Hasirukranti
ಅಂಕಣಗಳು ಜೀವನಶೈಲಿ ವಿಶೇಷ

ವಯಸ್ಸಿಗೆ ನಾಚಿಕೆ ಇದೆ! ಹಸಿವಿಗೆ ನಾಚಿಕೆ ಇಲ್ಲ !

ಹೃದಯಸ್ಪರ್ಶಿ ಘಟನೆಯೊಂದು ಇಲ್ಲಿದೆ. ಡಿಸೆಂಬರ್‌ನ ಒಂದು ಮುಂಜಾನೆ. ನಾಲ್ಕೈದು ಹಿರಿಯರು ಪಾರ್ಕಿನಲ್ಲಿ ಕುಳಿತು ಮಾತನಾಡುತ್ತಿದ್ದರು. ಆಗ ಅಲ್ಲಿಗೆ ಒಬ್ಬ ವೃದ್ಧರು ಬಂದರು. ಅವರು ತೊಟ್ಟಿದ್ದ ಬಟ್ಟೆ ಯಾವುದೋ ಕಾಲದಲ್ಲಿ ಹೊಸದಾಗಿದ್ದಿರಬಹುದು. ಆದರೆ ಈಗ ಜೀರ್ಣಾವಸ್ಥೆಯಲ್ಲಿತ್ತು. ಅವರು ಹಿರಿಯರನ್ನು ಕುರಿತು ‘ಸ್ವಾಮಿ, ನಾನೊಂದು ಅನಾಥಾಲಯದ ಪರವಾಗಿ ಬಂದಿದ್ದೇನೆ. ಅನಾಥಾಲಯದಲ್ಲಿ ತಾಯ್ತಂದೆಯರಿಲ್ಲದ ಸುಮಾರು ಐವತ್ತು ಬಡ ಮಕ್ಕಳಿಗೆ ಉಚಿತ ಊಟ-ವಸತಿಯ ವ್ಯವಸ್ಥೆಯಿದೆ. ನಿಮ್ಮಂಥ ಸಜ್ಜನರು ಕೊಡುವ ದೇಣಿಗೆಗಳಿಂದಾಗಿ ಮಕ್ಕಳ ಊಟ-ತಿಂಡಿಗಳು ನಡೆಯುತ್ತವೆ. ಇನ್ನೇನು ಕ್ರಿಸ್ಮಸ್ ಬರುವುದರಲ್ಲಿದೆ.

ಅನುಕೂಲಸ್ಥರಾದ ನೀವೆಲ್ಲ ದೊಡ್ಡ ಮನಸ್ಸು ಮಾಡಿ ಒಂದಷ್ಟು ಹಣ ಕೊಟ್ಟರೆ ಬಡಮಕ್ಕಳಿಗೆ ಕೇಕ್ ಹಂಚುತ್ತೇವೆ. ನಿಮಗೆ ಬಿಡುವಿದ್ದರೆ ನೀವೇ ಅಂದು ಬಂದು ಮಕ್ಕಳಿಗೆ ಕೇಕ್ ಹಂಚಬಹುದು. ಅವರೊಂದಿಗೆ ಒಂದಷ್ಟು ಕಾಲ ಕಳೆಯಬಹುದು. ಮಕ್ಕಳೂ ನಿಮ್ಮ ಉಪಕಾರವನ್ನು ಸ್ಮರಿಸುತ್ತಾರೆ’ ಎಂದು ಹೇಳಿದರು. ಹಿರಿಯರೆಲ್ಲಾ ತಮ್ಮ ತಮ್ಮೊಳಗೇ ಮಾತನಾಡಿಕೊಂಡರು. ಐನೂರು ರುಪಾಯಿಗಳನ್ನು ಸಂಗ್ರಹಿಸಿ ಕೊಟ್ಟರು. ವೃದ್ಧರು ತಕ್ಷಣ ಹಣಕ್ಕೆ ರಸೀದಿ ಬರೆದು ಕೊಟ್ಟು, ಧನ್ಯವಾದ ಸಲ್ಲಿಸಿ, ಕ್ರಿಸ್ಮಸ್ ಹಬ್ಬದಂದು ಬರಬೇಕೆಂದು ಆಹ್ವಾನಿಸಿ ಹೊರಟರು.

