ಕರ್ನಾಟಕ ನಾಮಕರಣದ ಐವತ್ತನೇ ವರ್ಷದ ನೆನಪಿನಲ್ಲಿ ರಾಜ್ಯ ಸರ್ಕಾರ ನಾಮಕರಣದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ರಾಜ್ಯದ ಪತ್ರಾಗಾರ ಇಲಾಖೆಯ ಹಿರಿಯ ನಿರ್ದೇಶಕ ಡಾ.ವೀರಶೆಟ್ಟಿ ಬಿ.ಗಾರಂಪಳ್ಳಿ ಅವರು ಸಮಕಾಲೀನ ಇತಿಹಾಸಕ್ಕೆ ಮಹತ್ವದ ಆಕರದ ದಾಖಲೆಗಳ ಕೃತಿಯೊಂದನ್ನು ಸಂಪಾದಿಸಿದ್ದಾರೆ. ಅದನ್ನು `ಹೈದರಾಬಾದ ಸಂಸ್ಥಾನ; ಸಮಕಾಲೀನ ದಾಖಲೆಗಳು’ ಹೆಸರಿನಲ್ಲಿ ಕಲಬುರಗಿಯ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಲಿ ಪ್ರಕಟಿಸಿದೆ. ಸರ್ಕಾರದ ಅಧಿಕೃತ ಪ್ರಕಟಣೆಯಾಗಿರುವ ಈ ಕೃತಿ ಇಂದಿನ ರಾಜಕೀಯ ಶಾಸ್ತ್ರ ಅಧ್ಯಯನದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಕನ್ನಡ ನಾಡಿನ ಆಧುನಿಕ ಇತಿಹಾಸದ ಬಗ್ಗೆ ಆಸಕ್ತಿ ಇರುವವವರಿಗೆ ಕುತೂಹಲದ ಅಧ್ಯಯನ ಸಾಮಗ್ರಿ ಒದಗಿಸುತ್ತದೆ.
ಡಾ.ವೀರಶೆಟ್ಟಿಯವರು 1926ರಿಂದ 1950ರ ನವೆಂಬರ್ ತಿಂಗಳ ವರೆಗಿನ ಪ್ರಕಟಿತ ಸುದ್ದಿಗಳನ್ನು ಇಲ್ಲಿ ಸಂಕಲಿಸಿದ್ದಾರೆ. ಧಾರವಾಡದಿಂದ ಪ್ರಕಟವಾಗುತ್ತಿದ್ದ `ವಿಜಯ ಪತ್ರಿಕೆ’ 1926ರ ಮಾರ್ಚ್ 4ರ ಸಂಚಿಕೆಯಿಂದ 1934ರ ಅಕ್ಟೋಬರ್ 2ರ ಸಂಚಿಕೆಯವರೆಗೆ ಪ್ರಕಟಿಸಿದ ಹೈದರಾಬಾದ್ ಸಂಸ್ಥಾನಕ್ಕೆ ಸಂಬಂಧಿಸಿದ ಘಟನೆಗಳನ್ನು ಆಧರಿಸಿದ ಸುದ್ದಿಗಳನ್ನು ಕ್ರಮಬದ್ಧವಾಗಿ ದಾಖಲಿಸಿದ್ದಾರೆ. ಧಾರವಾಡದಿಂದ ಆಲೂರು ವೆಂಕಟರಾಯರು ಸಂಪಾದಿಸುತ್ತಿದ್ದ `ಪ್ರಾಚೀನ ಕರ್ನಾಟಕ ಪತ್ರಿಕೆ’ಯಲ್ಲಿ ಪ್ರಕಟವಾಗಿದ್ದ `ಕಲಬುರ್ಗೆ ಜಾತ್ರೆ’ ಎಂಬ ಶೀರ್ಷಿಕೆಯ ಒಂದು ಲೇಖನವನ್ನು ಸೇರಿಸಿದ್ದಾರೆ. ಮೂರನೆಯ ಭಾಗದಲ್ಲಿ ಏಕೀಕರಣ ಹೋರಾಟದ ಮುಂದಾಳು ಕೋ.ಚೆನ್ನಬಸಪ್ಪ ಅವರು ಬಳ್ಳಾರಿಯಿಂದ ಸಂಪಾದಿಸಿ ಹೊರಡಿಸುತ್ತಿದ್ದ `ರೈತ’ ಪತ್ರಿಕೆಯಲ್ಲಿ 1948ರ ಆಗಸ್ಟ್ 15ರಿಂದ 1950ರ ಜೂನ್ 9ರ ವರೆಗೆ ಹೈದರಾಬಾದ್ ಸಂಸ್ಥಾನಕ್ಕೆ ಸಂಬಂಧಿಸಿ ಪ್ರಕಟಿಸಿದ ಸುದ್ದಿಗಳನ್ನು ಆರಿಸಿದ್ದಾರೆ.
