Hasirukranti
ಅಂಕಣಗಳು ಜೀವನಶೈಲಿ ವಿಶೇಷ

ಗ್ರಾಮೀಣ ಜಾನಪದ, ಧಾಮಿ೯ಕ, ಸಾಂಪ್ರದಾಯಿಕ ಸಿರಿಗೆ ಸಾಕ್ಷಿ ಜೋಕಪ್ಪ ಆರಾಧನೆ

ನಾಡಿನ ಸಾವ೯ತಿ೯ಕ ಹಬ್ಬ ಶ್ರೀಗಣೇಶ ಚತುರ್ಥಿ, ನಂತರದ ಗ್ರಾಮೀಣ ಸೋಗಡಿನ ಧಾಮಿ೯ಕಾಚರಣೆ ಜೋಕುಮಾರಸ್ವಾಮಿ ಆರಾಧನೆ.ರೈತರಿಂದ ಜೀವಂತಿಕೆ ತಳೆಯುವ ಜೋಕುಮಾರ ಆರಾಧನೆ ಲೋಕ ಕಲ್ಯಾಣಾಥ೯ಕ್ಕಾಗಿ,ಜಗತ್ತಿನ ಸಕಲ ಜೀವ ರಾಶಿಯ ಕ್ಷೇಮಕ್ಕಾಗಿ ಆಚರಿಸಲಾಗುತ್ತದೆ.

ಜೋಕುಮಾರ ಆರಾಧನೆಯಿಂದ ಸಕಾಲಕ್ಕೆ ಸಾಕಷ್ಟು ಮಳೆ ಬೆಳೆ ಬರುತ್ತದೆ ಎಂಬ ನಂಬಿಕೆ ಇದೆ.ನಾಡಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕಡೆಗಳಲ್ಲಿ ಸ್ವಲ್ಪ ಸ್ವಲ್ಪ ವಿಭಿನ್ನವಾಗಿ ಆಚರಿಸಲಾಗುತ್ತದೆ. ಜೋಕುಮಾರ ಸ್ವಾಮಿ ಹೊತ್ತ ಮಹಿಳೆಯರು ಎಲ್ಲ ಮನೆಗಳಿಗೆ ತೆರಳಿ ಜೋಕಪ್ಪ ಕುರಿತಾದ ಜನಪದ ಹಾಡು ಹಾಡುತ್ತಾರೆ. ಮನೆ ಮುಂದೆ ಬರುತ್ತಿದ್ದಂತೆ ಮನೆಯವರು ಮೂರ್ತಿಗೆ ಊದುಬತ್ತಿ ಬೆಳಗಿ,ದವಸ ಧಾನ್ಯಗಳನ್ನು ಅರ್ಪಿಸಿ ಅದಕ್ಕೆ ಪ್ರತಿಯಾಗಿ ಜೋಕಪ್ಪನ ಕಪ್ಪು ಪಡೆಯತ್ತಾರೆ.ಹೀಗೆ ಪಡೆದ ಕಪ್ಪನ್ನು ಮನೆಯಲ್ಲಿಟ್ಟು ಹುಣ್ಣಿಮೆ ನಂತರ ಅನ್ನ ಹಾಲಿನೊಂದಿಗೆ ಅದನ್ನು ಹೊಲದ ಸುತ್ತ ಹರಡುತ್ತಾರೆ. ಇದರಿಂದ ಭೂಮಿಯಲ್ಲಿ ಫಸಲು ಉತ್ತಮವಾಗಿ ಬೆಳೆಯುತ್ತದೆ ಎಂಬ ನಂಬಿಕೆ ಜನರದ್ದು.

