ಬಸವ ಜಯಂತಿ ಪ್ರಯುಕ್ತ ವಿಶೇಷ ಲೇಖನ : ಮಾನವೀಯ ಮೌಲ್ಯಗಳ ಹರಿಕಾರರು ಬಸವಣ್ಣ

Ravi Talawar
WhatsApp Group Join Now
Telegram Group Join Now
ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮೌಲ್ಯಾಧಾರಿತ ದಾರ್ಶನಿಕ, ಮದ್ಯಯುಗದ ಸಾಮಾಜಿಕ ಕ್ರಾಂತಿಯ ಹರಿಕಾರ. ಭಕ್ತಿ ಮತ್ತು ಅರಿವುಗಳನ್ನು ಪ್ರತಿಪಾದಿಸಿ ಜನಸಾಮಾನ್ಯರ ಭಾಷೆಯಲ್ಲೇ ಪ್ರಬಲ ಮತ್ತು ವೈಚಾರಿಕವಾಗಿರುವ ತತ್ವಗಳನ್ನು ಬಿತ್ತಿದ ಕಾರುಣಿಕ ಮಹಾಪುರುಷ. ಒಬ್ಬ  ಸಮಾಜವಾದಿ, ಪ್ರಜಾವಾದಿ, ಸಾಮಾಜಿಕ ನ್ಯಾಯ ಪರಿಪಾಲಕ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ ವಿಶ್ವದ ಶ್ರೇಯೋಅಭಿವೃದ್ದಿಗಾಗಿ ಹಗಲಿರುಳು ದುಡಿದ ವಿಶ್ವ ಚೇತನರಾಗಿ, ಜಾತಿ ವ್ಯವಸ್ಥೆಯ ವಿರುದ್ಧ ಹಾಗೂ ಮೂಢನಂಬಿಕೆ, ಸಾಮಾಜಿಕ ತಾರತಮ್ಯದ ವಿರುದ್ಧ ಸದಾ ದ್ವನಿಯೇತ್ತಿ ಜನಪರವಾದ ಕಾಯಕ ಸೇವೆ ಮಾಡಿದ್ದ ವಿಶ್ವ ಪ್ರಜಾಪ್ರಭುತ್ವದ ಪಿತಾಮಹ ಅಣ್ಣ ಬಸವಣ್ಣ.
ಬಸವಣ್ಣ ಮ್ಯಾಗ್ನಕಾರ್ಟ್‌ ಒಪ್ಪಂದಕ್ಕಿಂತ ಅರ್ಧ ಶತಮಾನದ ಹಿಂದೆಯೇ ಕಲ್ಯಾಣದಲ್ಲಿ ಅನುಭವ ಮಂಟಪವೆಂಬ ವಿಶ್ವಮಾನ್ಯ ಪ್ರಜಾಪ್ರಭುತ್ವದ ಕಲ್ಪನೆಯಾದ ಸಂಸತ್ತ ಭವನವನ್ನು ನಿರ್ಮಿಸಿ,ಜಾಗತಿಕ ಲೋಕಕ್ಕೆ ಸಮತಾವಾದ ಸಮಾನತೆಯ ಸಂದೇಶವನ್ನು ಸಾರುವ, ಎತ್ತಿ ಹಿಡಿಯುವ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದಾರೆ. ಮಾಡಿದ ಪ್ರತಿಫಲದಿಂದಲೇ ಇಂದು ಜಾಗತಿಕ ಸಮುದಾಯ ಅವರನ್ನು ಸದಾ ಸ್ಮರಣೆ ಮಾಡಿಕೊಳ್ಳುತ್ತದೆ.ತರುವಾಯ ವಚನ ಸಾಹಿತ್ಯ ಅನುಭಾವದ ಬುತ್ತಿ ಲೋಕ ಕಲ್ಯಾಣಕ್ಕೆ ಸದ್ಬಳಕೆ ಯಾಗುತ್ತಿದೆ.
ಹಾಗಾಗಿ ಬಸವಣ್ಣನವರು ಅಂದು ಕಲ್ಯಾಣದಲ್ಲಿ ಮಾಡಿದ ಎಲ್ಲಾ ಪ್ರಜಾಪ್ರಭುತ್ವ ಪ್ರಯೋಗಗಳಲ್ಲಿ ಬಹಳಷ್ಟು ಪ್ರಯೋಗಗಳು ಜಗತ್ತಿನಲ್ಲಿ ನಡೆದ ಮೊದಲ ಪ್ರಯೋಗಗಳೇ ಆಗಿವೆ. ಎಲ್ಲದಕ್ಕೂ ಸಮಾಜ ಮುಖಿ ಸೇವೆಗಳ ಕಾರ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದರು. ರಾಜ್ಯಸಿಂಹಾಸನವನ್ನು ಅವರು ಕೆಣಕಲಿಲ್ಲ.
