ಬಸವಣ್ಣನವರು ಮತ್ತು ಕರಸ್ಥಲಕ್ಕೆ ಬಂದು ಚುಳುಕಾದ ದೇವರು

ದೇವರು - ದೆವ್ವಗಳಿಂದ ಆವರಿಸಿಕೊಂಡಿರುವ ಮನಸ್ಸುಗಳಲ್ಲಿ ಭಕ್ತಿಯೊಂದಿಗೆ ಭಯವು ಸೇರಿಕೊಂಡಿದೆ. ದೇವರ ಅವಕೃಪೆಗೆ ಪಾತ್ರರಾಗದಂತೆ ನಡೆದುಕೊಳ್ಳುವುದು ಒಂದೆಡೆಯಾದರೆ ದೆವ್ವವು ಹಿಡಿದುಕೊಳ್ಳದಂತೆ ನೋಡಿಕೊಳ್ಳುವುದು ಇನ್ನೊಂದೆಡೆಯಾಗಿದೆ. ಭಕ್ತಿ ಎಂಬ ಭಯದ ನೆಲೆಯಿಂದಲೇ ದೇವರು-ದೆವ್ವಗಳು ಪ್ರಚಲಿತಕ್ಕೆ ಬಂದಿವೆಂದೂ ಹೇಳಲಾಗುತ್ತದೆ. ಭಾರತೀಯರು ದೇವರ ಸೃಷ್ಟಿಯೊಳಗೆ, ದೆವ್ವದ ಬಣ್ಣನೆಯೊಳಗೆ ನಿತ್ಯದಲ್ಲಿ ನಿದ್ದೆಗೆಡುತ್ತಲೇ ಇದ್ದಾರೆ. ದೇವರು ಪ್ರತೀತಿಯನ್ನು ಹೆಚ್ಚಿಸುವ, ನಂಬಿಸುವ ಪುರೋಹಿತಶಾಹಿ ವರ್ಗವು ಹೊಸ ಹೊಸ ಅವತಾರ, ಪವಾಡ, ಚಮತ್ಕಾರ ಮಾಡುತ್ತಲೇ ಇದ್ದಾರೆ. ಯಾರಾದರೂ ತಪ್ಪಿ ದೇವರ ಬಗ್ಗೆ ಅಪಸ್ವರವೆತ್ತಿದರೆ ಅವರಿಗೆ ದೆವ್ವ ಹಿಡಿಯಲಿ ಎಂದು ಶಾಪ ಕೊಡುವಲ್ಲಿ ಪ್ರಸಿದ್ಧಿ ಹೊಂದಿದ್ದಾರೆ. ದೇವರು ಅಂದರೆ ಯಾರು ? ಏನು ? ಎಂದು ವ್ಯಖ್ಯಾನಿಸುವದು ಸುಲಭವಲ್ಲ ಅಂತೆ ದೆವ್ವ, ನೈಜತೆಯೊಳಗೆ ಇರುವ ಬಗ್ಗೆ ಅನುಮಾನ ಇದ್ದರೂ ಭಯ ಮಾತ್ರ ಇದೆ ಎಂದು ಯಾರಾದರೂ ಹೇಳಬಹುದು. ದೆವ್ವ ಇರುವುದು, ಇಲ್ಲದೇ ಇರುವುದು, ಅವರವರ ಧೈರ್ಯವನ್ನು ಅವಲಂಬಿಸಿದೆ. ಅದಾರ ಭಯ ಎಂದರೆ ದೇವರಿಗೆ ಭಕ್ತಿಯೇ ಆಧಾರ ಎಂದು ನಂಬಲಾಗಿದೆ.

‘ದೇವರು ಇಲ್ಲ’ ಎಂದು ಅಚಲವಾಗಿ ನಿಶ್ಚಯಿಸಿಕೊಂಡವರೂ ಸಹ ದೇವರು ಒಂದು ‘ನಂಬಿಕೆ’ ಎಂದಿದ್ದಾರೆ, ದೇವರು ಒಳ್ಳೆಯದು ಮಾಡಲಿ ಎಂದು ಆರ್ಶೀವಾದಿಸುವುದು, ನಮ್ಮ ಸಂಸ್ಕøತಿ ಎಂದಿದ್ದಾರೆ. ದೇವರು ಎಲ್ಲಿದ್ದಾನೆ ? ಎಂದರೆ ವೈಕುಂಠದಲ್ಲಿ, ಸ್ವರ್ಗದಲ್ಲಿ, ಆಕಾಶದೊಳಗೆ, ಪುಣ್ಯ ಕ್ಷೇತ್ರಗಳಲ್ಲಿ, ಗುಡಿ- ಗುಂಡಾರ, ಮಠಗಳಲ್ಲಿ ಎಂದು ಸಹಜವಾಗಿ ಉತ್ತರಿಸಲಾಗುತ್ತದೆ. ನಾನೇ ದೇವರು, ದೇವರು ಬೇರೆ ಅಲ್ಲ ನಾನು ಬೇರೆ ಅಲ್ಲ, ನಾನು ದೇವರ ಮಗ, ದೇವದೂತ, ದೇವರ ಪ್ರತಿನಿಧಿ ಎನ್ನುವವರೂ ಇದ್ದಾರೆ. ಹೀಗೆ ದೇವರು ಅವರವರ ಧಾರ್ಮಿಕ ನಂಬಿಕೆಯಲ್ಲಿ ಕೊಸರಾಡುತ್ತಲೇ ಇದ್ದಾನೆ, ದೇವರ ಕಲ್ಪನೆಯನ್ನು ದೇವರ ಇರುವಿಕೆಯನ್ನೇ ಚನ್ನಾಗಿ ಅರಗಿಸಿಕೊಂಡವರು, ಭಕ್ತಿಯಿಂದ ಒಲಿಸಿಕೊಂಡವರು ದೇವರಾಗಿ ನಿಂತಿದ್ದಾರೆ. ಅಪ್ತಕಾಲದೊಳಗೆ ಸಹಾಯ ಮಾಡಿದವರನ್ನು ದೇವರೆನ್ನುತ್ತಾರೆ. ಹೀಗೆ ಭಾರತೀಯರ ದೇವರ ಆಚಾರ ವಿಚಾರದೊಳಗೆ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದಾರೆ. ದೇವರು ಅನಂತ ಅಗಮ್ಯ, ಅಗೋಚರವೆಂದೂ ಮೂರ್ತಿಗಳ ವಿವಿಧ ಆಕಾರದೊಳಗೆ ಪ್ರಕಟವೆಂದು ನಮ್ಮ ಹಿರಿಯರು ಹೇಳುತ್ತಲೇ ಬಂದಿದ್ದಾರೆ. ಪುರಾಣ, ಅಗಮ ಶಾಸ್ತ್ರಗಳೆಲ್ಲವೂ ದೇವರ ಹೆಸರಿನೊಳಗೆ ಸಿದ್ಧಿಗೊಂಡಿವೆ.

