Hasirukranti
ಅಂಕಣಗಳು ಆರೋಗ್ಯ ತಂತ್ರಜ್ಞಾನ

ವೈಜ್ಞಾನಿಕ ಮನೋಭಾವದ ಕೊರತೆಯಿಂದ ಆಗುತ್ತಿರುವ ಅನಾಹುತಗಳು

ವೈಜ್ಞಾನಿಕ ಎಂದರೆ ವಿಜ್ಞಾನದ ತಳಹದಿ ಇರುವಂಥಾದ್ದು. ನಿಜ್ಯಾಂಶವನ್ನು ಜನಸಾಮಾನ್ಯರಿಗೆ ತಿಳಿಸುವ ಸಾಧನವೇ ವೈಜ್ಞಾನಿಕ ವಿಜ್ಞಾನ ಎನ್ನಬಹುದು.
ವೈಜ್ಞಾನಿಕ ಮನೋಭಾವವು ವಿಜ್ಞಾನವು ನಮಗೆ ಒದಗಿಸಿ ನಮ್ಮನ್ನು ಸಜ್ಜುಗೊಳಿಸುವಂತಹ ಜ್ಞಾನ, ಸಾಮರ್ಥ್ಯ ಮತ್ತು ಅನುಭವಗಳನ್ನು ಹೇಗೆ ರಚನಾತ್ಮಕವಾಗಿ ಬಳಸಿಕೊಳ್ಳಬಹುದೆಂಬುದನ್ನು ಕುರಿತು ಮಾರ್ಗದರ್ಶನ  ನೀಡುತ್ತದೆ. ವೈಜ್ಞಾನಿಕ ಜ್ಞಾನವನ್ನು ಬಳಸಲು ಬುಧ್ದಿವಂತಿಕೆಯೂ ಬೇಕು, ನೈತಿಕತೆಯೂ ಇರಬೇಕು.  ಹೀಗೆ ವೈಜ್ಞಾನಿಕ ಮನೋಭಾವವು, ಒಂದೇ ಧರ್ಮದ ಬಗ್ಗೆ ಅಂಧ ಶ್ರದ್ಧೆಯನ್ನು ಬೆಳಸಿಕೊಂಡು ಅದೇ ಸರಿಯಾದ ಧರ್ಮ ಅದನ್ನೇ ಎಲ್ಲರೂ ಅನುಸರಿಸಬೇಕು ಎಂದು ಹೇಳದೆ ಎಲ್ಲಾ ಧರ್ಮಗಳನ್ನು ಗೌರವಿಸುವ ಸರ್ವಧರ್ಮ ಸಮಾಭಾವದ ಒಂದು ನಿಲುವನ್ನು ನಮ್ಮಲ್ಲಿ ನೆಲೆಗೊಳಿಸುತ್ತದೆ ಎನ್ನುವುದು ನಿಜ್ಯಾಂಶ. ಆದರೆ ಇಂದು ಜಗತ್ತು ಎಷ್ಟು ವೈಜ್ಞಾನಿಕವಾಗಿ ಮುಂದೆ ಹೋಗುತ್ತಿದೆಯೋ ಹಾಗೆ ನಾವಷ್ಟೇ ಕಂದಾಚಾರಿಗಳಾಗಿ ಹಿಂದುಳಿಯಲು ಬಯಸುತ್ತಿದ್ದೇವೆ. ಕಂದಾಚಾರ ಎನ್ನುವ ಪದವನ್ನು ಕೇವಲ ಅರ್ಥಹೀನ ಆಚರಣೆ ಎಂಬುದಕ್ಕಷ್ಟೇ ಸೀಮಿತಗೊಳಿಸದೆ, ಮೌಢ್ಯ ಅಜ್ಞಾನದ ಪರಮಾವಧಿ, ಮೂಢನಂಬಿಕೆಗಳ ಮೇಲೆ ಅಚಲ ವಿಶ್ವಾಸ ಮತ್ತು ಕುರುಡುಭಕ್ತಿ, ತನ್ನದಲ್ಲದ ಯಾವ ಚಿಂತನೆಯನ್ನೂ ಒಪ್ಪದೆ ನಿರಾಕರಿಸುವುದು, ಹಾಗೆ ನಿರಾಕರಿಸಲು ವಿತಂಡವಾದ ಒಡ್ಡುತ್ತ ತನ್ನ ಮೂಗಿನ ನೇರಕ್ಕೆ ಕಾರಣಗಳನ್ನು ಕೊಡುವುದು, ವೈಜ್ಞಾನಿಕ ವಿಜ್ಞಾನದ ಆಳ ಜ್ಞಾನ ಇಲ್ಲದಿರುವುದು, ವೈಜ್ಞಾನಿಕ ವಿಚಾರ ಗೊತ್ತಿದ್ದರೂ ಅರ್ಧಸತ್ಯಗಳನ್ನಷ್ಟೇ ಹೇಳುವುದು, ಒಂದೇ ವಿಷಯದ ಬಗ್ಗೆ ಎರಡು ಮೂರು