ಮುಂಬೈಯಿಂದ ಪ್ರಕಟವಾಗುತ್ತಿದ್ದ `ದಿ ಬಾಂಬೆ ಕ್ರಾನಿಕಲ್’ ಪತ್ರಿಕೆಯಲ್ಲಿ (ಸಂಪಾದಕರು: ಸೈಯದ್ ಅಬ್ದುಲ್ಲಾ ಬ್ರೇಲ್ವಿ) ದಾಖಲಿಸಿದ ಹೈದರಾಬಾದ ಸಂಸ್ಥಾನಕ್ಕೆ ಸಂಬಂಧಿಸಿದ ಇಂಗ್ಲಿಷ್ ವರದಿಗಳು ಮೂಲರೂಪದಲ್ಲಿ ಸಂಕಲಿತವಾಗಿವೆ. ಕೊನೆಯ ಭಾಗದಲ್ಲಿ ಹುಬ್ಬಳ್ಳಿಯಿಂದ ಹ.ರಾ.ದೇಶಪಾಂಡೆ ಅವರು ಸಂಪಾದಕರಾಗಿದ್ದ `ಕರ್ಮವೀರ ಪತ್ರಿಕೆ’ಯಲ್ಲಿ ಪ್ರಕಟವಾಗಿದ್ದ ವರದಿ, ಲೇಖನ, ಸಂಪಾದಕೀಯ ಬರಹಗಳನ್ನು ಸಂಕಲಿಸಿದ್ದಾರೆ. ಕಲ್ಯಾಣ ಕರ್ನಾಟಕದ ಆಧುನಿಕ ಇತಿಹಾಸದ ಅಧ್ಯಯನದಲ್ಲಿ ಇವೆಲ್ಲ ಪ್ರಮುಖ ಅಂಶಗಳೆನಿಸುತ್ತವೆ.
ಹೈದರಾಬಾದ ಸಂಸ್ಥಾನ ಮೊಘಲರ ಆಡಳಿತದ ವಿಸ್ತರಣೆಯಾಗಿ ಅಸ್ತಿತ್ವಕ್ಕೆ ಬಂದ ಆಡಳಿತ ಪ್ರದೇಶ. ಮೊಘಲ ಸಾಮ್ರಾಜ್ಯದ ದಕ್ಷಿಣ ಭಾಗವನ್ನು ನೋಡಿಕೊಳ್ಳಲು ಅಧಿಕಾರಿಯಾಗಿ ನೇಮಕಗೊಂಡವನು ನಿಜಾಮ್ ಉಲ್ ಮುಲ್ಕ್ ಫತೇಜಂಗ ಎಂಬಾತ. ಕ್ರಿ.ಶ. 1713ರಲ್ಲಿ ದಖ್ಖನ್ ಪ್ರಾಂತ್ಯದ ಸುಬೇದಾರನಾಗಿ ಅವನನ್ನು ನೇಮಿಸಲಾಯಿತು. ಔರಂಗಜೇಬನ (ಜನನ 31, ಜುಲೈ 1658- ಮರಣ 3ನೇ ಮಾರ್ಚ್ 1707) ನಂತರದ ಹಲವು ಬಾದಷಾಹರಲ್ಲಿ ಮಹ್ಮದ್ ಷಾ ಬಹಾದೂರ್ ಎಂಬಾತ (ಜನನ 29 ಏಪ್ರಿಲ್ 1748- ಮರಣ 2ನೇ ಜೂನ್ 1754) ಸುಬೇದಾರ ನಿಜಾಮ್ ಉಲ್ ಮುಲ್ಕ್ ಫತೇಜಂಗನಿಗೆ `ಅಸಫ್ ಜಹ’ ಎಂಬ ಬಿರುದನ್ನು ನೀಡಿದನು. ಇವನ ಮೊದಲ ಆಡಳಿತ ಕೇಂದ್ರ ಔರಂಗಾಬಾದ್ ಆಗಿತ್ತು. ಮುಂದೆ ಹೈದರಾಬಾದ ರಾಜಧಾನಿಯಾಯಿತು.