ಪುರೋಹಿತಶಾಹಿಗಳು, ದೇವರನ್ನು ತಮ್ಮ ಅಭಿಲಾಷೆಯೊಂದಿಗೆ ಜೋಡಿಸಿ, ಮುಗ್ಧರನ್ನು ಬುಗುರೆಯಾಟದಂತೆ ಆಡಿಸುತ್ತಲೇ ಇದ್ದಾರೆ. ಶುಭಾ ಶುಭಗಳ ಬೆನ್ನು ಹತ್ತಿರುವ ಮನುಷ್ಯನು ತನ್ನ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಪುರೋಹಿತರು ಹೇಳುವ ದೇವರಿಗೆ ಹರಕೆಯಾಗಿ ಹೊರುತ್ತಲೇ ನಡೆದಿದ್ದಾರೆ. ಲಾಭದಾತುರದೊಳಗೆ ದೇವರ ಆಶೀರ್ವಾದ ಅನುಗ್ರಹಕ್ಕಾಗಿ, ಜನರು ಏನೇನೋ ವಿಶೇಷ ಭೂಷಣ ತೊಟ್ಟು ದೇವರ ಕೈಂಕರ್ಯದೊಳಗಿದ್ದಾರೆ. ದೇವರುಗಳಲ್ಲಿ ಉಚ್ಚಕುಲದ ದೇವರು, ನೀಚಕುಲದ ದೇವರು ಬೇರೆ ಬೇರೆ ಇವೆ. ಕೆಲವು ದೇವರು ಸೌಮ್ಯ, ಇನ್ನೂ ಕೆಲವು ಉಗ್ರವೆಂದು ವಿಗಂಡಿಸಲಾಗಿದೆ.

ದೇವರು ಶೋಷಣೆಯ ಕೇಂದ್ರವಾಗಿದ್ದನ್ನು ಗಮನಿಸಿದ ಶರಣರು ದೇವರು, ದೇವರ ಇರುವಿಕೆಯ ವಿಚಾರಗಳನ್ನೇ ಬದಲಿಸಿ, ದೇವರು ಒಬ್ಬನೇ ಎಂದು ಹೇಳಿದರಲ್ಲದೆ ಇಷ್ಟಲಿಂಗ ಪರಿಕಲ್ಪನೆಯ ಮೂಲಕ ಸಮಾನತೆ ಹರಡಿದರು. ದೇವರು ತನ್ನೊಳಗೆ, ತನ್ನ ನಡೆ - ನುಡಿಯೊಳಗೆಂದು ಸಿದ್ಧಿಸುವಲ್ಲಿ ಶರಣರು ನಿರ್ವಹಿಸಿದ ಪಾತ್ರ ನಿಜಕ್ಕೂ ಗಮನಾರ್ಹವಾಗಿದೆ ಬಸವಣ್ಣನವರು ದೇವರು ಒಬ್ಬನೇ ಎಂದು ಅನುಭಾವದಿಂದ ವ್ಯಕ್ತಗೊಳಿಸಿದ್ದಲ್ಲದೆ ‘ಕರಿಯ ಕನ್ನಡಿಯೊಳಗಡಗಿದಂತೆ’ ದೇವರು ತನ್ನೊಳಗಿಯೇ ಇರುವನೆಂದು ದೃಢವಾಗಿ ನಿಶ್ಚಯಿಸಿದ್ದು ಸರ್ವರು ಒಪ್ಪಲು ಯೋಗ್ಯವಾಗಿದೆ.

ಹೀಗಿದ್ದರೂ ಆಧುನಿಕ ದಿನಮಾನದೂಳಗೆ ನಾವೆಲ್ಲರೂ ಅಸಂಖ್ಯಾತ ದೇವರು, ದೇವತೆಗಳನ್ನು ಅಲ್ಲಲ್ಲಿ, ಎಲ್ಲೆಲ್ಲೂ ಸ್ಥಾಪಿಸಿ, ವಿರಾಜಮಾನ ಮಾಡಿದ್ದೆವೆ.ಅವುಗಳ ಸಂತೃಪ್ತಿ ಮತ್ತು ನಮ್ಮ ಕೆಲಸ ಕಾರ್ಯ ಪೂರ್ತಿಗಾಗಿ ಹಂಬಲಿಸಿ ಹಲಬುತ್ತಲೇ ಇದ್ದೇವೆ. ದೇವರು, ದೇವರ ಪ್ರತೀತಿಗೆ ಬೆಂಬಲವಾಗಿ ಅನೇಕ ಟ್ರಸ್ಟಗಳು, ಕಮೀಟಿಗಳು, ಆಡಳಿತ ಮಂಡಳಿಗಳು ಕಾನೂನಿನ ನೆಲೆಯೊಳಗೆ ಕಾರ್ಯ ಮಾಡುತ್ತಲೇ ಇವೆ. ಭಾರತೀಯ ಸಮಾಜದಲ್ಲಿ ದೇವರು, ದೈವಕ್ಕೆ ಎಲ್ಲಿಲ್ಲದ ಮನ್ನಣೆ ಇದೆ. ಭಾರತೀಯರು ದೇವರು, ದೇವತೆಗಳ ನಾಡಿನವರೆಂದು ಖ್ಯಾತಿಗಳಿಸಿಕೊಂಡಿದ್ದಾರೆ. ದೇವರು ಸೃಷ್ಠಿಯಲ್ಲಿ ಭಾರತೀಯರಿಗೆ ಎಲ್ಲಿಲ್ಲದ ಮಮತೆ, ಕಾತುರ, ಕಳಕಳಿ, ಕಾಳಜಿ, ಭಾವಾನುಬಂಧ, ಇದೆ. ಅಷ್ಟೇ ಭಯ-ಭೀತಿ-ಭಕ್ತಿಯೂ ಇದೆ.