ಸಿದ್ಧಾಂತಗಳಿದ್ದಾಗ, ಅವುಗಳಲ್ಲಿ ಒಂದು ಮಾತ್ರ ನಿಜ ಎಂದು ಭಂಡತನದ ವಾದ ಮಾಡುವ ಮೂಲಕ ವೈಜ್ಞಾನಿಕ ಸಿದ್ದಾಂತಕ್ಕೆ ಕೊಡಲಿ ಪೆಟ್ಟು ಹಾಕುವ ಕೆಲಸದ ಸಂಸ್ಕೃತಿ ಇತ್ತೀಚೆಗೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಹೀಗೆ ಹತ್ತು ಹಲವಾರು ವೈಜ್ಞಾನಿಕ ಮನೋಭಾವದ ಕೊರತೆಯಿಂದ ಇಂದು ಈ ಸಮಾಜದಲ್ಲಿ ಆಗುತ್ತಿರುವ ಅನಾಹುತಗಳಾಗಿವೆ. ಹೀಗಾಗಿ ಈಗ ಈ ನಾಡಿನಲ್ಲಿ ಅನಾಗರಿಕರ ವಿಲಕ್ಷಣ, ಅವೈಜ್ಞಾನಿಕ ನಿಲುವುಗಳು ಸರಗವಾಗಿ ಯಾವುದೇ ಅಡ್ಡಿ ಆತಂಕ ವಿಲ್ಲದೆ ಜರುಗುತ್ತಿರುವುದು ಬಹು ದೊಡ್ಡ ದುರಂತವೇ ಎನ್ನಬಹುದು.ತಂತ್ರಜ್ಞಾನದ ಎಲ್ಲಾ ಸವಲತ್ತುಗಳನ್ನು ಪಡೆದು, ಆಧುನಿಕ ಸಲಕರಣೆಗಳನ್ನು ಮಡಿಲಲ್ಲಿ ಇಟ್ಟುಕೊಂಡು ದಿನಬೆಳಗಾದರೆ ಅವೈಜ್ಞಾನಿಕವಾಗಿ ಚಿಂತಿಸುವ – ಅತಾರ್ಕಿಕ ಚಿಂತನಕ್ರಮವನ್ನು ಹರಡುವ – ಮೂಢನಂಬಿಕೆ, ಸುಳ್ಳುಸುದ್ದಿಗಳನ್ನು ಪ್ರಚಾರ ಮಾಡುವ ಬಹುಸಂಖ್ಯಾತರು ಒಂದು ಕಡೆ. ದಿನಪತ್ರಿಕೆ-ವಾರಪತ್ರಿಕೆಗಳಲ್ಲಿ ತಂತ್ರಜ್ಞಾನದ ಬಗ್ಗೆ, ವಿಜ್ಞಾನದಲ್ಲಿ ನಡೆದಿರುವ ಸಂಶೋಧನೆಗಳ ಸಾರಗಳನ್ನು ಜನಪ್ರಿಯವಾಗಿ ಬರೆದು ಪರಿಣಿತರೆನಿಸಿಕೊಂಡು, ಕೊನೆಗೆ ಜನಾಂಗೀಯ ನಿಂದನೆ ಮಾಡುವುದರಲ್ಲಿ, ಒಂದು ಸಮುದಾಯ-ಜಾತಿ ಶ್ರೇಷ್ಠ ಎಂದು ಹೇಳಿಕೊಳ್ಳುವುದರಲ್ಲಿ ನಿರತರಾಗಿರುವ ವ್ಯಕ್ತಿಗಳು ಮತ್ತೊಂದು ಕಡೆ. ಅಲ್ಪಸಂಖ್ಯಾತ ಕೋಮುಗಳ ಬಗ್ಗೆ ಕೃತಕ ಭಯ ಹುಟ್ಟಿಸಿ ಕೆರಳಿಸುವ ಈ ಧಾರ್ಮಿಕ ರಾಷ್ಟ್ರೀಯತೆಗೂ ತಳಪಾಯ ಅವೈಜ್ಞಾನಿಕತೆಗೆ ಪ್ರಮುಖ ಕಾರಣ ಜೊತೆಗೆ ಅನಾಹುತಗಳಿಗೆ ತಳಪಾಯ ಎನ್ನಬಹುದು.ಉದಾಹರಣೆಗೆ ಇಂದಿನ ದಿನಗಳಲ್ಲಿ ನಮ್ಮಲ್ಲರಿಗೂ ಭಯಾನಕವಾಗಿ ಕಾಡುತ್ತಿರುವ ಕೊರೋನಾ ವೈರಸ್ ಬಗ್ಗೆಯೂ, ರೋಗಿಯ ಬಗ್ಗೆಯೂ, ಕೊನೆಗೆ ರಾಜಕೀಯ ವಿಜ್ಞಾನದ ಬಗ್ಗೆಯೂ ಕೇಲವರು ಮಾತನಾಡುತ್ತಿದ್ದಾರೆ.
ಇವರ ಆಣಿಮುತ್ತುಗಳೇ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಪ್ರಮುಖವಾಗಿ ನರ್ತಿಸುತ್ತವೆ ಇವರು ಹೇಳಿದ್ದೇ ವೇದ ವಾಕ್ಯ ಎಂದು ವಾದ ಮಾಡುತ್ತಿದ್ದಾರೆ ಇದು ಸಹ ವೈಜ್ಞಾನಿಕ ಮನೋಭಾವದ ಕೊರತೆ ಎನ್ನಬಹುದು. ಇನ್ನು 2020ರ ಈ ಹೊತ್ತಿನಲ್ಲಿ ಜಾಗತಿಕ ಪ್ರಪಂಚಕ್ಕೆ ಸಮಸ್ಯೆಯಾಗಿ ತಲೆದೋರಿರುವ ಕೊರೊನಾ ವೈರಾಣು ಸಾಂಕ್ರಾಮಿಕಕ್ಕೆ ವೈಜ್ಞಾನಿಕ ಸಂಶೋಧನೆಯ ಪ್ರತಿಫಲ ಇನ್ನೂ ಸಿಕ್ಕಿಲ್ಲ. ಆದರೆ ಅದಕ್ಕೆ ಪರಿಹಾರ ಹುಡುಕುವ ಹಾದಿಯಲ್ಲಿ ವೈದ್ಯಕೀಯ ವಿಜ್ಞಾನ-ಜೈವಿಕ ರಸಾಯನಶಾಸ್ತ್ರ ಹೆಜ್ಜೆ ಇಟ್ಟಿದೆ. ಮನುಷ್ಯ ಕುಲ ಇಂತಹ ಸ್ಥಿತಿ ತಲುಪಿದ್ದಕ್ಕೆ ಕಾರಣಗಳನ್ನು ಹುಡುಕುತ್ತಿದೆ.ಆದರೆ ಬಹುತೇಕ ದೇಶಗಳಲ್ಲಿ ಈ ಬಿಕ್ಕಟ್ಟಿನ ಸನ್ನಿವೇಶವನ್ನು ನಿಭಾಯಿಸುವಲ್ಲಿ ಸೋತು ಪರಿಸ್ಥಿತಿ ಬಿಗಡಾಯಿಸುವುದಕ್ಕೆ ಕಾರಣ ಆಗಿರುವುದು ಬಹುಸಂಖ್ಯಾತ ಜನರಲ್ಲಿರುವ ವೈಜ್ಞಾನಿಕ ಮನೋಭಾವದ ಕೊರತೆ ಕಾರಣ.ಈ ಸಾಂಕ್ರಾಮಿಕ ರೋಗವು ಚೈನಾದಲ್ಲಿಯೇ ಮೊದಲು ದಟ್ಟವಾಗಿ ಹರಡಿದ್ದು. ಅದು ಬೇರೆ ದೇಶಕ್ಕೆ ಹರಡುವ ಮುಂಚೆಯೇ, ವೈರಾಣು ಹರಡುವ ಸ್ವಭಾವ, ಅದು ಮನುಷ್ಯನ ಕೋಶಗಳ-ಪ್ರೋಟೀನ್‌ಗಳ ಮೇಲೆ ನಡೆಸುವ ದಾಳಿ, ಇದಕ್ಕೆ ಅದು ತೆಗೆದುಕೊಳ್ಳುವ ಸಮಯ ಇತ್ಯಾದಿ ವಿಷಯಗಳ ಬಗ್ಗೆ ತಿಳಿದಿತ್ತು. ಇದನ್ನು ಜಗತ್ತಿನಾದ್ಯಂತ ಸಾಮಾನ್ಯ ಜನರಿಗೆ ತಿಳಿಸುವ ಸಮರ್ಪಕ ಕೆಲಸ ಚೀನಾ ಮಾಡಬೇಕಾಗಿತ್ತು – ಆಗಬೇಕಿತ್ತು, ಆದರೆ ಇಲ್ಲಿ ತಾಂಡವವಾಡಿದ್ದು ತಪ್ಪು ಮಾಹಿತಿಗಳು, ಮೂಢ ನಂಬಿಕೆಗಳ ಅನಾವರಣ, ಸಮಸ್ಯೆಯ ನಿವಾರಣೆಯ ಬಗ್ಗೆ ಹುಸಿ ನಂಬಿಕೆಯ ಪ್ರಯತ್ನಗಳು ಪ್ರಮುಖ ಕಾರಣಗಳಾಗಿವೆ ಹಾಗಾಗಿ ಇಂದಿನ ದಿನಗಳಲ್ಲಿ ಆಗುತ್ತಿರುವ ಅಪಾರ ಪ್ರಮಾಣದ ಸಾವು – ನೋವುಗಳಿಗೆ ಅವೈಜ್ಞಾನಿಕ ಮನೋಭಾವವೇ ಕಾರಣ ಎನ್ನುವುದಂತು ಸುಳ್ಳಲ್ಲ. ಹೀಗಾಗಿ ಕೊರೊನಾ ಹಾವಳಿಯ ಈ ಸಮಯದಲ್ಲಿಯೂ ವಿಶ್ವದಾದ್ಯಂತ ಬಿಕ್ಕಟ್ಟಿಗೆ ಹೆಗಲು ಕೊಟ್ಟಿದ್ದಾರೆ.ವೈರಸ್ ತಡೆಗಟ್ಟಲು ಏನೋ ಮಾಡುವದೆಂದು ಚಿಂತೆಯಲ್ಲಿ ಮುಳುಗಿದ್ದಾರೆ.
ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಪರಿಪರಿಯಾಗಿ ಬಿಡಿಸಿ ಹೇಳಿದ್ದರೂ, ದೇವಸ್ಥಾನಗಳಲ್ಲಿ, ಮಸೀದಿಗಳಲ್ಲಿ, ಚರ್ಚ್ ಮತ್ತು ಇತರ ಪ್ರಾರ್ಥನಾ ಮಂದಿರಗಳ ಪ್ರಾರ್ಥನೆಯ ಮಾಡುವುದು ಸೇರಿ ಮಾರ್ಕೆಟ್ – ತರಕಾರಿ ಇನ್ನಿತರ ವಸ್ತುಗಳನ್ನು ಖರೀದಿಸುತ್ತಿರುವ ನೆಪದಲ್ಲಿ ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಯಮವನ್ನು ಲೀಲಾಜಾಲವಾಗಿ ಮುರಿದಿದ್ದಾರೆ. ಹಾಗೂ ಈ ರೋಗದ ಬಗ್ಗೆ ಸುಳ್ಳು ಸುದ್ದಿಗಳನ್ನು ಜನ ವ್ಯಾಪಕವಾಗಿ ಹಂಚುತ್ತಿದ್ದಾರೆ. ಇದು ರಾಜಕೀಯ ದುರುದ್ದೇಶದಿಂದ ಸೃಷ್ಟಿಯಾದ ಸುಳ್ಳುಗಳೇ ಆದರೂ, ಅಂತಹ ಸುದ್ದಿಗಳನ್ನು ಸ್ರವಿಸುವ ಮತ್ತು ಅವುಗಳನ್ನು ವ್ಯಾಪಕವಾಗಿ ಹರಡುತ್ತಿರುವ ಕಾರಣ ಜನಸಾಮಾನ್ಯರಲ್ಲಿ ಕೊರತೆಯಾಗಿರುವ ವೈಜ್ಞಾನಿಕ ಮನೋಭಾವವೆ ಪ್ರಮುಖ ಕಾರಣ ಆಗಿದೆ ಎನ್ನುವುದು ಅಲ್ಲಗಳೆಯುವಂತಿಲ್ಲ. ಇದಲ್ಲದೆ ಭಾರತದಲ್ಲಿ ಕೊರೊನ ತಡೆಯಲು ಘೋಷಿಸಿದ ಲಾಕ್ ಡೌನ್ ನಿಂದ ತಲೆದೋರಿದ ವಲಸೆ ಕಾರ್ಮಿಕರ ಸಮಸ್ಯೆ, ಅವರ ಮೇಲೆ ನಡೆದ ಪೊಲೀಸರ ದೌರ್ಜನ್ಯಗಳು, ಅವರ ಮೇಲೆ ಅಮಾನವೀಯವಾಗಿ ಸಿಂಪಡಿಸಿದ ಸ್ಯಾನಿಟೈಸರ್ ಎಂದು ಹೇಳಲಾದ ರಾಸಾಯನಿಕ ಮಿಶ್ರಣಗಳ ದ್ರಾವಣ ಇವೆಲ್ಲವೂ ಅವೈಜ್ಞಾನಿಕ ಚಿಂತನೆಯ ಮುಂದುವರಿಕೆಯೇ ಭಾಗ, ನಮ್ಮ ದೇಶದ ಸಾಮಾಜಿಕ ಲಕ್ಷಣಗಳ, ರಾಜಕೀಯ ಲಕ್ಷಣಗಳ ಅರಿವಿಲ್ಲದೆ ಆಳುತ್ತಿರುವ ಸರ್ಕಾರ ಅಂತಹ ಲಕ್ಷಣಗಳನ್ನು, ಸಾಮಾಜಿಕವಾಗಿ ಕಡೆಗಣಿಸಲಾಗಿರುವ ಜನರ ಪರಿಸ್ಥಿತಿಯನ್ನು, ಲಾಕ್ ಡೌನ್ ನಿಂದಾಗಿ ಅವರು ತಲುಪಲಿರುವ ಅವಸ್ಥೆಯನ್ನು, ಇವುಗಳ ಅಂಕಿ ಅಂಶಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡದೆ ತೆಗೆದುಕೊಂಡ ಕ್ರಮಗಳ ಭಾಗವಾಗಿ ಇವತ್ತು ಕೊರೊನ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಿದೆ.