ಲೆಬನಾನ್​​ನಲ್ಲಿ ವೈಮಾನಿಕ ದಾಳಿ: ಮೂವರು ಹೆಜ್ಬುಲ್ಲಾ ಹೋರಾಟಗಾರರ ಹತ್ಯೆ

Ravi Talawar
WhatsApp Group Join Now
Telegram Group Join Now

ಇಸ್ರೇಲ್ ,ಏಪ್ರಿಲ್ 17:  ದಕ್ಷಿಣ ಲೆಬನಾನ್‌ನಲ್ಲಿ ಮಂಗಳವಾರ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಕಮಾಂಡರ್‌ಗಳು ಸೇರಿದಂತೆ ಮೂವರು ಹಿಜ್ಬುಲ್ಲಾ ಹೋರಾಟಗಾರರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿದೆ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ. ರಾಡ್ವಾನ್ ಪಡೆಗಳ ಪಶ್ಚಿಮ ವಲಯದ ರಾಕೆಟ್ ಮತ್ತು ಕ್ಷಿಪಣಿಗಳ ಘಟಕದ ಕಮಾಂಡರ್ ಮುಹಮ್ಮದ್ ಹುಸೇನ್ ಶಾಹೌರಿ, ದಕ್ಷಿಣ ಲೆಬನಾನ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು IDF ಹೇಳಿದೆ ಎಂದು ವರದಿಯಾಗಿದೆ.

ಇನ್ನು ಹೆಜ್ಬುಲ್ಲಾದ ರಾಕೆಟ್ಸ್ ಮತ್ತು ಮಿಸೈಲ್ಸ್ ಘಟಕದ ಕಾರ್ಯಕರ್ತ ಮಹಮೂದ್ ಇಬ್ರಾಹಿಂ ಫದ್ಲಲ್ಲಾಹ್ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಇಸ್ರೇಲ್​ ರಕ್ಷಣಾ ಪಡೆಗಳು ತಿಳಿಸಿವೆ. ಲೆಬನಾನ್‌ನ ಐನ್ ಎಬೆಲ್ ಪ್ರದೇಶದಲ್ಲಿ ಹಿಜ್ಬುಲ್ಲಾದ ಕರಾವಳಿ ವಲಯದ ಕಮಾಂಡರ್ ಇಸ್ಮಾಯಿಲ್ ಯೂಸೆಫ್ ಬಾಜ್ ದಕ್ಷಿಣ ಲೆಬನಾನ್‌ನಲ್ಲಿನ ತನ್ನ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇದಕ್ಕೂ ಮೊದಲು ನೀಡಿದ್ದ ಹೇಳಿಕೆಯಲ್ಲಿ ಐಡಿಎಫ್​​​ ತಿಳಿಸಿದೆ ಎಂದು ಅಮೆರಿಕದ ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ. ಈ ಮಧ್ಯೆ ಹಿಜ್ಬುಲ್ಲಾ ತನ್ನ ಮೂವರು ಹೋರಾಟಗಾರರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದೆ. ಆದರೆ ಮೃತಪಟ್ಟವರ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿಲ್ಲ.

ಏತನ್ಮಧ್ಯೆ, ಇರಾನ್‌ನ ಪ್ರತೀಕಾರದ ದಾಳಿಗಳಿಗೆ ಪ್ರತ್ಯುತ್ತರ ನೀಡುವ ಸಂಬಂಧ ನಡೆದ ಉನ್ನತಮಟ್ಟದ ಅಧಿಕಾರಿಗಳ ಸಭೆ ಮುಕ್ತಾಯಗೊಂಡಿದ್ದು, ಯಾವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿಲ್ಲ ಎಂದು ವರದಿಯಾಗಿದೆ. ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಇರಾನ್ ರಾಜತಾಂತ್ರಿಕ ಕಟ್ಟಡದ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಈ ವೇಳೆ ಇರಾನ್​ ಉನ್ನತ ಮಟ್ಟದ ಮಿಲಿಟರಿ ಅಧಿಕಾರಿಗಳು ಈ ದಾಳಿಯಲ್ಲಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಶನಿವಾರ ಇರಾನ್​, ಇಸ್ರೇಲ್​ ಮೇಲೆ ದಾಳಿ ನಡೆಸಿತ್ತು. ಈ ದಾಳಿ ಬಳಿಕ ಇಸ್ರೇಲ್​ ಸರ್ಕಾರದ ಕ್ಯಾಬಿನೆಟ್​ ಹಾಗೂ ಉನ್ನತ ಅಧಿಕಾರಿಗಳ ಮಹತ್ವದ ಸಭೆ ನಡೆಸಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದೆ. ಈ ನಡುವೆ ಅಮೆರಿಕ ಸೇರಿದಂತೆ ಮಿತ್ರ ರಾಷ್ಟ್ರಗಳು ಹಾಗೂ ಅಂತಾರಾಷ್ಟ್ರೀಯ ಸಮುದಾಯ ಸಂಯಮ ಕಾಪಾಡಿಕೊಳ್ಳುವಂತೆ ಇಸ್ರೇಲ್​​ಗೆ ಕರೆ ನೀಡಿವೆ.

ಶನಿವಾರ ಇಸ್ರೇಲ್​ ಮೇಲೆ ಇರಾನ್​ 300 ಅಥವಾ ಅದಕ್ಕಿಂತ ಹೆಚ್ಚು ಡ್ರೋನ್​ ಹಾಗೂ ಕ್ಷಿಪಣಿಗಳನ್ನು ಉಡಾಯಿಸಿತ್ತು. ಈ ಬಗ್ಗೆ ಭಾನುವಾರ ಬೆಳಗ್ಗೆ ಇಸ್ರೇಲ್ ಡಿಫೆನ್ಸ್ ಫೋರ್ಸಸ್ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿಕೆ ನೀಡಿದ್ದರು. ಇರಾನ್ ರಾತ್ರಿಯಿಡೀ ಇಸ್ರೇಲ್ ಮೇಲೆ ನಡೆಸಿದ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದು, ಅವರು ಹಾರಿಸಿದ ಎಲ್ಲ ಕ್ಷಿಪಣಿಗಳಲ್ಲಿ ಶೇ 99ರಷ್ಟನ್ನು ನಮ್ಮ ಪ್ರತಿರಕ್ಷಣಾ ತಂತ್ರಜ್ಞಾನದಿಂದ ಆಕಾಶದಲ್ಲೇ ಭಸ್ಮ ಮಾಡಿದ್ದೇವೆ ಎಂದು ಹೇಳಿದ್ದರು.

WhatsApp Group Join Now
Telegram Group Join Now
Share This Article