ಆದರೆ ಶೂನ್ಯಸಿಂಹಾಸನ ಸೃಷ್ಟಿಸಿ ಪ್ರಜಾಪ್ರಭುತ್ವದ ಕನಸು ಬಿತ್ತಿದರು. ಅವರ ಅನುಭವ ಮಂಟಪದ ಅಮರಗಣಂಗಳಲ್ಲಿ ಎಲ್ಲಾ ಜಾತಿ ಜನಾಂಗದವರಿದ್ದರು. ಮಹಿಳೆಯರಿದ್ದರು. ಅವರೆಲ್ಲ ಆ ಅನುಭವ ಮಂಟಪ ಎಂಬ ಸಮಜೋ ಧಾರ್ಮಿಕ ಸಂಸತ್ತಿನ ಸದಸ್ಯರಾಗಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯ ಪಡೆದವರಾಗಿದ್ದರು. ಹೀಗೆ ಸ್ವತಂತ್ರ ಸರ್ವಸಮಾನತೆಯ ವಿಚಾರಧಾರೆಯನ್ನು ಜಗತ್ತಿನಲ್ಲಿ ಪಸರಿಸಿದವರಲ್ಲಿ ಬಸವಣ್ಣನವರು ಪ್ರಥಮರು, ಅವರು ಪ್ರಾರಂಭಿಸಿದ ಚಳವಳಿಯಿಂದಾಗಿ ಮಹಿಳೆಯರು ಮತ್ತು ಅಸ್ಪೃಶ್ಯರು ಕೂಡ ಶರಣರಾದರು. ಅಕ್ಷರ ಕಲಿತರು, ಕಲಿಯುವ ಮೂಲಕ ವಯಸ್ಕರ ಶಿಕ್ಷಣ ಕಲ್ಯಾಣದ ನಾಡಿನಲ್ಲಿ ಆರಂಭವಾಯಿತು. ಆರಂಭವಾಗಿದ್ದು ಐತಿಹಾಸಿಕ. ಯಾಕೆಂದರೆ 21 ನೇ ಶತಮಾನದ ಈಗಿನ ಕಾಲಘಟ್ಟದಲ್ಲಿ ಎಲ್ಲಾ ಸರಕಾರಗಳು ಕೋಟಿಗಟ್ಟಲೆ ಹಣ ಸುರಿದರೂ ಸಹ ಇಂದಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗುತ್ತಿಲ್ಲ. ಅಂದ ಮೇಲೆ 12ನೇ ಶತಮಾನದಲ್ಲಿ ಅವಿಧ್ಯಾವಂತರನ್ನು ವಿಧ್ಯಾವಂತರನ್ನಾಗಿ ಮಾಡಿ, ಶಿಕ್ಷಣ ಕಲಿಸಿ, ವಚನಗಳನ್ನು ರಚನೆ ಮಾಡುವಂತೆ ಪ್ರೋತ್ಸಾಹ ಮಾಡಿರುವುದು ಸಣ್ಣ ಕೆಲಸವಲ್ಲ. ಅದಕ್ಕಾಗಿಯೇ ಬಸವಾದಿ ಶರಣರ ವಚನ ಸಾಹಿತ್ಯವು  ವಿಶ್ವ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ಈ ಕಾರಣಕ್ಕಾಗಿವಚನ ಸಾಹಿತ್ಯವೂ ಸರ್ವರಿಗೂ ಸಮಬಾಳು, ಸಮಪಾಲು ತತ್ವ ನೀಡುತ್ತದೆ. ಸರ್ವರ ಬಾಳು ಬೆಳಗಿಸುವುದು  ಸಮಾನತೆಯ ಸಮಾಜ ನಿರ್ಮಾಣವೇ ವಚನ ಸಾಹಿತ್ಯದ ಪ್ರಮುಖ ಉದ್ದೇಶ ತತ್ವವಾಗಿದೆ. ಹೀಗೆ ವಚನ ಸಾಹಿತ್ಯ ಅಂದಿನ ಸಮಾಜದ ಜನಮಾನಸದಲ್ಲಿ ಬೇರೂರಿದ್ದ ಮೂಢನಂಬಿಕೆ, ಕಂದಾಚಾರಗಳನ್ನು ಖಂಡಿಸಿ ಸುಜ್ಞಾನವನ್ನು ಬಿತ್ತಿ ಸದಾಚಾರದ ಬೆಳೆತೆಗೆಯುವ ಸ್ವಭಾವದವು ಆಗಿದ್ದವು.  ವಚನಗಳು ಓದುಗರಿಗೆ ಬೇವಿನಂತೆ ಕಹಿಯೆನಿಸಿದರೂ ಅವುಗಳನ್ನು ಆಚರಣೆಗೆ ತಂದಾಗ ಬೆಲ್ಲದಂತೆ ಸಿಹಿಯಾಗುವುದನ್ನು ಕಾಣುತ್ತೇವೆ. ಇನ್ನು ಕೆಲವು ವಚನಗಳು ಶರಣರು ಸಾಧಿಸಿದ ಆಧ್ಯಾತ್ಮಿಕ ಸಾಧನೆಯ ಶಿಖರದ ಕನ್ನಡಿಗಳಾಗಿವೆ,  ವಚನಗಳನ್ನು ಓದುತ್ತಿದ್ದರೆ ಶರಣರು ನಿಂತ ನೆಲೆ ಏರಿದ ಎತ್ತರ ಅನುಭಾವದ ಆಳ ನಮ್ಮ ಅರಿವಿಗೆ ಬರುತ್ತಾ ಹೋಗುತ್ತದೆ.
