Hasirukranti
ಅಂಕಣಗಳು ಆರೋಗ್ಯ

“ಆರೋಗ್ಯ ರಕ್ಷಣೆಯಲ್ಲಿ ‘ಉಪವಾಸ ವ್ರತಾಚರಣೆ ಒಂದು ಅಸ್ತ್ರವಿದ್ದಂತೆ” – ದೇಹಕ್ಕೆ ನಿಜವಾಗಲೂ ಪ್ರಯೋಜನಗಳಿವೆಯಾ..,?

 

ಆಯುರ್ವೇದದಲ್ಲಿ ಹೇಳುವಂತೆ ಉಪವಾಸವು ಪರಮ ಔಷಧವಿದ್ದಂತೆ, ಮತ್ತು ಸಮಯಕ್ಕೆ ಸರಿಯಾಗಿ ಸೂಕ್ತ ಮಾಹಿತಿಯೊಂದಿಗೆ ಉಪವಾಸವನ್ನು ಮಾಡುವುದರಿಂದ ಹಲವು ಅನಾರೋಗ್ಯ ಸಮಸ್ಯೆಗಳನ್ನು ದೂರಮಾಡಬಹುದು. ಉಪವಾಸ ಎಂದರೆ ಒಂದು ನಿಶ್ಚಿತ ಅವಧಿಯವರೆಗೆ ಘನ ಆಹಾರದಿಂದ ದೂರ ಇರುವುದು ಎಂದರ್ಥ. ದೇಹ, ಮನಸ್ಸು, ಮತ್ತು ಆತ್ಮ ಪರಿಶುದ್ಧವಾಗಬೇಕಾದರೆ ಉಪವಾಸ ಮಾಡವುದು ಉತ್ತಮ. ಹೀಗಾಗಿ `ಉಪವಾಸ’ ವ್ರತಾಚರಣೆಯನ್ನು ಒಂದು ಅಸ್ತ್ರದಂತೆ ಬಳಸಿಕೊಳ್ಳಬಹುದು.

ನಮ್ಮ ಹಿರಿಯರು ವಾರಕ್ಕೊಮ್ಮೆಯಾದರೂ ಉಪವಾಸ ಮಾಡುವುದನ್ನು ನಾವು ಕಾಣುತ್ತಿರುತ್ತೇವೆ. ಇದು ಎಷ್ಟೋ ಸಾಧು ಸತ್ಪುರುಷರ ದೀರ್ಘಾಯುಷ್ಯದ ಗುಟ್ಟು ಆಗಿದೆ. ನಮ್ಮ ದೇಶದಲ್ಲಿರುವ ಪ್ರತಿಯೊಂದು ಧರ್ಮದಲ್ಲೂ ಉಪವಾಸದ ಒಂದು ವಿಧ ಅಥವಾ ಪದ್ದತಿ ಇದ್ದೆ ಇರುತ್ತದೆ. ಕೆಲ ಯುವ ಪೀಳಿಗೆಯಲ್ಲಿ ಉಪವಾಸದ ಬಗ್ಗೆ ನಂಬಿಕೆ ಇರುವುದಿಲ್ಲ ಹಾಗೂ ದೇವರ ಮೇಲಿನ ನಂಬಿಕೆಯಂತೂ ಅವರವವರ ಭಾವಕ್ಕೆ ಬಿಟ್ಟಿದ್ದು. ಆದರೆ ಒಂದಂತೂ ಸತ್ಯ, ವೇದಗಳು, ಶಾಸ್ತ್ರಗಳು, ಹಾಗೂ ದೇವರ ಒಡಂಬಡಿಕೆಗಳಿಂದ ತಿಳಿದು ಬರುವದೇನೆಂದರೆ ಉಪವಾಸ ಮಾಡುವುದರಿಂದ ಅದಾವುದೋ ‘ಅವ್ಯಕ್ತ ಶಕ್ತಿ’ ದೇಹವನ್ನೆಲ್ಲಾ ಅವರಿಸಿರುವಂತೆ ಸೂಪ್ತವಾದ ಚೈತನ್ಯ ಕಾರ್ಯಪ್ರವರ್ತವಾದಂತೆ, ಹಾಗೂ ಆತ್ಮಿಕ ಶಕ್ತಿ ಒಡಗೂಡಿದಂತೆ ಮುಖದ ಮೇಲೆ ‘ತೇಜೋಮಯ ಕಾಂತಿ’ ಪಸರಿಸುತ್ತಿರುತ್ತದೆ. ಅದರ ಅನುಭವ ನಮಗಾಗಬೇಕಾದರೆ ನಾವು ಉಪವಾಸವನ್ನು ನಿಯಮಿತವಾಗಿ ಮಾಡುವುದರಿಂದ ಸ್ವತಃ ತಿಳಿದುಕೊಳ್ಳಬಹುದು. ಆಯಾ ಧರ್ಮಕ್ಕೆ ಅನುಗುಣವಾಗಿ ಮಹಾನವಮಿಯಲ್ಲಿ, ಈಸ್ಟರ್‍ನಲ್ಲಿ, ರಮಜಾನ್‍ನಲ್ಲಿ, ಉಪವಾಸದ ಪದ್ಧತಿಯನ್ನು ನಾವು ಕಂಡಿರುತ್ತೇವೆ. ಹಾಗೂ ಜೈನ ಧರ್ಮದಲ್ಲಂತೂ ಸಲ್ಲೇಖನವೃತ ಪ್ರಸ್ತುತವು ಜಾರಿಯಲ್ಲಿದೆ. ಇನ್ನು ಇದು ಆಧ್ಯಾತ್ಮೀಕ ವಿಷಯವಾದರೆ, ಆರೋಗ್ಯದ ದೃಷ್ಟಿಯಿಂದ ವೈಜ್ಞಾನಿಕವಾಗಿ ಉಪವಾಸದಿಂದ ದೇಹಕ್ಕೆ ಪ್ರಯೋಜನಗಳಿವೆಯೇ?