ಭಾರತ ದೇಶವು ಅಸಂಖ್ಯಾತ ದೇವರುಗಳ ತವರಾಗಿದೆ. ಇದರಿಂದ ಜಗತ್ತಿನಲ್ಲಿ ಭಾರತೀಯರು ಆದರಣೀಯ ಸ್ಥಾನವನ್ನು ಪಡೆದುಕೊಂಡಿರುವಂತೆ ಅವಹೇಳನಕ್ಕೂ, ಅನಾದರಕ್ಕೂ ಒಳಗಾಗಿದ್ದಾರೆ, ಜಗಳಕ್ಕೂ ಗುರಿಯಾಗಿ ದ್ದಾರೆ.ಜಗತ್ತಿನಲ್ಲಿದ್ದು ಇರಲಾರದಷ್ಟು ದೇವರುಗಳ ಸಂಖ್ಯೆಯನ್ನು ಹೊಂದಿರುವ ಈ ಸಮಾಜದಲ್ಲಿ ದೇವರುಗಳ ಅವತಾರಗಳು, ಪ್ರತಿರೂಪಗಳು, ಪ್ರತಿನಿಧಿಗಳು, ಪ್ರಭಾವಿಗಳು, ಪ್ರವಾದಿಗಳು, ಪುಣ್ಯ ಪುರುಷರು, ಹಿಂದಿನಗಿಂತಲೂ ಹೆಚ್ಚಾಗಿ ದ್ದಾರೆ. ಅಸಂಖ್ಯಾತ ದೇವರು, ದೇವರ ಅವಂತಾರಗಳಿಂದಾಗಿ ಎಂದಿನಂತೆ ಇಂದು ಭಾರತೀಯ ಸಮಾಜ ಪ್ರಚಾರದಲ್ಲಿದೆ. ನಿತ್ಯದೊಳಗೆ ಹೊಸ, ಹೊಸ ದೇವರು, ದೇವತೆಗಳು ಪ್ರಚಲಿತಕ್ಕೆ ಬರುತ್ತಿರುವುದರಿಂದ ಈ ದೇವರು ದೇವತೆಗಳನ್ನು ಎಷ್ಟೆಂದು ಸಮೀಕರಿಸುವುದು ಅಷ್ಟೊಂದು ಸರಳ, ಸಹಜ ಕಾರ್ಯ ಎಂದು ಹೇಳಲಿಕ್ಕಾಗದು.
ಭಾರತೀಯ ಸಮಾಜದಲ್ಲಿ ಪ್ರಚಲಿತವಿರುವ, ಪ್ರಚಲಿತಕ್ಕೆ ಬರಬಹುದಾದ ದೇವರುಗಳನ್ನು ವರ್ಗೀಕರಿಸುವುದು. ವಿಭಾಗಿಸುವುದು ಯಾವ ಲೆಕ್ಕಾಚಾರಕ್ಕೂ ನಿಲುಕದ ಸಂಗತಿಯೇ ಆಗಿದೆ.

ಭಾರತೀಯ ಸಮಾಜದಲ್ಲಿ ದೇವರು ಅನುರೇಣುತೃಣಕಾಷ್ಟಿನಲ್ಲಿ ಇದ್ದಾನೆಂಬ ನಂಬಿಕೆಯು ಸಾರ್ವತ್ರಿಕವಾಗಿದೆ. ಆದರೆ ಈ ಅನುರೇಣುತೃಣಕಾಷ್ಟಿನಲ್ಲಿ ಯಾವ ದೇವರಿದ್ದಾನೆ ? ಯಾರು ಸ್ಥಾಪಿಸಿದ ದೇವರು, ದೇವತೆ ಇರುವುದೆಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ ಒಂದು ವೇಳೆ ಈ ಸಾಹಸವನ್ನು ಯಾರಾದರು ಮಾಡಿದರೆ ಅವರೆಲ್ಲರೂ ತೀವ್ರವಾದ ಪ್ರತಿಭಟನೆ, ವಿರೋಧ, ಗಲಾಟೆ, ಹರತಾಳ, ಕರಾಳ ಯಾತನೆಗಳನ್ನು ಅನುಭವಿಸಬೇಕಾಗುತ್ತದೆ. ಈ ದೇಶಕ್ಕೆ ಒಬ್ಬನೇ ದೇವರು ಎಂದು ಹೇಳುವಷ್ಟು ಶಕ್ತಿಯನ್ನು ಯಾವ ಕಾಲಕ್ಕೆ ಯಾರು ಪಡೆದುಕೊಳ್ಳದ ಸ್ಥಿತಿಯ ಇದೆ. ವೈವಿದ್ಯತೆಯೊಳಗೆ ಅನೇಕತೆ ಇದೆ ಏಕತೆಯೂ ಇದೆ ಎಂದು ಬಲವಾಗಿ ನಂಬಿಸಲಾಗಿದೆ. ಜಗದೊಳಗೆ ಬಹುತ್ವ ಮತ್ತು ವೈವಿಧ್ಯತೆ ಎಲ್ಲವನ್ನು ಪಡೆದುಕೊಳ್ಳಲು ಅಸಂಖ್ಯಾತ ದೇವರುಗಳೇ ಕಾರಣವೆಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಅಸಖ್ಯಂತ ದೇವರುಗಳು ಇರುವುದರ ಜೊತೆಗೆ ಅನುಕೂಲಕರ ದೇವರುಗಳು ಸಹ ಇಲ್ಲಿವೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಅನುಕೂಲತೆಯನ್ನು ಪೂರೈಸುವ ಮತ್ತು ಹರಿಸುವ ದೇವರುಗಳನ್ನು ಹುಡುಕುತ್ತಿದ್ದಾರೆ, ಇಲ್ಲವೇ ಹಿಡಿದುಕೊಂಡಿದ್ದಾರೆ. ಹಿಡಿದುಕೊಳ್ಳಲು ಯತ್ನಸುತ್ತಿದ್ದಾರೆ. ಮನೋಕಾಮನೆಗಳನ್ನು ಪೂರೈಸುವ ಪ್ರತೀತಿವಿರುವ ದೇವರುಗಳು ಪ್ರಸಿದ್ಧಿ ದೇವರುಗಳಾಗಿ ಮಾರ್ಪಟ್ಟಿವೆ. ಜಾಗೃತ ದೇವರುಗಳೆಂದು ಖ್ಯಾತಿಗೊಂಡಿರುವ ಈ ದೇವರುಗಳು ಹೆಚ್ಚೆಚ್ಚು ನಮಗೆಲ್ಲಾ ಅನುಕೂಲಕರವಾಗಿ ಕಂಡಿವೆ. ಈ ಎಲ್ಲ ಪ್ರಮುಖ, ದೇವರು-ದೇವತೆಗಳನ್ನೆಲ್ಲ ಹಿಂದಕ್ಕೆ ಸರಿಸಿದ ಬಸವಣ್ಣನವರು, ಸತ್ಯವೇ ದೇವರೆಂದು ಹೇಳಿದ್ದಾರೆ.

