ಮಕ್ಕಳ ವಾತ್ಸಲ್ಯ

ಕನ್ನಡ ಭಾಷೆಯೊಳಗೆ ಮಕ್ಕಳ ಸಾಹಿತ್ಯವು ಅಷ್ಟಾಗಿ ಬೆಳೆದು ಬಂದಿಲ್ಲ. ಅಲ್ಲಲ್ಲಿ ಸಾಹಿತ್ಯ ಕೃಷಿಯೊಳಗೆ ತೊಡಗಿಸಿಕೊಂಡವರು. ಮಕ್ಕಳ ಸಾಹಿತ್ಯವೆಂದರೆ ಅದು ಉಪದೇಶ, ನೈತಿಕತೆಯನ್ನು ಭೋಧಿಸುವಕ್ಕಾಗಿರುವ ಮತ್ತು ಪಶು- ಪಕ್ಷಿ, ಪ್ರಾಣಿಗಳಲ್ಲಿರುವ ಪ್ರಾಮಾಣಿಕತೆ, ಸಹಾಯ, ಸಹಕಾರ ಬಿಂಬಿಸುವುದು ಹಾಗೂ ಬಸ್ಸು ಉಗಿಬಂಡಿ, ವಿಮಾನ,ಗಡಿಯಾರ, ಅಂಚೆ ಅಣ್ಣ ಮುಂತಾದವುಗಳನ್ನು ಪರಿಚಯಿಸುವ ಅವಕಾಶವೆಂದು ಭಾವಿಸಿದ್ದೇ ಹೆಚ್ಚಾಗಿದೆ. ಮಕ್ಕಳ ಮನೋಗತವನ್ನು ಸಾಹಸ, ಶೌರ್ಯ, ಧೈರ್ಯ, ಸ್ಥೆರ್ಯ, ಹೋರಾಟ, ಪ್ರಾಮಾಣಿಕತೆ, ದಯೆ, ಅನುಕಂಪ, ಅಂತಃಕರಣದತ್ತ ತಿರುಗಿಸಿದ ಸಾಹಿತ್ಯ ಕೃಷಿಯು ಅದ್ಯತೆ ಪಡೆದುಕೊಂಡದ್ದು ವಿರಳ, ಮಕ್ಕಳು ಪ್ರಾಣಿ, ಪಕ್ಷಿ, ಪಶು, ಆಟೋಟ, ತುಂಟಾಟ, ಪ್ರಿಯರೇ ಆಗಿದ್ದರೂ ಅವರು ಇಷ್ಟವನ್ನೇ ಸಾಹಿತ್ಯ ಕೃಷಿಯ ವಸ್ತು ವಿಷಯವನ್ನಾಗಿಸಿಕೊಂಡು ಹೋಗುವುದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆಂದೂ ಪೂರಕವಾಗದು. ಮಕ್ಕಳಿಗೆ ಪ್ರಚಲಿತ ಜಗತ್ತಿನ ಅಗು-ಹೋಗುಗಳತ್ತ ಗಮನ ಹರಿಸುವ ಅಗತ್ಯವಿದೆ.


ಪುರಾಣ, ಪಂಚತಂತ್ರ ಕಥೆಗಳು ಅಂದಿನ ವಿದ್ಯಮಾನಕ್ಕೆ ಸರಿ ಹೋಗಬಹುದು. ಇಂದು ಮನುಷ್ಯನು ಜಾಗತಿಕ ನೆಲೆಯೊಳಗೆ ಬದುಕಬೇಕಾಗಿದೆ. ಕಾನೂನು ವಿಜ್ಞಾನ, ರಾಜಕಾರಣ, ಶಿಕ್ಷಣ, ನಾಗರಿಕ ರೀತಿ -ನೀತಿ ಎಲ್ಲವೂ ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ. ಇಂದು ಎಲ್ಲಕ್ಕೂ ಮುಖ್ಯ ಪರಿಸರ ರಕ್ಷಣೆ, ಆರೋಗ್ಯಕ ಅಭ್ಯಾಸ ಮುಖ್ಯವಾಗಿವೆ. ಇಂಥ ಮಕ್ಕಳ ಸಾಹಿತ್ಯ ರಚನೆಯಾಗಬೇಕಿದೆ. ಪದೇ ಪದೇ ಹಿಂದಿನವರ ಅಯ್ದು ವಿಷಯಗಳನ್ನೇ ಆಯ್ದುಕೊಂಡು ಮಕ್ಕಳ ಸಾಹಿತ್ಯದ ಹಸಿವನ್ನು ಹಿಂಗಿಸಲು ಯತ್ನಿಸುವುದನ್ನು ಹಿಂದಕ್ಕೆ ಕನ್ನಡ ಮಕ್ಕಳ ಸಾಹಿತ್ಯ ಮುನ್ನೆಜ್ಜೆವಿಡಬೇಕಿದೆ.
