Hasirukranti
leadingnews ರಾಜಕೀಯ ರಾಜ್ಯ ರಾಷ್ಟ್ರೀಯ

ಬಿಜೆಪಿ ಉಸ್ತುವಾರಿಗಳ ಬದಲಾವಣೆ; ಕರ್ನಾಟಕದ ಇಬ್ಬರಿಗೆ 3 ರಾಜ್ಯಗಳ ಜವಾಬ್ದಾರಿ

 

ಹೊಸದಿಲ್ಲಿ: ಬಿಜೆಪಿ ತನ್ನ ಉಸ್ತುವಾರಿಗಳನ್ನು ಬದಲಾಯಿಸಿದ್ದು, ತನ್ನ ಸಂಘಟನೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಮುಂದೆ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯಗಳ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿದೆ. ರಾಜ್ಯ ಬಿಜೆಪಿ ನೂತನ ಉಸ್ತುವಾರಿಯಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನಿಯುಕ್ತಿಗೊಂಡಿದ್ದಾರೆ. ಸಹ ಉಸ್ತುವಾರಿಯಾಗಿ ತೆಲಂಗಾಣದ ಡಿ.ಕೆ. ಅರುಣಾ ಅವರನ್ನು ನೇಮಿಸಲಾಗಿದೆ.

ಈ ಮೊದಲು ಪಿ. ಮುರಳೀಧರರಾವ್ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದರು. ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ತಂಡದ ಪುನರ್‍ರಚನೆಯಾದಾಗ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುರಳೀಧರರಾವ್ ಅವರಿಗೆ ಕೊಕ್ ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಹೊಸ ಉಸ್ತುವಾರಿ ನೇಮಕ ಮಾಡಲಾಗಿದೆ.

ಆರ್‍ಎಸ್‍ಎಸ್ ಹಿನ್ನೆಲೆಯ ಅರುಣ್ ಸಿಂಗ್, ಬಿಜೆಪಿ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಉತ್ತರ ಪ್ರದೇಶ ಮೂಲದವರಾದ ಇವರು ತಂತ್ರಗಾರಿಕೆಗೆ ಹೆಸರಾಗಿದ್ದಾರೆ. ಪ್ರಸ್ತುತ ರಾಜ್ಯಸಭೆ ಸದಸ್ಯರೂ ಆಗಿದ್ದಾರೆ. ಈ ನಡುವೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರಿಗೆ ಮಹಾರಾಷ್ಟ್ರ, ಗೋವಾ ಹಾಗೂ ತಮಿಳುನಾಡು ಬಿಜೆಪಿ ಘಟಕಗಳ ಉಸ್ತುವಾರಿ ವಹಿಸಲಾಗಿದೆ. ಈ ಹಿಂದೆ ಅವರಿಗೆ ದಕ್ಷಿಣದ ಐದೂ ರಾಜ್ಯಗಳ ಉಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಲಾಗಿತ್ತು. ಇದೀಗ ಬಿಜೆಪಿ ಪಾಲಿಗೆ ಪ್ರಮುಖ ರಾಜ್ಯಗಳಾದ ಗೋವಾ ಮತ್ತು ಮಹಾರಾಷ್ಟ್ರದ ಉಸ್ತುವಾರಿ ನೀಡಲಾಗಿದೆ. ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯೂ ನಡೆಯಲಿದೆ.

ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವಿಯಾರನ್ನು ಪಶ್ಚಿಮ ಬಂಗಾಳಕ್ಕೆ ಹೆಚ್ಚುವರಿ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಅವರೀಗ ಬಂಗಾಳ ಉಸ್ತುವಾರಿ ಕೈಲಾಷ್ ವಿಜಯವರ್ಗೀಯ ಅವರಿಗೆ ಸಾಥ್ ನೀಡಲಿದ್ದಾರೆ. ಭೂಪೇಂದ್ರ ಯಾದವ್ ಅವರನ್ನು ಬಿಹಾರದ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಉಸ್ತುವಾರಿಯಾಗಿದ್ದ ಮುರಳೀಧರ್ ರಾವ್ ಅವರಿಗೆ ಮಧ್ಯ ಪ್ರದೇಶದ ಉಸ್ತುವಾರಿ ನೀಡಲಾಗಿದೆ.