ನಮ್ಮ ಸಮಾಜದಲ್ಲಿ ‘ಶಾಪ’ ಪ್ರಚಲಿತವಿರುವ ಪ್ರಬಲ ಅನಿಸಿಕೆಯಾಗಿದೆ. ನಮ್ಮ ಕೆಲಸಗಳು ಆಗದಿರುವಿಕೆಗೆ ದೇವರ ಅವಕೃಪೆ, ಶಾಪವೇ ಕಾರಣವೆಂದು ನಂಬಿಸುವ ಕಾರ್ಯ ಚುರುಕಾಗಿದೆ. ಶಾಪ ಕೊಡುವ ದೇವರುಗಳನ್ನು ಸಂಪ್ರೀತಿಗೊಳಿಸಲು ಸಾಕಷ್ಟು ಮುತುವರ್ಜಿ ವಹಿಸಿಲಾಗಿದೆ. ಶಾಪ ಕೊಡುವ ದೇವರುಗಳನ್ನು ನಾವೆಲ್ಲರು ಹೆಚ್ಚೆಚ್ಚು ಪೂಜಿಸುತ್ತೇವೆ. ಕೋಪ, ಶಾಪದ ದೇವರುಗಳು ನಮ್ಮ ಅಸಂಖ್ಯ ದೇವರುಗಳ ಪ್ರಭಾವದ ಪರಿಧಿಯನ್ನು ಹೆಚ್ಚಿಸಿವೆ. ಶಾಪ, ಕೋಪದ ದೇವರು ದೇವರಲ್ಲವೆಂದು ಪ್ರಾಣಿ ಬಲಿ, ಬಲಿ ಬೇಡುವ ದೇವರು, ದೇವರಲ್ಲೆಂದು ಬಸವಣ್ಣನವರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇಷ್ಟಲಿಂಗದಲ್ಲಿಯೇ ದೇವರು ಇರುವ, ಗುಡಿ- ಗುಂಡಾರ ಸುತ್ತದಂತೆಯೂ ನೋಡಿಕೊಂಡಿದ್ದಾರೆ.

‘ವರ’ ಕೇಳುವುದು ಭಾರತೀಯರ ಜನ್ಮಸಿದ್ದ ಹಕ್ಕುಗಳಲ್ಲಿ ಸೇರಿಕೊಂಡಂತ್ತದೆ. ವರ ಕೇಳುವ ಸಂಪ್ರದಾಯಕ್ಕೆ ಹೆಚ್ಚಿನ ಒತ್ತುಕೊಟ್ಟಿರುವ ಈ ಸಮಾಜವು ದೇವರಿಂದ ವರಪಡೆದುಕೊಳ್ಳಲೆಂದೇ ಜಪ, ತಪಗಳನ್ನು ಕೈಕೊಂಡ ವಿಫುಲ ಉದಾಹರಣೆಗಳು ನಮ್ಮಲ್ಲಿವೆ. ಒಂದೊಂದು ದೇವರುಗಳನ್ನು ಸಂಪ್ರೀತಿಗೊಳಿಸಲು ನಾನಾ ವಿಧವಾದ ಪೂಜಾ ವಿಧಿ ವಿಧಾನಗಳನ್ನು ನಿಗದಿಪಡಿಸಲಾಗಿದೆ. ಬಸವಣ್ಣನವರು ವರ ಪಡೆದುಕೊಳ್ಳುವ ಪದ್ಧತಿ ಅಳಿಸಿ ಕಾಯಕವನ್ನೇ ದೇವರ ವರವೆಂದರು.

ಜನ ಜೀವನದಲ್ಲಿ ವಿದ್ಯೆಯನ್ನು ದಯಪಾಲಿಸುವ ದೇವರುಗಳ ಸರಣಿಯೇ ಇದೆ. ವಿದ್ಯಾಬುದ್ಧಿ ಗಳಿಸಲು ಆ ದೇವರುಗಳಲ್ಲಿ ಅನನ್ಯವಾದ ಭಯ ಭಕ್ತಿಯನ್ನು ತೋರಿಸುವ ವಿಧಾನಕ್ಕೆ ದಕ್ಷಿಣೆ, ದಾನ ಮುಖ್ಯವೆಂದು ನಿಗದಿಗೊಳಿಸಿದ ಸಂಪ್ರದಾಯ ಚಾಲ್ತಿಯೊಳಗಿದೆ. ವಿದ್ಯೆ, ಬುದ್ಧಿ ಎಲ್ಲವೂ ನಮ್ಮ ಕಾಯಕದಲ್ಲಿ ಸತ್ಸಂಗದೊಳಗೆ ಅಡಗಿದೆಂದು ಬಸವಣ್ಣನವರು ತಮ್ಮ ವಚನಗಳ ಮೂಲಕ ಸಿದ್ಧಿಸಿ ತೊರಿಸಿದರು. ದೇವರು, ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆ, ಭಯದಿಂದ ಜನರನ್ನು ಮುಕ್ತಗೊಳಿಸಿದರು. ದಾನದಿಂದ, ಪಶ್ಚಾತಾಪದಿಂದ ಪಾಪ ಮುಕ್ತಿಗೊಳ್ಳಲು ಸಾಧ್ಯವಿಲ್ಲ. ಸದ್ಗುಣ, ಸುಶೀಲ, ಸದಾಚಾರಗಳಿಂದ ಬದುಕುವುದೇ ದೇವರು, ದೈವತ್ವವೆಂದು ಬಸವಣ್ಣನವರು ತಿಳಿಸಿಕೊಟ್ಟರು.

ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯ ?
ಉರಿಯ ಕಂಡಡೆ ಮುರಟುವ ದೈವವನೆಂತು ಸರಿಯೆಂಬೆನಯ್ಯ ?
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯ ?
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯ ?
ಸಹಜಭಾವ ನಿಜೈಕ್ಯ ಕೂಡಲ ಸಂಗಮದೇವನೊಬ್ಬನೇ ದೇವ.