ಔರಂಗಜೇಬನ ನಂತರ ಮೊಘಲರ ಸಾಮ್ರಾಜ್ಯದ ಹಿಡಿತ ದುರ್ಬಲವಾಗುತ್ತಾ ಸಾಗುತ್ತಿದ್ದಂತೆ ಸುಬೇದಾರರು ಆಡಳಿತದಲ್ಲಿ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು. ಅದರಂತೆ ಈ `ಅಸಫಜಹಿ’ ನಿಜಾಮ್ ವಂಶಸ್ಥರು ಹೈದರಾಬಾದ ಸಂಸ್ಥಾನವನ್ನು ಹಿಡಿತದಲ್ಲಿ ಇಟ್ಟುಕೊಂಡರು. ಹದಿನಾರು ಜಿಲ್ಲೆಗಳು ಸಂಸ್ಥಾನದ ವ್ಯಾಪ್ತಿಗೆ ಒಳಪಟ್ಟವು. ನಿಜಾಮರು ಸ್ವತಂತ್ರ ಆಡಳಿತ ನಡೆಸುತ್ತಿದ್ದರೂ ಬ್ರಿಟಿಷ್ ಸಾಮ್ರಾಜ್ಯಷಾಹಿಗೆ ಅಧೀನವಾದರು. ನಾಲ್ಕನೇ ಮೈಸೂರು ಯುದ್ಧದಲ್ಲಿ (1799) ಟಿಪ್ಪು ಸುಲ್ತಾನನ ವಿರುದ್ಧ ಬ್ರಿಟಿಷರಿಗೆ ನೆರವಾಗಿದ್ದ ನಿಜಾಮರಿಗೆ ಟಿಪ್ಪು ಪತನಾ ನಂತರ ಬ್ರಿಟಿಷರೊಂದಿಗೆ ಮಾಡಿಕೊಂಡ ಒಪ್ಪಂದದಂತೆ 1800ರಲ್ಲಿ ಬೀದರ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳು ಸೇರಿದವು.
ನಿಜಾಮ್ ಉಲ್ ಮುಲ್ಕ್ ಫತೇಜಂಗನ ನಂತರ ಒಟ್ಟು ಆರು ಮಂದಿ `ಅಸಫಜಹಿ’ಗಳು ನಿಜಾಮ ಮನೆತನದಲ್ಲಿ ಆಡಳಿತ ನಡೆಸಿದ್ದಾರೆ. 1911ರಲ್ಲಿ ಅಧಿಕಾರಕ್ಕೆ ಬಂದವನು ನವಾಬ್ ಮೀರ್ ಉಸ್ಮಾನ್ ಅಲಿಖಾನ್ ಬಹದ್ದೂರ. ಈತ ನಿಜಾಮರ ಏಳನೆಯ ದೊರೆ. ಈತನ ಆಳ್ವಿಕೆಯ ಕಾಲದಲ್ಲಿ ನಡೆದ ವಿದ್ಯಮಾನಗಳನ್ನು ಅಂದಿನ ಪತ್ರಿಕೆಗಳು ವರದಿ ಮಾಡಿರುವುದನ್ನು ಈ ಸಂಕಲನ ದಾಖಲಿಸಿದೆ.
`ನಿಜಾಮ ಹೈದರಾಬಾದಿನಲ್ಲಿ ಕೊಲೆ ಪಾತಕಿಗಳಿಗೆ ಬಹುತೇಕವಾಗಿ ಆಜನ್ಮ ಶಿಕ್ಷೆ ವಿಧಿಸುವರು. ಆದರೆ ಚಂದ್ರಿಗನೆಂಬ ನಾವಲಿಗನು ಕತ್ತಿಯಿಂದ ಒಬ್ಬನನ್ನು ಭಯಂಕರ ಘಾಸಿಪಡಿಸಿ ಕೊಂದದ್ದರಿಂದ ಈತನ ತಲೆ ಹೊಡೆಸಿದರು. ಅಲ್ಲಿ ಕಂಬಕ್ಕೆ ತೂಕು ಹಾಕಿ ಕೊಲ್ಲುವ ಪದ್ಧತಿ ಇಲ್ಲ’ ಎಂದು ಮಾಡಿರುವ ವರದಿ ಇಪ್ಪತ್ತನೆಯ ಶತಮಾನದ ಮೂರನೆಯ ದಶಕದಲ್ಲಿ ಹೈದರಾಬಾದ ಸಂಸ್ಥಾನದಲ್ಲಿ ಗಲ್ಲು ಶಿಕ್ಷೆಗೆ ಬದಲಾಗಿ ತಲೆ ಹೊಡೆಸುವ (ಕಡಿದು) ಶಿರಚ್ಛೇದ ಪದ್ಧತಿಯನ್ನು ಅನುಸರಿಸುತ್ತಿತ್ತು ಎಂಬುದನ್ನು ದಾಖಲಿಸಿದೆ (1926ರ ಮಾರ್ಚ್ 12ರ ವಿಜಯ ಪತ್ರಿಕೆ).