ಇನ್ನು ಭಾರತದಲ್ಲಿ ಮೊಬೈಲ್ ಫೋನು, ಕಂಪ್ಯೂಟರ್ – ಸಾಮಾಜಿಕ ಜಾಲತಾಣಗಳು ಇಂತಹ ತಂತ್ರಜ್ಞಾನ ಸಂಪರ್ಕ ಮಾಧ್ಯಮವನ್ನೇ ವಿಜ್ಞಾನ ಎಂಬ ತಪ್ಪು ತಿಳುವಳಿಕೆಯಿಂದ ಕೂಡಿರುವ ಮನೋಭಾವನೆಗೆ, ಪರಂಪರಾಗತವಾಗಿ ಇಲ್ಲಿ ನಿರ್ಮಿತವಾಗಿರುವ ಜಾತಿ-ಧಾರ್ಮಿಕ ಶ್ರೇಣಿಯ ಕಲುಷಿತ ಮನೋಭಾವನೆ, ಧಾರ್ಮಿಕ ಅಂಧಶ್ರದ್ದೆ, ಮತ್ತು ಮೂಢನಂಭಿಕೆಗಳ ಭಾವನೆಗೆ, ರಾಷ್ಟ್ರೀಯತೆ ಎಂಬ ಕಲ್ಪಿತ ಸಾಮುದಾಯಿಕ ಭಾವನೆ, ಕೊರೊನಾ ವೈರಾಣು ಮನುಷ್ಯ ಕೋಶದಲ್ಲಿರುವ ಪ್ರೋಟೀನ್ ನನ್ನು ಹಿಡಿದುಕೊಳ್ಳುವುದಕ್ಕಿಂತ ಬಹಳ ಬಿಗಿಯಾಗಿ ಹಿಡಿದಿದೆ. ಇಂತಹ ಹಿಡಿತದಲ್ಲಿ ಸೃಷ್ಟಿಯಾಗಿರುವ ಅಭೌದ್ಧಿಕತೆ, ಕೊರೊನ ಸಮಯದಲ್ಲಿ ಇನ್ನೂ ಭೀಕರವಾಗಿ ನಮ್ಮ ಮುಂದೆ ಅನಾವರಣಗೊಂಡಿದೆ ಎನ್ನುವುದು ಮರೆಯಬೇಡಿ.
ಕೇವಲ ವಿಜ್ಞಾನ ಓದಿದರೆ ವೈಚಾರಿಕತೆ ಬರುವುದಿಲ್ಲ. ವೈಜ್ಞಾನಿಕ ಮನೋಭಾವವೂ ಬೇಕು. ಎಲ್ಲವನ್ನು ತರ್ಕಿಸುವ ಓರೆಗಲ್ಲಿಗೆ ಹಚ್ಚಿ ನೋಡುವ ಮನಸ್ಸು ಇದ್ದರೆ ಮಾತ್ರ ಮೌಢ್ಯತೆಗಳನ್ನು, ಅಂಧಶ್ರದ್ಧೆಗಳನ್ನು ದೂರ ಮಾಡಬಹುದು. ವಾಸ್ತು, ಜ್ಯೋತಿಷ್ಯ ಇಂಥವನ್ನೆಲ್ಲಾ ವಿಜ್ಞಾನ ಎನ್ನುತ್ತಿರುವುದು ದುರದೃಷ್ಟ. ವಿಜ್ಞಾನ ಎಂದರೆ ಸತ್ಯ. ಆದರೆ, ವಾಸ್ತು, ಜ್ಯೋತಿಷ್ಯವನ್ನೆಲ್ಲಾ ವಿಜ್ಞಾನ ಎಂದುಬಿಟ್ಟರೆ ಜನರು ಸುಲಭವಾಗಿ ನಂಬುತ್ತಾರೆಂದು ಭಾವಿಸಲಾಗಿದೆ.ಭಾವಿಸುವ ಮೂಲಕ ಕೋಟ್ಯಾಂತರ ಮುಗ್ದ ಮನಸ್ಸುಗಳಿಂದ ಲಕ್ಷಾಂತರ ರೂಪಾಯಿಗಳು ಸಂಪಾದಿಸುತ್ತಿದ್ದಾರೆನುವುದು ಸಧ್ಯ ನಮ್ಮಗೆಲ್ಲರಿಗೂ ಗೊತ್ತಿರುವ ಸಂಗತಿಯಲ್ಲವೇ,ಇದು ಸಹ  ವೈಜ್ಞಾನಿಕ ವಿಜ್ಞಾನದ ಕೊರತೆಯಿಂದ ಆಗುತ್ತಿರುವ ಬಹು ದೊಡ್ಡ ಅಪಾಯ ಮತ್ತು ಅನ್ಯಾಯ.
