75ರ ವಯೋಸಂಭ್ರಮದಲ್ಲಿ ಶ್ರೀ. ಎಸ್.ಆರ್. ಹೆಗಡೆ

75 ವಸಂತಗಳ ಬದುಕು ಎಂಥಾ ಸುಂದರ ! ಯೌವನದಲ್ಲಿ ನಿತ್ಯೋತ್ಸವ ಕಂಡವರು. ಈಗ ಹಿರಿತನ ಅಪಾರ ಅನುಭವ ತಾಯಿ-ತಂದೆ ಬಗ್ಗೆ ಅಪಾರ ಗೌರವ ಹೊಂದಿದವರು. ಪತ್ನಿ-ಮಕ್ಕಳ ಬಗ್ಗೆ ಆತ್ಮಿಯತೆಯನ್ನು ತೋರಿದವರು. ಬಂಧುಗಳ ಬಗ್ಗೆ ಕಳಕಳಿಯನ್ನು ಹೊಂದಿದವರು. ಸ್ನೇಹಿತರಲ್ಲಿ, ಸರಿಕರಲ್ಲಿ ವೃತ್ತಿ ಪರರಲ್ಲಿ ಮಾನವೀಯ ಸಂಬಂಧಗಳನ್ನು ಹೊಂದಿದವರು. ಇಂತಹ ವೈವಿದ್ಯತೆಯ ಭವ್ಯ ಬದುಕನ್ನು ಬದುಕುತ್ತಿದ್ದಾರೆ.

ಅವರೇ ಹೇಳುವಂತೆ -” ನನ್ನ ಬದುಕಿನಲ್ಲಿ ವಿಶೇಷವಾದುದೇನೂ ಸಾಧಿಸಲಿಲ್ಲ. ನಾನು ಸಾಮಾನ್ಯರಲ್ಲಿ ಸಾಮಾನ್ಯ. ಹುಟ್ಟು-ಸಾವಿನ ಜೀವಜಂಗುಳಿಯಲ್ಲಿ ನಾನೊಬ್ಬ. ಅಮೂಲ್ಯವಾದ ಈ ಬದುಕಿನ ಸಾರ್ಥಕತೆಯ ದಾರಿ ನನಗೇ ತಿಳಿದಿಲ್ಲ. ನಿಮ್ಮೆಲ್ಲ ಆತ್ಮೀಯ ಸ್ನೇಹಿತರ ಜೊತೆ ಇರುವುದೇ ನನಗೆ ಸಂತೋಷ ತಂದಿದೆ”. ಸುಗಂಧ ಭರಿತ ಹೂವುಗಳ ಜೊತೆ ಇದ್ದಂತೆ ಅನಿಸುತ್ತದೆ. ಹಲವಾರು ದಿನಗಳಿಂದ ನಿಮ್ಮ ಜೊತೆ ಇದ್ದು, ಸಂತೋಷ ಭರಿತ ದಿನಗಳನ್ನು ಕಳೆದದ್ದು. ಅವುಗಳ ನೆನಪಿನಲ್ಲಿ ಇಂದಿನ ದಿನಗಳನ್ನು ಕಳೆಯುತ್ತಿರುವುದು ನನ್ನ ಬದುಕಿನ ವಿಶೇಷತೆ.”