ಕೂಡಲಸಂಗಮ ದೇವನೊಬ್ಬನೇ ದೇವ ಎಂದ ಬಸವಣ್ಣನವರು, ಏಕೋದೇವ ಎಂಬುದನ್ನು ಪ್ರತಿಪಾದಿಸಿದ್ದಾರೆ. ದೇವರು, ದೇವರೆಂದು ಸಿಕ್ಕ ಸಿಕ್ಕಂತೆ ಅಲೆದಾಡಿ, ಕಾಲಹರಣ, ಪುರೋಹಿತರ ಶೋಷಣೆ ತಪ್ಪಿಸುವಲ್ಲೂ ಯಶಸ್ವಿಯೊಗಿದ್ದಾರೆ. ಹಲವು ಬಗೆಯ ದೇವರುಗಳು ವಿವರ ನೀಡಿದ ಬಸವಣ್ಣವರು, ಮಾನವಕುಲದ ಶಕ್ತಿ ಯುಕ್ತಿಗಳನ್ನು ಏಕೀಕೃತಗೊಳಿಸಿದ್ದಾರೆಂದರೆ ತಪ್ಪಾಗದು.

ಮಡಿಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೋ,
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೋ !
ದೈವ ದೈವವೆಂದು ಕಾಲಿಡಲಿಂಬಿಲ್ಲಾ !!
ದೇವನೊಬ್ಬನೆ ಕೂಡಲಸಂಗಮದೇವ.

ದೇವರು, ದೇವರ ಆಯುಧ, ದೇವರು ಸಂಚರಿಸುವ ವಾಹನ, ಪಶುಪಕ್ಷಿ ಎಲ್ಲವನ್ನು ದೇವರೆಂದು, ಕಾಲಿಡಲಾಗದಷ್ಟು ದೇವರುಗಳನ್ನು ರೂಪಿಸಲಾಗಿದೆ. ಇದನ್ನೇ ಬಸವಣ್ಣನವರು ದೈವ, ದೈವವೆಂದು ಕಾಲಿಡಲಿಂಬಿಲ್ಲದಷ್ಟು ದೇವರು ನಮ್ಮಲ್ಲಿವೆ ಎಂದು ಹೇಳಿ ದೇವರು, ದೇವರು ಎನ್ನುತ ಕನವರಿಸುವುದು ತರವಲ್ಲೆಂದು ಎಚ್ಚರಿಸಿದ್ದಾರೆ. ಬಸವಣ್ಣನವರು ದೇವರ ನಾಮ ಹಲವಾದರೂ ದೇವರೊಬ್ಬನೆ ಎಂದು ಪ್ರತಿಪಾದಿಸಿರುವುದು ಮನೋಜ್ಞವಾಗಿದೆ.

ದೇವನ್ನೊಬ್ಬ, ನಾಮ ಹಲವು
ಪರಮ ಪತಿವೃತೆಗೆ ಗಂಡನೊಬ್ಬ;
ಮತ್ತೊಂದಕ್ಕೆರಗಿದರೆ ಕಿವಿ ಮೂಗ ಕೊಯ್ವನು !
ಹಲವು, ದೈವದ ಎಂಜಲ ತಿಂಬವರನೇನೆಂಬೆ
ಕೂಡಲಸಂಗಮದೇವಾ

ಬಸವಣ್ಣವರು ದೇವರುಗಳ ಬಗ್ಗೆ ಚಿಂತನ ಮಂಥನ ಮಾಡಿ, ಇಷ್ಟಲಿಂಗ ಎಂಬ ದೇವರ ಕುರುಹಿನ ಆಧಾರದಿ ಜನರನ್ನು ಒಗ್ಗೂಡಿಸಿದರು. ಜನರು ಸಮಾನತೆಯಿಂದ ದೇವರೊಂದಿಗೆ ಹೊಂದಿಕೊಂಡು ಬಾಳುವ ನಿಧಿಯನ್ನೆ ನಿರೂಪಿಸಿದರು. ಇಷ್ಟ ಲಿಂಗವು ಸಮಾನತೆಯ ಕುರುಹುವಾಗಿ ಇಂದಿಗೂ ತೇಜೋಮಯವಾಗಿ ಬೆಳಗುತ್ತಿದೆ, ಬೆಳಗಿಸುತ್ತಿದೆ. ಬಸವಣ್ಣನವರ ವೈಚಾರಿಕತೆಯ ನೆಲೆಯಲ್ಲಿ ದೇವರನ್ನು ಕಾಣಬಯಸಿದರು, ಕಾಯಕದ ಮೂಲಕ ಬದುಕನ್ನು ನಿರ್ವಹಿಸುವ ಪಥವನ್ನು ನಿರ್ಮಿಸಿದರು.

ನೀರ ಕಂಡಲ್ಲಿ ಮುಳುಗುವರಯ್ಯ
ಮರನ ಕಂಡಲ್ಲಿ ಸುತ್ತುವರಯ್ಯ !
ಬತ್ತುವ ಜಲವ ನೊಣಗುವ ಮರನ
ಮಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲ ಸಂಗಮದೇವಾ ?

ವಾಸ್ತವತೆಯ ನೆಲೆಗಟ್ಟಿನಲ್ಲ ದೇವರನ್ನು ಕಾಣಬಯಿಸಿದ ಬಸವಣ್ಣವರು, ಛತ್ತೀಸ್ ಕೋಟಿ ದೇವರ ವಿವಿಧ ಮುಖಗಳನ್ನು ಪರಿಚಯಿಸಿ, ಜನರನ್ನು ಭೇದಭಾವಕ್ಕೆ ತಳ್ಳುವ ದೇವರಿಂದ ದೂರು ಇರುವಂತೆ ಮಾಡಿದ್ದಾರೆ. ಸಕಲರಿಗೂ ಲೇಸನ್ನು ಬಯಿಸುವ ಇಷ್ಟಲಿಂಗದೊಳಗೆ ನಿಷ್ಠೆ ಹೊಂದಿ ನೆಲೆಗೊಳ್ಳಲು ಸೂಚಿಸಿದ್ದಾರೆ.

ಕಿಚ್ಚು ದೈವವೆಂದು ಹವಿಯನಿಕ್ಕುವ
ಹಾರುವನ ಮನೆಯಲ್ಲಿ ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರ, ಬೀದಿಮಧೂಳ ಹೊಯ್ದು ಬೊಬ್ಬಿಟ್ಟೆಲ್ಲರ ಕರೆವರಯ್ಯ
ಕೂಡಲ ಸಂಗಮದೇವಾ ವಂದನೆಯ ಮರೆದು ನಿಂದಿಸುತಿರ್ದರಯ್ಯ.