ಇದಲ್ಲದೇ ಇನ್ನು ನಾವು ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮಳೆಗಾಗಿ ಕಪ್ಪೆಮದುವೆ ಮಾಡುವುದು – ಮೌಢ್ಯ. ಯಾಕೆಂದರೆ ಅದು ವಿಜ್ಞಾನದ ಯಾವೊಂದು ಪರೀಕ್ಷೆಯನ್ನೂ ಪಾಸು ಮಾಡುವುದಿಲ್ಲ. ಮಳೆ ಬರುವುದಕ್ಕೂ ಕಪ್ಪೆಗೆ ಮದುವೆ ಮಾಡುವುದಕ್ಕೂ ಕಾರ್ಯಕಾರಣ ಸಂಬಂಧ ಎಲ್ಲಿದೆ – ಎನ್ನುವ ಮೊದಲ ಪ್ರಶ್ನೆಯಲ್ಲೇ ಈ ಪದ್ಧತಿ ನಿರುತ್ತರವಾಗುತ್ತದೆ ಅಲ್ಲವೆ? ವಾಸ್ತು – ಇನ್ನೊಂದು ಮೌಢ್ಯ. ಒಂದು ಮನೆಯ ಕಿಟಕಿ, ಬಾಗಿಲು, ಗೋಡೆಗಳನ್ನು ವ್ಯವಸ್ಥಿತವಾಗಿ ಗಾಳಿಬೆಳಕಿನ ದಿಕ್ಕುಗಳನ್ನು ನೋಡಿಕೊಂಡು ಕಟ್ಟಿದರೆ, ಮನೆಯಲ್ಲಿ ಹೆಚ್ಚು ಖುಷಿಯಿಂದ ಇರಬಹುದು ಎನ್ನುವುದು ಸರಿ ಆದರೆ, ದಿಕ್ಕುಗಳು ಮನುಷ್ಯನ ಜೀವನದ ಪ್ರಮುಖಘಟ್ಟಗಳನ್ನು ನಿರ್ಧರಿಸುತ್ತವೆ, ಅವನ ಲಾಭ-ನಷ್ಟಕ್ಕೆ ಕಾರಣವಾಗುತ್ತವೆ ಎನ್ನುವುದಕ್ಕೆ ಕಾರ್ಯಕಾರಣ ಸಂಬಂಧ ಇಲ್ಲ. ಅಲ್ಲದೆ ವಾಸ್ತು, ವಿಜ್ಞಾನವೇ ಆಗಿದ್ದ ಪಕ್ಷದಲ್ಲಿ, ಅದನ್ನು ಅನುಸರಿಸಿದ ನೂರಕ್ಕೆ ನೂರು ಮಂದಿಯೂ ಸುಖಸಂತೋಷದಿಂದ ಬಾಳ್ವೆ ಮಾಡಬೇಕಿತ್ತು. ತನ್ನ ಹೇಳಿಕೆಗಳಿಗೆ ವೈಜ್ಞಾನಿಕ ಆಧಾರ ಇದೆ ಎಂದು ಹೇಳಿಕೊಂಡಮೇಲೂ ಪ್ರಯೋಗದಲ್ಲಿ ತಪ್ಪು ಫಲಿತಾಂಶಗಳನ್ನು ಕೊಡುವ ಶಾಸ್ತ್ರವನ್ನು ಮೌಢ್ಯ ಎನ್ನಬೇಕಾಗುತ್ತದೆ.
ಇಲ್ಲಿ ಇನ್ನೊಂದು ಸೂಕ್ಷ್ಮವನ್ನು ಗಮನಿಸಬಹುದು. ತಾನು ಹುಲುಸಾಗಿ ಬೆಳೆಯಲು ಬಂದಣಿಕೆಗೆ ಅರಳಿಯ ಆಸರೆ ಬೇಕಾಗುವಂತೆ, ಕೆಲವು ಮೌಢ್ಯಗಳು ಶುದ್ಧವಿಜ್ಞಾನವನ್ನು ಆಧರಿಸಿಕೊಂಡು ತಮ್ಮ ಬೇಳೆ ಬೇಯಿಸಲು ನೋಡುತ್ತವೆ. ಫಲಜ್ಯೋತಿಷ್ಯ, ವಾಸ್ತು, ಫೆಂಗ್‍ಶುಯಿ, ರೇಖಿ, ಕಾಸ್ಮಿಕ್ ಹೀಲಿಂಗ್, ಸಮ್ಮೋಹಿನಿ ಚಿಕಿತ್ಸೆ, ಯೋಗದ ಹಲವಾರು ಹೊಸ ರೂಪಾಂತರಗಳು – ಇವು ಈ ಪಟ್ಟಿಯಲ್ಲಿ ಬರುತ್ತವೆ. ಭೂಮಿಯಿಂದ ಲಕ್ಷಾಂತರ ಮೈಲಿ ದೂರದಲ್ಲಿರುವ ಗ್ರಹತಾರೆಗಳು ಮನುಷ್ಯನ ದೈನಂದಿನ ಆಗುಹೋಗುಗಳ ಮೇಲೆ ಪರಿಣಾಮ ಬೀರುತ್ತವೆ ಎನ್ನುವುದು, ಮನೆಯಲ್ಲಿ ಅಲ್ಲಲ್ಲಿ ಕಟ್ಟುವ ಸಣ್ಣಪುಟ್ಟ ವಸ್ತುಗಳು