ಚನ್ನಮ್ಮನ ಕಿತ್ತೂರು : ಸ್ವಾತಂತ್ರ್ಯಸಂಗ್ರಾಮದ ಬೆಳ್ಳಿಚುಕ್ಕಿ ವೀರಮಾತೆ ಕಿತ್ತೂರು ರಾಣಿ ಚನ್ನಮ್ಮಾಜಿಯ ವೀರಜ್ಯೋತಿಯನ್ನು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಸಂಸದೆ ಮಂಗಲ ಅಂಗಡಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ರಾಜು ಸೇಠ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿದಂತೆ ವಿವಿಧ ಗಣ್ಯರು ವಿಜ್ರಂಭಣೆಯಿಂದ ಸೋಮವಾರ ಸ್ವಾಗತಿಸಿಕೊಂಡರು.

ವೀರಜ್ಯೋತಿ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಹರ ಹರ ಮಾಹಾದೇವ ಘೋಷಗಳು ಕೇಳಿಬರಲಾಂಭಿಸಿದವು ಅಲ್ಲದೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕಲಾತಂಡಗಳು ತಮ್ಮ ಕಲೆಯನ್ನು ಪ್ರಸ್ತುತ ಪಡಿಸಲಾರಂಭಿಸಿದವು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಕಿತ್ತೂರು ಹಾಗೂ ಮೈಸೂರು ದಸರೆಗೆ ಹೋಲಿಕೆ ಬೇಡ ಉತ್ಸವ ಆರಂಭಗೊಂಡು ಕೇವಲ 25 ವರ್ಷ ಗತಿಸಿವೆ, ಈ ಕಿತ್ತೂರು ಉತ್ಸವವನ್ನು ಸಹ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಸಲು ಪ್ರಯತ್ನಿಸುತ್ತಿದ್ದೆವೆ, ಇದನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೇಳೆಯಲು ರೂ. 3 ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ, ಇನ್ನೂ ಹಂತ ಹಂತವಾಗಿ ಬೆಳೆಸುತ್ತೇವೆ ಎಂದು ಹೇಳಿದರು.
ಕಿತ್ತೂರು ತಾಲೂಕಾದರೂ ಇನ್ನೂ ಕೆಲವು ಕಚೇರಿಗಳ ಅವಶ್ಯಕತೆ ಕಿತ್ತೂರಿಗಿದೆ ಅವುಗಳನ್ನು ತಾಲೂಕಿನಲ್ಲಿ ಆದಷ್ಟು ಬೇಗನೆ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ ಅವರು ಮುಂದಿನ ವರ್ಷದ ಉತ್ಸವಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನಿಸಿ ಉತ್ಸವದ ಉದ್ಘಾಟನೆ ಮಾಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಕಿತ್ತೂರು ಕೋಟೆಯಲ್ಲಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಸರಿಯಾದ ಮಾಸ್ಟರ್ ಪ್ಲ್ಯಾನ್ ಇಲ್ಲ ಈ ನಿಟ್ಟಿನಲ್ಲಿ ಹಳೇಯ ಧ್ವನಿ ಬೆಳಕು ನೆಲ ಕಚ್ಚಿದೆ, ಅದನ್ನು ಸರಿಯಾದ ರೂಪು ರೇಷೆಯೊಂದಿಗೆ ತಯಾರಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ ಅವರು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಣ ಬಿಡುಗಡೆಯಾಗಿದೆ ಆದರೇ ಬಂದು ತಲುಪಿಲ್ಲ ಅದು ತಲುಪಿದ ನಂತರ ಇನ್ನೂ ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿವೆ ಎಂದು ಹೇಳಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಉತ್ಸವಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.
ಇದಕ್ಕೂ ಮೊದಲು ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದಲ್ಲಿರುವ ತಾಯಿ ಚನ್ನಮ್ಮಾಜಿಗೆ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪರ ಪುತ್ಥಳಿಗಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು, ನಂತರ ಕಿತ್ತೂರು ಸಂಸ್ಥಾನದ ನಂದಿ ಧ್ವಜಾರೋಹಣ ನೆರವೇರಿಸಿದರು.