ಮಕ್ಕಳ ಸಾಹಿತ್ಯಕ್ಕೆ ಅಖಂಡ ವಿಜಯಪುರ ಜಿಲ್ಲೆ ಅನುಪಮ ಕೊಡುಗೆ ನೀಡಿದೆ. ಮಕ್ಕಳ ಸಾಹಿತ್ಯಕ್ಕೆ ಹೊಸತನ ತರುವಲ್ಲಿಯೂ ಗಮನಾರ್ಹ ರಚನೆಗಳು ರೂಪಿತಗೊಂಡಿವೆ. ಅದೇ ಸಾಲಿನಲ್ಲಿ ‘ಮಕ್ಕಳ ಜಾತ್ರೆ’ ಸಂಕಲನ ಸೇರಿಕೊಂಡಿದೆ. ಈ ಕೃತಿಯನ್ನು ರಚಿಸಿರುವ ಬಾಪು ಗ. ಖಾಡೆ ಅವರು ಮಕ್ಕಳನ್ನು ಭಾವಿ ಪ್ರಜೆಗಳನ್ನು ರೂಪಿಸುವ ಎಲ್ಲ ಆಯಾಮಗಳನ್ನು ಬಳಸಿಕೊಂಡಿದ್ದು ವಿಶೇಷ ಅವರ ‘ಮಕ್ಕಳ ಜಾತ್ರೆ’ ಕವನ ಸಂಕಲನ ಗಮನಾರ್ಹ ಕವನಗಳ ಸಾಲುಗಳನ್ನು ಇಲ್ಲಿ ಆಯ್ದು ಕೊಡಲಾಗಿದೆ.
ಕೂಡಿಸಿ ಕಳೆಯುವ
ಮೋಜಿನ ಆಟ
ಶಾಲೆಯ ಗುರುಗಳ
ಜೀವನ ಪಾಠ (ಪುಟ್ಟಿಯ ಕೋರಿಕೆ)
ನಾವಿಕರೆಲ್ಲ ಹೆದರಿದರು
ಪಯಣಕೆ ಅವರು ಮರಗಿದರು
ಕೋಲಂಬಸನು ಧೈರ್ಯ ತುಂಬಿ
ಹೊಸ ಚೇತನವ ಮೂಡಿಸಿದನು (ಸಾಹಸ ಯಾತ್ರೆ)
ಪಿಳಿಪಿಳಿ ಕಣ್ಣು ಎಂಥಾ ಚೆಲವು
ಘಲ್ ಘಲ್ ಗೆಜ್ಜೆ ಆಕಳ ಕರುವು (ತೋಟದ ನೋಟ)
ಗಿಳಿ ಕೋಗಿಲೆ ಕಾಜಾಣಕೆ
ಇಲ್ಲ ಇಲ್ಲಿ ಪಂಜರ (ನಿಸರ್ಗ)
ನಾವು ಭಾಗಿಗಳಾಗಬೇಕು
ಜನರ ನೋವು ನಲಿವಿನಲಿ
ನೆರವು ಹಸ್ತ ನೀಡಬೇಕು
ಅವರ ಕಷ್ಟ ಕಾಲದಲಿ (ಪರೋಪಕಾರ)
ಸ್ನಾನ ಮಾಡಿ ಶುಭ್ರ ಬಟ್ಟೆ ತೊಟ್ಟು
ಹಸ್ತ ತೊಳೆದು ಊಟ ಮಾಡು
ಕೆರೆಬಾವಿ ಹಳ್ಳ ಕೊಳ್ಳ
ಮಲೀನಗೊಳಿಸದಂತೆ ಮಾಡು (ಸ್ವಚ್ಛತೆಯೇ ಆರೋಗ್ಯ)
ಕಂಡೆ ನಾನು ದೇವರೂಪ
ಜೀವನದಿಗೆ ಜೀವ ಕೊಟ್ಟು
ತಂದೆ ತಾಯಿ ಹೃದಯದಲಿ (ದೇವರ ಕಂಡೆ)
ಮೋಡ ಕರಗಿ ಮಳೆ ಸುರಿದು
ಭೂಮಿ ತಣಿಯಿತು
ಮಳೆಯ ನೀರು ಇಳೆಯ ಸೇರಿ
ಬೀಜ ಮೊಳೆಯಿತು (ಹಣ್ಣು ಕೊಡುವ ಮರ)
