ಮೂಡಲಗಿ: ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಅಪಾರ ಕೊಡುಗೆಗಳನ್ನು ನೀಡಿದ ಅರಭಾವಿ ದುರದುಂಡೇಶ್ವರ ಸಿದ್ದಸಂಸ್ಥಾನ ಮಠದ 11ನೇ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಶ್ರೀ ಸಿದ್ಧಲಿಂಗೇಶ್ವರ ಮಹಾ ಸ್ವಾಮೀಜಿಗಳು ಲಿಂಗೈಕ್ಯರಾದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ದುಃಖವಾಗಿದೆ ಮತ್ತು ನಾಡಿನ ಭಕ್ತ ಸಮೂಹಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ಶ್ರೀಮಠದ ಸದ್ಭಕ್ತರಾದ ಈರಣ್ಣ ಕಡಾಡಿ ಅವರು ಸಂತಾಪ ವ್ಯಕ್ತಪಡಿಸಿದರು.
ಜಿಲ್ಲೆಯ ಅತಿ ಪುರಾತನ ಮತ್ತು ಧಾರ್ಮಿಕ ಪರಂಪರೆ ಹೊಂದಿರುವ ದುರದುಂಡೇಶ್ವರ ಮಠವು ವಿವಿಧ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡಿದ್ದಾರೆ ಮತ್ತು ಪುರಾಣ, ಪ್ರವಚನಗಳ ಮೂಲಕ ನಾಡಿನಲ್ಲಿ ಧಾರ್ಮಿಕ ಜಾಗೃತಿಯನ್ನು ಉಂಟು ಮಾಡಿದ್ದಾರೆ ಹಾಗೂ ತಮ್ಮ ವಿಧಾಯಕ ಕಾರ್ಯಗಳ ಮೂಲಕ ನಿರಂತರ ಚಟುವಟಿಕೆಗಳಿಂದ ಕೂಡಿದ ಶ್ರೀಗಳ ಅಗಲಿಕೆ ನಾಡಿನ ಸದ್ಬಕ್ತರಿಗೆ ತುಂಬಲಾರದ ಹಾನಿಯಾಗಿದ್ದು, ಪೂಜ್ಯರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಭಕ್ತರಿಗೆಲ್ಲಾ ನೀಡಲಿ ಎಂದು ಸಂಸದ ಈರಣ್ಣ ಕಡಾಡಿ ಸಂತಾಪ ಸೂಚಿಸಿದರು.