ಯಜ್ಞ ಯಾಗದಿಗಳಲ್ಲಿ ಅಗ್ನಿಗೆ ಆಹುತಿಯನ್ನು ಕೊಡುವುದು, ಅಗ್ನಿ ಕುಂಡಗಳನ್ನು ನಿರ್ಮಿಸಿ ಆ ಅಗ್ನಿಕುಂಡಕ್ಕೆ ಏನೇನೋ ಅರ್ಪಿಸುವುದು ಪೂರ್ಣಾಹುತಿ ಕೊಡುವುದು ಒಂದು ಆರಾಧನೆ, ದೇವರ ಕಾರ್ಯವಾಗಿ ಪ್ರಸಿದ್ಧಿ ಪಡೆದಿದೆ ಇದೆಲ್ಲ ದೇವರ ಅನುಗ್ರಹ ಪಡೆಯುವ ಪರಾಕ್ರಮವೇ ಆಗಿದೆ. ಇದು ಬದುಕಿಗೆಷ್ಟು ಪೂರಕ, ಇಂಥ ಅಮನುಷ್ಯ ಕೃತ್ಯಕ್ಕೆ ಶಾಸ್ತ್ರ ಹೇಳುವವರ ನಡಾವಳಿಯನ್ನು ಅತ್ಯಂತ ವಸ್ತುನಿಷ್ಠೆವಾಗಿ ಪರಾಮರ್ಶಿಸಿರುವ ಬಸವಣ್ಣನವರು ದೇವರ ಹೆಸರಿನಲ್ಲಿ ನಡೆಯುತ್ತಿರುವ ಹಣ, ಸಮಯ, ಪರಿಸರ ನಾಶವನ್ನು ತಡೆಯುವ ಸೂತ್ರಗಳನ್ನು ಪಸರಿಸಿ, ವೈಚಾರಿಕತೆಯೊಳಗೆ ನಡೆಯುಲು ಪ್ರೇರಣೆ ನೀಡಿದ್ದಾರೆ.

ಜೀವನದ ಪರಿಧಿಯೊಳಗೆ ಕಾಲ ಕಾಲಕ್ಕೆ ದೇವರುಗಳನ್ನು ಸೃಷ್ಟಿಸುತ್ತ ನಡೆದಿರುವ ಮಾನವನ ಮನೋಗತದೊಳಗೆ ಅಂಧಾನುಕರಣೆ ಮತ್ತು ಉದರಪೋಷಣೆಯ ಸ್ವಾರ್ಥ ಅರಿತುಕೊಂಡ ಬಸವಣ್ಣವರು, ಕಾಯಕ, ದಾಸೋಹ, ಅನುಭಾವಗಳನ್ನು ಜಗತ್ತಿಗೆ ಸಾರಿ, ಏಕೋದೈವ, ದೇವರಲ್ಲಿ ನಂಬಿಕೆಯನ್ನಿಡಲು ಎಲ್ಲರನ್ನು ಆಹ್ವಾನಿಸಿದ್ದಾರೆ. ಬಸವಣ್ಣನವರು ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಅನಾಚಾರ ಬಿಡಿಸಿ, ಸದಾಚಾರ ಬಾಳಿಗೆ ಅಣಿಗೊಳಿಸುವ ಪ್ರಯೋಗ ಎಂದೆಂದಿಗೂ ಅನುಕರಣೀಯ.

ಭಾರತೀಯ ಸಮಾಜದಲ್ಲಿ ಎಲ್ಲಕ್ಕೂ ಪ್ರಾರಬ್ಧ ಮತ್ತು ಹಣೆಬರಹದಂತೆ ನಡೆಯುತ್ತದೆ ಎಂಬುದನ್ನು ಬಿಂಬಿಸಲಾಗಿದೆ. ಈ ಪ್ರಾರಬ್ಧಕ್ಕೆ ಒಂದೊಂದು ದೇವರ ಕಾಟವೇ ಕಾರಣವೆಂದು ಹೇಳಲಾಗುತ್ತದೆ. ಹಣೆ ಬರಹವನ್ನು ಬರೆಯುವ ಕೆಲಸ ದೇವರ ಇಷ್ಟದಂತೆ ಇರುತ್ತದೆ ಇದಕ್ಕೆ ಏನಾದರೂ ಸುಧಾರಿಸಲು ಪುರೋಹಿತರು ಹೇಳುವ ಪರಿಹಾರ, ಪೂಜೆ ಮಾಡುವುದು ಅಗತ್ಯವೆಂದು ಪಂಚಾಂಗದ ಪ್ರತೀತಿ ಹಬ್ಬಿಸಲಾಗಿದೆ. ಸೃಷ್ಟಿ ನಿರ್ಮಾಣ, ಪಾಲನೆ, ಲಯಕ್ಕೆ ಒಂದೊಂದು ದೇವರು ಇರುವುದು ಎಲ್ಲರಿಗೂ ಗೊತ್ತಿದ್ದ ಸಂಗತಿ ದೇವರುಗಳ ದೇಶವಾಗಿರುವ ಈ ಭಾರತದಲ್ಲಿ ವಯಕ್ತಿಕ ದೇವರು, ಮನೆಯ ದೇವರು ಸಮಾಜದ ದೇವರು, ಮೂಲ ದೇವರು ಕುಟುಂಬದ ದೇವರು ಕುಲ ದೇವರು, ಪ್ರದೇಶದ ದೇವರು, ಪುಣ್ಯ ಕೊಡುವ ದೇವರು ಪಾಪ ಪರಿಹಾರದ ದೇವರು, ಜಾಗೃತ ದೇವರು, ಸ್ಪಯಂಭೂ ದೇವರು ಪುರಾತನ ದೇವರು, ಕಲ್ಕಿ ದೇವರು, ಕಾಳ ದೇವರು, ಭಯಂಕರ ದೇವರು ಇತ್ಯಾದಿ ಇತ್ಯಾದಿ ದೇವರುಗಳು ಪ್ರಚಲಿತದಲ್ಲಿವೆ ಇಂಥ ಅಸಂಖ್ಯಾತ ದೇವರುಗಳನ್ನು ಆಕಾಶ ಪಾತಾಳಗಳಿಗೂ ವಿಸ್ತರಿಸುವ ನಾವೆಲ್ಲರೂ ಯಾವುದರಲ್ಲೂ ಅಚಲವಾದ ನಂಬಿಕೆ ವಿಶ್ವಾಸವನ್ನಿಟ್ಟು ಬದುಕಲು ಇಂದಿಗೂ ಕಲಿತಿಲ್ಲ.