ಮಣಿಪುರ ಹಾಗೂ ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿಯಾಗಿದ್ದ ರಾಮ್ ಮಾಧವ್‍ಗೆ ಸದ್ಯಕ್ಕೆ ಯಾವುದೇ ಉಸ್ತುವಾರಿ ಇಲ್ಲ. ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರಿಗೆ ಮಣಿಪುರದ ಉಸ್ತುವಾರಿ ನೀಡಲಾಗಿದೆ. ಅಮಿತ್ ಶಾ ತಂಡದ ಅನಿಲ್ ಜೈನ್ ಮತ್ತು ಸರೋಜ್ ಪಾಂಡೆಯವರಿಗೆ ಯಾವುದೇ ರಾಜ್ಯದ ಉಸ್ತುವಾರಿ ನೀಡಿಲ್ಲ. ಬೈಜಯಂತ್ ಜೇ ಪಾಂಡ ಅವರಿಗೆ ಅಸ್ಸಾಂನ ಜವಾಬ್ದಾರಿ ನೀಡಲಾಗಿದೆ. ಇಲ್ಲಿಯೂ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.

ಕಳೆದ ತಿಂಗಳು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಪಕ್ಷದ ವ್ಯವಹಾರಗಳನ್ನು ಹೊಸ ತಂಡ ನೋಡಿಕೊಳ್ಳಲಿದ್ದೆ ಎಂದು ಘೋಷಿಸಿದ್ದರು. ಇದಾದ ಬಳಿಕ ಈ ನೇಮಕಗಳು ನಡೆದಿವೆ. ಸತ್ಯ ಕುಮಾರ್, ಸುನಿಲ್ ಓಜಾ, ಸಂಜೀವ್ ಚೌರಾಸಿಯಾ ಈ ಮೂವರು ಉತ್ತರ ಪ್ರದೇಶ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಅವರಿಗೆ ಸಹಾಯಕರಾಗಿ ಇರಲಿದ್ದಾರೆ. ಸಿಂಗ್ ಅವರಿಗೆ ರಾಜಸ್ಥಾನದ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಲಾಗಿದೆ. ತರುಣ್ ಛೌಗ್ ಅವರಿಗೆ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಹಾಗೂ ತೆಲಂಗಾಣದ ಉಸ್ತುವಾರಿ ನೀಡಲಾಗಿದೆ. ನೂತನವಾಗಿ ನೇಮಕವಾಗಿರುವ ಪ್ರಧಾನ ಕಾರ್ಯದರ್ಶಿ ಡಿ ಪುರಂದರೇಶ್ವರಿ ಅವರು ಒಡಿಶಾ ಹಾಗೂ ಛತ್ತೀಸ್‍ಗಢದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಇನ್ನೋರ್ವ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್ ಅವರನ್ನು ಪಂಜಾಬ್, ಚಂಡೀಗಢ ಮತ್ತು ಉತ್ತರಾಖಂಡ್ ಉಸ್ತುವಾರಿಯಾಗಿ ನೇಮಕ ಮಾಡಲಾಗಿದ್ದು, ದಿಲೀಪ್ ಸಕಿಯಾಗೆ ಜಾರ್ಖಂಡ್ ಮತ್ತು ಅರುಣಾಚಲ ಪ್ರದೇಶದ ಜವಾಬ್ದಾರಿ ನೀಡಲಾಗಿದೆ. ಕೇಂದ್ರ ಸಚಿವ ವಿ ಮುರಳೀಧರನ್ ಆಂಧ್ರ ಪ್ರದೇಶ ಉಸ್ತುವಾರಿಯಾಗಿದ್ದು, ಅವರಿಗೆ ಸುಲಿದ್ ದಿಯೋಧರ್ ಸಾಥ್ ನೀಡಲಿದ್ದಾರೆ.

Related posts

ಮಾಜಿ ಡಿಸಿಎಂ ಮಗಳೆಂದು ಲೋನ್ ಕೊಡಿಸುವುದಾಗಿ ಹಲವರಿಗೆ ವಂಚಿಸಿದ ಯುವತಿ

Siddu Naduvinmani

ರಾಜ್ಯದಲ್ಲಿ ಮತ್ತೆ ಇಂದು ದ್ವಿಶತಕ, ಕಲಬುರ್ಗಿಯಲ್ಲಿ ಸತತ ಎರಡನೇ ದಿನ ಶತಕ ಬಾರಿಸಿದ ಕೊರೊನಾ

Hasiru Kranti

ದೇಶದ ಮೊದಲ ಕಿಸಾನ್ ರೈಲಿಗೆ ಚಾಲನೆ

Hasiru Kranti

Leave a Comment