ಕ್ರಿಸ್ಮಸ್ ಹಬ್ಬದ ದಿನ ಬಂದಿತು. ಆ ಹಿರಿಯರೆಲ್ಲಾ ಒಟ್ಟಾಗಿ ರಸೀತಿಯಲ್ಲಿದ್ದ ವಿಳಾಸವನ್ನು ಹುಡುಕಿಕೊಂಡು ಅನಾಥಾಲಯಕ್ಕೆ ಹೋದರು. ಆ ವಿಳಾಸದಲ್ಲಿ ಮನೆಯಿತ್ತು! ಅನಾಥಾಲಯ ಇರಲಿಲ್ಲ! ಆ ಮನೆಯವರು ‘ಸ್ವಾಮಿ, ಯಾರೋ ಮುದುಕಪ್ಪ ನಿಮ್ಮೆಲ್ಲರಿಗೂ ಟೋಪಿ ಹಾಕಿದ್ದಾನೆ. ಹೀಗೆ ಅನಾಥಾಲಯಕ್ಕೆ ದೇಣಿಗೆ ಕೊಟ್ಟು, ಅದನ್ನು ಹುಡುಕಿಕೊಂಡು ಬಂದವರಲ್ಲಿ ನೀವೇ ಮೊದಲನೆಯವರಲ್ಲ. ಬಹಳಷ್ಟು ಜನ ಬಂದು ಹೋಗಿದ್ದಾರೆ. ಆ ಪಾಪಿ ಮುದುಕನಿಗೆ ನಮ್ಮ ಮನೆಯ ವಿಳಾಸ ಹೇಗೆ ಸಿಕ್ಕಿತೋ ಗೊತ್ತಿಲ್ಲ’ ಎಂದುಬಿಟ್ಟರು.

ಹಿರಿಯರೆಲ್ಲಾ ತಾವು ಮೋಸ ಹೋದೆವು ಎಂದುಕೊಳ್ಳುತ್ತಾ ಹಿಂತಿರುಗಿದರು. ಇದಾದ ಮೂರ್ನಾಲ್ಕು ತಿಂಗಳ ನಂತರ ಪಾರ್ಕಿನ ಹಿರಿಯರಲ್ಲೊಬ್ಬರಿಗೆ ಗಾಂಧಿಬಜಾರಿನಲ್ಲಿ ಅದೇ ವೃದ್ಧರು ಕಂಡರು. ಹಿರಿಯರು ಅವರನ್ನು ಗುರುತಿಸಿದರು. ಅವರಿಗೆ ಇವರ ಗುರುತಾಗಲಿಲ್ಲ! ವೃದ್ಧರ ಕೈಯಲ್ಲಿ ಅದೇ ರಸೀದಿ ಪುಸ್ತಕವಿತ್ತು. ಅವರೀಗ ಅನಾಥಾಲಯದ ಮಕ್ಕಳಿಗೆ ಯುಗಾದಿ ಹಬ್ಬಕ್ಕೆ ಒಬ್ಬಟ್ಟಿನ ಊಟ ಹಾಕಿಸಿ ಎಂದು ಹೇಳುತ್ತಾ ಹಣ ಸಂಗ್ರಹಿಸುತ್ತಿದ್ದರು. ಹಿರಿಯರು ‘ಹೀಗೆಲ್ಲ ಸುಳ್ಳು ಹೇಳಿ ಹೊಟ್ಟೆ ಹೊರೆಯುತ್ತೀರಲ್ಲಾ? ನಿಮಗೆ ನಾಚಿಕೆಯಾಗುವುದಿಲ್ಲವೇ? ನಿಮ್ಮನ್ನು ಪೋಲೀಸರಿಗೆ ಒಪ್ಪಿಸಿ, ಸೆರೆಮನೆಗೆ ಕಳುಹಿಸುತ್ತೇನೆ’ ಎಂದು ಗದರಿಸಿದರು.