ಬಸವಣ್ಣನವರು ವಿಶ್ವಗುರುವಾಗಿ, ತನ್ನ ಅನುಭವ ಮಂಟಪದ ಮೂಲಕ ಸಮಾನ ಮನಸ್ಕ ಚಿಂತಕರನ್ನು ಕಲ್ಯಾಣ ನಾಡಿಗೆ ಬರಮಾಡಿಕೊಂಡಿರುವುದು. ಆ ಮೂಲಕ ಕಲ್ಯಾಣ ಪ್ರಾಂತ್ಯವು ವೈಚಾರಿಕ ಕ್ರಾಂತಿಯ ಕೇಂದ್ರಬಿಂದುವಾಯಿತು. ಈ ಪ್ರಾಂತ್ಯವು ಅಕ್ಕ ಮಹಾದೇವಿ, ಮಹಾನ್ ಯೋಗಿ ಅಲ್ಲಮ ಪ್ರಭು, ಶರಣ ಸಿದ್ಧರಾಮೇಶ್ವರ,ಚನ್ನಬಸವಣ್ಣ, ಅಕ್ಕಮಹಾದೇವಿ, ಮಾದಾರ ಚನ್ನಯ್ಯ,ಡೋಹರ ಕಕ್ಕಯ್ಯ,ಮಡಿವಾಳ ಮಾಚಿದೇವ ಹಾಗೂ ಇತರ ಶಿವ-ಶರಣರ ವಚನ ಸಾಹಿತ್ಯ ಕೃಷಿಗೆ ಪೂರಕವಾಯಿತು ಜೊತೆಗೆ ಸಾಮಾಜಿಕ ಚಿಂತನೆಗೆ ಕಾರಣರಾದರು.ಅಂದಹಾಗೆ ಬಸವಣ್ಣನವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಅಂದರೆ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಜನಸಾಮಾನ್ಯರಿಗೆ ಮುಕ್ತವಾಗಿ ಸೀಗಬೇಕೆಂಬ ನಿಲುವೆ ಅವರದಾಗಿತ್ತು. ಕಾಯಕ ನಿಷ್ಠೆ, ಮಾನವೀಯತೆಯ ಮೌಲ್ಯಗಳು ಸರ್ವ ಜನಾಂಗದ ದ್ವನಿಯಾಗಬೇಕೆಂದು ಬಯಸಿದರು.
ಅಂತಲೇ ಅವರು ನಂಬಿದ ಸಪ್ತಪದಿಯ ಸೂತ್ರಗಳಂತೆ  ನಡೆದವರು ಹಾಗೆ ಧಾರ್ಮಿಕ, ಸಮಾಜಿಕ(ಪ್ರಜಾಪ್ರಭುತ್ವದ ಸಂಸತ್ತು ) ಕಾರ್ಯಗಳ ಸೇವೆಗಳು ಅಂದಿನ ಅನುಭವ ಮಂಟಪದ ಮೂಲಕ ಮಾಡಿದರು. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿ ಮಾನವೀಯ ಮೌಲ್ಯಗಳ ಹರಿಕಾರರಾದರು.