ನೀನು ನಗಲು ನಾನು ನಗುವೆ
ನೀನು ಅಳಲು ಜೊತೆಗೆ ಅಳುವೆ
ಕೋಪದಿಂದ ನೋಡಲು
ನಾನು ಕೋಪ ತಾಳುವೆ (ನಾನಾರು ಹೇಳು)
‘ಮಕ್ಕಳ ಜಾತ್ರೆ’ ಈ ಕೃತಿಯ ರಚನಾಕಾರರಾದ ಬಾಪು ಗ. ಖಾಡೆ ಅವರು ಮಕ್ಕಳ ಸಾಹಿತ್ಯದ ಮೂಲವನ್ನು ಪಳಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಸಂಕಲನದ ಕವನಗಳು ಒತ್ತಕ್ಷರಗಳಿಂದ ದೂರವಾಗಿವೆ ಮತ್ತು ಮಕ್ಕಳ ಓದಿಗೆ ನಿಲುಕುವ ಪದಪುಂಜ ಹೊಂದಿವೆ. ಚಿಕ್ಕ ಚಿಕ್ಕ ಸಾಲುಗಳಲ್ಲಿ ರಚಿತವಾಗಿರುವ ಈ ಕವನಗಳ ಮಕ್ಕಳ ಮನೋಗತದೊಳಗೆ ತನ್ನ ಸಉತ್ತಲಿನ ಪರಿಸರವನ್ನು ಪರಿಚಯಿಸಿಕೊಳ್ಳುವುದಕ್ಕೂ ಸಹಕಾರಿಯಾಗಿವೆ. ಮಕ್ಕಳ ಆಶೋತ್ತರ ಬಿಂಬಿಸುವಲ್ಲಿ


ಯಶಸ್ವಿಯಾಗಿವೆ. ‘ಕವಿಯ ಮಾತು’ ಎಂಬ ಕವಿ ಬಾಪು ಗ. ಖಾಡೆ ಅವರು ಹೇಳಿರುವ ವಿಚಾರಗಳು ಈ ಕೃತಿಯ ಆಶಯ ವ್ಯಕ್ತ ಪಡಿಸಿದ್ದು ಹೀಗಿದೆ: ಇಲ್ಲಿ ಮುಗ್ಧ ಮಗುವಿನ ಜೀವನ ಪ್ರೀತಿ, ಬೆರಗುಗಣ್ಣಿನ ನೋಟ, ಕುತೂಹಲದ ವಿಸ್ಮಯ ಜಗತ್ತು, ಹಾಡುವ ಹಕ್ಕಿ, ಓಡುವ ನದಿ, ಮೂಡುವ ಸೂರ್ಯ, ಕಾಡುವ ಕನಸು, ಹೀಗೆ ಎಲ್ಲವೂ ಮಗುವಿನ ಕಣ್ಣಿಗೆ ಕೌತುಕವೇ ಆಗಿದೆ. ಮಕ್ಕಳು ದೇವರ ರಾಜ್ಯದ ಪ್ರಭುಗಳು. ಅವರ ನಿಷ್ಕಲ್ಮಶ ಮನಸ್ಸಿಗೆ ಮುದ ನೀಡಬಲ್ಲ, ಹಾಡುಗಳನ್ನು ಇಲ್ಲಿ ಕಟ್ಟಿ ಕೊಡಲಾಗಿದೆ. ಇಲ್ಲಿನ ಬಹುತೇಕ ಕವಿತೆಗಳನ್ನು ಸಂಗೀತಕ್ಕೆ ಅಳವಡಿಸಿ ಅಭಿನಯಿಸಿ ಭಾವ ತುಂಬಿ ಹಾಡಬಹುದು. ಅದರಂತೆ ಹಾರೈಕೆಯಲ್ಲಿ ಚೆಂಬೆಳಕಿನ ಕವಿ ಡಾ. ಚನ್ನವೀರ ಕಣವಿ. ಅವರು ಹೇಳಿದ್ದು