ಮಳೆಗಾಗಿ ಆರಾಧನೆ- ಸ್ವಚ್ಛವಾದ ಜೇಡಿ ಮಣ್ಣಿನಿಂದ ಜೋಕುಮಾರನ ಮುಖದ ಮೂತಿ೯ಯನ್ನು,ಪುಟ್ಟಿಯೊಂದರಲ್ಲಿ ನಿಮಿ೯ಸಲಾಗುತ್ತೆ.ಅದಕ್ಕೆ ವಿವಿದ ಎಣ್ಣೆಗಳಿಂದ ಮಿಶ್ರಿತ ಕಪ್ಪು ಬಣ್ಣ ಹಚ್ಚಿ,ಬೆಳ್ಳಿ ಕವಚದ ಹಣೆ ಪಟ್ಟಿ,ಕಣ್ಣು ಜೋಡಿಸಿ, ಅಗಲವಾದ ಪುಟ್ಟಿಯಲ್ಲಿ ಬೇವಿನ ಎಲೆಗಳ ಮಧ್ಯೆ ಅಲಂಕರಿಸಿ ಪ್ರತಿಷ್ಟಾಪಿಸಲಾಗುತ್ತೆ.ಪುಟ್ಟಿಯಲ್ಲಿ ಜೋಕುಮಾರನ್ನ ಕೂರಿಸಿಕೊಂಡು ಬಾರಿಕರ ಮನೆಯ ಮಹಿಳೆಯರು ಪುಟ್ಟಿ ಹೊತ್ತು (ಮೆರೆಸುತ್ತಾರೆ)ಸುತ್ತಾಡುತ್ತಾರೆ.ಪುಟ್ಟಿ ಹೊತ್ತವರು ಮನೆ ಬಾಗಿಲಿಗೆ ತೆರಳಿ ”ಬೇಗನೇ ಬೆಣ್ಣೆಯ ತನ್ನಿರವ್ವ…ಅಡ್ಡಡ್ಡ ಮಳೆ ಬಂದ್‌ ದೊಡ್ಡ ದೊಡ್ಡ ಕೆರೆಗಳೆಲ್ಲಾ ಒಡೆದಾವೂ…” ಎಂದು ಹತ್ತಾರು ಪದ ಕಟ್ಟಿ ಹಾಡುತ್ತಾರೆ.ಜೋಕಪ್ಪನ ಮೂರ್ತಿಯನ್ನು ಗಣೇಶನನ್ನು ಕಳಿಸುವ ರೀತಿಯಲ್ಲಿಯೇ ಬಾರಿಕರ ಮನೆಯಲ್ಲಿ ಪೂಜಿಸಿ ಬಾವಿಯಲ್ಲಿ ವಿಸರ್ಜಿಸುತ್ತಾರೆ.

ಆಯಗಾರರು– ಪುಟ್ಟಿಯಲ್ಲಿ ನಿಮಿ೯ಸಿದ ಜೋಕುಮಾರ ಸ್ವಾಮಿ ಹೊತ್ತು,ಮೆರೆಸುವವರು ಎಂಟತ್ತು ಜನ ಆಯಗಾರರು ಜತೆಯಲ್ಲಿ ಸುತ್ತಾಡಿ. ಸಂಗ್ರಹಿಸಿದ ದವಸ ಧಾನ್ಯ, ದಕ್ಷಿಣೆಯನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಾರೆ. ಭೂಮಿಯಲ್ಲಿ ಉಂಟಾದ ಮಳೆ ಅಭಾವ ಅರಿಯಲು ಶಿವನು ಕೆಲವರನ್ನು ಭೂ ಲೋಕಕ್ಕೆ ಕಳಿಸಿರುತ್ತಾನಂತೆ.ಅದರಲ್ಲಿ ಗಣೇಶ ಹಾಗೂ ಜೋಕಪ್ಪರು ಇದ್ದಾರೆ.ಗಣೇಶ ಹಬ್ಬದ ನಂತರ ಬರುವ ಜೋಕಪ್ಪ,ಎಲ್ಲ ಕಡೆ ಓಡಾಡಿ ಕೈಲಾಸಕ್ಕೆ ಹೋಗುತ್ತಾನೆ.ಎಷ್ಟೆಲ್ಲ ಸುತ್ತಾಡಿದರೂ ಸೇರು ಕಾಳು ಸಿಗಲಿಲ್ಲ.ಮಳೆ ಅಭಾವದಿಂದ ಜನರು ಕಂಗೆಟ್ಟಿದ್ದಾರೆ ಎಂದು ಹೇಳುತ್ತಾನಂತೆ.ಆಗ ಶಿವ ಭೂಮಿಗೆ ಮಳೆ ಸುರಿಸುತ್ತಾನೆ ಎಂದು.ಜೋಕುಮಾರ ಸ್ವಾಮಿ ಆಚರಣೆ ಹಿನ್ನೆಲೆ ಅರಿತಿರುವ ಕೂಡ್ಲಿಗಿ ಯ ಹಿರಿಯ ರಂಗ ಕಲಾವಿದರಾದ ಅಕ್ಕಿಬಸಣ್ಣ,ವಿಭೂತಿ ವೀರಣ್ಣ,ನರಸಿಂಹಪ್ಪ,ಉಜ್ಜಿನ ರೇವಣ್ಣ,ಅಗಸಕಟ್ಟೆ ಕೊಟ್ರೇಶಪ್ಪ,ವಡೇರಳ್ಳಿ ರೆವಣ್ಣ,ಅಗಸಕಟ್ಟೆ ತಿಂದಪ್ಪ,ವಡೇರಳ್ಳಿ ಸೋಮಪ್ಪ,ಕಾಯಿಕೆಡವ ಶರಣಪ್ಪ,ಚೌಡಮ್ಮ,ಸಿರಿವಲಮ್ಮ,ಚಿನ್ನಪ್ಪ ಹೇಳುತ್ತಾರೆ.ಇತ್ತೀಚಿನ ವರ್ಷಗಳಲ್ಲಿ ದವಸ,ಧಾನ್ಯ ಕಡಿಮೆಯಾಗಿದ್ದರೂ ಪುರಾತನ ಆಚರಣೆ ಎಂಬ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ ಜೀವಂತಿಕೆಲ್ಲಿದೆ,ಪಟ್ಟಣ ಪ್ರದೇಶಗಳಲ್ಲಿ ವಿರಳ ಎನ್ನುತ್ತಾರವರು.

