Hasirukranti
ಅಂಕಣಗಳು ಜೀವನಶೈಲಿ ವಿಶೇಷ

ನಗುವಿನಲ್ಲಿ ಮಗುವಾಗಿ ಬೆಳಕಿಗೆ ನಗುವಾದ ಗಜಲ್

ಅಂತರ್ ದೃಷ್ಟಿ – 5

 

ವಾಣಿ ಭಂಡಾರಿ :- ಗಜಲ್ ಸಂಕಲನ:-ನೂರ್ ಏ ತಬಸ್ಸುಮ್

ಲೇಖಕರು :- ನೂರ್ ಅಹಮ್ಮದ್ ನಾಗನೂರ

ಪ್ರಕಾಶಕರು :- ಖುಷಿ ಪ್ರಕಾಶನ

ಪುಟಗಳು :- ೧೪೪

ಬೆಲೆ :- ೧೩೫.

“ಕಳೆದುಕೊಂಡಿದ್ದನ್ನು ಪಡೆಯುವುದರಲ್ಲಿ ಸುಖವೇ ಬೇರೆಯಾಗಿದೆ” “ಅತ್ತು ಹಗುರಾಗಿ ನಗು ಪಡೆಯುವುದರಲ್ಲಿ ಮಜವೇ ಬೇರೆಯಾಗಿದೆ”. ಹೇಗೆ ಪ್ರಸ್ತುತ ಪಡಿಸುತ್ತಾ ಸಾಗುವ “ನೂರ್ ಅಹಮದ್” ಅವರ ಗಜಲ್ ಆದ  “ನೂರ್ ಏ ತಬಸ್ಸುಮ್”  ಎಂಬ ಗಜಲ್ ಸಂಕಲನದಲ್ಲಿ ಕಂಡುಬರುವ ಮತ್ಲಾದ  ಸಾಲುಗಳಿವು. ಹೆಸರೇ ಸೂಚಿಸುವಂತೆ ನೂರ್ ಎಂಬ ಪ್ರಕಾಶಮಾನವಾದ ಬೆಳಕು ಇವರು. ಉದಯೋನ್ಮುಖ ಬರಹಗಾರರಾಗಿದ್ದು ಇವರು ಸಾಹಿತ್ಯವಲಯದಲ್ಲಿ  ನೂರ್ ಜಿ ಎಂದು ಪರಿಚಿತರು.
     ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯವರು. ಗದಗದಲ್ಲಿ ಆಂಗ್ಲ ಭಾಷೆಯ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಣೆ ಮಾಡುತ್ತಿರುವ ಶ್ರೀಯುತ ನೂರ್ ಅಹಮದ್ ಅವರು ಗಜಲ್ ಸಾಹಿತ್ಯವನ್ನು ಧ್ಯಾನಿಸುತ್ತಾ ಗಜಲ್ ಪ್ರಕಾರಗಳನ್ನು ಮೈಗೂಡಿಸಿಕೊಂಡವರು. ಕನ್ನಡ ಸಾಹಿತ್ಯದಲ್ಲಿ ಉದಯೋನ್ಮುಖ ಬರಹಗಾರರಾಗಿ ಕಂಡುಬರುವ ನೂರ್ ಅಹಮದ್ ಅವರು ಮೂಲತಃ ಪರ್ಷಿಯನ್ ಭಾಷೆಯಿಂದ ಉರ್ದು ಭಾಷೆಗೆ ಬಂದ ಕಾವ್ಯ  ಕಾವ್ಯಪರಂಪರೆಯಿಂದ ಆಳವಾಗಿ ಅಧ್ಯಯನ ಮಾಡಿ ಅದರ ಸ್ವರೂಪ ಗುಣಲಕ್ಷಣ ಆಯಾಮಗಳು ಇವೆಲ್ಲವನ್ನು ಕುಶಲಾಗ್ರಮತಿಯಿಂದ ತನ್ಮಯರಾಗಿ ಗಜಲ್ ಅನ್ನು ಕಟ್ಟುವ ಪ್ರತಿಭಾನ್ವಿತ ಗಜಲ್ಕಾರರು. ಇವರ ಗಜಲ್ ಸಂಕಲನದಲ್ಲಿ ಒಟ್ಟು 72 ಗಜಲ್ ಅನ್ನು ಒಗ್ಗೂಡಿಸಿ ಸಂಕಲನವಾಗಿಸಿ ಸಹೃದಯರಿಗೆ ರಸದೌತಣವನ್ನು ನೀಡಿರುತ್ತಾರೆ.
ಇವರ ಗಜಲ್ ನಲ್ಲಿ  ವಿರಹ ಪ್ರೇಮ, ಸಾಮಾಜಿಕ ಚಿಂತನೆ ದೇಶ-ಭಾಷೆ ಅಲೌಕಿಕತೆ, ಜೀವನ್ಮರಣಗಳ ನಡುವಿನ ಹೋರಾಟ, ಸೊಬಗು,ಪ್ರಕೃತಿ ವಿಸ್ಮಯ, ಇವೆಲ್ಲದರ ಒಟ್ಟು ಹೂರಣವೇ 72 ಗಜಲ್ ನಲ್ಲಿ ನೋಡಬಹುದಾದ ವಸ್ತುವಿಷಯ.ಗಜಲ್ ಪ್ರಕಾರದ ಸಂಪೂರ್ಣ ವಿಚಾರಗಳ ಅನಾವರಣವನ್ನು ಇವರ ಗಜಲ್ ನ ಮುನ್ನುಡಿಯಲ್ಲಿ ಕಾಣಬಹುದಾಗಿದೆ. ಮಹಾನ್ ಗಜಲ್ ಕಾರರು ಹೇಳುವ ಪ್ರಕಾರ ಗಜಲ್ ಎಂಬುದು ಧ್ಯಾನಿಸಿ ಪ್ರೇಮಿಸಿ ಆಪ್ತವಾಗಿ ಬರೆಯುವ ಪ್ರಕಾರವಾಗಿದೆ.
   “ಅನಾದಿ ಕವಿ ವೃಕ್ಷ ಗಳ ಅರಿವಿನ ನೆರಳಿನ ಸಿಂಚನ ರಸಸಿದ್ಧಿ ಹೊಳೆಯುವ ಬೆಳಕು ಜ್ಞಾನ ಓಘರವಿ ಕಾಂಚನ  ರಸಸಿದ್ಧಿ”
ಏಳು ಶೇರ್ ಗಳನ್ನು ಹೊಂದಿರುವ ಈ ಗಜಲ್ ನ ಮತ್ಲಾ ದ ಸಾಲುಗಳು ಇಡೀ ಕವಿ ಕುಲಕ್ಕೆ ಕಿರೀಟವನ್ನು ಇರಿಸಿ ಪೂಜಿಸುವ ಕಾಯಕಲ್ಪ ದಂತೆ ಕಂಡುಬರುವ ಗಜಲ್ ಬಹಳ ಮನಸ್ಸಿಗೆ ನಾಟುವಂತಹದ್ದು. ‘ಕವಿ ಕುಲವನ್ನು ಅರಿವಿನ ವೃಕ್ಷವಾಗಿ, ‘ಹೊಳೆಯುವ ಜ್ಞಾನದ ಸಿರಿಯಾಗಿ’ ಕಂಡ ಅವರ ಹೃದಯ ಶ್ರೀಮಂತಿಕೆ ಅಚ್ಚಳಿಯದೆ ಸರ್ವರ ಮನಃಪಟಲದಲ್ಲಿ ನೆಲೆ ನಿಲ್ಲುವಂತದ್ದು.