ಇಪ್ಪತ್ತನೆಯ ಶತಮಾನದ ಮೂರನೇ ದಶಕದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದು, ಹೈದರಾಬಾದ ಸಂಸ್ಥಾನ ಭಾರತ ಒಕ್ಕೂಟದೊಂದಿಗೆ ಸೇರಿಕೊಳ್ಳುವವರೆಗಿನ ಬಗೆಬಗೆಯ ಬೆಳವಣಿಗೆಗಳು ಈ ಪತ್ರಿಕಾ ವರದಿಗಳಲ್ಲಿವೆ. ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಸಂಸ್ಥಾನಕ್ಕೆ ಉಚಿತವಾಗಿ ಸಂಸ್ಥಾನದ ಕಡೆಯಿಂದ ನೀಡಿದ ಎರಡು ಕೋಟಿ ರೂಪಾಯಿ ಹಣದ ಬಗ್ಗೆ ವ್ಯಂಗ್ಯದಿಂದ ಕೂಡಿದ ಟಿಪ್ಪಣಿಯೊಂದಿದೆ. ಸರ್ಕಾರದ ಆದೇಶವೊಂದರ ಕಾರಣ ಏಳು ಸಾವಿರ ಶಾಲೆಗಳು ಬಂದ್ ಆಗಿ ಎಪ್ಪತ್ತಾರು ಸಾವಿರ ವಿದ್ಯಾರ್ಥಿಗಳು ಶಾಲೆ ಇಲ್ಲದವರಾಗುವ ವರದಿಯೂ ಎದ್ದು ಕಾಣುತ್ತದೆ.
ಹೈದರಾಬಾದ ಸಂಸ್ಥಾನದ ರಾಜಕೀಯ ಬೆಳವಣಿಗೆಗಳು, ಅವುಗಳಿಗೆ ಜನತೆಯ ಪ್ರತಿಕ್ರಿಯೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ಸಿನ ಚಟುವಟಿಕೆಗಳನ್ನು `ವಿಜಯ ಪತ್ರಿಕೆ’ ವಿವರವಾಗಿ ನೀಡಿದೆ. ಸಂಸ್ಥಾನದ ಆಡಳಿತಕ್ಕೆ ಸಂಬಂಧಿಸಿದ ವಿವರಗಳು ಕುತೂಹಲಕಾರಿಯಾಗಿವೆ. ಸರ್ಕಾರದಲ್ಲಿ ಬದಲಾವಣೆಗಳು, ಮಂತ್ರಿ ಮಂಡಲದ ಸ್ವರೂಪ, ನಿಜಾಮನ ದರಬಾರು, ಬ್ರಿಟಿಷ್ ಸರ್ಕಾರದೊಡನೆ ಹೊಂದಿದ್ದ ಸಂಬಂಧಗಳು, ಅವುಗಳಿಗೆ ಪೂರಕವಾದ ಪತ್ರವ್ಯವಹಾರ ಇತ್ಯಾದಿ ವಿವರಗಳು ಈ ವರದಿಗಳಲ್ಲಿದ್ದು ಆಸಕ್ತರಿಗೆ ಕುತೂಹಲ ಮೂಡಿಸುತ್ತವೆ. ಇತಿಹಾಸವನ್ನು ಮರುರೂಪಿಸುವ ಚಿಂತನೆಗೆ ಅಂದಿನ ಪತ್ರಿಕೆಗಳ ವರದಿಗಳು ವಿಶೇಷ ನೆರವು ನೀಡಬಲ್ಲವು. `ರೈತ’ ಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿಗಳು ಹೈದರಾಬಾದ ಸಂಸ್ಥಾನದಲ್ಲಿ ಅಂದು ನಡೆಯುತ್ತಿದ್ದ ಎಲ್ಲ ಬಗೆಯ ಬೆಳವಣಿಗೆಗಳ ವಸ್ತುನಿಷ್ಠ ದಾಖಲೆಯಾಗಿವೆ.