ಇಂತಿದೆ; ಪ್ರೀತಿ, ವಾತ್ಸಲ್ಯ ತುಂಟಾಟಗಳಿಂದ ಕೂಡಿದ ಅದಕ್ಕೆ ತಕ್ಕೆ ಮೂರು ಮಾತ್ರೆಯ ಗಣಗಳಿಂದ ಹಗುರಾದ ‘ಪಪ್ಪಿಕೊಡು ಪಪ್ಪಿ’ ಯಂಥಹ ಹಲವಾರು ಪದ್ಯಗಳು `ಮಕ್ಕಳ ಜಾತ್ರೆ’ ಯಲ್ಲಿ ಮಿಠಾಯಿಗಳಂತೆ ಬಣ್ಣ ಬಣ್ಣದ ಅಟಿಕೆಗಳಂತೆ ಕಂಗೊಳಿಸುತ್ತಲಿವೆ.


33 ವಿಶಿಷ್ಟ ಶೀರ್ಷಿಕೆಯ ಮಕ್ಕಳ ಕವನಗಳನ್ನು ಹೊಂದಿರುವ `ಮಕ್ಕಳ ಜಾತ್ರೆ’ ಕೃತಿಯೊಳಗೆ ಇರುವ ಸಾಂದರ್ಭಿಕ ರೇಖಾ ಚಿತ್ರಗಳು ಅತ್ಯಂತ ಅರ್ಥಪೂರ್ಣವಾಗಿವೆ ಮತ್ತು ಮಕ್ಕಳ ಕಲ್ಪನಾ ಲೋಕವನ್ನು ಹಿಗ್ಗಿಸುವಷ್ಟು ಚಂದವಾಗಿವೆ.


ಮಕ್ಕಳನ್ನು ಆಕರ್ಷಿಸುವ ಮುಖಪುಟ ಹೊಂದಿರುವ ಈ ಸಂಕಲನವನ್ನು ಅತ್ಯಂತ ಶಿಸ್ತು ಬದ್ಧತೆಯಿಂದ ಚಿಲಿಪಿಲಿ ಪ್ರಕಾಶನ ಧಾರವಾಡ ಇವುರ ಪ್ರಕಟಗೊಳಿಸಿದ್ದಾರೆ.


`ಮಕ್ಕಳ ಕಾವ್ಯ ಲೋಕ’ ಇನ್ನಷ್ಟು ಹೊಸ ಹೊಸ ಆಯಮಗಳನ್ನು ಪಡೆದುಕೊಂಡು ವಿಜ್ಞಾನ ಕಾನೂನು, ಆಡಳಿತ ವಿಷಯಗಳನ್ನು ಮಕ್ಕಳ ಮನೋಗತದೊಳಗೆ ಕರಗತ ಗೊಳ್ಲುವಂತೆ ಮಾಡುವ ಅಗತ್ಯವಿದೆ. ಜಗತ್ತು ಬಹಳಷ್ಟು ಬದಲಾಗುತ್ತಲಿದೆ. ಮಕ್ಕಳ ಕೈಗೆ ಗಣಕಯಂತ್ರ, ಮೊಬೈಲ್ ಬಂದಿವೆ. ಮಕ್ಕಳ ಆಟಪಾಠ ಹಾಡು- ಪಾಡು ಹೇಳ


ತೀರದಷ್ಟು ಮುಂದು ಮುಂದಕ್ಕೆ ಸಾಗಿವೆ. ಇಂಥ ಪರಿಸರದ ಆಗು ಹೋಗುಗಳ ಮೇಲೆ ಬೆಳಕು ಚಲ್ಲುವ ಮತ್ತು ಅತಿಯಾದರೆ ಎಲ್ಲವೂ ಅತಿರೇಕವಾಗಿ ಬದುಕಿಗೆ ಎರವಾಗುವ ಸನ್ನಿವೇಶ ನಿರ್ಮಾಣ ಗೊಳ್ಳುತ್ತದೆಂಬ ಅರಿವು ಮೂಡಿಸುವ ಮಕ್ಕಳ ಸಾಹಿತ್ಯ ಬೇಕಿದೆ. ಈ ದಿಶೆಯಲ್ಲಿ ಬಾಪು ಗ. ಖಾಡೆ ಅವರು ಗಮನ ಹರಿಸಬೇಕಿದೆ.