ಜೀವನದ ಮಹತ್ತರ ಘಟನೆಗಳಿಗೆ ಕಾರಣವಾಗುತ್ತವೆ ಎನ್ನುವುದು, ಮೋಡಿ ಮಾಡಿ ವ್ಯಕ್ತಿಗೆ ಹಿಂದಿನ ಜನ್ಮದ ನೆನಪು ಹುಟ್ಟುವಂತೆ ಮಾಡಬಹುದು ಎನ್ನುವುದು, ಚಿಕಿತ್ಸೆ ಇಲ್ಲದೆ ಮಾರಣಾಂತಿಕ ರೋಗಗಳನ್ನು ಗುಣಪಡಿಸಬಹುದು ಎನ್ನುವುದು – ಇವೆಲ್ಲ ಕಾರ್ಯಕಾರಣ ಸಂಬಂಧಕ್ಕೆ ಪೂರ್ತಿ ವಿರುದ್ಧವಾದ ಚಿಂತನೆಗಳಾದ್ದರಿಂದ ಇವು ಇಂದಿನ ಸಮಾಜಕ್ಕೆ ಹಾನಿಯುಂಟು ಮಾಡುತ್ತೀವೆ ಜೊತೆಗೆ ಅನಾಹುತಗಳಿಗೆ ಕಾರಣಗಳಾಗುತ್ತಿವೆ. ಎಲ್ಲಿಯವರೆಗೆ ಜನ ಎಚ್ಚತ್ತು ಕೊಳ್ಳದೇ ಹೋದರೆ – ಹೋಗದೆ ಇದರೆ ಇವರು ಜನರಿಂದ ಹಣ ವಸೂಲಿ ಮಾಡುವುದು ಖಂಡಿತಾ ಬಿಡುವುದಿಲ್ಲ.
ಈ ಎಲ್ಲಾ ವೈಜ್ಞಾನಿಕ ಕೊರತೆಗಳು ಭಾರತದ ವಿಚಾರವಾದಿಗಳ ಮೇಲೆ ಕೂಡ ಧಾರ್ಮಿಕ ಮೂಲಭೂತವಾದಿಗಳು ಮೊದಲಿಂದಲೂ ದಾಳಿ ಮಾಡುತ್ತಾ ಬಂದಿದ್ದಾರೆ. ಕನ್ನಡದ ಮಟ್ಟಿಗೆ ಎಚ್ ನರಸಿಂಹಯ್ಯನವರದ್ದು ಮೂಢ ನಂಬಿಕೆಗಳ ವಿರೋಧಿ ಚಳವಳಿಕಾರನಾಗಿ, ಶೈಕ್ಷಣಿಕ ತಜ್ಞರಾಗಿ ಪ್ರಮುಖ ವ್ಯಕ್ತಿತ್ವಗಳಾಗಿ ನಾಡಿನ ಸೇವೆಯನ್ನು ಮಾಡಿದ ಧೀಮಂತರಾಗಿದ್ದಾರೆ. ಅವರು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾಗ, ಸದಾ ಟೀಕಿಸುತ್ತಿದ್ದ ಸಾಯಿಬಾಬಾನ ಭಕ್ತರು ಅವರಿಗೆ ಕೊಟ್ಟ ಕಿರುಕುಳ ಗೊತ್ತಿರುವುದೇ ತಾನೇ!. ನರಸಿಂಹಯ್ಯನವರು ಸದಾ ವೈಜ್ಞಾನಿಕ ಮನೋಭಾವದ ಸತ್ಯದ ವಿಚಾರಗಳನ್ನು ಜನರಿಗೆ ತಿಳಿಸಲು ಎಷ್ಟೇ ಪ್ರಯತ್ನ ಪಟ್ಟರು ಅದು ಸಾಧ್ಯವಾಗಿಲ್ಲ ಎನ್ನುವ ನೋವು ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ.ಆದ್ದರಿಂದ ಇಂದು ಮನುಷ್ಯ ಪ್ರಕೃತಿಯೊಂದಿಗೆ ಸಂಘರ್ಷಕ್ಕೆ ಇಳಿದಿದ್ದಾನೆ. ಪ್ರಕೃತಿಯನ್ನ ಅರಿತುಕೊಳ್ಳದೆ ಅತಿಯಾಗಿ ಪ್ರಕೃತಿಯನ್ನು ವಿನಾಶದಂಚಿಗೆ ಕೊಂಡೊಯ್ಯುತ್ತಿದ್ದಾರೆ.ಇದು ಮಾನವನ ಅವನತಿಗೆ ಕಾರಣವಾಗಬಹುದೆಂಬ ಎಚ್ಚರಿಕೆ ಸರ್ವರಲ್ಲಿಯೊ ಮೂಡಲಿ. ಮೂಡುವ ಮೂಲಕ ವೈಜ್ಞಾನಿಕ ಮನೋಭಾವ ಅರಿತು ಆ ದಿಸೆಯಲ್ಲಿ ನಾವೆಲ್ಲರೂ ಹೆಜ್ಜೆ ಹಾಕುವುದು ಅತ್ಯುತ್ತಮ ಮಾರ್ಗ.
