ಬಿಜೆಪಿಯಿಂದ 25 ಕೋಟಿ ಆಫರ್: ಆಮ್ ಆದ್ಮಿ ಶಾಸಕ ಸ್ಫೋಟಕ ಮಾಹಿತಿ!

Ravi Talawar
WhatsApp Group Join Now
Telegram Group Join Now

ನವದೆಹಲಿ,ಏಪ್ರಿಲ್ 01: ಆಮ್ ಆದ್ಮಿ ಪಕ್ಷದ ಶಾಸಕ ರಿತುರಾಜ್ ಝಾ ಪಕ್ಷಕ್ಕೆ ಸೇರ್ಪಡೆಯಾಗಲು ಬಿಜೆಪಿ 25 ಕೋಟಿ ರೂಪಾಯಿ ಆಫರ್ ನೀಡಿತ್ತು ಎಂದು ಆರೋಪಿಸಿದ್ದಾರೆ. ತಾವು ಮಾತ್ರವಲ್ಲದೇ ತಮ್ಮ ಜೊತೆಗೆ 10 ಶಾಸಕರನ್ನು ಕರೆತರಬೇಕು ಎಂದೂ ಬಿಜೆಪಿ ಕೇಳಿದ್ದಾಗಿ ಹೇಳಿರುವ ಝಾ ಸಂಚಲನ ಮೂಡಿಸಿದ್ದಾರೆ.

ದೆಹಲಿ ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಆಮ್ ಆದ್ಮಿ ಪಕ್ಷದ ಶಾಸಕ, ದೆಹಲಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ದೆಹಲಿ ಸಿಎಂ ಕೇಜ್ರಿವಾಲ್ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ನಾಲ್ಕು ಬಾರಿ ಸೋಲಿಸಿದ್ದಾರೆ. ಬಿಜೆಪಿಯವರು ಅಗ್ಗದ ತಂತ್ರಗಳನ್ನು ಮತ್ತೆ ಹೆಣೆಯುತ್ತಿದ್ದಾರೆ ಎಂದು ಝಾ ಆರೋಪಿಸಿದ್ದಾರೆ.

“ನಿನ್ನೆ, ನಾನು ಭಾರತ ಮಹಾರಾಲಿ ನಂತರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬವಾನಾದ ದರಿಯಾಪುರಕ್ಕೆ ಹೋಗಿದ್ದೆ. ಕಳೆದ ಮೂರ್ನಾಲ್ಕು ದಿನಗಳಿಂದ ಫೋನ್ ಮೂಲಕ ನನ್ನನ್ನು ಸಂಪರ್ಕಿಸಲು ಕೆಲವರು ಪ್ರಯತ್ನಿಸುತ್ತಿದ್ದರು” ಎಂದು ಝಾ ಹೇಳಿದರು.

ರಾತ್ರಿ 9.15ಕ್ಕೆ ನಾನು ಅಲ್ಲಿಗೆ ತಲುಪಿದಾಗ ಮೂರ್ನಾಲ್ಕು ಜನ ನನ್ನನ್ನು ಒಂದು ಕಡೆ ಕರೆದುಕೊಂಡು ಹೋಗಿ, ‘ಒಪ್ಪದಿದ್ದರೆ ಏನೂ ಸಿಗುವುದಿಲ್ಲ ನೋಡಿ, ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ, ನೀವು 10 ಶಾಸಕರನ್ನು ಕರೆತನ್ನಿ, ನಿಮ್ಮಲ್ಲಿ ಪ್ರತಿಯೊಬ್ಬರಿಗೂ 25 ಕೋಟಿ ರೂಪಾಯಿ ಕೊಡುತ್ತೇವೆ, ಬಿಜೆಪಿ ಸರ್ಕಾರದಲ್ಲಿ ನಿಮ್ಮನ್ನು ಮಂತ್ರಿ ಮಾಡಲಾಗುವುದು’ ಎಂಬ ಆಮಿಷವೊಡ್ಡಲಾಯಿತು ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article