ಮದುವಣಗಿತ್ತಿಯಂತೆ ಸಿಂಗಾರಗೊಂಡ ಪಟ್ಟಣ : ವೀರಜ್ಯೋತಿಯ ಸ್ವಾಗತಕ್ಕಾಗಿ ಐತಿಹಾಸಿಕ ಕಿತ್ತೂರು ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು, ಪ್ರಮುಖ ರಸ್ತೆಯುದ್ದಕ್ಕೂ ದೀಪಾಲಂಕಾರ ಕಂಗೊಳಿಸುತ್ತಿದ್ದರೆ ವೀರಜ್ಯೋತಿಯ ಸಾಗಿ ಬರುವ ಮಾರ್ಗದೊದ್ದಕ್ಕೂ ಮನೆ ಮನೆಗಳ ಮುಂದೆ ರಂಗು ರಂಗಿನ ರಂಗೋಲಿಯ ಚಿತ್ರಗಳರಳಿದ್ದವು, ವೀರಜ್ಯೋತಿಗೆ ದಾರಿಯುದ್ದಕ್ಕೂ ನೀರು ಹಾಕಿ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುತ್ತಿರುವುದು ಮೆರವಣಿಗೆಯುದ್ದಕ್ಕೂ ಕಂಡು ಬಂದಿತು. ಎಲ್ಲಡೆಯೂ ಸಂಸ್ಥಾನದ ಘೋಷವಾದ ” ಹರ ಹರ ಮಹಾದೇವ ” ಘೋಷವು ಕೇಳಿ ಬರುತ್ತಿತ್ತು.
ಗಮನಸೆಳೆದ ಕಲಾವಾಹಿನಿ ಮೆರವಣಿಗೆ:ಕನ್ನಡ ನಾಡಿನ ಕಲಾ ವೈಭವವನ್ನು ಪ್ರತಿಬಿಂಬಿಸುವ ವಿವಿಧ ಕಲಾತಂಡಗಳ ಕಲಾವಾಹಿನಿ ಮೆರವಣಿಗೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಚಾಲನೆ ನೀಡಿದರು.
ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು, ಡೊಳ್ಳುಕುಣಿತ, ಗೊಂಬೆಕುಣಿತ, ಕುದುರೆಕುಣಿತ, ಲಂಬಾಣಿ ನೃತ್ಯ, ಝಾಂಜ್ ಪಥಕ್, ಜನಪದವಾದ್ಯಗಳಾದ ಚಂಡಿಮೇಳ, ನಗಾರಿ, ಕಥಕ್ಕಳಿ ತಂಡಗಳು ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ ವೇಷಧಾರಿ ಮಕ್ಕಳು ಜನಪದ ಕಲಾವಾಹಿನಿ ಮೆರವಣಿಗೆಯ ಸೊಬಗು ಹೆಚ್ಚಿಸಿದರು.

ಚನ್ನಮ್ಮವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಗಾಂಭೀರ್ಯದಿಂದ ಸಂಚರಿಸಿ ನಿಚ್ಚಣಿಕೆ ಮಠದ ಆವರಣದಲ್ಲಿ ಸಮಾರೋಪಗೊಂಡಿತು.
ಗೃಹಲಕ್ಷ್ಮೀ, ಗೃಹಜ್ಯೋತಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ರೂಪಕಗಳೂ ಸೇರಿದಂತೆ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತಿತರ ಇಲಾಖೆಗಳ ರೂಪಕಗಳ ಸಾಲು ಮೆರವಣಿಗೆಯಲ್ಲಿ ಗಮನಸೆಳೆಯಿತು.
ವಿವಿಧ ವಾಧ್ಯಗಳ ಸದ್ದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಕುಣಿದು ಕುಪ್ಪಳಿಸಿ ಸಂತಸ ವ್ಯಕ್ತ ಪಡಿಸಿದರು.
ಆಕರ್ಷಕ ಹಳದಿ ಪೇಟ:ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಉಚಿತವಾಗಿ ಆಕರ್ಷಕ ಹಳದಿ ಪೇಟವನ್ನು ತೊಡಿಸಲಾಯಿತು. ಜನಪ್ರತಿನಿಧಿಗಳು, ಅಧಿಕಾರಿಗಳು, ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಜನರು ಪೇಟ ತೊಟ್ಟು ಸಂಭ್ರಮಿಸಿದರು.