-.ರಾ. ಸುಳಕೂಡೆ
1319, ಶ್ರೀ ಶಿವಪ್ರಸಾದ,
ರಾಮತೀರ್ಥ ನಗರ, ಬೆಳಗಾವಿ

 

ದೀಪಜ್ಯೋತಿ ನಮೋಸ್ತುತೆ
ಭಾರತವು ಹಬ್ಬಗಳ ದೇಶ. ನಮ್ಮ ಪೂರ್ವಜರು ಹಲವು ಹಬ್ಬಗಳನ್ನು ಋತುಮಾನಕ್ಕೆ ಅನುಗುಣವಾಗಿ ರೂಪಿಸಿದ್ದಾರೆ. ಉದಾಹರಣೆಗೆ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ದಿನವನ್ನು ಸಂಕ್ರಾಂತಿಯಾಗಿ, ಸೂರ್ಯ ತನ್ನ ಪಥ ಬದಲಿಸುವ ದಿನವನ್ನು ರಥಸಪ್ತಮಿಯಾಗಿ, ಪ್ರಕ್ರತಿಯ ಉಲ್ಲಾಸದ ದಿನ ವಸಂತ ಋತುವಿನ ಆಗಮನ ಯುಗಾದಿಯಾಗಿ, ವಸಂತ ಪಂಚಮಿಯಾಗಿ ಆಚರಿಸುವ ರೂಢಿ ತಂದಿದ್ದಾರೆ. ಹೀಗೆ ಎಲ್ಲ ಹಬ್ಬಗಳು ತನ್ನದೇ ಆದ ಹಿನ್ನೆಲೆಯನ್ನು ಹೊಂದಿವೆ. ಬದುಕಿನ ಆಸೆ ನಿರಾಸೆ ತುಲನೆಗಳನ್ನು ಸಮ್ಮೀಲನಗೊಳಿಸಲು ನಾವು ಹಬ್ಬಗಳನ್ನು ಆಚರಿಸಬೇಕು. ಇತ್ತೀಚೆಗೆ ಒಂದು ಉತ್ತಮ ಬೆಳವಣಿಗೆ ಎಂದರೆ ಜಾತಿ ಧರ್ಮಗಳ ಕಟ್ಟಳೆ ಮೀರೀ ಎಲ್ಲರೂ ಎಲ್ಲ ಹಬ್ಬಗಳನ್ನು ಸಮಭಾವ, ಸುಮನ್ವಯತೆಯಿಂದ ಆಚರಿಸುತ್ತಿರುದು ಅತ್ಯಂತ ಸಂತಸದ ಸಂಗತಿ.


