರೆಗೂ ನಾನು ಹೋರಾಟ ನಡೆಸುತ್ತೇನೆ. ನಾಳೆ ಸಿಎಂ ಸಿದ್ದರಾಮಯ್ಯ ನಿವೃತ್ತಿ ಘೋಷಿಸಬಹುದು. ಆದರೆ ನಾನು ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತವನ್ನು “ಸೋಲಿಸಲು” ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಮುಂದುವರಿಯುತ್ತೇನೆ ಎಂದು ಖರ್ಗೆ ಗುಡುಗಿದರು.

WhatsApp Group Join Now
Telegram Group Join Now
Share This Article