ವಿಭಿನ್ನ ಗುಣ-ಸ್ವಭಾವಗಳ ಸಮೂಹದಲ್ಲಿ ಒಂದೇ ಅಭಿಪ್ರಾಯ ಅಪರೂಪ ಪ್ರತಿಯೊಬ್ಬರೂ ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ಯೋಚಿಸುವುದರಿಂದ ಅಭಿಮತದಲ್ಲೂ ವ್ಯತ್ಯಾಸವಿರುತ್ತದೆ. ಆದರೆ ಶ್ರೀ. ಎಸ್.ಆರ್. ಹೆಗಡೆ ಅವರ ಸಾಮಿತ್ಯದಲ್ಲಿ ವಿಭಿನ್ನಗುಣ ಸ್ವಭಾವಗಳ ವಿಭಿನ್ನ ಜಾತಿ-ಮತ-ಭಾಷೆಗಳ ಜನಸಮೂಹವೇ ಮೇಳೈಸಿದ. ಧನಾತ್ಮಕ ದೃಷ್ಟಿಯಿಂದ ಎಲ್ಲವನ್ನೂ, ಎಲ್ಲರನ್ನೂ ವಿಶಾಲ ಹೃದಯದ ಮನೋಭಾವನೆಯಿಂದ ಎದುರುಗೊಳ್ಳುವ ಶ್ರೀ. ಹೆಗಡೆ ಅವರಿಗೆ ಒಳಿತಷ್ಟೇ ಕಾಣುತ್ತದೆ. ನಾವು ಆಧುನಿಕ ಪ್ರಪಂಚದ ಪ್ರವಾಹದಲ್ಲಿ ಸಿಲುಕಿ ನಮ್ಮ ನಿಜ ಸ್ಥಿತಿಯನ್ನೇ ಮರೆತು ಕೇವಲ ಪ್ರಾಪಂಚಿಕ ಸುಖಭೋಗಗಳೇ ಸರ್ವಸ್ವ ಎಂಬ ಸ್ಥಿತಿಗೆ ಬಂದು ನಿಂತಿದ್ದೆನೆ. ಆದರೆ ಈ ಬಾಹ್ಯ ವಿಚಾರಗಳೆಲ್ಲ ಕೇವಲ ನಶ್ವರ ಯಾವುದೂ ನಿಜವಲ್ಲ. ವ್ಯವಹಾರಿಕವಾಗಿ ಈ ಜಗತ್ತಿನಲ್ಲಿ ನಾವು ಜೀವಿಸಬೇಕೇ ವಿನಾ ಇದ್ಯಾವುದೂ ಸತ್ಯ ಅಲ್ಲ ಎಂಬುದನ್ನು ತಿಳಿಯುವುದೇ ಅಧ್ಯಾತ್ಮಿಕ ಜೀವನವಾಗಿದೆ. ಆದ್ದರಿಂದ ಅನುಭವದ ಆಳದಿಂದ ಅಭಿವ್ಯಕ್ತಗೊಂಡ ಭಾವನೆಗಳೇ ಶ್ರೀ ಹೆಗಡೆ ಅವರು ಎಲ್ಲರಿಗೂ ಬೇಕು ಎನಿಸುವುದು.

ಶ್ರೀಮತಿ ಇಂದುಮತಿ ಎಸ್. ಹೆಗಡೆ ಅವರು ಶ್ರೀ ಎಸ್.ಆರ್. ಹೆಗಡೆಯವರ ಧರ್ಮಪತ್ನಿ ಇವರು ತಮ್ಮ ಒಡನಾಟದವರ ಅನುಭವಗಳನ್ನು ತಮ್ಮದಾಗಿಸಿಕೊಂಡು ಅವರ ಸುಖ ದುಃಖಗಳಲ್ಲಿ ಒಂದಾಗಿ ತಮ್ಮ ಬಂಧು ಬಾಂಧವರನ್ನು ಅಪ್ಪಿಕೊಂಡು ಪತಿಯ ಅಂತರ್ಯವನ್ನು ಅರ್ಥೈಸಿಕೊಂಡು ಜೀವನ ಸಾಗಿಸುತ್ತ ಬಂದಿದ್ದಾರೆ. ಮೂರು ಹೆಣ್ಣು ಮಕ್ಕಳು ಎರಡು ಗಂಡು ಮಕ್ಕಳ ಹೊಂದಿ, ಅವರವರ ಜೀವನಕ್ಕೆ ಬೇಕಾದ ವ್ಯವಸ್ತೆ ಕಲ್ಪಿಸಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.

ಪತಿ-ಪತ್ನಿ ಒಂದಾಗಿ, ಅವರಿವರೆನ್ನದೇ ಕರೆದವರ ಹತ್ತಿರ ಹೋಗಿ, ಅವರೊಂದಿಗೆ ನಕ್ಕು ನಲಿಯುವ ಪ್ರೇಮ ಹಂಚುವ ಇವರ ಜೀವನ ರೀತಿ ಇನ್ನೂ ಹಲವಾರು ವರ್ಷ ಮುಂದುವರೆಯಲಿ ಸಂತಸದ ಬಾಳು ಅವರದಾಗಲಿ ಸದಾ ಸಂತೃಪ್ತ ಜೀವನವಿರಲಿ. ಅವರನ್ನು ಕಂಡು ನಕ್ಕು ನಲಿಯಲು ಸಂತಸಪಡಲು ನಾವೂ ಅವರ ಜೊತೆಗೆ ಇರೋಣ ಅಲ್ಲವೇ ?

- ಎಸ್.ಆರ್.ಹಿರೇಮಠ
ಆಂಜನೇಯ ನಗರ, ಬೆಳಗಾವಿ.