ಬಸವಣ್ಣವರ ಕಾಲದಲ್ಲೂ ಈ ದೇವರುಗಳ ಗೊಂದಲ ಚರ್ಚೆ ಬಹುವಾಗಿ ಇದ್ದುದ್ದನ್ನು ಕಾಣುತ್ತೇವೆ. ಈ ಗೊಂದಲವನ್ನು ತಿಳಿಗೊಳಿಸಲು ಬಸವಣ್ಣವರು ಅತ್ಯಂತ ನಯ ವಿನಯದಿಂದ ಪರಿಶ್ರಮ ಪಟ್ಟು ಅಂತರಂಗ- ಬಹಿರಂಗ ಶುದ್ಧಿಯ ಸಪ್ತ ಸೂತ್ರಗಳ ಪರಿಪಾಲನೆಯೊಳಗೆ ದೇವರ ದಿಟ್ಟತೆಯ ದಿವ್ಯವನ್ನು ನಮಗೆ ತೋರಿಸಿದ್ದಾರೆ. ಅವರು ಗುಡಿ ಗುಂಡಾರಗಳಲ್ಲಿ ದೇವರ ಹೆಸರಿನಲ್ಲಿ ನೆಲೆಸಿರುವ ಭೇದ ಭಾವವನ್ನು, ಪ್ರವೇಶಕ್ಕಿರುವ ನಿರ್ಬಂಧ, ಶುಲ್ಕ, ಮುಂತಾದವುಗಳನ್ನು ಇಷ್ಟಲಿಂಗದ ಧಾರಣದಡಿ ಪರಿಹರಿಸಿದ್ದು ವಿನೂತನ ಪ್ರಯೋಗವಾಗಿದೆ.
ಶಾಪ ಕೊಡುವ, ವಿಘ್ನಗಳಿಗೆ ಕಾರಣವಾಗಿರುವ, ವಿಘ್ನ ಪರಿಹರಿಸುವ, ಆರ್ಶೀವಾದ, ವರಗಳನ್ನು ನೀಡುವ ಅಸಂಖ್ಯಾತ ದೇವಾನುದೇವತೆಗಳನ್ನು ಶಕ್ತಿ-ಯುಕ್ತಿಯ ದೇವರುಗಳನ್ನು ಸಮೀಕರಿಸುವ ಘನವಾದ ಕಾರ್ಯವನ್ನು ಕೈಕೊಂಡ ಬಸವಣ್ಣವರು ಮಾನವನ ದೇಹವನ್ನೇ ದೇಗುಲವನ್ನಾಗಿ ಪರಿಗಣಿಸುವ ಆಚಾರವನ್ನು ಸಂಘಟಿಸಿ, ಮನುಷ್ಯನ ಕಾಯವನ್ನೇ ಪ್ರಸಾದ ಕಾಯವನ್ನಾಗಿ ಪರಿವರ್ತಿಸಿರುವುದು ಸಹಜ ಸುಂದರವಾಗಿದೆ.

ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆ? ಬಡವನಯ್ಯ
ಎನ್ನ ಕಾಲೇ ಕಂಭ ದೇಹವೇ ದೇಗುಲ
ಶಿರ ಹೊನ್ನ ಕಳಸವಯ್ಯ
ಕೂಡಲಸಂಗಮದೇವ, ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳವಿಲ್ಲಾ !

ಬಸವಣ್ಣವರು, ದೇವರು ಅಲ್ಲಿ, ಇಲ್ಲಿ ಎಲ್ಲೆಲ್ಲೂ ಇರದೇ ಪ್ರತಿ ವ್ಯಕ್ತಿಯೊಳಗೆ ಸಮೀಕರಿಸಕೊಂಡಿರುವ ಸ್ವರೂಪವನ್ನು ಅತ್ಯಂತ ಸಹಜ ರೀತಿಯಲ್ಲಿ ಮನದಟ್ಟು ಮಾಡಿ ಸ್ಥಾವರಕ್ಕೆ ಬೆನ್ನು ಹತ್ತದಂತೆ ಎಚ್ಚರಿಸಿದ್ದಾರೆ. ಏಕತ್ವದ ಸೂತ್ರದಲ್ಲಿ ಮನುಷ್ಯನು ತನ್ನ ನಡೆ-ನುಡಿಯಿಂದಲೇ ದೈವತ್ವಕ್ಕೆರುವ ಸ್ಥಿತಿಯನ್ನು ಮನದಟ್ಟು ಮಾಡಿದ ಬಸವಣ್ಣನವರು ವೈಜ್ಞಾನಿಕ ಬದುಕಿನ ಸಾರಸತ್ವವನ್ನು ಕಟ್ಟಿಕೊಟ್ಟಿದ್ದು ದಾರ್ಶಿನಿಕ ಕ್ಷೇತ್ರದೊಳಗಿನ ಹೊಸ ಹೆಜ್ಜೆಯಾಗಿದೆ.

ಇಬ್ಬರೂ ಮೂವರು ದೇವರೆಂದು ಉಬ್ಬಿ ಮಾತ ನಾಡಬೇಡ
ಒಬ್ಬನೇ ಕಾಣಿರೋ, ಇಬ್ಬರೆಂಬುದು ಹುಸಿನೋಡಾ
ಕೂಡಲಸಂಗಮದೇವನಲ್ಲದೆ ಇಲ್ಲವೆಂದಿತ್ತು ವೇದ.
ಹುಟ್ಟಿಸುವಾತ ಒಬ್ಬ ದೇವರು, ಕೊಲ್ಲುವಾತನ್ನೊಬ್ಬ ದೇವ, ಇಂತೆಂದು ಹೇಳುವ ಸಂಗತಿಗೆ ಪ್ರತಿಕ್ರೆಯಿಸಿರುವ ಬಸವಣ್ಣವರು ಪ್ರಚಲಿತ ಜಂಜಡದ ದೇವರಾಚೆ ಬದುಕಲು ಕಲಿಸಿದ್ದಾರೆ.
ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು, ನೋಡಾ
ಬ್ರಹ್ಮ ತನ್ನ ಸಿರವನ್ನೆಕೆ. ಹುಟ್ಟಿಸಲಾರ ?
ವಿಷ್ಣು ತನ್ನ ಮಗನನ್ನೇಕೆ ರಕ್ಷಿಸಲಾರ ?
ದುಷ್ಟನಿಗ್ರಹ ಶಿಷ್ಟ ಪರಿಪಾಲಕ ನಮ್ಮ ಕೂಡಲಸಂಗಮದೇವ

ಏಕೇದೇವ ಉಪಾಸನೆಯ ಪರಿಯನ್ನು ಬಿಂಬಿಸಿದ ಬಸವಣ್ಣವರು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ. ದೇವರ ಹೆಸರಿನಲ್ಲಿ ಇಂದಿಗೂ ಕಾಡುತ್ತಿರುವ ಸ್ವರ್ಗ - ನರಕಗಳಿಂದ ದೂರಾಗಿ ನಡೆ- ನುಡಿಗಳಲ್ಲಿಯೇ ಸ್ವರ್ಗ - ನರಕಗಳು ಇವೆ ಎಂದು ತೋರಿಸಿ ಕೊಟ್ಟಿದ್ದಾರೆ. ಸತ್ಯ ನುಡಿದು, ಅದರಂತೆ ನಡೆಯುವುದೇ ದೇವರು.