ಸಾಹಿತ್ಯದ ಯಾವುದೇ ಪ್ರಕಾರ ವಾದರೂ ಸಹ ಪ್ರೀತಿಯಿಂದ ಆಪ್ತತೆಯಿಂದ ಧ್ಯಾನಿಸದಿದ್ದರೆ ಆ ಸಾಹಿತ್ಯದ ರಸದೌತಣವನ್ನು ಸಹೃದಯರಿಗೆ ತಲುಪಿಸಲು ಸಾಧ್ಯ ವಾಗಲಾರದು. ಈ ನಿಟ್ಟಿನಲ್ಲಿ ಕವಿಯು ನೋಡುವ ದೃಷ್ಟಿಕೋನಗಳು ಸದಾ ಸೃಜನಶೀಲವಾಗಿ ಮತ್ತು ವಿಸ್ಮಯ ಪೂರ್ಣವಾಗಿ ಇದ್ದಾಗ ಮಾತ್ರ ಸಮಾಜಕ್ಕೆ ತಲುಪಿಸಲು ಸಾಧ್ಯ.ಮತ್ತು ಸಮಾಜದ ನಡುವೆ ನಡೆಯುವ ಆಗುಹೋಗುಗಳ ಕಡೆ ನಮ್ಮ ಚಿತ್ತ ವಿಭಿನ್ನವಾಗಿ ಹರಿಸಿದಾಗ ಮಾತ್ರ ಬಹುಕಾಲ ನೆಲೆನಿಲ್ಲಲು ಸಾಧ್ಯವಾಗಬಹುದು ಎಂಬುದನ್ನು ಮಹಾನ್ ಕವಿಗಳ ಅಭಿವ್ಯಕ್ತಿ.
ಈ ಹಿನ್ನೆಲೆಯಿಂದ ಇವರ ಗಜಲ್ ಅನ್ನು ವೀಕ್ಷಣೆ ಮಾಡಿದಾಗ “ಉಸಿರಾಟವನ್ನು ಹುಡುಕುತ್ತಿದ್ದೇನೆ ಅಳುವ ಕಣ್ಣುಗಳ ದೃಷ್ಟಿಗೂ ಕಾಣಬೇಡ”
“ಒಳಹೊಕ್ಕ ಗಾಯಗಳಿಗೆ ಮುಲಾಮು ಹಚ್ಚುತ್ತಿದ್ದೇನೆ ಮುಗ್ಧ ಪ್ರೀತಿಗೆ ದೂರಬೇಡ” ಎಂಬ ಮತ್ಲಾದ ಸಾಲುಗಳು ಓದುಗನನ್ನು ಒಂದು ಕ್ಷಣ ತಡೆದು ನಿಲ್ಲಿಸುತ್ತವೆ. ಹಾಗಾದರೆ ಉಸಿರಾಟವನ್ನು ತಡೆದು ಅಳುವ ಕಣ್ಣಿಗೆ ಕಾಣಿಸದೆ ರೀತಿಯಲ್ಲಿ ಉಸಿರಾಟದ ಪರಿಯನ್ನು ಹುಡುಕುವ ಚಿಂತನಾಲಹರಿ ಅಮೋಘವಾಗಿ ಪರಿಣಮಿಸುತ್ತದೆ. ಮನುಷ್ಯನ ಬದುಕು ಮೂರು ದಿನದ ಸಂತೆಯಂತೆ.ಆ ಸಂತೆಯಲ್ಲಿ  ಮನದ ಒಳ ಭಾವದೊಳಗೆ ಹೋಗಿ ಅಂತರಂಗದಲ್ಲಿ ಉಂಟಾದ ಗಾಯಗಳಿಗೆ ಮುಲಾಮು ಹಚ್ಚುವ ಆ ಮುಗ್ಧ ಪ್ರೀತಿಯನ್ನು ಎಂದು ಕೂಡ ದೂರಸರಿಸ ಬೇಡ ಎನ್ನುವ ಅಂತಃಕರಣದ ಸಾಲುಗಳು ಹೃದಯವನ್ನು ಹಿಂಡುತ್ತವೆ. ಹೌದು!!,, ಪ್ರೀತಿ ಎಂಬುದು “ಪ್ರೀತಿಯಾಗಿ ಪ್ರೀತಿಯಂತೆಯೇ ಪ್ರೀತಿಗೋಸ್ಕರ ಪ್ರೀತಿಯನ್ನು” ಮಾಡಿದಾಗ ಮಾತ್ರ ಒಳಗಣ್ಣು ತೆರೆಯುತ್ತದೆ.