Hasirukranti
ಅಂಕಣಗಳು ಕ್ರೀಡೆ

ಮಧ್ಯಮ ವರ್ಗದ ಹಿನ್ನಡೆಗಳನ್ನೆಲ್ಲಾ ಮೆಟ್ಟಿನಿಂತ ರಿಯಲ್ ಹೀರೋ ಮಾಹಿ

ಮನುಷ್ಯನ ಮನಸ್ಸಿನಲ್ಲಿ ಸಾಧಿಸುವ ಇಚ್ಛೆ ಉತ್ಕಟವಾಗಿದ್ದರೆ ಆತ ಶ್ರೀಮಂತ, ಬಡವ, ಮಧ್ಯಮವರ್ಗ ಇದ್ಯಾವುದು ಅಡ್ಡ ಬರುವುದಿಲ್ಲ. ನಿರ್ದಿಷ್ಟ ಗುರಿಯೆಡೆಗೆ ನಿರಂತರ ಸಾಗುತ್ತಿರಬೇಕಷ್ಟೆ. ಆಗ ಆಕಾಶ ಅಂಗೈಯಲ್ಲಿ ಎನ್ನುವುದಕ್ಕೆ ಧೋನಿ ಒಂದು ದೊಡ್ಡ ಉದಾಹರಣೆ.

ತಮ್ಮ ಅಭಿಮಾನಿಗಳ ಪಾಲಿನ ಪ್ರೀತಿಯ ಮಾಹಿ ಅಂದರೆ ಮಹೇಂದ್ರ ಸಿಂಗ್ ಧೋನಿ ಎಂದೂ ಖ್ಯಾತಿಗೆ ಗೌರವ ನೀಡಿದವರಲ್ಲ. ಅಂತೆಯೇ ಯಾವುದನ್ನೂ ಅಗೌರವದಿಂದಲೂ ನೋಡಿದರವಲ್ಲ. ಪ್ರತಿ ಹಂತದಲ್ಲೂ ಕಲಿಯುತ್ತಾ ಯಶಸ್ಸಿನ ಉತ್ತುಂಗಕ್ಕೇರಿದವರು.
ತಂಡದ ಮೊತ್ತ ಏರಿಸುವ ಸಂದರ್ಭ ಬಂದಾಗ ತಾಳ್ಮೆಯ ಇನಿಂಗ್ಸ್ ಆಡುತ್ತಿದ್ದ ಧೋನಿಯ ಮ್ಯಾಚ್ ಫಿನಿಷಿಂಗ್ ಹಂತದಲ್ಲಿ ಬಾರಿಸುತ್ತಿದ್ದ ಜಬರ್ ದಸ್ತ್ ಸಿಕ್ಸರ್‍ಗಳು ಇನ್ನು ಮುಂದೆ ಕ್ರಿಕೆಟ್‍ನ ನೆನಪುಗಳಾಗಿ ಮಾತ್ರ ಉಳಿಯಲಿವೆ.

ಹೌದು, ಭಾರತೀಯ ಕ್ರಿಕೆಟ್ ಲೋಕ ಕಂಡ ಅಪ್ರತಿಮ ನಾಯಕ ಧೋನಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ ಕಳೆದೊಂದು ವರ್ಷದಿಂದ ಹರಿದಾಡುತ್ತಿದ್ದ ಗಾಳಿ ಸುದ್ಧಿಗಳಿಗೆಲ್ಲ ಬ್ರೇಕ್ ಬಿದ್ದಂತಾಗಿದೆ. ಎಂಎಸ್ ಧೋನಿ ತಮ್ಮ ಅಧಿಕೃತ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಆಗಸ್ಟ್ 15ರ ಶನಿವಾರದಂದು “ವೃತ್ತಿ ಜೀವನದುದ್ದಕ್ಕೂ ನೀವು ನೀಡಿದ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು. ಇಂದು ಸಂಜೆ 7.29 ರಿಂದ ನಾನು ನಿವೃತ್ತಿ ಹೊಂದಿದ್ದೇನೆ ಎಂದು ಪರಿಗಣಿಸಿ” ಎಂದು ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಅದರಂತೆ ಬಿಸಿಸಿಐ ಕೂಡ ಧೋನಿಯವರ ನಿವೃತ್ತಿಯನ್ನು ದೃಢಪಡಿಸಿದೆ.