ಭಾರತ ಸ್ವಾತಂತ್ರ್ಯದ ಹೋರಾಟ ಬ್ರಿಟಿಷರ ಆಳ್ವಿಕೆಯನ್ನು 1947ರ ಆಗಸ್ಟ್ 15ರಂದು ಯೂನಿಯನ್ ಜಾಕ್ ಧ್ವಜವನ್ನು ಇಳಿಸಿ ಅಲ್ಲಿ ಸ್ವತಂತ್ರ ಭಾರತದ ಧ್ವಜವನ್ನು ಏರಿಸಿದಾಗ ಅಂತ್ಯವಾಗಲಿಲ್ಲ. ಕೋಲ್ಕತ್ತ, ಮದ್ರಾಸ್, ದೆಹಲಿ, ಮುಂಬೈ ಕೇಂದ್ರವಾಗಿದ್ದ ಆಡಳಿತ ಪ್ರದೇಶಗಳು ಬ್ರಿಟಿಷ್ ಚಕ್ರಾಧಿಪತ್ಯದ ನೇರ ಆಡಳಿತಕ್ಕೆ ಒಳಪಟ್ಟಿದ್ದವು. ಮೈಸೂರು, ಹೈದರಾಬಾದ್, ಜುನಾಗಡ, ತಿರುವಾಂಕೂರು, ಕೊಚ್ಚಿಯಂಥ ನೂರಾರು ಸಂಸ್ಥಾನಗಳು ಬ್ರಿಟಿಷ್ ರೆಸಿಡೆಂಟರ ಮೇಲುಸ್ತುವಾರಿಯಲ್ಲಿದ್ದರೂ ಸ್ವತಂತ್ರ ಸಂಸ್ಥಾನಗಳಂತೆ ಕಾರ್ಯನಿರ್ವಹಿಸುತ್ತಿದ್ದವು. ಗವರ್ನರ್ ಜನರಲ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಜೊತೆ ಹಸ್ತಾಂತರದ ರಾಜತಾಂತ್ರಿಕ ಮಾತುಕತೆಯನ್ನು ನಡೆಸಿ ಅಧಿಕಾರ ತ್ಯಜಿಸಿದ ನಂತರ ಇಲ್ಲಿರುವ ಎಲ್ಲ ದೇಶೀಯ ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಿಕೊಳ್ಳುವ ಗುರುತರ ಜವಾಬ್ದಾರಿ ಸ್ವತಂತ್ರ ಭಾರತ ಸರ್ಕಾರದ್ದಾಗಿತ್ತು. ಪ್ರತಿ ರಾಜ್ಯದಲ್ಲಿ ಹತ್ತು, ಇಪ್ಪತ್ತು, ಮೂವತ್ತು ಸಣ್ಣಪುಟ್ಟ ಸಂಸ್ಥಾನಗಳು, ಅವುಗಳನ್ನು ಆಳುತ್ತಿದ್ದ ರಾಜಮನೆತನಗಳು, ಅವರು ಮಾಡಿಕೊಂಡ ಪ್ರತ್ಯೇಕ ಆಸ್ತಿಪಾಸ್ತಿಗಳ ನಿರ್ವಹಣೆ, ಅವರಿಗೆ ಬ್ರಿಟಿಷ್ ಸರ್ಕಾರ ನೀಡಿದ್ದ ಬಿರುದುಗಳನ್ನು ಸಂರಕ್ಷಿಸಿ ಅವರೆಲ್ಲರನ್ನು ಭಾರತ ಸರ್ಕಾರದ ಆಳ್ವಿಕೆಗೆ ಒಳಪಡುವಂತೆ ಒಪ್ಪಿಸುವ ಕೆಲಸ ಸುಲಭದ್ದಾಗಿರಲಿಲ್ಲ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದರೂ 1950ರ ವರೆಗೆ 565 ಸಂಸ್ಥಾನಗಳ ಒಳಗೆ ರಾಜರ, ಸುಲ್ತಾನರ ಆಳ್ವಿಕೆಯೇ ಮುಂದುವರಿದಿತ್ತು. ಉಪಪ್ರಧಾನಿಯಾಗಿ ಒಳಾಡಳಿತ (ಗೃಹ) ಖಾತೆಯನ್ನು ಹೊಂದಿದ್ದ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರು ಎಲ್ಲ ಸಂಸ್ಥಾನಗಳನ್ನು ಭಾರತದೊಂದಿಗೆ ವಿಲೀನಗೊಳಿಸಲು ಸಾಮ, ದಾನ, ಭೇದ, ದಂಡದಂತಹ ರಾಜತಾಂತ್ರಿಕ ಮಾರ್ಗಗಳನ್ನೂ ಅನುಸರಿಸಬೇಕಾಯಿತು. ಹೈದರಾಬಾದ್ ನಿಜಾಮನನ್ನು ಭಾರತ ಒಕ್ಕೂಟದಲ್ಲಿ ಸೇರಿಸಿಕೊಳ್ಳಲು ಹತ್ತು ದಿನಗಳಷ್ಟು ಕಾಲ ಸೇನೆಯ ಕಾರ್ಯಾಚರಣೆಯನ್ನು ಕೈಗೊಳ್ಳಬೇಕಾಯಿತು.
ಭಾರತ ಸರ್ಕಾರ (ಪತ್ರಿಕೆಗಳಲ್ಲಿ ಹಿಂದಿ ಸರ್ಕಾರ ಎಂದು ಕೆಲವು ಕಡೆ ಉಲ್ಲೇಖಿಸಲಾಗಿದೆ) ಹೈದರಾಬಾದ ಸಂಸ್ಥಾನದ ಮೇಲೆ ನಡೆಸಿದ ಸೈನಿಕ ಕಾರ್ಯಾಚರಣೆಯ ಮಹತ್ವದ ವಿವರಗಳನ್ನು ಈ ಪತ್ರಿಕೆಗಳು ದಾಖಲಿಸಿವೆ. ಇದಕ್ಕೆ ಮೊದಲು ಹೈದರಾಬಾದ ನಿಜಾಮ ತನ್ನ ಸಂಸ್ಥಾನವನ್ನು ಪ್ರತ್ಯೇಕವಾಗಿ ಉಳಿಸಿಕೊಳ್ಳಲು ಬ್ರಿಟಿಷ್ ಸರ್ಕಾರದ ಜೊತೆ ನಡೆಸಿದ್ದ ಅನೇಕ ಬಗೆಯ ಪತ್ರವ್ಯವಹಾರಗಳ ವಿವರಗಳನ್ನು `ದಿ ಬಾಂಬೆ ಕ್ರಾನಿಕಲ್’ ವಿಸ್ತಾರವಾಗಿ ಪ್ರಕಟಿಸಿದ್ದನ್ನು ಇಲ್ಲಿ ಸೇರಿಸಲಾಗಿದೆ. ಈ ವಿವರಗಳು ತುಂಬ ಕುತೂಹಲಕಾರಿಯಾಗಿವೆ.
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹೈದರಾಬಾದ ಸಂಸ್ಥಾನದಲ್ಲಿ ಸರ್ಕಾರದ ಬೆಂಬಲ ಪಡೆದಿದ್ದ ರಜಾಕಾರರೆಂಬ ದುಷ್ಟರ ಪಡೆ ಜನರ ಮೇಲೆ ನಡೆಸುತ್ತಿದ್ದ ಹಲವು ಬಗೆಯ ದೌರ್ಜನ್ಯಗಳ ವಿವರಗಳು ಅನಾಗರಿಕ, ಅಮಾನವೀಯ, ಪೈಶಾಚಿಕ ವರ್ತನೆಗೆ ಸಾಕ್ಷಿಯಂತಿವೆ.
ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದ ಕಾಲದಲ್ಲಿ ಕನ್ನಡ ಭಾಷಿಕರು ಒಂದು ಆಡಳಿತದ ವ್ಯಾಪ್ತಿಗೆ ಸೇರಿಕೊಳ್ಳಬೇಕೆಂಬ ಏಕೀಕರಣ ಸಂಬಂಧದ ಹೋರಾಟ, ಕನ್ನಡದ ಅಸ್ತಿತ್ವ ಉಳಿಸಿಕೊಳ್ಳಲು ಮಾಡಬೇಕಿದ್ದ ಕಸರತ್ತುಗಳು ಆ ದಿನಗಳಲ್ಲಿ ನಡೆದವು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಮ್ಮೇಳನಗಳು, ಅವುಗಳಲ್ಲಿ ಭಾಗವಹಿಸಿದ ವಿದ್ವಾಂಸರ ಭಾಷಣಗಳ ವರದಿಗಳು ಚರಿತ್ರೆಯ ಉಪಯುಕ್ತ ಆಕರಗಳಾಗಿವೆ.
ಹೈದರಾಬಾದ ಸಂಸ್ಥಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಲೆ ಹಾಕುವ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ಚಟುವಟಿಕೆಗಳು, ಕನ್ನಡಿಗರ ದುರವಸ್ಥೆಯನ್ನು ಬಿಂಬಿಸುವ ಘಟನೆಗಳು, ಕನ್ನಡಿಗರೆಲ್ಲ ಒಂದು ಪ್ರದೇಶದ ವ್ಯಾಪ್ತಿಯಲ್ಲಿ ಸೇರಿಕೊಳ್ಳಬೇಕೆಂಬ ಒತ್ತಾಸೆಯ ಅಂಶಗಳನ್ನು ಕಲೆ ಹಾಕಲಾಗಿದೆ. ಇದು ಸಂಗ್ರಹದ ಮೌಲ್ಯವನ್ನು ಹೆಚ್ಚಿಸಿದೆ.
ಅಭಿವೃದ್ಧಿಯ ದೃಷ್ಟಿಯಿಂದ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ಜಾಗೃತಿ ಮೂಡುತ್ತಿರುವ ಈ ಸಂದರ್ಭದಲ್ಲಿ ಕೆಲವೇ ದಶಕಗಳ ಹಿಂದೆ ದೇಶದ ಪ್ರಮುಖ ಆಡಳಿತ ಪ್ರದೇಶಗಳಲ್ಲಿ ಒಂದಾಗಿದ್ದ ಹೈದರಾಬಾದ ಸಂಸ್ಥಾನದಲ್ಲಿ ನಡೆದ ವಿದ್ಯಮಾನಗಳನ್ನು ಅರಿತುಕೊಳ್ಳುವ ದೃಷ್ಟಿಯಿಂದ `ಹೈದರಾಬಾದ ಸಂಸ್ಥಾನ; ಸಮಕಾಲೀನ ದಾಖಲೆಗಳು’ ಕೃತಿ ಅರ್ಥಪೂರ್ಣ ಪರಾಮರ್ಶನ ಗ್ರಂಥವಾಗಿದೆ. ಇತಿಹಾಸದ ವಿದ್ಯಾರ್ಥಿಗಳು ಮಾತ್ರವಲ್ಲದೆ ಸಾಹಿತ್ಯದ ಅಭಿರುಚಿ ಇರುವ ಶ್ರೀಸಾಮಾನ್ಯರೂ ಆಸಕ್ತಿಯಿಂದ ಓದಬಹುದಾದ ಕುತೂಹಲದ, ಸ್ವಾರಸ್ಯಕರವಾದ, ಸಮೃದ್ಧ ಆಕರ ಸಾಮಗ್ರಿ ಇಲ್ಲಿದೆ. ಪರಿಶ್ರಮದಿಂದ ಈ ಮಾಹಿತಿಗಳನ್ನು ಸಂಕಲಿಸಿದ ಸಂಪಾದಕರ ಪರಿಶ್ರಮ ಮೆಚ್ಚುಗೆಗೆ ಅರ್ಹವಾಗಿದೆ.
(ಸಂಪಾದಕರು: ಡಾ.ವೀರಶೆಟ್ಟಿ ಬಿ.ಗಾರಂಪಳ್ಳಿ, ಪ್ರಕಾಶಕರು: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಲಿ, ಕಲಬುರಗಿ- ಕರ್ನಾಟಕ)
ಲೇ: ಶ್ರೀ ಲಕ್ಷ್ಮಣ ಕೊಡಸೆ, ಹಿರಿಯ ನಿವೃತ್ತ ಪತ್ರಕರ್ತರು,
ಪ್ರಜಾವಾಣಿ, ಬೆಂಗಳೂರು.