ಕೊನೆಯ ಮಾತು :
ವೈಜ್ಞಾನಿಕ ಮನೋಭಾವದ ಪ್ರಭಾವವು ನೇರವಾಗಿ ವಿಜ್ಞಾನದ ಮೇಲೆ ಹೆಚ್ಚಾಗಿ ಆಗುವುದಕ್ಕಿಂತಲೂ, ಸಮಾಜ ಮತ್ತು ಮಾನವರು ಯೋಚಿಸುವ, ಪ್ರತಿಕ್ರಿಯಿಸುವ ಅಥವಾ ವ್ಯವಹರಿಸುವ ವಿವಿಧ ವಿಧಾನ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ.ಪ್ರಸ್ತುತವಿರುವ ಅಭಿವೃದ್ಧಿಶೀಲ ಹಾಗೂ ಸ್ಪರ್ಧಾತ್ಮಕ ಆರ್ಥಿಕತೆಯ ಪರಿಸ್ಥಿತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಯಾವುದೇ ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಶಕ್ತಿಶಾಲಿ ಸಾಧನಗಳೆಂದು ಪರಿಗಣಿಸಲಾಗಿದೆ. ಆದುದರಿಂದ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಇಂದಿನ ಜಗತ್ತಿನಲ್ಲಿ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಯ ಯಂತ್ರವಾಗಿ ಮಾರ್ಪಟ್ಟಿದ್ದು, ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ಅತ್ಯಂತ ಪ್ರಭಾವ ಬೀರುತ್ತಿದೆ. ವೈಜ್ಞಾನಿಕ ಬೆಳವಣಿಗೆಗಳು ಜೀವನದ ಗುಣಮಟ್ಟವನ್ನು ಹೆಚ್ಚಿಸಲು, ಅಂಧ ಶ್ರದ್ಧೆ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಲು, ಸಂಪತ್ತನ್ನು ಸೃಜಿಸಲು, ನೈಸಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಗೆ ಅತ್ಯವಶ್ಯಕವಾಗಿವೆ. ಇದು ಸಮಾಜದ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ವೈಜ್ಞಾನಿಕ ಪ್ರಗತಿಗಳು ಹಾಗೂ ತಾಂತ್ರಿಕ ಆವಿಷ್ಕಾರಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಆರ್ಥಿಕತೆಯ ಎಲ್ಲಾ ವಿಭಾಗಗಳಲ್ಲಿ ಮುಖ್ಯ ವಾಹಿನಿಗೆ ತರುವುದರ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಆದುದರಿಂದ, ಗ್ರಾಮೀಣ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವ ಸಲುವಾಗಿ ವೈಜ್ಞಾನಿಕ ಬೆಳವಣಿಗೆ, ಅರಿವು ಹಾಗೂ ಮನೋಭಾವನೆಗಳನ್ನು ಸಮಾಜದಲ್ಲಿ ಪ್ರಸರಿಸುವ ಅವಶ್ಯಕತೆಯಿದೆ. ಮುಂದುವರೆದು, ವೈಜ್ಞಾನಿಕ ಅರಿವು ಇಂದಿನ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಜಾಗತಿಕ ಮಾರುಕಟ್ಟೆಯಲ್ಲಿ ಸಮಾಜದ ಎಲ್ಲಾ ಸ್ತರಗಳನ್ನು ಬಲವರ್ಧಿಸುವುದರೊಂದಿಗೆ, ಜನರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
 
ಲೇಖಕರು : ಸಂಗಮೇಶ ಎನ್ ಜವಾದಿ, ಕೊಡಂಬಲ, 

ತಾಲೂಕು - ಚಿಟಗುಪ್ಪ, ಬೀದರ ಜಿಲ್ಲೆ.9663809340. 
Email I'd :- snjawadi2009@gmail.com

Related posts

ರೈತ ಬಂಡಾಯಕ್ಕೆ 40 ವರ್ಷ

Hasiru Kranti

ಸಮೃದ್ಧ ಭಾರತದ ಕನಸುಗಾರ ಎನ್ ಟಿ ಆರ್

Hasiru Kranti

ಕ್ರಾಂತಿಯ ಕಿಡಿ ಸಂಗೊಳ್ಳಿ ರಾಯಣ್ಣ ಈ ನಾಡು ಕಂಡ ಒಬ್ಬ ಅಪರೂಪದ ವೀರ ಯೋಧ

Siddu Naduvinmani

Leave a Comment