Hasirukranti
ಬಾಗಲಕೋಟೆ

19526 ಫಲಾನುಭವಿಗಳಿಗೆ 20.98 ಕೋಟಿ ರೂ. ಪರಿಹಾರ ಜಮಾ

ಪ್ರವಾಹ, ಅತಿವೃಷ್ಠಿಯಿಂದ ಬೆಳೆ ಹಾನಿ

ಬಾಗಲಕೋಟೆ: ನವೆಂಬರ 21 : ಜಿಲ್ಲೆಯಲ್ಲಿ ಸೆಪ್ಟೆಂಬರ ಮತ್ತು ಅಕ್ಟೋಬರ ಮಾಹೆಯಲ್ಲಿ ಪ್ರವಾಹ ಮತ್ತು ಅತಿವೃಷ್ಠಿಯಿಂದಾದ ಬೆಳೆ ಹಾನಿಗೆ ಪ್ರತಿ ವ್ಯಕ್ತಿಗೆ 2 ಹೆಕ್ಟೆರ್‍ಗೆ ಸೀಮಿತಗೊಳಿಸಿ ಈ ವರೆಗೆ ಮೂರು ಹಂತದಲ್ಲಿ ಒಟ್ಟು 19526 ಫಲಾನುಭವಿಗಳಿಗೆ ಒಟ್ಟು 20,98,91,043 ರೂ.ಗಳ ಪರಿಹಾರವನ್ನು ಅವರವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸರಕಾರದಿಂದ ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

2020ನೇ ಸಾಲಿನಲ್ಲಿ ಪ್ರವಾಹ ಮತ್ತು ಅತಿವೃಷ್ಠಿಯಿಂದಾ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಸೇರಿ 1,12,525 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿತ್ತು. ಹಾನಿಯ ಬಗ್ಗೆ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಸ್ಥಳ ತನಿಖೆ ಮಾಡಿ ಹಾನಿ ಬಗ್ಗೆ ನಿಖರತೆ ಕಂಡುಕೊಂಡು ಈ ವರೆಗಿನ 87478 ಸರ್ವೆ ನಂಬರಗಳಲ್ಲಿಯ ಹಾನಿಯನ್ನು ಪರಿಹಾರ ತಂತ್ರಾಂಶದಲ್ಲಿ ಅಳವಡಿಸಲಾಗಿದ್ದು, ಎನ್.ಡಿ.ಆರ್.ಎಫ್, ಎಸ್‍ಡಿಆರ್‍ಎಫ್ ನಿಯಮದನ್ವಯ ಪ್ರತಿ ಹೆಕ್ಟೆರ್ ಖುಷ್ಕಿ ಬೆಳೆಗೆ 6800 ರೂ, ತೋಟಗಾರಿಕೆ ಬೆಳೆಗೆ 13,500 ರೂ, ಬಹು ವಾರ್ಷಿಕ ಬೆಳೆಗೆ 18 ಸಾವಿರ ರೂ.ಗಳಂತೆ ನೀಡಲಾಗಿದೆ.

ಪ್ರವಾಹ ಮತ್ತು ಮಳೆಯಿಂದ ಜಿಲ್ಲೆಯಲ್ಲಿ 5881 ಮನೆಗಳು ಹಾನಿಯಾದ ಬಗ್ಗೆ ಅಂದಾಜಿಸಲಾಗಿದ್ದು, ಈ ಕುರಿತು ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳ ಜಂಟಿ ತಂಡ ರಚಿಸಿ ಮನೆ ಮನೆಗಳಿಗೆ ಭೇಟಿ ನೀಡಿ ಹಾನಿ ಅಂದಾಜಿಸಿ ಆರ್.ಜಿ.ಎಚ್.ಸಿ.ಎಲ್ ತಂತ್ರಾಂಶದಲ್ಲಿ ಈವರೆಗೆ ಎ, ಬಿ, ಸಿ ಕೆಟಗರಿ ಸೇರಿ ಒಟ್ಟು 4639 ಮನೆಗಳ ಹಾನಿ ಬಗ್ಗೆ ದಾಖಲಿಸಲಾಗಿದೆ. ಅದರಲ್ಲಿ 3612 ಮನೆಗಳನ್ನು ತಂತ್ರಾಂಶದಲ್ಲಿ ಪರಿಹಾರ ಪಾವತಿಗೆ ಅನುಮತಿಸಲಾಗಿದೆ. ಎರಡು ದಿನಗಳಲ್ಲಿ ಅವರ ಖಾತೆಗಳಿಗೆ ಪರಿಹಾರಧನ ಜಮಾ ಆಗಲಿದೆ. ಉಳಿದಂತೆ ಎ ಮತ್ತು ಬಿ ಕೆಟಗರಿಯ ಮನೆಗಳ ಹಾನಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಹಂತವಾರು ಫಲಾನುಭವಿಗಳ ಖಾತೆಗೆ ನೇರವಾಗಿ ಪರಿಹಾರಧನ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬೆಳೆ ಹಾನಿ, ಮನೆ ಹಾನಿಗೆ ಸಂಬಂಧಿಸಿದ ಕೆಲವು ಫಲಾನುಭವಿಗಳು ಬ್ಯಾಂಕ್ ಖಾತೆ, ಆಧಾರ ಕಾರ್ಡ, ರೇಷನ್ ಕಾರ್ಡ, ತಾಂತ್ರಿಕ ತೊಂದರೆ ಇರುತ್ತವೆ. ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆ, ಆಧಾರ ಕಾರ್ಡ, ಪಡಿತರ ಚೀಟಿ ನಿಷ್ಕ್ರೀಯವಾಗಿದ್ದಲ್ಲಿ ತಕ್ಷಣ ಸಕ್ರಿಯಗೊಳಿಸಿ ಸಂಬಂಧಿಸಿದ ತಹಶೀಲ್ದಾರರಿಗೆ ಸಲ್ಲಿಸಬೇಕು. ಬ್ಯಾಂಕ್ ಖಾತೆಗೆ ಆಧಾರ ಕಾರ್ಡ ಜೋಡಣೆ ಆಗದಿದ್ದಲ್ಲಿ ಜೋಡಣೆ ಮಾಡಿಸಬೇಕು. ಪಡಿತರ ಚೀಟಿ ಹೊಂದದೇ ಇದ್ದಲ್ಲಿ ತಕ್ಷಣ ಆನ್‍ಲೈನ್ ಮೂಲಕ ಪಡಿತರ ಚೀಟಿ ಪಡೆದು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಬಾಗಲಕೋಟೆ : 3 ಜನ ಗುಣಮುಖ, 17 ಹೊಸ, 1 ಮೃತ ಪ್ರಕರಣ ದೃಡ

Siddu Naduvinmani

81 ಜನ ಗುಣಮುಖ, 115 ಹೊಸ ಪ್ರಕರಣಗಳು ದೃಡ

Siddu Naduvinmani

ಬಾಗಲಕೋಟೆ: 111 ಜನ ಗುಣಮುಖ, 76 ಹೊಸ ಪ್ರಕರಣ ದೃಡ

Siddu Naduvinmani

Leave a Comment