ಮೋದಿ ಮುಖ ನೋಡಿ ವೋಟ್ ಹಾಕಬೇಡಿ: ನಟ ಪ್ರಕಾಶ್ ರೈ ಪ್ರಧಾನಿ ವಿರುದ್ಧ ವಾಗ್ದಾಳಿ

Ravi Talawar
WhatsApp Group Join Now
Telegram Group Join Now

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರೈ ಮತ್ತೆ ವಾಗ್ದಾಳಿ ನಡೆಸಿದ್ದು, ಪ್ರಗತಿ, ಅಭಿವೃದ್ಧಿ ವಿಚಾರವಾಗಿ ಸೊಲ್ಲೆತ್ತದ ಮೋದಿ, ಹಿಂದೂ-ಮುಸ್ಲಿಂ ಗಲಾಟೆ ವಿಚಾರವಾಗಿ ಮಾತ್ರ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಬೆಂಗಳೂರಿನ ಗೋಲ್ಡ್ ಫಿಂಚ್ ಹೊಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಟ ಪ್ರಕಾಶ್ ರೈ, ‘ಕಳೆದ 2 ಬಾರಿಯ ಮೋದಿ ಆಡಳಿತವನ್ನು ನೋಡಿರುವ ಜನ ಭ್ರಮನಿರಸನವಾಗಿದ್ದು, ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ. ಆದರೆ ಮೋದಿ ಮಾತ್ರ ತಮ್ಮ ಬೇಳೆಕಾಳು ಬೇಯುತ್ತಿಲ್ಲ ಎಂದು ಹಿಂದೂ-ಮುಸ್ಲಿಂ ವಿಚಾರವಾಗಿ ಮಾತನಾಡುತ್ತಾ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಇದೇ ವೇಳೆ ಭಾರತದ ಪ್ರಜಾಪ್ರಭುತ್ವದಲ್ಲಿ ಜನರು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ, ಅವರು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಪ್ರಧಾನಿ ಮುಖವನ್ನು ನೋಡಿ ಸಂಸದರ ಆಯ್ಕೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಹೀಗಾಗಗಬಾರದು.. ಪ್ರಧಾನಿ ನೋಡಿ ಸಂಸದರ ಆಯ್ಕೆ ಬೇಡ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಅಂತೆಯೇ ‘ಕಾಂಗ್ರೆಸ್ ಪಕ್ಷ ಮುಸ್ಲಿಮರ ಪರವಾಗಿದ್ದು, ಎನ್ ಡಿಎ ಮೈತ್ರಿಕೂಟ ಮಾತ್ರ ಹಿಂದೂಗಳ ಪರವಾಗಿ ನಿಂತಿದೆ ಎಂದು ಹೇಳುತ್ತಿದ್ದಾರೆ. ಆ ಮೂಲಕ ಹಿಂದೂಗಳನ್ನು ಓಲೈಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಈ ಹೇಳಿಕೆ ಬಗ್ಗೆ ಚುನಾವಣಾ ಆಯೋಗ ಮೌನವಹಿಸಿದ್ದು ನಿಜಕ್ಕೂ ನಮಗೆ ಅಚ್ಚರಿ ಮೂಡಿಸಿದೆ. ಪ್ರಧಾನಿ ಮೋದಿ ‘400 ಪಾರ್’ ಘೋಷಣೆ ಮೂಲಕ ತಮ್ಮನ್ನು ಪ್ರಶ್ನಿಸುವ ವಿರೋಧ ಪಕ್ಷಗಳೇ ಇರಬಾರದು ಎಂದು ಬಯಸುತ್ತಿದ್ದಾರೆ ಎಂದರು.

ಇದೇ ವೇಳೆ ಕೇಂದ್ರ ಸಚಿವ ಹಾಗೂ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಉದ್ಯಮಿ ರಾಜೀವ್ ಚಂದ್ರಶೇಖರ್ ವಿರುದ್ಧವೂ ಕಿಡಿಕಾರಿದ ಪ್ರಕಾಶ್ ರೈ, ‘ಕರ್ನಾಟಕದಲ್ಲಿ ಏನೂ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿ ರಾಜ್ಯಸಭೆ ಸದಸ್ಯರೊಬ್ಬರು ಈಗ ಕೇರಳದಲ್ಲಿ ಸ್ಪರ್ಧಿಸುತ್ತಿದ್ದಾರೆ ಏಕೆ..? ಕರ್ನಾಟಕದಲ್ಲಿ ಅವರ ಪಾತ್ರವೇನು.. ರಾಜೀವ್ ಚಂದ್ರಶೇಖರ್ ಉದ್ಯಮಿಯಾಗಿದ್ದೂ ತೆರಿಗೆ ವಿಚಾರದಲ್ಲಿ ಕಳ್ಳಾಟ ಆಡುತ್ತಿದ್ದರೂ ಆದಾಯ ತೆರಿಗೆ ಇಲಾಖೆ ಏಕೆ ಸುಮ್ಮನಿದೆ ಎಂದು ಪ್ರಶ್ನಿಸಿದರು.

WhatsApp Group Join Now
Telegram Group Join Now
Share This Article