ಜನಾಕರ್ಷಿಸಿದ ವಸ್ತುಪ್ರದರ್ಶನ ಮಳಿಗೆಗಳು:ಇದೇ ಮೊದಲ ಬಾರಿ ಕೋಟೆ ಆವರಣದೊಳಗೆ ಕೋಟೆ ಗೋಡೆಯಗುಂಟ ಸ್ಥಾಪಿಸಲಾಗಿರುವ ವಸ್ತುಪ್ರದರ್ಶನ ಮೇಳವನ್ನು ಶಾಸಕ ಬಾಬಾಸಾಹೇಬ್ ಪಾಟೀಲ ಅವರು ಉದ್ಘಾಟಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಸ್ಥಾಪಿಸಲಾಗಿರುವ 128 ಮಳಿಗೆಗಳಿಗೆ ಜನರು ತಂಡೋಪತಂಡವಾಗಿ ಭೇಟಿ ನೀಡಿದರು.
ಕೃಷಿ, ಆರೋಗ್ಯ, ಮೀನುಗಾರಿಕೆ, ಪಶುಪಾಲನೆ, ಗ್ರಾಮೀಣಾಭಿವೃದ್ದಿ, ಕೃಷಿ ಯಂತ್ರೋಪಕರಣ ಸೇರಿದಂತೆ ವಿವಿಧ ಮಳಿಗೆಗಳನ್ನು ಗಣ್ಯರು ವೀಕ್ಷಿಸಿದರು.
ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನವನ್ನು ಸಂಸದರಾದ ಮಂಗಲ ಅಂಗಡಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ಮಂಗಲ ಅಂಗಡಿ, ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಮತ್ತಿತರರು ಉಪಸ್ಥಿತರಿದ್ದರು.
ಕಿತ್ತೂರು, ಬೈಲಹೊಂಗಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ದೋಣಿ ವಿಹಾರಕ್ಕೆ ಚಾಲನೆ :ಹೆದ್ದಾರಿ ಪಕ್ಕದ ತುಂಬುಗೇರೆ ಕೆರೆಯಲ್ಲಿ ಕ್ರೀಡಾ ಇಲಾಖೆಯ ವತಿಯಿಂದ ಏರ್ಪಡಿಸಲಾಗಿರುವ ದೋಣಿ ವಿಹಾರವನ್ನು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಉದ್ಘಾಟಿಸಿದರು.
ಕಿತ್ತೂರು ಅಭಿವೃದ್ಧಿ ಹಾಗೂ ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರವಾಸೋಧ್ಯಮ ಇಲಾಖೆಯ ಗಮನ ಸೇಳೆಯಲಾಗುವುದು ಈ ಕುರಿತು ಈಗಾಗಲೇ ಶಾಸಕ ಬಾಬಾಸಾಹೇಬ ಪಾಟೀಲ ಅವರೊಂದಿಗೆ ಚರ್ಚಿಸಲಾಗಿದ್ದು ದೋಣಿ ವಿಹಾರವನ್ನು ವರ್ಷವಿಡಿ ಇಲ್ಲಿ ನಡೆಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಈಗೀನ ಯುವ ಪಿಳಿಗೆಗೆ ಗ್ರಾಮೀಣ ಮಟ್ಟದ ಆಟೋಟಗಳ ಕೊರತೆ ಎದುರಾಗಿದೆ, ಯುವಕರು ನಮ್ಮ ದೇಶದ ಗ್ರಾಮೀಣ ಮಟ್ಟದ ಕ್ರೀಡೆಗಳಲ್ಲಿ ಹೆಚ್ಚೆಚ್ಚು ಪಾಲ್ಗೊಂಡು ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಿದೆ. ಐತಿಹಾಸಿಕ ಕೆರೆಗಳ ರಕ್ಷಣೆ ಹಾಗೂ ಜನಾಕರ್ಷಣಿಯ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಿತ್ತೂರು ಅಭಿವೃದ್ಧಿಯ ಕುರಿತು ಈಗಾಗಲೇ ನನ್ನದೆಯಾದ ಹೊಸ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದ್ದು ಈ ಎಲ್ಲ ಅಭಿವೃದ್ಧಿ ಪರವಾಗಿರುವ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗುವುದು, ಚನ್ನಮ್ಮಾಜಿಯ ಸ್ಮಾರಕವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಕಿತ್ತೂರು ಪಟ್ಟಣದಲ್ಲಿ ಪ್ರವಾಸೋಧ್ಯಮ ಇಲಾಖೆಯ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.