ಉಪವಾಸದಿಂದ ದೇಹಕ್ಕೆ ನಿಜವಾಗಲೂ ಪ್ರಯೋಜನಗಳಿವೆಯಾ.,?

1. ವೈದ್ಯಕೀಯ ಡಾಟಾ ಹಾಗೂ ಸಂಶೋಧಾನೆ ಆಧಾರಿತ ಅಂಶಗಳಿಂದ ತಿಳಿದು ಬರುವುದೆನೆಂದರೆ ಜಂಕ್ ಪುಡ್ಸ್ ಹಾಗೂ ಅಧಿಕ ಕಾರ್ಬೋಹೈಡ್ರೇಟ್ ಅಂಶಗಳಿರುವ ಆಹಾರದ ಸೇವನೆಯಿಂದ ದೇಹದಲ್ಲಿ ಬೇಡದ ಕೊಬ್ಬು ಶೇಖರಣೆಯಾಗಿ ದೇಹ ಸ್ಥೂಲ ಕಾಯವಾಗುತ್ತದೆ. ಇದರಿಂದ ಉಸಿರಾಟದ, ಬೆನ್ನು ನೋವಿನಂತಹ ಅನೇಕ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಅಂತಹ ಸಮಸ್ಯೆಗಳು ಎದುರಾಗದಂತೆ ನಾವು ಜಾಗ್ರತೆ ವಹಿಸಬೇಕಾಗುತ್ತದೆ. ಅದಕ್ಕೆ ನಿಯಮಿತವಾಗಿ ವಾರವಾರ್ತಿ, ಅಥವಾ ತಿಂಗಳಿಗೊಮ್ಮೆಯಾದರೂ ಉಪವಾದ ಮಾಡುವುದರಿಂದ ತಕ್ಕ ಮಟ್ಟಿಗೆ ದೇಹದಲ್ಲಿರುವ ಬೇಡದ ಕ್ಯಾಲೊರಿಯ ಬೆಳವಣಿಗೆಗೆ ಕಡಿವಾಣ ಹಾಕಬಹುದಲ್ಲದೆ, ಸಾಂಕ್ರಾಮಿಕವಲ್ಲದ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವದಕ್ಕೆ ನಿಯಮಿತ ಉಪವಾಸ ಒಂದು ದಿವ್ಯ ಅಸ್ತ್ರವಿದ್ದಂತೆ.