ದೀಪಾವಳಿ ಕತ್ತಲೆಯ ಅಂಗಳದಲ್ಲಿ ಬೆಳದಿಂಗಳನು ಚೆಲ್ಲಿ ಸಂತೋಷದ ದ್ರಶ್ಯೋತ್ಸವ. “ಅಸತೊಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ. ಮ್ರತ್ಯೋರ್ಮಾ ಅಮ್ರತಂ ಗಯಯ “ ಎನ್ನುವ ಶ್ಲೋಕದಂತೆ ಅಜ್ಞಾನವೆಂಬ ಕತ್ತಲೆ ಕಳೆದು, ಜೀವನದಲ್ಲಿ ಸುಜ್ಞಾನದ ಬೆಳಕನ್ನು ಬೀರುವ ಹಬ್ಬ ದೀಪಾವಳಿ. ಕೌಮುದಿ ಉತ್ಸವ. ಕೌಮುದಿ ಎಂದರೆ ಬೆಳದಿಂಗಳು ಎನ್ನುವರು. ಹಳ್ಳಿ ಹಳ್ಳಿಗಳಲ್ಲಿ ಇದನ್ನು ’ಹಟ್ಟಿ’ ಹಬ್ಬ ಎಂತಲೂ ಆಚರಿಸುವರು. ವೊದಲ ದಿನ ಧನತ್ರಯೋದಶಿಯಂದೂ” ನೀರು ತುಂಬುವ ಹಬ್ಬ, ಬರಮನ ಹಬ್ಬ ಎಂದು ಆಚರಿಸುವರು ಸ್ನಾನಕ್ಕೆಂದು ಬಳಸುವ ಹಂಡೆಯಲ್ಲೂ ನೀರು ತುಂಬಿ ಅದಕ್ಕೆ ಸುಣ್ಣ ಹಚ್ಚಿ, ಮಹಾಲಿಂಗದ ಬಳಿಯನ್ನುತಂದು ಕಟ್ಟಿ ಪೂಜಿಸುತ್ತಾರೆ. ಈ ದಿನವನ್ನು ವಸ್ತುಗಳು ಖರೀದಿಗೆ ಸೂಕ್ತ ದಿವಸ, ಶುಭದಿನ ಎಂದು ಭಾವಿಸಲಾಗಿದ್ದು ಅನುಕೂಲಕ್ಕೆ ತಕ್ಕಂತೆ ತಮ್ಮ ತಮ್ಮ ಅಂತಸ್ತಿಗೆ ತಕ್ಕಂತೆ ಆಸ್ತಿ ವಸ್ತುಗಳನ್ನು ಈ ದಿನ ಖರೀದಿಸುವ ರೂಢಿ ಇದೆ.


ನರಕ ಚತುರ್ದಶಿ ಆಚರಣೆ ಎರಡನೇ ದಿನವಾಗಿದ್ದು ಬೆಳಗಿನ ಜಾವದ ಅಭ್ಯಂಜನ ಸ್ನಾನ ಮುಗಿಸಿ ಮಕ್ಕಳಿಗೆ ಮನೆಯ ಗಂಡು ಮಕ್ಕಳಿಗೆ ಆರತಿ ಮಾಡಿ ಶುಭ ಹಾರೈಸಿ ಯಶಸ್ಸನ್ನು ಕೋರುತ್ತಾರೆ. ಇದರ ಪೌರಾಣಿಕ ಹಿನ್ನೆಲೆ ನರಕಾಸುರನನ್ನು ಸಂಹರಿಸಿದ ದಿನ. ಕೆಟ್ಟದನ್ನು ಸಂಹರಿಸಿ ಒಳ್ಳೆಯ ಪುಣ್ಯ ಉದಯವಾದ ದಿನವೆಂದು ಆಚರಿಸಲಾಗುತ್ತದೆ. ಅಮಾವಾಸ್ಯೆ ಸಂಪತ್ತಿನ ಅಧಿದೇವತೆ ಲಕ್ಷ್ಮಿ - ಕುಬೇರ, ವಿಘ್ನ ಹಾರಕ ಗಣಪತಿಯ ಪೂಜಿಸುವ ದಿನವಾಗಿದೆ. ವಿಕ್ರಮ ಶಕೆಯ ಪಂಚಾಂಗ ಪಾಲಿಸುವವರಿಗೆ ವರ್ಷದ ಕೊನೆಯ ದಿನ. ಈ ದಿನವನ್ನು ಜೈನರು ಮಹಾವೀರ ತೀರ್ಥಂಕರರು ಮೋಕ್ಷ ಪಡೆದ ದಿನವೆಂದೂ, ರಾಮನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿದ ದಿನವೆಂದೂ, ಸಿಖ್ಖರಿಗೆ ಹರಗೋವಿಂದರು ಮೊಘಲರಿಂದ ಬಿಡುಗಡೆ ಪಡೆದ ದಿನವೆಂದೂ ವಿವಿಧ ಧರ್ಮದವರು ತಮ್ಮ ತಮ್ಮ ಸಂಪ್ರದಾಯದಂತೆ ವಿಭಿನ್ನತೆಯಲ್ಲಿ ಏಕತೆಯೊಂದಿಗೆ ಆಚರಿಸುವರು.