ಆ ವೃದ್ಧರು ‘ಸರ್, ನೀವು ನನ್ನನ್ನು ಬಯ್ಯುವುದರಲ್ಲಿ, ಬೆದರಿಸುವುದರಲ್ಲಿ ಏನೂ ತಪ್ಪಿಲ್ಲ. ಆದರೆ ನನ್ನೆರಡು ಮಾತುಗಳನ್ನು ಕೇಳಿ. ನಾನು ಖಾಸಗಿ ಸಂಸ್ಥೆಯೊಂದರಲ್ಲಿ ನೌಕರಿಯಲ್ಲಿದ್ದೆ. ನನಗೆ ನಾಲ್ಕು ಜನ ಗಂಡು ಮಕ್ಕಳಿದ್ದರು. ನಾನು ನನ್ನ ಹೆಂಡತಿ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದೆವು. ಓದಿಸಿದೆವು. ಈಗೆಲ್ಲ ಅವರು ಬೆಳೆದು ದೊಡ್ಡವರಾಗಿದ್ದಾರೆ. ಉದ್ಯೋಗಗಳಲ್ಲಿದ್ದಾರೆ. ನಮ್ಮಿಂದ ದೂರವಾಗಿ ಬೇರೆಯಾಗಿ ಬದುಕುತ್ತಿದ್ದಾರೆ. ನಾನು ನನ್ನ ಮುದಿ ಹೆಂಡತಿ ಇಬ್ಬರೇ ಉಳಿದುಕೊಂಡಿದ್ದೇವೆ. ನನಗೀಗ ಯಾವ ಸಂಪಾದನೆಯೂ ಇಲ್ಲ. ಭಿಕ್ಷೆ ಬೇಡಲು ಹೋದರೆ ಈ ವಯಸ್ಸಿನಲ್ಲಿ ಭಿಕ್ಷೆ ಬೇಡಲು ನಾಚಿಕೆಯಾಗುವುದಿಲ್ಲವೇ? ಎಂದು ಕೇಳುತ್ತಾರೆ.

ವಯಸ್ಸಿಗೆ ನಾಚಿಕೆಯಿದೆ! ಹೊಟ್ಟೆ ಹಸಿವಿಗೆ ನಾಚಿಕೆಯಿಲ್ಲ! ನೀವು ನನ್ನನ್ನು ಪೋಲೀಸರಿಗೆ ಒಪ್ಪಿಸಿ. ಸೆರೆಮನೆಗೆ ಕಳುಹಿಸಿ. ಅಲ್ಲಾದರೂ ನನಗೆ ಎರಡು ಹೊತ್ತು ಊಟ ಸಿಗಬಹುದು. ಆದರೆ ನನ್ನ ಮುದಿ ಹೆಂಡತಿಗೆ ಯಾರು ಊಟ ಕೊಡುತ್ತಾರೆ?’ ಎಂದು ಹೇಳಿ ಕಣ್ಣೀರು ಸುರಿಸಿದರು. ಅವರ ಮಾತುಗಳನ್ನು ಕೇಳುತ್ತಾ ಹಿರಿಯರ ಕಣ್ಣುಗಳೂ ತುಂಬಿ ಬಂದವು. ಅವರು ನಾಚಿಕೆಯಾಗಬೇಕಾದದ್ದು ಅವರಿಗೋ ಅಥವಾ ಅವರ ಅಸಹಾಯಕ ಪರಿಸ್ಥಿತಿಗೆ ಕಾರಣವಾದವರಿಗೋ ಎಂದು ಯೋಚಿಸಿದರಂತೆ. ಉತ್ತರ ಸಿಗದೆ ಪೇಚಾಡಿದರಂತೆ.

ವಿದ್ಯಾಶ್ರೀ ಬಿ ಬಳ್ಳಾರಿ

Related posts

ನಗುವಿನಲ್ಲಿ ಮಗುವಾಗಿ ಬೆಳಕಿಗೆ ನಗುವಾದ ಗಜಲ್

Siddu Naduvinmani

ಮನೆಯಲ್ಲಿನ ಕೋವಿಡ್ ಮೆಡಿಕಲ್ ಕಿಟ್ ನಲ್ಲಿ ಇರಬೇಕಾದ ವಸ್ತುಗಳು

Siddu Naduvinmani

ಕೊರೋನ ವೈರಸ್ ಬಗ್ಗೆ ಓದಲೇಬೇಕಾದ ಸಂಗತಿ

Hasiru Kranti

Leave a Comment