ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಬಿಡುವ ಸಂಬಂಧ ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ : ಅಶೋಕ ಚಂದರಗಿ

Ravi Talawar
WhatsApp Group Join Now
Telegram Group Join Now

ಬೆಳಗಾವಿ,ಏ.03: ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು ಸಹಿತ ಅನೇಕ ಜಿಲ್ಲೆಗಳು ಕುಡಿಯುವ ನೀರಿನ ಅಭಾವವನ್ನು ಎದುರಿಸುತ್ತಿವೆ. ಕೃಷ್ಣಾ  ಹಾಗೂ ಭೀಮಾ ನದಿಗಳು ಬತ್ತಿ ಹೋಗುವ ಸ್ಥಿತಿಯಲ್ಲಿವೆ. ಈ ಎರಡೂ ನದಿಗಳನ್ನು ಅವಲಂಭಿಸಿದ ನೂರಾರು ಹಳ್ಳಿ ಪಟ್ಟಣಗಳ ಜನರು ಕುಡಿಯುವ ನೀರಿನ ಅಭಾವವನ್ನು ಎದುರಿಸುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆತಂಕ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಕೊಯ್ನಾ ಹಾಗೂ ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ, ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡುವ ಸಂಬಂಧ ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ. ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ಮುಖಂಡರು ಚುನಾವಣೆಯಲ್ಲಿ  ಮಗ್ನರಾಗಿದ್ದಾರೆ. ಆದರೆ ಸಾಮಾನ್ಯ ಜನರು, ಕೃಷಿಕರು ಕುಡಿಯುವ
ನೀರಿಗಾಗಿ ಬಳಲಿ ಬೆಂಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಜಲಾಶಯಗಳಿಂದ ಕುಡಿಯುವದಕ್ಕಾಗಿ ನೀರು ಬಿಡುಗಡೆ ಮಾಡಿಸುವದೊಂದೇ ಉಳಿದಿರುವ ಮಾರ್ಗವಾಗಿದೆ ಎಂದಿದ್ದಾರೆ.

ಮಹಾರಾಷ್ಟ್ರ ಸರಕಾರ ಕಳೆದ ಆರೇಳು ವರ್ಷಗಳಿಂದ  ನೀರು ವಿನಿಮಯ ಒಪ್ಪಂದಕ್ಕೆ ಒತ್ತ್ತಾಯಿಸುತ್ತಿದೆ. ಈ ಸಂಬಂಧ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಮಾತುಕತೆಗಳು
ಬಹುತೇಕ ನಿಂತೇ ಹೋಗಿವೆ. ಕೃಷ್ಣಾ ನದಿಗೆ ತಾನು ಬಿಡುವಷ್ಟು ಪ್ರಮಾಣದ ನೀರನ್ನು ವಿಜಯಪುರ ಜಿಲ್ಲೆಯ ತುಬಚಿ ಬಬಲೇಶ್ವರ ಏತನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಜತ್ತ ತಾಲೂಕಿನ  ಹಳ್ಳಿಗಳಿಗೆ ನೀರು ಪೂರೈಸಬೇಕೆಂದು ಪಟ್ಟು ಹಿಡಿದಿರುವ ಮಹಾರಾಷ್ಟ್ರ ಸರಕಾರ ವಿಜಯಪುರದ ತಿಕೋಟಾ ನೀರು ವಿತರಣಾ ಕೇಂದ್ರದಿಂದ ಮಹಾರಾಷ್ಟ್ರದ ಗಡಿಯವರೆಗಿನ ೩೦ ಕೀ.ಮೀ. ದೂರದವರೆಗೂ ಪೈಪಲೈನ್ ಹಾಕುವ ವೆಚ್ಚವನ್ನೂ ಸಹ ಕರ್ನಾಟಕ ಸರಕಾರವೇ ಭರಿಸಬೇಕೆಂದು ಷರತ್ತು ವಿಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾತುಕತೆಗಳು ಸ್ಥಗಿತಗೊಂಡಿದ್ದು ಈ ಸಂಬಂಧ ಕರ್ನಾಟಕ ಸರಕಾರ ಮಹಾರಾಷ್ಟ್ರದೊಂದಿಗೆ ಚರ್ಚೆಯನ್ನು ಮುಂದುವರೆಸುವ ಮೂಲಕ ನೀರು ಬಿಡುಗಡೆಯಲ್ಲಿರುವ ಸಮಸ್ಯೆಯನ್ನು ಪರಿಹರಿಸುವದು ಇಂದಿನ ಅವಶ್ಯಕತೆಯಾಗಿದೆ ಎಂದಿದ್ದಾರೆ.

ನೀರಿನ ಅಭಾವ ನೀಗಿಸುವ ವಿಷಯ ನೀತಿಸಂಹಿತೆ ವ್ಯಾಪ್ತಿಯಲ್ಲಿ ಬರಲಾರದು. ಆದ್ದರಿಂದ ತಾವು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಸರ್ವಪಕ್ಷಿಯ ನಿಯೋಗವೊಂದನ್ನು ಮುಂಬಯಿಗೆ
ಕಳಿಸುವ ಮೂಲಕ ಅಲ್ಲಿಯ ಜಲಾಶಯಗಳಿಂದ ನೀರು ಬಿಡುಗಡೆಗಾಗಿ ಅಲ್ಲಿಯ ಸರಕಾರದ ಮೇಲೆ ಒತ್ತಡ ತರಬೇಕೆಂದು ಈ ಮೂಲಕ ತಮ್ಮನ್ನು ಆಗ್ರಹಿಸುತ್ತಿದ್ದೇವೆ ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.

 

WhatsApp Group Join Now
Telegram Group Join Now
Share This Article