ಪವಾಡ ಪುರುಷ- ಭೂಮಿಗೆ ಜೋಕಪ್ಪ ಬಂದ, ಸಮದ್ಧಿ ತಂದ
ಜೋಕಪ್ಪನ ಅಳಲನ್ನು ಸಾಮಾನ್ಯವಾಗಿ ಸಮದ್ಧ ಮಳೆ ಮತ್ತು ಬೆಳೆಯ ಆಶಯದಿಂದ ಆಚರಿಸಲಾಗುತ್ತದೆ.ಹುಟ್ದ್ಯೇಳು ದಿನಕ ಪಟ್ನಾವ ತಿರುಗಿದಾ, ದಿಟ್ಕಕಡೆ ನಮ್ಮ ರಣಧೀರ..ದಿಟ್ಕಡೆ ನಮ್ಮ ಕೊಮರಾಮ ಕೊಟ್ಟಾರ ಏಳು ದಿನಗಳಾ..ಅಡ್ಡಡ್ಡ ಮಳಿ ಬಂದು,ದೊಡ್ಡದೊಡ್ಡ ಕೆರಿ ತುಂಬಿ..ಗೊಡ್ಡೂಗಳೆಲ್ಲಾ ಹೆನಾಗಿ,ಗೊಡ್ಡೂಗಳೆಲ್ಲಾ ಹೆನಾಗಿ..ಈ ಊರ ಸೆಡ್ಡಿಯಾ ಮ್ಯಾಲೆ ಸಿರಿ ಬರಲಿ’’ಎನ್ನುತ್ತ ಜೋಕುಮಾರನ ಮೆರವಣಿಗೆ ಸಾಗಿದೆ.ಇಂತಹ ಅಪರೂಪದ ಹಾಡುಗಳನ್ನು,ಜೋಕಪ್ಪನನ್ನು ಹೊತ್ತ ಗಂಗಾಮತ ಸಮುದಾಯದ ಮಹಿಳೆಯರು ಹಲವು ತಲೆಮಾರುಗಳಿಂದ ಉಳಿಸಿಕೊಂಡಿದ್ದಾರೆ. ಈ ಹಾಡುಗಳಲ್ಲಿ ಜೋಕಪ್ಪನ ಬದುಕಿನ ಚಿತ್ರಣದ ವಿವರವಿರುವುದು ಗಮನ ಸೆಳೆಯುತ್ತಿದೆ.
ಪೌರಾಣಿಕ ಹಿನ್ನಲೆ- ಜೋಕುಮಾರ ಸ್ವಾಮಿ ಕುರಿತು ನಾನಾ ಜನಪದ ಕತೆಗಳಿವೆ. ಬಹುಕಾಲ ಮಕ್ಕಳಾಗದ ದಂಪತಿಗಳು ಶಿವನನ್ನು ಮೊರೆ ಹೋದಾಗ ಶಿವನ ವರದಿಂದ ಹುಟ್ಟಿದನೆಂದು ಜನಪದ ಕತೆಯಲ್ಲಿದೆ. ಹೀಗೆ ಹುಟ್ಟಿದ ಜೋಕುಮಾರ ಅಲ್ಪಾಯುಷಿ. ಕೇವಲ ವಾರದಲ್ಲೇ ಇಹಲೋಕ ತ್ಯಜಿಸುತ್ತಾನೆ.ಈ ವಾರದ ಜೀವಿತಾವಧಿಯಲ್ಲಿ ಜೋಕಪ್ಪ ನಡೆಸಿದ ಪವಾಡಗಳೇ ಹಾಡುಗಳಲ್ಲಿ ವ್ಯಕ್ತವಾಗುತ್ತದೆ. ಜೋಕುಮಾರ ದಿಟ್ಟ, ಅಂದುಕೊಂಡದ್ದನ್ನು ಸಾಧಿಸುವ ಛಲಗಾರ.ತನ್ನ ಸುತ್ತಲಿನ ಪ್ರದೇಶದಲ್ಲಿ ಮಳೆ ಇಲ್ಲದೆ ಬೆಳೆ ಒಣಗುತ್ತಿದ್ದಾಗ ತನ್ನ ಪವಾಡದಿಂದ ಮಳೆ ತರಿಸಿದ್ದ ಎಂಬ ಪ್ರತೀತಿ ಇದೆ.ಈ ಕಾರಣಕ್ಕಾಗಿಯೇ ಆತನನ್ನು ಪೂಜಿಸಲಾಗುತ್ತದೆ.