ಇಲ್ಲದಿದ್ದರೆ ಪ್ರೀತಿ ಕೇವಲ ಬೋಗದ ವಸ್ತುವಾಗುತ್ತದೆ.ಪ್ರೀತಿ ಎಂದಿಗೂ ಹಾಗಾಗ ಬಾರದು.ಪ್ರೀತಿಯು ದೇಶ, ಭಾಷೆ, ನೀರು ನೆಲ, ಎಲ್ಲವನ್ನೂ ಮೀರಿ ಇರುವಂತಹದ್ದು.
“ಗಡಿಯಾರ ಸಮಯ ಸಮಯಕ್ಕೆ ತಕ್ಕ ಹಾಗೆ ಬದಲಾಗುತ್ತದೆ ಬದುಕಿನ ತಿರುವನು ಹಿಡಿದು ನಾನೇ ಬದಲಾಗುತ್ತೇನೆ ಸಾಕಿ”  ಗಜಲ್ ನ ಮಿಶ್ರ ದಲ್ಲಿ ಕಂಡುಬರುವ ಅಲೌಕಿಕವಾದ ವಿಚಾರದಾರೆಗಳು ಮನಸ್ಸಿನೊಳಗೆ ನಾಟಿ ಸುಪ್ತ ಭಾವವನ್ನು ಬಡಿದೆಬ್ಬಿಸುತ್ತದೆ. ಸಮಯ ಅನ್ನುವಂಥದ್ದು ಪಕ್ಕ  ೪೨೦ ಅನ್ನುತ್ತಾರೆ  ಬದುಕನ್ನು ವಾಸ್ತವವಾಗಿ ಕಾಣುವ ಹಲವು ಮನಗಳು. ಬಂದಿರುವುದನ್ನು ಬಂದಂತೆ ಸ್ವೀಕರಿಸಬೇಕು ಎನ್ನುವಂಥದ್ದು ದಾರ್ಶನಿಕರ ಸಾಲುಗಳ ಆಗಿರುತ್ತವೆ.  ಈ ರೀತಿಯಾಗಿರುವ ವಿಚಾರಧಾರೆಗಳನ್ನು  ಅವಲೋಕಿಸಿದಾಗ,,,  ಹೌದು!! ಯಾವುದು ನಿಂತರು ಸಮಯ ನಿಲ್ಲಲಾರದು. ಈ ಸಮಯಕ್ಕೆ ಯಾರ ಹಂಗಿಲ್ಲ ಮತ್ತು ಯಾರ ಕಡಿವಾಣವೂ ಇಲ್ಲ.ತನ್ನಷ್ಟಕ್ಕೆ ತಾನೇ ಬೆಳಕಾಗುತ್ತದೆ ತನ್ನಷ್ಟಕ್ಕೆ ತಾನೇ ಕತ್ತಲು ಆಗುತ್ತದೆ. ಬದುಕಿನಲ್ಲಿ ಬರುವಂತಹ ತಿರುವುಗಳಿಗೆ ನಾವೇ ದಾರಿಯನ್ನು ಹುಡುಕಿ ನಡೆಯಬೇಕಾಗುತ್ತದೆ. ಇಂತಹ ಮಾರ್ಮಿಕ ಸಾಲನ್ನು ಹೇಳಿರುವ ನೂರ್ ಅವರ ಎದೆಯಾಳದ ದನಿ ಈ ಮಿಶ್ರ ದಲ್ಲಿ ಕಂಡುಬರುತ್ತಿದೆ. ಅಷ್ಟಕ್ಕೂ ಈ ಭೂಮಿಗೆ ಬಂದ ಮನುಷ್ಯಜೀವಿ ಯಾರು ಯಾರನ್ನು ನಂಬಿಕೊಂಡು ಬಂದಿರಲಾರರು. ಹೋಗುವಾಗಲೂ ಸಹ ಯಾರ ಜೊತೆಯು ಯಾರನ್ನು ಕರೆದುಕೊಂಡು