ಅತ್ಯಂತ ಪ್ರಮುಖ ದಿನ ದೀಪಾವಳಿ ಹಬ್ಬದ ನಾಲ್ಕನೇ ದಿನ ಅಂದರೆ ಬಲಿಪಾಡ್ಯಮಿ ಅಥವಾ ಬಲಿಪ್ರತಿಪದ. ವಾಮನರೂಪಿ ವಿಷ್ಣು ಬಲಿಚಕ್ರವರ್ತಿ ನ್ನು ಮೂರು ಹೆಜ್ಜೆ ದಾನ ಕೇಳಿ ಭೂಮಿ ಮತ್ತು ಆಕಾಶ ಆವರಿಸಿ, ಕೊನೆಗೆ ಮೂರನೇ ಪಾದ ಬಲಿಚಕ್ರವರ್ತಿ ಯ ತಲೆಯ ಮೇಲಿತ್ತು ಬಲಿಯನ್ನು ಪಾತಾಳಕ್ಕೆ ಕಳುಹಿಸಿದ ದಿನ. ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು, ಅಹಂಕಾರಿ ಇಂದ್ರನಿಗೆ ಪಾಠಕಲಿಸಿದ ದಿನ. ರಾವಣನ ಸಂಹರಿಸಿ ಸೀತಾಲಕ್ಷಣರೂಡನೆ ಶ್ರೀ ರಾಮಚಂದ್ರ ಅಯೋಧ್ಯೆಗೆ ಮರಳಿದ್ದು ಈ ದಿನವೆ. ಪಾಡ್ಯ ಹೂಸ ವರುಶದ ಮೊದಲ ದಿನವಾಗಿದೆ. ಭಾರತದ ಕೆಲವು ಭಾಗಗಳಲ್ಲಿ ಪಾಡ್ಯದ ಮರುದಿನ ಬಹುಬೀಜ /ಸಹೋದರಿ ಬಂಧ, ಆಚರಿಸಿ ಸಹೋದರರು ಸಹೋದರಿಯರಿಂದ ಆರತಿ ಮಾಡಿಸಿಕೊಂಡು, ಅವರಿಗೆ ಕಾಣಿಕೆ ನೀಡುವ ಸಂಪ್ರದಾಯವಿದೆ. ಅದು ಯಮಧರ್ಮರಾಯನು ತಂಗಿ ಯಮಿನಿಯ ಮನೆಗೆ ಹೋಗಿ ಸಂತುಷ್ಠನಾಗಿ ಕಾಣಿಕೆ ನೀಡಿದನಂತೆ, ಆ ದಿನದ ನೆನಪಿಗೆ ಅಣ್ಣ ತಂಗಿಯರ ಪ್ರೀತಿ ವಾತ್ಸಲ್ಯದ ಸಂಕೇತವಾಗಿ ಈ ಹಬ್ಬ ಆಚರಿಸುತ್ತಾರೆ. ಹೀಗೆ ದೀಪಾವಳಿ ಐದು ದಿನಗಳ ಬೆಳಕಿನ ಹಬ್ಬವಾಗಿ ಬಣ್ಣ ಬಣ್ಣದ ದೀಪಾಲಂಕಾರ ರಂಗೋಲಿಯ ಚಿತ್ತಾರ, ಪಾಂಡವರ (ಸೆಗಣಿಯ) ಮೂರ್ತಿಯ ಅಲಂಕಾರದೊಂದಿಗೆ ಆಚರಿಸಲ್ಪಡುತ್ತದೆ.