2. ನಿಯಮಿತವಾಗಿ ಉಪವಾಸ ಮಾಡುವುದರಿಂದ ಮೂತ್ರಪಿಂಡ, ದೊಡ್ಡಕರುಳು, ಸಣ್ಣಕರುಳು, ಶ್ವಾಸಕೋಶಗಳ ಕಾರ್ಯ ಬಲಗೊಳ್ಳುತ್ತದೆ.

3. ಅಧಿಕ ರಕ್ತದೊತ್ತಡ, ಮಲಬದ್ಧತೆ, ಅಜೀರ್ಣ, ಆಹಾರ ಅಲರ್ಜಿ, ಅಸ್ತಮಾ, ನಿದ್ರಾಹೀನತೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

4. ತ್ವಚೆ ಸಮಸ್ಯೆ ಹೋಗಲಾಡಿಸುವಲ್ಲಿ ಉಪವಾಸ ತುಂಬಾ ಮಹತ್ವಕಾರಿಯಾಗಿದೆ. ಅಲ್ಲದೇ ಮುಖದ ಕಾಂತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

5. ಉಪವಾಸದಿಂದ ದೇಹದ ತೂಕ ಸಮ ಪ್ರಮಾಣದಲ್ಲಿ ಇಡಲು ಸಾಧ್ಯವಾಗುತ್ತದೆ. ಅಲ್ಲದೇ, ಮಾನಸಿಕ ಆರೋಗ್ಯಕ್ಕೂ ತುಂಬಾ ಉತ್ತಮವಾದದ್ದು.

6. ‘ದೀರ್ಘಾಯುಷ್ಯಕ್ಕೂ’ ಉಪವಾಸ ಒಳ್ಳೆಯದು: ಹೌದು ಕಡಿಮೆ ತಿನ್ನುವುದರಿಂದ ಹೆಚ್ಚು ಕಾಲ ಬದುಕುತ್ತೇವೆ ಎಂದು ಈಗಾಗಲೇ ಕೆಲವು ಅಧ್ಯಯನಗಳು ಸಾಬೀತು ಪಡಿಸಿವೆ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಸಾಧು ಸಂತರ ದೀರ್ಘಾಕಾಲದ ವರೆಗೆ ಬದುಕಿ ಬಾಳಿದ ನಿದರ್ಶನಗಳನ್ನು ನಾವು ಕೇಳಿರುತ್ತೇವೆ.

7. ಉಪವಾಸದಿಂದ ಜೀರ್ಣಾಂಗದ ಶ್ರಮವು ಕಡಿಮೆಯಾಗಿ ಜೀರ್ಣಾಂಗವು ಬಲಿಷ್ಠಗೊಂಡು ದೇಹದಲ್ಲಿ ಉತ್ಪತ್ತಿಯಾಗುವ ವಿಷವನ್ನು ಹೊರಹಾಕಿ ಕೆಲವು ಸಾಂಕ್ರಾಮಿಕವಲ್ಲದ ರೋಗಗಳನ್ನು ಶಮನ ಮಾಡುತ್ತದೆ.

8. ಉಪವಾಸದಿಂದ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ.

ಸಾಮಾನ್ಯವಾಗಿ ಆಚರಿಸುವ ಉಪವಾಸದಲ್ಲಿ ಮೂರು ವಿಧಾನಗಳು, ನೀರನ್ನಷ್ಟೇ ಸೇವಿಸಿ ಮಾಡುವ ಉಪವಾಸ, ಚಿಕಿತ್ಸಕ ಉಪವಾಸ, ನಿಯಮಿತ ಉಪವಾಸ.

ಉಪವಾಸವನ್ನು ಹೇಗೆ ಮಾಡಬೇಕು ?