ಹೋಗಲಾರರು. ಹಾಗಿದ್ದ ಮೇಲೆ ನಮ್ಮ ಬದುಕಿನ ತಿರುವನ್ನು ದಾರಿಯನ್ನು ನಾವೇ ಕಂಡುಕೊಳ್ಳಬೇಕಾಗುತ್ತದೆ. ಮತ್ತು ಬದಲಾವಣೆಗೆ ತೆಗೆದುಕೊಳ್ಳಬೇಕಾಗುತ್ತದೆ. “ಭಗವದ್ಗೀತೆ” ಯಲ್ಲಿ ಹೇಳಿರುವ ಪ್ರಕಾರ “ಬದಲಾವಣೆ ಜಗದ ನಿಯಮ” ಇಂತಹ ಚಿಂತನೆ ಅಡಿಯಲ್ಲಿ ನೂರ್ ಅಹಮದ್ ಅವರ ಗಜಲ್ ನ ಮಿಶ್ರ ಗಳು ಮನಸ್ಸಿಗೆ ತಟ್ಟಿ ಭಾವ ಸ್ಪುರಣೆಗೊಳಿಸುತ್ತವೆ.
“ಅಂತ್ಯಕಂಡ ದಿನಗಳನ್ನು ನೆನೆಸಿ ಮಧು ಶಾಲೆಯಲ್ಲಿ ತೇಲಾಡುವಿರಿ, ಅರ್ಥವಿಲ್ಲದ ಸಂಸ್ಕೃತಿಗೆ ಸೋತು ನಶೆ ಬಟ್ಟಲಿನಲ್ಲಿ ತೇಲಾಡುವಿರಿ” ಇಂತಹ ಸಾಲಗಳನ್ನು ಹೇಳುವಾಗ  ಕವಿ ಹೃದಯವು ಸಹೃದಯರಿಗೆ ಶ್ರೀಮಂತಿಕೆಯ ಕಾವ್ಯದ ರಸದೌತಣವನ್ನು ಉಣಬಡಿಸುತ್ತದೆ.  “ಸಾಕು ಮಾಡಿ ಈ ನಿಮ್ಮ ಮಾತು ಜೀವನದ ಸುಖವು ಎಲ್ಲಿ, ಹತ್ತು ಹಲವಾರು ಯೋಜನೆಯ ಹೊತ್ತ ನಿಮ್ಮ ಮುಖವು ಎಲ್ಲಿ” ಎಂದು ಸಮಾಜವನ್ನು ಮಾರ್ಮಿಕವಾಗಿ ಪ್ರಶ್ನಿಸುತ್ತಾ ಸಾಗುವ ಇವರ ಗಜಲ್ ನ ಮತ್ಲಾಗಳು ಓದುಗರನ್ನು ಸೆರೆಹಿಡಿಯುತ್ತದೆ.
ಇಂತಹ ಹಲವು ಗಜಲ್ ನ ಒಳಭಾಗಗಳು ಸೂಕ್ಷ್ಮಾತಿಸೂಕ್ಷ್ಮ ವಾಗಿ ಅವಲೋಕನಕ್ಕೆ ಒಳಪಡಿಸಿದಾಗ ಗಂಭೀರತೆ ಪ್ರೇಮ ನಿವೇದನೆ, ಆಧ್ಯಾತ್ಮಿಕ ಚಿಂತನೆ,ಪ್ರಕೃತಿಯನ್ನು ಆಸ್ವಾದಿಸಿದ ಪರಿ ಸಮಾಜದ ಆಗುಹೋಗುಗಳಿಗೆ ದನಿಯಾಗುವ ಅವರ ಗಜಲ್ಗಳು ಕೆಲವೊಂದು ಕಡೆ ಓದುತ್ತಿರುವಂತೆ ಸುಮ್ಮನೆ ನಿಲ್ಲಿಸಿಬಿಡುತ್ತವೆ. ಏರುಗತಿಯಲ್ಲಿ ಸಾಗುವ ಸ್ಥಾಯಿಭಾವಗಳು ಒಮ್ಮೊಮ್ಮೆ ಗಕ್ಕನೆ ನಿಂತು, ಸಂಚಾರಿ ಭಾವಗಳು ಹಾದು ಹೋಗುವುದನ್ನು ಕಾಣಬಹುದು.