ದೀಪಾವಳಿ ಬೆಳಕಿನ ಹಬ್ಬ ಪಟಾಕಿಗಳ ಹಬ್ಬ ಅಹುದು. ಆದರೆ ಪರಿಸರ ಮಾಲಿನ್ಯ ಹೆಚ್ಚಾಗಿರುವ ಈ ದಿನಗಳಲ್ಲಿ ಪರಿಸರ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಇದು ಡಮ್.. ಡಮ್.. ಡಮಾರ್... ಚಿಟಿ ಪಿಟಿ ಸದ್ದಿನ ಹಬ್ಬ ನರಕ ಚತುರ್ದಶಿಯ ದಿನ ಆರಂಭವಾಗುವ ಸಪ್ಫಳ ತುಳಸಿ ಹಬ್ಬದ ತನಕ ಮುಂದುವರೆಯುವುದು. ಸಪ್ಫಳ ಇರಲಿ ಆದರೆ ಅದರಲ್ಲಿ ಮಿತ ಹಾಗೂ ಎಚ್ಚರಿಕೆ ಇರಲಿ. ಬೆಳಕಿಗೆ ಹಣತೆಗಳಿವೆ, ಸಪ್ಪಳಕೆ ನಗುವಿನ ಕೇಕೆ ಚಪ್ಪಾಳೆಗಳಿವೆ. ಮರೆಯದಿರಿ.
ಪಟಾಕಿ ಹಾರಿಸುವಾಗ ಒಂದಷ್ಟು ಎಚ್ಚರಿಕೆ ಜೊತೆಗಿರಲಿ....
** ಪಟಾಕಿ ಸಿಡಿಸುವಾಗ ಪಕ್ಕದಲ್ಲಿ ಹಿರಿಯರಿರಲಿ.
** ವಿಶಾಲವಾದ ಜಾಗದಲ್ಲಿ ಮಾತ್ರ ಪಟಾಕಿ ಸಿಡಿಸಿ.
** ಕೈಯಲ್ಲಿ ಹಿಡಿದು ಪಟಾಕಿ ಸಿಡಿಸುವ ಸಾಹಸಬೇಡ.
** ದೇಹದ ಮೇಲೆ, ಶರೀರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿ..
** ಪರಿಸರ ಮಾಲಿನ್ಯ ನಿಯಂತ್ರಣದತ್ತ ಗಮನವಿರಲಿ.
ಒಟ್ಟಿನಲ್ಲಿ ದೀಪಾವಳಿಯ ಆಶಯ ನಮ್ಮಲ್ಲಿನ ಅಜ್ಞಾನ ಹೋಗಿ, ಸುಜ್ಞಾನ ಬೆಳಗಿ ದುಷ್ಟ ಗುಣ ನಶಿಸಿ, ಶಿಷ್ಟ ಗುಣ ಹುಟ್ಟಿ ಎಲ್ಲೆಡೆ ಸುಭೀಕ್ಷೆ, ಸಮ್ರದ್ದಿ, ಸುಖಸಂತೋಷ ಸಡಗರ ಸಂಭ್ರಮ ನೆಲೆಸಲಿ,, ದೀಪದಲಿ ದೇವರ ರೂಪ ಕಾಣಿಸಲಿ ಎಂದು..
ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ::
ಶತ್ರುಬುದ್ಧಿ ವಿನಾಶಕಾಯ
ದೀಪ ಜ್ಯೋತಿ ನಮೊಸ್ತುತೆ::
ದೀಪ ಜ್ಯೋತಿ ಪರಬ್ರಹ್ಮ,
ದೀಪ ಜ್ಯೋತಿ ಜನಾರ್ದನ: ದೀಪೆÇೀಹರತಿ ಪಾಪಾನಿ
ಸಂಧ್ಯಾ ದೀಪ ನಮೋಸ್ತುತೆ::
ದೀಪ ಶ್ಲೋಕದೊಂದಿಗೆ ನನ್ನೆಲ್ಲ ಓದುಗ ಮಿತ್ರರಿಗೆ *

  • ಲಲಿತಾ . ಕ್ಯಾಸನ್ನವರ
    ಬೆಳಗಾವಿ.