ಬೆಂಗಳೂರು: ಅನ್ನಭಾಗ್ಯದ 10ಕೆ.ಜಿ. ಅಕ್ಕಿಯ ಯೋಜನೆಯಲ್ಲಿ ಬಿಪಿಎಲ್ ಕುಟುಂಬಗಳಿಗೆ 5 ಕೆ.ಜಿ. ಅಕ್ಕಿ ಮತ್ತು ಉಳಿದ 5 ಕೆ.ಜಿ ಅಕ್ಕಿ ಬದಲು ಹಣ ನೀಡಲು ನಿರ್ಧರಿಸಿತ್ತು. ಈಗ ಸರಕಾರ ಬಿಪಿಎಲ್ ಕುಟುಂಬಗಳಿಗೆ ಹಣ ನೀಡಲು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಬಿಪಿಎಲ್ ಕುಟುಂಬದಲ್ಲಿ ಇಬ್ಬರು ಮುಖ್ಯಸ್ಥರಿದ್ದರೆ 5ಕೆ.ಜಿ. ಅಕ್ಕಿ ಹಣ ಪಡೆಯಲು ಕುಟುಂಬಕ್ಕೆ ಯಾರು ಮುಖ್ಯಸ್ಥರು ಎಂಬುದನ್ನು ಕುಟುಂಬದವರೇ ಜುಲೈ 20ರೊಳಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಮಾಹಿತಿ ನೀಡಬೇಕಿದೆ. ಆಗ ಅವರ ಖಾತೆಗೆ ಹಣ ಜಮಾ ಮಾಡಲಾಗುವುದು.
ಪಡಿತರ ಪಡೆಯುವ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರಿದ್ದರೆ ಆ ಕುಟುಂಬದ ಮುಖ್ಯಸ್ಥರು ಯಾರು ಎನ್ನುವ ಸಮಸ್ಯೆ ಮೊದಲು ಇತ್ಯರ್ಥವಾಗಬೇಕು. ಆ ನಂತರವೇ ಅನ್ನಭಾಗ್ಯ ಯೋಜನೆಯಡಿಯ ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ಹಣ ನೀಡಲು ಸರ್ಕಾರ ತೀರ್ಮಾನಿಸಿ ಮಾರ್ಗಸೂಚಿ ಪ್ರಕಟಿಸಿದೆ.
ಅಂತ್ಯೋದಯ ಕಾರ್ಡು ಹೊಂದಿದ ಮೂವರು ಮತ್ತು ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಕ್ಕೆ ನಗದು ವರ್ಗಾವಣೆ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಏಕೆಂದರೆ ಅವರು ಈಗಾಗಲೇ 30 ಕೆಜಿ ಅಕ್ಕಿ ಪಡೆಯುತ್ತಿರುತ್ತಾರೆ. ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ನಾಲ್ಕು ಸದಸ್ಯರಿದ್ದಾಗ ಆ ಕುಟುಂಬ 170 ರೂ., 5 ಸದಸ್ಯರಿದ್ದಾಗ 340 ರೂ., 6 ಸದಸ್ಯರಿದ್ದರೆ 510 ರೂಪಾಯಿ ಪಡೆಯಲಿದೆ. ಹೆಚ್ಚಿನ ಸದಸ್ಯರು ಇದ್ದಲ್ಲಿ ಇದೆ ಅನುಪಾತದಲ್ಲಿ ಹಣ ಸಿಗುತ್ತದೆ.
ಕಳೆದ ಮೂರು ತಿಂಗಳಲ್ಲಿ ಪಡಿತರ ಆಹಾರ ಧಾನ್ಯ ಪಡೆದ ಕುಟುಂಬಗಳು ಮಾತ್ರ ನಗದು ವರ್ಗಾವಣೆ ಸೌಲಭ್ಯ ಪಡೆಯಲು ಅರ್ಹವಾಗಿವೆ.
ಮಹಿಳಾ ಸದಸ್ಯರಿರುವ ಪಡಿತರ ಚೀಟಿಯಲ್ಲಿನ ಮಹಿಳೆಯನ್ನು ಕುಟುಂಬದ ಮುಖ್ಯಸ್ಥರನ್ನಾಗಿ ನೇಮಿಸಬೇಕು ಮತ್ತು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಿರಬೇಕು. ಈ ಬಗ್ಗೆ ಜುಲೈ 20ರೊಳಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಮಾಹಿತಿ ನೀಡಬೇಕು. ಆಗ ಬಿಪಿಎಲ್ ಕುಟುಂಬಗಳಿಗೆ ಆಗಸ್ಟ್ ತಿಂಗಳಲ್ಲಿ ನಗದು ವರ್ಗಾವಣೆ ಸೌಲಭ್ಯ ದೊರೆಯಲಿದೆ.