ಹುಲುಸಿನ ದೇವ ಜೋಕಪ್ಪ- ಸಾಮಾನ್ಯವಾಗಿ ಬೆನಕನ ಅಮಾವಾಸ್ಯೆ ಮರುದಿನ ಜೋಕಪ್ಪ ಜನ್ಮತಳೆಯುತ್ತಾನೆ. ಜನಪದದ ಪ್ರಕಾರ ಜೀವಿತಾವಧಿ ಏಳು ದಿನವಾದರೂ ಪ್ರತಿ ಗ್ರಾಮಕ್ಕೂ ಭೇಟಿ ನೀಡುವ ಹಿನ್ನೆಲೆಯಲ್ಲಿ ಕೆಲವೆಡೆ ಒಂಬತ್ತು ದಿನಗಳಿಗೆ ವಿಸ್ತರಿಸಿಕೊಳ್ಳಲಾಗಿದೆ. ಮನೆಗಳಿಗೆ ಭೇಟಿ ನೀಡಿದ ವೇಳೆ ಹಲವರು ಕಾಳುಕಡಿ, ಬೆಲ್ಲ, ಎಣ್ಣೆ ಇತ್ಯಾದಿ ನೀಡುತ್ತಾರೆ. ಜೋಕಪ್ಪನ ವಿಸರ್ಜನೆ ಬಳಿಕ ಹೊತ್ತವರು ಪರಸ್ಪರ ಧಾನ್ಯಗಳನ್ನು ಹಂಚಿಕೊಳ್ಳುತ್ತಾರೆ. ಹುಣ್ಣಿಮೆಯಂದು ಜೋಕಪ್ಪ ಸಾಯುತ್ತಾನೆ.ಅಂದಿನಿಂದ ವಾರದವರೆಗೂ ಯಾವುದೇ ದೇವರುಗಳನ್ನು ಪೂಜಿಸಬಾರದೆಂಬ ಆಚರಣೆ ಹಲವೆಡೆ ಇದೆ.ಜೋಕಪನನ್ನು ಹುಣ್ಣಿಮೆ ದಿನ ವಿಸರ್ಜನೆ ಮಾಡಲಾಗುತ್ತದೆ. ವಿಸರ್ಜನೆಗೂ ಮುನ್ನ ಪ್ರಸಾದವಾಗಿ ಕಪ್ಪು (ಕಾಡಿಗೆಯಂತಹ ವಸ್ತು)ನೀಡಲಾಗುತ್ತದೆ. ಈ ಕಪ್ಪನ್ನು ನೀರಿನಲ್ಲಿ ಬೆರೆಸಿ ಹೊಲಗಳಿಗೆ ಚರಗ ಚೆಲ್ಲುತ್ತಾರೆ, ಹೊಲಗಳಲ್ಲೆ ಅಂದು ನಂಟರು ಮತ್ತು ಗೆಳೆಯರಿಗೆ ಪ್ರಸಾದದ ರೂಪದಲ್ಲಿ ರುಚಿಕರ ಊಟ ಬಡಿಸುತ್ತಾರೆ.ಚರಗ ಚೆಲ್ಲುವುದರಿಂದ ಬೆಳೆಗಳು ಸಮದ್ಧವಾಗುತ್ತವೆ ಎಂಬ ನಂಬಿಕೆ ಇದೆ.ಇದು ನಮ್ಮ ನಾಡಿನ ಗ್ರಾಮೀಣ ಜಾನಪದ ಸಿರಿಯನ್ನು,ಸಾಂಪ್ರದಾಯಿಕ ಹಾಗೂ ಧಾಮಿ೯ಕತೆಯೊಂದಿಗೆ ಸಿಂಗಾರಗೊಳಿಸುವ ಆಚರಣೆಯಾಗಿದೆ.

✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Related posts

ಬ್ಲ್ಯಾಕ್ ವಾಟ್ಸ್ ಆಪ್ ಡಿಪಿ ಹಾಕುವ ಮೂಲಕ ಮಹಿಳೆಯರ ಅಸ್ತಿತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಹಿಳೆಯರು

Siddu Naduvinmani

ಬೆಲ್ಲದ ತಾಕತ್ತು

ravickd

ಮೇಘಾ ಬಾರ್ ಅಂಡ್ ರೆಸ್ಟೋರೆಂಟ್ ಸೀಜ್ ಮಾಡಿದ ತಾಲೂಕಾಡಳಿತ; ಮಾಲೀಕನ ವಿರುದ್ದ ಕ್ರಮಕ್ಕೆ ಮುಂದು.!

ravickd

Leave a Comment