     ‌ಹಾಗಾದರೆ ಈ ಸಂಚಾರಿ ಭಾವಗಳು ಹಾದು ಹೋಗುವುದೇಕೆ?  ಎಂಬ ಚಿಂತನೆಯನ್ನು ತೌಲನಿಕವಾಗಿ ಅಧ್ಯಯನಕ್ಕೆ ಒಳಪಡಿಸಿದಾಗ ನಿತ್ಯದ ಬದುಕಿನಲ್ಲಿ ಕವಿಮನ ನಿತ್ಯವೂ ಕಾವ್ಯ ಲಹರಿಯಲ್ಲಿ ಚಲಿಸಲಾರದು. ಪ್ರತಿಯೊಬ್ಬ ಕವಿ ಕಾವ್ಯ ಪ್ರಪಂಚದಲ್ಲಿ ಎಲ್ಲವೂ ಅವರೇ ಆಗಿರುವ ಸ್ಥಿತಿಯನ್ನು, ಮತ್ತು ಯಾವುದೋ ಕಾರ್ಯ ನಿಮಿತ್ತ ದಲ್ಲಿ ಹಾದುಹೋಗುವ ಭಾವಗಳು ಮನಸ್ಸನ್ನು ಆಕ್ರಮಿಸಿಕೊಳ್ಳುತ್ತವೆ. ಕೆಲವೊಮ್ಮೆ ಸಂಚಾರಿ ಸ್ಥಿತಿಯಲ್ಲಿ ನಮ್ಮನ್ನು ಕೈ ಬಿಟ್ಟು ಹೋಗುತ್ತವೆ.
ಈ ಭಾವನೆಗಳ ಕುರಿತು ಕವಿ ಕೋಲ್ರಿಜ್ ತನ್ನ “ಕುಬ್ಲಾ ಖಾನ್” ಕವನವನ್ನು ರಚಿಸುವ ಹೊತ್ತಿನಲ್ಲಿ ಯಾರೋ ಸ್ನೇಹಿತರು ಬಂದಿದ್ದರಿಂದ ಅಲ್ಲಿಗೆ ನಿಂತು ಹೋಯಿತೆಂದು ಆನಂತರ ಎಷ್ಟೇ ಪ್ರಯತ್ನ ಪಟ್ಟರೂ ಸಹ ಅರ್ಧಕ್ಕೆ ನಿಂತ ಸಾಹಿತ್ಯವನ್ನು ಮುಂದುವರೆಸಲು ಆಗಲಿಲ್ಲ ಎಂದು ಹೇಳಿರುವುದು ಪ್ರಸಿದ್ಧವಾದ ಸಂಗತಿ. ಕವಿಗಳಾದ ಪುತಿನ ಅವರು ಹೇಳುತ್ತಿದ್ದರಂತೆ “I have composed most of my poems in between the files “ಎಂದು.ಆಫೀಸಿನ ಕಾಗದಪತ್ರಗಳ ನಡುವೆಯೂ ಕಾವ್ಯಧಾರೆ ನುಗ್ಗಬಹುದು, ಒಮ್ಮೊಮ್ಮೆ ಜಗ್ಗಿ ಹಿಂದಕ್ಕೆ ಎಳೆಯಬಹುದು, ಲೌಕಿಕವಾದ ಸಮಸ್ತ ವ್ಯವಹಾರಗಳು ನಡುವೆಯೂ ಸಹ ಹಾದು ಹೋಗಬಹುದು. ಇದು ಕಲಾ ಪ್ರವೃತ್ತಿ. ಇಂತಹ ವಸ್ತು ವಿಚಾರಗಳು ಅನಾದಿಕಾಲದಿಂದಲೂ ಸಹ ಎಲ್ಲಾ ಕವಿಪುಂಗವರಿಗೆ ಕಾಡಿರುವ ವಿಚಾರಧಾರೆ. ಸ್ಥಾಯಿಭಾವಗಳು ಸಂಚಾರಿ ಭಾವಗಳು ನಮ್ಮನ್ನು ಒಮ್ಮೊಮ್ಮೆ ಉತ್ತುಂಗಕ್ಕೆ ತೆಗೆದುಕೊಂಡು ಹೋಗಬಹುದು ಮತ್ತೊಮ್ಮೆ ಕೆಳ ಭಾವಕ್ಕೂ ತಳ್ಳಬಹುದು ಇದಕ್ಕೆ ಎಲ್ಲಾ ಕಾಲಘಟ್ಟದ ಕವಿಗಳು ಸಹ ಒಳಗಾಗಿರುವ ಪ್ರಸಗಂವನ್ನು ಅವಲೋಕಿಸಬಹುದು.
ಈ ಹಿನ್ನೆಲೆಯಿಂದ ವೈಚಾರಿಕವಾಗಿ ವಿಶ್ಲೇಷಣೆಗೆ ಒಳಪಡಿಸಿದರಾಗ ಒಮ್ಮೊಮ್ಮೆ ವಾಚ್ಯತೆ ಭ್ರಮನಿರಸನ,ವಿಷಯ ಕವಲೊಡೆಯುವಿಕೆ, ಕಂಡು ಬಂದರೆ ಮತ್ತೊಮ್ಮೆ ಲಾಲಿತ್ಯಪೂರ್ಣತೆ ಸೋಪಾಜ್ಞತೆ ಬೆರಗು ಬಿನ್ನಾಣ ಸರಳ ಸುಂದರ ಸ್ವಚ್ಛ ಭಾಷಾ ಪ್ರಾವೀಣ್ಯತೆ ಇವೆಲ್ಲವೂ ಸಹ ಅಡಕವಾಗಿದೆ. ಕಲಾಮನಸ್ಸುಗಳನ್ನು  ಕುರಿತು ಸುಪ್ರಸಿದ್ಧ ಮನಶಾಸ್ತ್ರಜ್ಞರಾದ “ಸಿಜೆ ಯೂಂಗ್” ಅವರು ಹೇಳುತ್ತಾರೆ “ಸೃಷ್ಟಿಶೀಲ ನಾದ ಪ್ರತಿಯೊಬ್ಬ ಕಲೆಗಾರನದೂ ದ್ವಂದ್ವ ಇಲ್ಲವೇ ಸಮನ್ವಿತ ವ್ಯಕ್ತಿತ್ವ” ಅದೇ  “ಆನಂದವರ್ಧನ ತನ್ನ ಧ್ವನ್ಯ ಲೋಕ” ದಲ್ಲಿ ಈ ರೀತಿಯಾಗಿ ವ್ಯಕ್ತಪಡಿಸುತ್ತಾರೆ “ಅಪಾರೇ ಕಾವ್ಯ ಸಂಸಾರೆ ಕವಿ ರೇವ ಪ್ರಜಾಪತಿಃ ಯಥಾಸ್ಮೈ ರೋಚತೆ ವಿಶ್ವಂ ತಥೇವಂ  ಪರಿವರ್ತತೆ” ‘ಅಪಾರವಾದ ಕಾವ್ಯ ಸಂಸಾರದಲ್ಲಿ ಕವಿಯೇ ಬ್ರಹ್ಮ ಅವನ ಇಷ್ಟದಂತೆ ಇಡೀ ಜಗತ್ತೇ ಪರಿವರ್ತನೆ ಪಡೆಯುತ್ತದೆ’ ಇಂತಹ ಸೂಕ್ಷ್ಮ ವಿಚಾರಗಳನ್ನು ಅವಲೋಕನಕ್ಕೆ ಒಳಪಡಿಸಿಕೊಂಡು ತನ್ನ ಅನುಭವ ಸಾಮರ್ಥ್ಯಗಳನ್ನು ವಿಚಾರಪೂರ್ವಕವಾಗಿ ಕಾವ್ಯದೊಳಗೆ ಇಳಿಸಿ ಮತ್ತೊಂದು ಲೋಕವನ್ನೇ ಸೃಷ್ಟಿಮಾಡುವ ಚಾಕಚಕ್ಯತೆ ಇರುವಂತದ್ದು ಕವಿಗೆ ಮಾತ್ರ ಎಂಬುದನ್ನು ಗಮನಿಸಬಹುದಾದ ವಸ್ತವಿಷಯ.

