ಬೆಂಗಳೂರು ಜು., ೧೯- ಬೆಂಗಳೂರು ನಗರವನ್ನು ಧ್ವಂಸಗೊಳಿಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಪೋಲಿಸರು ಬಂಧಿಸಿದ್ದಾರೆ.
ನಿಖರ ಮಾಹಿತಿ ಮೇರೆಗೆ ನಗರದ ಅಪರಾಧ ವಿಭಾಗದ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದು, ಇದರೊಂದಿಗೆ ಶಂಕಿತ ಉಗ್ರರ ವಿಧ್ವಂಸಕರ ಕೃತ್ಯದ ಯೋಜನೆಯನ್ನು ಪಿಫಲಗೊಳಿಸಿದ್ದಾರೆ. ಈ ಬಂಧಿತ ಶಂಕಿತ ಉಗ್ರರನ್ನು ವಿಚಾರಣೆಗೆ ಒಳಪಡಿಸಿದಾಗ ಸ್ಪೋಟಕ ಅಂಶಗಳನ್ನು ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಸ್, ಹೋಟೇಲ್, ಬಸ್ ನಿಲ್ದಾಣಗಳಲ್ಲಿ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ಇನ್ನು ಈ ಪ್ರಕರಣ ಸಂಬಂಧ ಒಟ್ಟು ೭ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
೨೦೦೮ ರ ಬೆಂಗಳೂರು ಸರಣಿ ಸ್ಪೋಟದ ಆರೋಪಿ ಟಿ. ನಜೀರ ಎ೧ ಆರೋಪಿಯಾಗಿದ್ದು, ಈತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಎ೨ ಆರೋಪಿ ಜುನೈದ ತಲೆಮರೆಸಿಕೊಂಡಿದ್ದಾನೆ. ಇನ್ನು ಇಂದು ನಗರದಲ್ಲಿ ಬಂಧಿತರಾಗಿರುವ ಸುಹೇಲ್ ಎ೩, ಉಮರ್ ಎ೪, ಜಾಹಿದ ಎ೫, ಮುದಾಸಿರ್ ಎ೬, ಮತ್ತು ಫೈಜರ ಎ೭ ಆರೋಪಿಗಳಾಗಿದ್ದಾರೆ.
ಂಧಿತ ಆರೋಪಿಗಳಿಂದ ೭ ಪಿಸ್ತೂಲ್, ೧೨ ಫೋನ್, ೪೫ ಜೀವಂತ ಗುಂಡುಗಳು, ವಾಕಿಟಾಕಿ, ಡ್ರ್ಯಾಗರ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ನಗರದ ಸುಲ್ತಾನ್ ಪಾಳ್ಯದ ಕನಕನಗರದ ಪದ್ಮಾವತಿ ಎಂಬುವವರ ಮನೆಯಲ್ಲಿ ಕಳೆದ ೨-೩ ತಿಂಗಳಿನಿಂದ ಬಾಡಿಗೆಗೆ ವಾಸವಿದ್ದರು ಎನ್ನಲಾಗಿದೆ.
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಧಿತ ಶಂಕಿತ ಉಗ್ರರು ವಿಧ್ವಂಸಕ ಕೃತ್ಯಕ್ಕೆ ವಿದೇಶದಿಂದ ಹಣವನ್ನು ಸಂಗ್ರಹಿಸುತ್ತಿದ್ದರು, ಈ ಐವರು ೨೦೧೭ರ ಕೊಲೆ ಪ್ರಕರಣ ಒಂದರಲ್ಲಿ ಆರೋಪಿಗಳಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಅವರು ಉಗ್ರರ ಸಂಪರ್ಕಕ್ಕೆ ಬಂದಿದ್ದರು, ಇವರು ಬೆಂಗಳೂರಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದರು ಎಂದು ಮಾಹಿತಿ ನೀಡಿದರು.
ಜಮತ್ ಇ ಇಸ್ಲಾಮಿ ಸಂಘಟನೆಯ ಹ್ಯಾಂಡ್ಲರ್ಸ್ ಮೂಲಕ ತರಬೇತಿ ಪಡೆಯಲು ಈ ಐವರು ಶಂಕಿತರು ಸುಲ್ತಾನ್ ಪಾಳ್ಯದಲ್ಲಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದರು. ಸುಲ್ತಾನ್ ಪಾಳ್ಯದ ಮಸೀದಿಯೊಂದರ ಪಕ್ಕದಲ್ಲಿಯೇ ವಾಸವಿದ್ದು ವಿಧ್ವಂಸಕ ಕೃತ್ಯ ನಡೆಸಬೇಕಾದ ಬಗ್ಗೆ ಪ್ಲಾನಿಂಗ್ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಆರೋಪಿಗಳು ಕೊಲೆ, ದರೋಡೆ, ಕೆಂಪು ಮರಳು ಕಳ್ಳಸಾಗಣೆ ಮತ್ತು ಇತರ ಅಪರಾಧಗಳ ಆರೋಪಿಗಳಾಗಿದ್ದಾರೆ. ಅವರು ಜೈಲಿನಲ್ಲಿದ್ದ ಇತರ ಭಯೋತ್ಪಾದಕ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದರು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಜತೆ ನಜೀರ್ ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.