1. ಉಪವಾಸವೆಂದರೆ ಇಡೀ ದಿನ ಸಂಪೂರ್ಣವಾಗಿ ಖಾಲಿ ಹೊಟ್ಟೆಯಲ್ಲಿ ಇರುವುದಲ್ಲ. ಹೀಗೆ ಮಾಡುವುದರಿಂದ ದೇಹಕ್ಕೆ ನಿಶ್ಯಕ್ತಿ ಉಂಟಾಗಿ ದೇಹ ಅನಾರೋಗ್ಯಕ್ಕೀಡಾಗುವ ಸಾಧ್ಯತೆಗಳು ಇರುತ್ತವೆ ಬದಲಾಗಿ ಘನ ಆಹಾರವನ್ನು ತ್ಯಜಿಸಿ, ಉಪವಾಸದ ಅವಧಿಯಲ್ಲಿ ತಾಜಾ ಹಣ್ಣಿನ ಜ್ಯೂಸ್, ನಿಂಬೆ ಹಣ್ಣಿನ ರಸ, ಜೇನುತುಪ್ಪ, ಹಸಿ ತರಕಾರಿ, ಸಲಾಡ್, ಮೊಳಕೆ ಕಾಳು ಮತ್ತು ಇತರೆ ಹಣ್ಣುಗಳನ್ನು ಸೇವಿಸಬಹುದು.
2. ನಾವು ಸೇವಿಸುವ ಆಹಾರದಲ್ಲಿ ನಿಕೋಟಿನ್ ಮತ್ತು ಕೆಫೀನ್‍ನಂತಹ ಅಧಿಕ ಕಾರ್ಬೋಹೈಡ್ರೆಟ್‍ನಂತಹ ಅಂಶಗಳಿರುವ ಆಹಾರ, ಹಾಗೂ ಅಧಿಕ ಮಸಾಲೆಯುಕ್ತ ಆಹಾರ ಸೇವಿಸದೇ ಇರುವುದು.
3. ದಿನವಿಡೀ ಉಪವಾಸವಿದ್ದು ರಾತ್ರಿ ಹೊಟ್ಟೆಬೀರಿಯುವಂತೆ ಊಟ ಮಾಡದೇ ಇರುವುದು ಉತ್ತಮ. ಏಕೆಂದರೆ ಹೀಗೆ ಮಾಡುವುದರಿಂದ ಜೀರ್ಣಶಕ್ತಿ ನಾಶವಾಗಿ ಹೋಗುತ್ತದೆ.
4. ಉಪವಾಸದ ಸಮಯದಲ್ಲಿ ಆಗಾಗ ನಿಯಮಿತವಾಗಿ ‘ಜೀವಜಲ’ ವನ್ನು ಸೇವಿಸುತ್ತಿರಬೇಕು. ಇಲ್ಲದಿದ್ದರೆ ದೇಹ ನಿರ್ಜಲೀಕರಣ ಹೊಂದಿ ಸುಸ್ತು ಆವರಿಸುವದು.
5. ಉಪವಾಸದ ಸಮಯದಲ್ಲಿ ಹೆಚ್ಚು ಪರಿಶ್ರಮವಿರುವ ಅಥವಾ ಭಾರ ಎತ್ತುವ ಕೆಲಸ ಕಾರ್ಯಗಳನು ಮಾಡದೆ ಇರುವುದು ಒಳಿತು. ಬದಲಾಗಿ ಲಘು ವ್ಯಾಯಾಮ ಮಾಡುವುದು ಸೂಕ್ತ.
6. ಈ ರೀತಿಯ ಉಪವಾಸವನ್ನು ಲಘು ಉಪಹಾರ ಸೇವನೆಯ ಮೂಲಕ ಮುಕ್ತಾಯಗೊಳಿಸಿ, ಸಾವಕಾಶವಾಗಿ ಘನ ಆಹಾರವನ್ನು ಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಅವಶ್ಯವಾಗಿ ಲಾಭ ದೊರೆಯುತ್ತದೆ.
7. ಉಪವಾಸ ಪ್ರಕ್ರಿಯೆ ದೇಹದ ಚಯಾಪಚಕ್ಕೆ ಸಂಬಂಧ ಪಟ್ಟಿದ್ದಾಗಿದ್ದು, ಅಲ್ಲದೆ ಹೃದಯದ ರಕ್ತನಾಳಿಗೆ ಹಾಗೂ ಮಾನಸಿಕ ಪರಿಣಾಮಗಳಿಗೆ ಸಂಬಂಧಿಸಿದ್ದರಿಂದ ಇವುಗಳ ಬಗ್ಗೆ ಸಂಪೂರ್ಣ ನಿಗಾವಹಿಸಬೇಕಾಗುತ್ತದೆ.
8. ನಿಯಮಿತ ಉಪವಾಸ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು. ಮಾನಸಿಕ ಆರೋಗ್ಯವಿದ್ದರೆ ದೇಹದ ಆರೋಗ್ಯ ಹೆಚ್ಚಾಗುವುದು.
9. ಅತಿ ಆದರೆ ‘ಅಮೃತವು’ ವಿಷಯೆಂಬಂತೆ ಆಯುರ್ವೇದವೇ ಹೇಳುವಂತೆ ದೀರ್ಘ ಕಾಲದವರೆಗೆ ಉಪವಾಸ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಆದ್ದರಿಂದ ಅವಶ್ಯಕತೆಗನುಸಾರ ಉಪವಾಸ ಮಾಡುವುದು ಸೂಕ್ತ ಎಂದು ಹೇಳುತ್ತದೆ.