ಇಂತಹ ವಿಚಾರಧಾರೆಯಲ್ಲಿ ನೂರ್ ಅಹಮದ್ ಅವರ  “ನೂರ್ ಏ ತಬಸ್ಸುಮ್” ಗಜಲ್ ಹತ್ತು ಹಲವು ವಿಚಾರಧಾರೆಗಳ ಹೂರಣವನ್ನು ಹೊತ್ತು ಯಶಸ್ಸು ಗಳಿಸಿರುವುದು ಕಂಡುಬರುತ್ತದೆ. ಮತ್ತಷ್ಟು ಗಹನವಾದ ವಿಚಾರಧಾರೆಗಳನ್ನು ಹೊತ್ತು ಅವರ ಮನದಂಗಳದಿಂದ ಹೊರ ಬರಲು ಈಗಾಗಲೇ ಸಾಕಷ್ಟು ಗಜಲ್ ನ ಹೊತ್ತಿಗೆಗಳು ಕಾತರಿಸುತ್ತಿವೆ. ಈ ನಿಟ್ಟಿನಲ್ಲಿ ಅವರಿಂದ ಸಾಹಿತ್ಯಕೃಷಿ ಮಹತ್ತರವಾಗಿ ಸಾಗುತ್ತಾ ಯಶಸ್ಸನ್ನು ಗಳಿಸಲಿ ಎಂದು ಹಾರೈಸುತ್ತೇನೆ.

Related posts

ಜಗತ್ತಿನ ಎಲ್ಲ ಅವ್ವಂದಿರಿಗೆ…

Hasiru Kranti

ಮೇಘಾ ಬಾರ್ ಅಂಡ್ ರೆಸ್ಟೋರೆಂಟ್ ಸೀಜ್ ಮಾಡಿದ ತಾಲೂಕಾಡಳಿತ; ಮಾಲೀಕನ ವಿರುದ್ದ ಕ್ರಮಕ್ಕೆ ಮುಂದು.!

ravickd

ಉಕ್ಕಿನ ಮನುಷ್ಯ ಸರದಾರ ವಲ್ಲಭಾಯಿ ಪಟೇಲ್

Siddu Naduvinmani

Leave a Comment