ಹೀಗೆ ಶರಣರೆಲ್ಲರೂ ಸೇರಿ ಆದರ್ಶ ಸಂಗವನ್ನು ಕಟ್ಟಿದರು,ವಚನ ಸಾಹಿತ್ಯವನ್ನು ಸರ್ವ ಸ್ಪರ್ಶಿ ಹಾಗೂ ಸರ್ವ ವ್ಯಾಪ್ತಿ ಮಾಡಿ,ಕಸ ಗೂಡಿಸುವ ಮುತ್ತಾಯಕ್ಕ ಸಹ ವಚನಗಳನ್ನು ಬರೆಯುವಂತೆ ಮಾಡಿ, ಪ್ರೋತ್ಸಾಹಿಸಿದ್ದು ಕಾಣುತ್ತೆವೆ.
ಅಂತೇ ಬಸವಣ್ಣನವರ ವಚನಗಳಲ್ಲಿ ವಿಶ್ವಸಂಸ್ಥೆ ಘೋಷಿಸಿದ ಎಲ್ಲಾ ಮಾನವ ಹಕ್ಕುಗಳ ವಿಚಾರಗಳೆಲ್ಲವೋ ಸೇರಿವೆ.ಸ್ಥಾವರ ಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ, ಗುಡಿಗೆ ಪರ್ಯಾಯವಾಗಿ ಅನುಭವ ಮಂಟಪ, ದಾನಕ್ಕೆ  ಸಮನಾಗಿ ದಾಸೋಹ,ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕ ಸಿದ್ಧಾಂತ, ಹೀಗೆ ಎಲ್ಲ ರೀತಿಯಿಂದಲೂ  ಬಸವಣ್ಣನವರು ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳನ್ನು ಎತ್ತಿ  ಹಿಡದಿದ್ದಾರೆ.
ಈ ಹಿಂದೆ ಫ್ರಾನ್ಸ್ ದೇಶವು 18ನೇ ಶತಮಾನದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿಯಿಂದ ಇತಿಹಾಸ ಸೃಷ್ಟಿಸಿತು ಎಂಬುದು ತಿಳಿದುಕೊಳ್ಳುತ್ತೇವೆ. ಆದರೆ ನಮ್ಮ ಬಸವಣ್ಣನವರ ಶರಣ ಸಂಸ್ಕೃತಿ ವೈಚಾರಿಕ ಕ್ರಾಂತಿಯು 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ, ಮಾನವೀಯ ಮೌಲ್ಯಗಳು, ಸೌಹಾರ್ದತೆ, ದಯೇ ಭಕ್ತಿ , ಸಾಹಿತ್ಯ, ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಮಾನತೆ ಸೇರಿದಂತೆ ಹಲವು ಅದ್ಭುತ ಚಿಂತನೆಗೆ ಮುನ್ನುಡಿ ಬರೆದು ಐತಿಹಾಸಿಕ ಮಾಹಾಕ್ರಾಂತಿಗೆ ಸಾಕ್ಷಿಯಾಗಿ ಇತಿಹಾಸದ ಪುಟ ಪುಟಗಳಲ್ಲಿ  ಹೊಸ ಇತಿಹಾಸ ಸೃಷ್ಟಿಸಿ ದಾಖಲಾಗಿ, ಅಜರಾಮರವಾಗಿಸಿದಾರೆ ಎಂಬುದು ಸಹ ಮರೆಯುವುದು ಬೇಡ. ಅದಕ್ಕಾಗಿ ಬಸವಣ್ಣನವರ ವಿಚಾರಗಳಿಗೆ ಸಂವಿಧಾನದ ಮೂಲಕ ರಾಜಾಶ್ರಯ ದೊರೆಕ್ಕಿದೆ.
ಅಂತರ್ಜಾತಿ ವಿವಾಹ, ವಿಧವಾ ವಿವಾಹ ಮತ್ತು ದೇವದಾಸಿಯರ ಮದುವೆಗಳಿಂದ ಕೂಡಿದ ಮಹಿಳಾ ವಿಮೋಚನಾ ಚಳವಳಿ, ಅಸ್ಪೃಶ್ಯತಾ ನಿವಾರಣಾ ಚಳವಳಿ, ಅಂಧತ್ವದ ವಿರುದ್ಧ ಹೋರಾಟ, ಜಾತೀಯತೆ ವಿರುದ್ಧ ಚಳವಳಿ, ಲಿಂಗಭೇದದ ವಿರುದ್ಧ ಚಳವಳಿ, ವಿವಿಧ ಕಾಯಕಜೀವಿಗಳ ಚಳವಳಿ, ವಯಸ್ಕರ ಶಿಕ್ಷಣವೂ ಸೇರಿದಂತೆ ಶೈಕ್ಷಣಿಕ ಚಳವಳಿ ಹೀಗೆ ನವಸಮಾಜಕ್ಕಾಗಿ ತುಡಿಯುವ ಎಲ್ಲ ಚಳವಳಿಗಳನ್ನೂ ವಚನಕಾರರು ಮಾಡಿದ್ದಾರೆ. ಮಾಡಿರುವ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಸಾಗಬೇಕಾಗಿದೆ.ವಿಶ್ವಸಂಸ್ಥೆಯ ಮಾನವಹಕ್ಕುಗಳು ಕೂಡ ಬಸವಪ್ರಜ್ಞೆಯಿಂದ ಹೊರತಾಗಿಲ್ಲ. ಪ್ರತಿಯೊಬ್ಬರು ಬದುಕುವ ಹಕ್ಕು, ಸ್ವತಂತ್ರವಾಗಿ ಮಾತನಾಡುವ ಹಕ್ಕು, ವರ್ಗ, ವರ್ಣ ಮತ್ತು ಲಿಂಗಭೇದ ನೀತಿಯ ವಿರುದ್ಧ ಹೋರಾಡುವ ಹಕ್ಕುಗಳು ಮಾನವಹಕ್ಕುಗಳಾಗುತ್ತವೆ.
ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಭಾಗ ತನ್ನ 30ನೇ ಅಂಶಗಳ ಕಾರ್ಯಕ್ರಮದಲ್ಲಿ ಈ ಮಾನವಹಕ್ಕುಗಳನ್ನು ಕುರಿತು ವಿವರಿಸಿದೆ. ಈ ಎಲ್ಲ ಮಾನವ ಹಕ್ಕುಗಳನ್ನು ಅದಾಗಲೇ 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ವಚನಚಳವಳಿಯ ಮೂಲಕ ಸಾಧಿಸಿ  ತೋರಿಸಿದ್ದಾರೆ. ಹೀಗೆ ಒಟ್ಟಾರೆ ಮಾನವೀಯತೆಯ ಕಲ್ಯಾಣಕ್ಕಾಗಿ ಹಾಗೂ ಸುಭದ್ರ ಸಮೃದ್ಧಿ ಸಂಪದ್ಭರಿತ ಆಡಳಿತಕ್ಕಾಗಿ ತಮ್ಮ ಇಡೀ ಜೀವನವನ್ನು ತ್ಯಾಗ ಮಾಡಿದ ಬಸವಣ್ಣನವರು.ಬಡವರ, ನೊಂದವರ, ಅನಾಥರ ,ಹಿಂದುಳಿದವರ, ದಲಿತರ, ಕಾಯಕಜೀವಿಗಳ  ಚೈತನ್ಯಸ್ಪೂರ್ತಿ
ವಿಶ್ವ ಗುರುವಾಗಿದ್ದಾರೆ .
ಈ ಮೂಲಕ ವಚನ ಸಾಹಿತ್ಯದ ತತ್ವವನ್ನು ಇನ್ನು ಹೆಚ್ಚು ಹೆಚ್ಚಾಗಿ ಜನಸಾಮಾನ್ಯರಿಗೆ ತಿಳಿಸುವ, ಪ್ರಚಾರ ಮಾಡುವ ಕಾರ್ಯ ಪ್ರತಿಯೊಬ್ಬ ಬಸವಾಭಿಮಾನಿಗಳ ಮೇಲಿದೆ. ಅಂದಾಗಲೇ ಮಾತ್ರ ನವ ಸಮಾನತೆಯ ಸಮಾಜ ನಿರ್ಮಾಣಮಾಡಲು ಸಾಧ್ಯ.
ಕೊನೆಯ ನುಡಿ : ವಚನಗಳಲ್ಲಿರುವ ಅಂಶಗಳು ಸಂವಿಧಾನದಲ್ಲಿವೆ. ಸಂವಿಧಾನದಲ್ಲಿರುವ ಎಲ್ಲಾ ಪ್ರಜಾಪ್ರಭುತ್ವ ಅಂಶಗಳು ವಚನ ಸಾಹಿತ್ಯದಲಿವೆ. ಕಾರಣ ದೇಶದ ಪ್ರಗತಿಗೆ ವಚನ ಸಾಹಿತ್ಯವು ಬಹಳಷ್ಟು ಅವಶ್ಯಕತೆ ಇದೆ.
♦ಲೇಖಕರು – ಶರಣ ಸಂಗಮೇಶ ಎನ್ ಜವಾದಿ.
ಸಾಹಿತಿ, ಪ್ರಗತಿಪರ ಚಿಂತಕ,ಸಮಾಜಿಕ ಸೇವಕರು,
ಬೀದರ ಜಿಲ್ಲೆ.
WhatsApp Group Join Now
Telegram Group Join Now
Share This Article