ಇಂಡಿ: ಡಯಾಲೆಸಿಸ್ ಚಿಕಿತ್ಸೆಗೆ ಬಂದ ಮಹಿಳೆಗೆ ಸಿಬ್ಬಂದಿ ಸರಿಯಾದ ಚಿಕಿತ್ಸೆ ನೀಡದೇ ರೋಗಿ ಸಾವನ್ನಪ್ಪಿದ ಘಟನೆ ಇಂಡಿ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ತಾಲೂಕಿನ ಮಾವಿನಹಳ್ಳಿ ಗ್ರಾಮದ ಬಿಸಮಿಲ್ಲಾ ಸೈಪನ್ ಸಾಬ ನದಾಫ್ ಮೃತ ಪಟ್ಟ ದುರ್ದೈವಿ ಮಹಿಳೆ.
ಬುಧವಾರ ಬೆಳಗ್ಗೆ ೮ ಗಂಟೆಗೆ ಡಯಲ್ಯಾಸಿಸ್ ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ಬಂದಿದ್ದಾರೆ. ಸಿಬ್ಬಂದಿ ಸರಿಯಾಗಿ ೧೧ ಗಂಟೆಗೆ ಬಂದಿದ್ದು ಆತನು ಕುಡಿದು ನಶೆಯಲ್ಲಿದ್ದ. ಹೀಗಾಗಿ ಬೇರೆಯವರಿಂದ ಚಿಕಿತ್ಸೆ ಕೊಡಿಸಲು ಮುಖ್ಯ ವೈಧ್ಯಾಧಿಕಾರಿಗಳಿಗೆ ವಿನಂತಿಸಿದ್ದಾರೆ. ಆದರೂ ಬಸವರಾಜ ಎಂಬ ಸಿಬ್ಬಂದಿ ಕುಡಿದ ಅಮಲಿನಲ್ಲಿಯೇ ಚಿಕಿತ್ಸೆ ನೀಡಿದ್ದಾನೆ. ಸಲಾಯಿನ್ ಹಚ್ಚಿದದನ್ನು ಒಮ್ಮೆಲೆ ತೆಗೆದಿದ್ದರಿಂದ ರೋಗಿಯ ಮೈಯಿಂದ ರಕ್ತ ಬರಲು ಪ್ರಾರಂಭವಾಗಿ ರೋಗಿ ಸತ್ತಿದ್ದಾಳೆ ಎಂಬುದು ಕುಟುಂಬದ ಸದಸ್ಯರ ಆರೋಪವಾಗಿದೆ.
ಈ ಕುರಿತು ವಿಜಯಪುರದಲ್ಲಿರುವ ಇಂಡಿಯ ಮುಖ್ಯ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿದಾಗ ತಾನು ವಿಜಯಪುರದಲ್ಲಿದ್ದು ವಾರದಲ್ಲಿ ಎರಡು ದಿನ ಮಾತ್ರ ಬರುತ್ತೇನೆ. ಈ ಘಟನೆಯ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ.
ಇದನ್ನು ವಿರೋಧಿಸಿ ಕುಟುಂಬದ ಸದಸ್ಯರು ಮತ್ತು ಕರವೇ ಕಾರ್ಯಕರ್ತರು ಆಸ್ಪತ್ರೆ ಎದುರು ರಸ್ತೆ ತಡೆದು ಟೈಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿ ಆಸ್ಪತ್ರೆಯ ಸಿಬ್ಬಂದಿ ನೀರ್ಲಕ್ಷದಿಂದ ರೋಗಿ ಸಾವನಪ್ಪಿದ್ದು ಕುಟುಂಬದವರಿಗೆ ಪರಿಹಾರ ನೀಡಬೇಕು. ಆಸ್ಪತ್ರೆ ಮುಖ್ಯ ವೈಧ್ಯಾಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಪಟ್ಟು ಹಿಡಿದರು.
ಆಗ ಕಂದಾಯ ಉಪವಿಬಾಗಾಧಿಕಾರಿಗಳು ಅಬೀದ ಗದ್ಯಾಳ ಮಾತನಾಡಿ ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ರೋಗಿ ಸತ್ತಿರುವ ಎಲ್ಲ ವಿವರ ಪಡೆದು ತಪ್ಪಿತಸ್ತರ ಮೇಲೆ ಕ್ರಮಕ್ಕೆ ಶಿಫಾರಸು ಮಾಡುವದಾಗಿ ತಿಳಿಸಿದ ನಿಮಿತ್ಯ ಪ್ರತಿಭಟನೆ ಹಿಂಪಡೆದರು. ಸಿಪಿಐ ರತನಕುಮಾರ ಜೀರಗಾಳ ಇದ್ದರು.
ಪ್ರತಿಭಟನೆಯಲ್ಲಿ ಅನೀಲಗೌಡ ಬಿರಾದಾರ,ಬಾಳು ಮುಳಜಿ, ಜೆಡಿ ಎಸ್ ಬಿ.ಡಿ.ಪಾಟೀಲ ಹಂಜಗಿ,ಬಿಜೆಪಿಯ ಕಾಸುಗೌಡ ಬಿರಾದಾರ,ರಾಜು ಪಡಗಾನೂರ,ಚಂದ್ರಶೇಖರ ಹೊಸಮನಿ,ಸುನೀಲಗೌಡ ಬಿರಾದಾರ,ಖಾದಿರ ಡಾಂಗೆ,ಜಾವೇದ ಮೋಮಿನ್,ಗಂಗಾಧರ ನಾಟಿಕಾರ,ಶಫೀಕ ನದಾಫ ಮತ್ತಿತರಿದ್ದರು.