ತಮ್ಮ ನಿವೃತ್ತಿಯಲ್ಲೂ ಸಸ್ಪೆನ್ಸ್ ಕಾಯ್ದುಕೊಂಡ ಧೋನಿ 2019ರ ಏಕದಿನ ವಿಶ್ವಕಪ್‍ನಲ್ಲಿ ಭಾರತ ಸೆಮಿಫೈನಲ್‍ನಲ್ಲಿ ನಿರ್ಗಮಿಸಿದ ಬೆನ್ನಲ್ಲೇ ಧೋನಿ ನಿವೃತ್ತಿ ಘೋಷಣೆ ಮಾಡುತ್ತಾರೆಂದು ಕಾದಿದ್ದವರಿಗೆಲ್ಲ ಅಚ್ಚರಿ ಮೂಡಿಸಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದು ಸೇನೆಯಲ್ಲಿ ಎರಡು ತಿಂಗಳು ಕಾರ್ಯನಿರ್ವಹಿಸಲು ತೆರಳಿದ್ದರು. ಬಳಿಕ ತವರಿನ ದ.ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದಲೂ ಹೊರಗುಳಿದರು. ಏತನ್ಮಧ್ಯೆ ವಿರಾಟ್ ಕೊಹ್ಲಿ ಅವರು ಒಂದು ದಿನ ಧೋನಿಯನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ ಬೆನ್ನಲ್ಲೇ ಇಡೀ ಭಾರತದಲ್ಲಿ ಮಾಹಿ ನಿವೃತ್ತಿಯ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಬಹುಶಃ ನಿವೃತ್ತಿ ಘೋಷಣೆಗೂ ಮುನ್ನವೂ ಅಭಿಮಾನಿಗಳಿಗೆ ಯಾವುದೇ ಗುಟ್ಟು ಬಿಟ್ಟುಕೊಡದೆ ಹೀಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.

ಸಚಿನ್ ತೆಂಡುಲ್ಕರ್ ನಂತರದಲ್ಲಿ ಇಂಡಿಯನ್ ಕ್ರಿಕೆಟ್ ಕಂಡ ಅತ್ಯಂತ ಪ್ರಖ್ಯಾತ ಕ್ರಿಕೆಟಿಗ ಎಂಎಸ್ ಧೋನಿ, ಗಣಿಗಾರಿಕೆಯನ್ನೇ ಮೂಲ ಆದಾಯವಾಗಿಸಿಕೊಂಡ ಕ್ರಿಕೆಟ್‍ನ ಗಂಧಗಾಳಿಯೂ ಗೊತ್ತಿಲ್ಲದ ಜಾರ್ಖಂಡ್‍ನಿಂದ ಬಂದ ಧೋನಿ ತಮ್ಮ ವಿಭಿನ್ನ ಶೈಲಿಯ ಬ್ಯಾಟಿಂಗ್, ತಂತ್ರಗಾರಿಕೆಯ ವಿಕೆಟ್ ಕೀಪಿಂಗ್ ಹಾಗೂ ತಮ್ಮದೇ ಆದ ವಿನೂತನ ಶೈಲಿಯ ಮೂಲಕ ಸಕ್ಸಸ್ ಕಂಡವರು. ಮೊದಮೊದಲು ಕ್ರಿಕೆಟ್‍ನ ಸಂಪ್ರದಾಯವಾದಿಗಳು ಫುಟ್ ವರ್ಕ್ ಇಲ್ಲದ ಧೋನಿಯ ಬ್ಯಾಟಿಂಗ್ ಹಾಗೂ ಕೀಪಿಂಗ್ ಬಗ್ಗೆ ಕಾಲೆಳೆದರಾದರೂ ಹಂತಹಂತವಾಗಿ ಕ್ರಿಕೆಟ್‍ನ ಯಶಸ್ಸಿನ ಏಣಿ ಏರಿದ ಧೋನಿಯನ್ನು ಕಂಡು ಚಪ್ಪಾಳೆ ತಟ್ಟಿದರು. ಇಂತಹ ಸೆಲ್ಫ್ ಮೇಡ್ ಧೋನಿಯ ನಾಯಕತ್ವದಲ್ಲಿ ಭಾರತ ಎಲ್ಲ ಮಾದರಿಯಲ್ಲೂ ಅಗ್ರ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 2009ರ ಡಿಸೆಂಬರ್‍ನಿಂದ ಆರಂಭವಾಗಿ 18 ತಿಂಗಳ ಕಾಲ ಟೆಸ್ಟ್ ರ್ಯಾಂಕಿಂಗ್‍ನಲ್ಲಿ ನಂಬರ್ ಒನ್ ಆಗಿದ್ದರೆ, ಏಕದಿನ ಮಾದರಿಯಲ್ಲಿ 2011 ರಲ್ಲಿ ತವರಿನಲ್ಲಿ ವಲ್ರ್ಡ್‍ಕಪ್ ಗೆದ್ದಿತ್ತು. 2007 ರಲ್ಲಿ ನಾಯಕತ್ವ ವಹಿಸಿಕೊಂಡ ಮೊದಲ ಸರಣಿಯಲ್ಲಿಯೇ ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ದಿಗ್ಗಜ ನಾಯಕ ಧೋನಿ.

ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಇನ್ಸ್‍ಪೆಕ್ಟರ್ ಆಗಿ ಕೆಲಸ ಮಾಡಿದ್ದ ಧೋನಿ, ಮಧ್ಯಮ ವರ್ಗದ ಹಿನ್ನಡೆಗಳನ್ನೆಲ್ಲಾ ಮೆಟ್ಟಿನಿಂತು ಕ್ರಿಕೆಟಿಗನಾಗಬೇಕೆಂಬ ಹೆಬ್ಬಯಕೆಯಿಂದ ತಮ್ಮ 23 ನೇ ವಯಸ್ಸಿನಲ್ಲೇ ಕೋಲ್ಕತ ಸೇರಿಕೊಂಡರು. 2004 ರಲ್ಲಿ ನೈರೋಬಿಯಲ್ಲಿ ನಡೆದ ಭಾರತ ಎ ತಂಡದ ತ್ರಿಕೋನ ಏಕದಿನ ಸರಣಿಯಲ್ಲಿ ಎರಡು ಶತಕ ಬಾರಿಸಿದ್ದೇ, ಉದ್ದ ಕೂದಲುಗಳ, ನಿರ್ಭಯ ಆಟಗಾರನ ಬಗ್ಗೆ ಆಯ್ಕೆ ಸಮಿತಿ ಎಚ್ಚರಗೊಂಡಿತ್ತು. ಈ ಸರಣಿಯ ಬೆನ್ನಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಧೋನಿ ಒಂದೇ ವರ್ಷದಲ್ಲಿ ಏಕದಿನ ಪಂದ್ಯದ ಎರಡು ಇನಿಂಗ್ಸ್‍ನಲ್ಲಿ 148 ಹಾಗೂ 183 ರನ್ ಸಿಡಿಸುವ ಮೂಲಕ ಅಭಿಮಾನಿಗಳ ಡಾರ್ಲಿಂಗ್ ಆಗಿ ಬದಲಾದರು.
ರಿಯಲ್ ಯೂಥ್ ಐಕಾನ್, ರಿಯಲ್ ಹೀರೋ, ರಿಯಲ್ ರೋಲ್ ಮಾಡೆಲ್ ಎನಿಸುವಂತಹ ವ್ಯಕ್ತಿತ್ವದ ಎಂಎಸ್ ಧೋನಿ ವೈಯಕ್ತಿಕ, ಕ್ರಿಕೆಟ್ ಜೀವನ, ವಿಶ್ವಕಪ್‍ವರೆಗಿನ ಅವರ ಜೀವನ ಹಾಗೂ ಸಾಧನೆಯ ಕುರಿತಾಗಿ ಬಾಲಿವುಡ್ ಸಿನಿಮಾವೂ ಕೂಡ ತೆರೆ ಕಂಡಿದೆ. ಸುಶಾಂತ್ ಸಿಂಗ್ ರಜಪೂತ್ ಮುಖ್ಯ ಭೂಮಿಕೆಯ “ಎಂಎಸ್ ಧೋನಿ : ಅಲ್‍ಟೋಲ್ಡ್ ಸ್ಟೋರಿ” ಧೋನಿಯ ಕ್ರಿಕೆಟ್ ಜೀವನದೊಂದಿಗೆ ವೈಯಕ್ತಿಕ ಜೀವನದ ಬಗ್ಗೆಯೂ ಇದರಲ್ಲಿ ಮನಮೋಹಕವಾಗಿ ಚಿತ್ರಿಸಲಾಗಿತ್ತು. ವಿ ಮಿಸ್ ಯೂ ಮಾಹಿ.

♦ ಮಂಜುನಾಥ.ಎಸ್.ಕಟ್ಟಿಮನಿ
ಹವ್ಯಾಸಿ ಪತ್ರಕರ್ತ, ಸಾಹಿತಿ
ಸಿ ಎಂ ಸಿ ಕಾಲನಿ,
ಮನೆ ನಂ-8,
ಇಬ್ರಾಹಿಮಪೂರ,
ವಿಜಯಪುರ:586101

Related posts

ಕೊರೋನ ವೈರಸ್ ಬಗ್ಗೆ ಓದಲೇಬೇಕಾದ ಸಂಗತಿ

Hasiru Kranti

ಐಪಿಎಲ್; ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಆರ್ ಸಿಬಿ

Siddu Naduvinmani

“ತತ್ರಾಣಿಯೊಳಗಿನ ಮೌನದಲ್ಲಿ ಅರಳಿದ ಗಜಲ್”

Siddu Naduvinmani

Leave a Comment