ಉಪವಾಸವನ್ನು ಯಾರು ಮಾಡಬಾರದು…?

ಸಾಮಾನ್ಯವಾಗಿ ಉಪವಾಸವನ್ನು ದೀರ್ಘ ಕಾಲದ ಗ್ಯಾಸ್ಟ್ರಿಕ್‍ಸಮಸ್ಯೆಯಿಂದ ಬಳಲುವವರು ಹೃದ್ರೋಗ, ಅನಿಮಿಯಾ ಅಥವಾ ರಕ್ತದ ಪ್ರಮಾಣ ಕಡಿಮೆ ಇರುವವರು, ಮಧುಮೇಹದಂತಹ ಸಮಸ್ಯೆ ಇರುವವರು. ಹಾಗೂ ಇನ್ನಾವುದೇ ದೀರ್ಘಕಾಲದ ಸಮಸ್ಯೆ ಅಥವಾ ವ್ಯಾಧಿಯಿಂದ ಬಳಲುವವರು ಉಪವಾಸವನ್ನು ವೈದ್ಯರ ಸಲಹೆ ಮೇರೆಗೆ ಮಾಡಬೇಕಾಗುತ್ತದೆ. ಅದರಲ್ಲೂ ಪರವಾನಗಿ ಪಡೆದ ಪ್ರಕೃತಿಚಿಕಿತ್ಸಕರ ಸಲಹೆಯ ಮೇರೆಗೆ ಮಾಡುವುದು ಅತ್ತುತ್ತಮ. ಇನ್ನುಳಿದಂತೆ ಯಾರು ಬೇಕಾದರೂ ಉಪವಾಸವನ್ನು ಮಾಡಬಹುದು.

ಒಟ್ಟಾರೆಯಾಗಿ ಉಪವಾಸ ಒಂದು ರೀತಿಯಲ್ಲಿ ಒಬ್ಬ ವೈದ್ಯನಾಗಿ ನಮಗೆ ಸಹಾಯ ಮಾಡುವುದಲ್ಲದೆ ನಮ್ಮಲ್ಲಿ ನವೋಲ್ಲಾಸ ಹಾಗೂ ಶಕ್ತಿಯನ್ನು ಮರುಪೂರಣ ಮಾಡುವ ಒಂದು ದಿವ್ಯ ಅಸ್ತ್ರವಾಗಿದೆ.

  • ರಾಘವೇಂದ್ರ ಶಿ. ತಳವಾರ.

Related posts

ವಯಸ್ಸಿಗೆ ನಾಚಿಕೆ ಇದೆ! ಹಸಿವಿಗೆ ನಾಚಿಕೆ ಇಲ್ಲ !

Siddu Naduvinmani

ಚುಟುಕು ಸಾಹಿತ್ಯ ಪರಿಷತ್ತಿನ ಎಲ್ಲ ತಾಲೂಕಾ ಘಟಕಗಳ ವಿಸರ್ಜನೆ

Siddu Naduvinmani

ನಾಳೆ ಅಮ್ಮಿನಬಾವಿಯ ಚಾರಿತ್ರಿಕ ಮೋಹರಂ ಆಚರಣೆ

Siddu Naduvinmani

Leave a Comment