‘ಸ್ವಾಮಿ ನೀನು ಶಾಶ್ವತ ನೀನು,
ಎತ್ತಿದೆ ಬಿರುವ ಜಗವೆಲ್ಲರಿಯಲು
ಮಹಾದೇವ, ಮಹಾದೇವ,
ಇಲ್ಲಿಂದ ಮುಂದೆ ಶಬ್ದವಿಲ್ಲ !
ಪಶುಪತಿ ಜಗಕ್ಕೆ ಏಕೋದೇವ;
ಸ್ವರ್ಗ ಮತ್ರ್ಯ ಪಾತಾಳದೊಳಗೆ
ಒಬ್ಬನೆ ದೇವ ಕೂಡಲಸಂಗಮದೇವ.

ಸ್ವರ್ಗ, ಮತ್ರ್ಯ, ಪಾತಾಳಕ್ಕೆಲ್ಲ ದೇವನೊಬ್ಬನೆ ಎಂದಿರುವ ಬಸವಣ್ಣನವರು, ದೇವರ ಸಂಪ್ರೀತಿಯ ಮಂತ್ರ, ತಾಯತ, ಪಂಚಾಂಗಗಳನ್ನೆಲ್ಲ ನಿಶಬ್ದಗೊಳಿಸಿದ್ದಾರೆ. ಧರ್ಮಕ್ಕೊಂದು ದೇವರು ಎಂಬುದನ್ನು ಹಿಂದಕ್ಕೆ ಸರಿಸಿದ ಬಸವಣ್ಣನವರು ದಯೆವೇ ಧರ್ಮದ ಮೂಲವೆಂದು ಸಕಲ ಜೀವಾತ್ಮರಿಗೆ ಲೇಸನ್ನೇ ತರುವುದೇ ಧರ್ಮದಾಚರಣೆ, ಎಂಬುದನ್ನು ಮನಮೆಚ್ಚುವಂತೆ ಅನುಭಾವವನ್ನು ವಚನಗಳಲ್ಲಿ ಹರಡಿದ್ದಾರೆ.ದೇವರು, ಧರ್ಮದ ಹೆಸರಿನಲ್ಲಿ ನಡೆಯುತ್ತಿದ ಅನಾಚಾರಕ್ಕೆ, ಹಿಂಸಾವೃತ್ತಿಗೆ, ಭೇದಭಾವದ ಸಂತೆಗೆ ತಿಲಾಂಜಲಿ ಹಾಡಿದ ಬಸವಣ್ಣನವರು ವೇದ, ಪುರಾಣ, ಶಾಸ್ತ್ರದ ಕಂದಾಚಾರ, ಮೂಢಚಾರಗಳಿಗೆ ತಕ್ಕ ಪಾಠ ಕಲಿಸಿದ್ದು, ಸ್ವತಂತ್ರ ಧೀರತ್ವದ ಪ್ರತೀಕವೆಂದೇ ಹೇಳಬಹುದಾಗಿದೆ.

ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು, ಎಲೆ ಹೋತೇ ಅಳು, ಕಂಡಾ!
ವೇದವನೋದಿದವರ ಮುಂದೆ ಅಳು, ಕಂಡಾ !
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ !
ನೀನತ್ತುದಕ್ಕೆ ತಕ್ಕುದು ಮಾಡುವ ಕೂಡಲಸಂಗಮದೇವ.

ಪಾಪ ಪರಿಹಾರಕ್ಕೆ ಪಾರಬ್ಧ, ಪಾಪ, ಮಾಡಿದ ಅನಾಚಾರ ಅಳಿಸಿಕೊಳ್ಳಲು, ಪ್ರಾಯಶ್ಚಿತ ಮಾಡಿ ಪುಣ್ಯ ಪಡೆಯಲು, ದೇವರು, ದೇವತೆಗಳಿಗೆ ಭರ್ಜರಿ ಆರಾಧನೆ, ಬಲಿ ಕೊಡುವುದು ಶಾಸ್ತ್ರ ಸಮ್ಮತವೆಂದು ಹೇಳುವವರಿಗೆ ಎಚ್ಚರಿಕೆ ನೀಡಿರುವ ಬಸವಣ್ಣನವರು ಬಲಿ ಸಂಸ್ಕøತಿಯನ್ನು ಧೈರ್ಯದಿಂದ ಅಲ್ಲಗಳೆದು ಬದುಕುವ ಮಾರ್ಗವನ್ನು ಸುಗಮಗೊಳಿಸಿದ್ದಾರೆ.ಬಲಿ ಬೇಡುವ ದೇವರು, ಬಲಿ ಕೊಡುವ ಮನೋಧರ್ಮವನ್ನು ಖಂಡಿಸಿದ ಬಸವಣ್ಣವರು, ಸಾತ್ವಿಕ ಜೀವನವೇ ದೇವನೊಲುಮೆಯ ಸುಲಭ ದಾರಿ ಎಂದಿದ್ದಾರೆ.

ನಿತ್ಯ ಅನಿತ್ಯ ದೇವರುಗಳ ಜಂಜಡವನ್ನು ಬಿಡಿಸಿದ ಬಸವಣ್ಣನವರು ಭೂಲೋಕದಲ್ಲಿಯೇ ಸಕಲ ಸಂಪತ್ತು ಇದೆ ಎಂಬುದಕ್ಕೆ ಸಾಕ್ಷಿಯಾಗಿ ಬದುಕಿದ್ದಾರೆ. ಇಹದೊಳಗೆ ಕಾಯಕವೇ ದೇವರು ಮತ್ತು ದೇವರ ಒಲುಮೆಯ ಜ್ಯೋತಕವೆಂದು ಸಾಧಿಸಿದ್ದು ಮನನ ಯೋಗ್ಯಲಾಗಿದೆ. ಹಣೆಬರಹ, ದೇವರ ಶಾಪವೆಂದು ನಂಬಿ ಬಿದ್ದುಕೊಂಡೇ ಇದ್ದ ಜನರಿಗೆ ಸಮಾನತೆಯ ಬೆಳಕು ತಂದ ಶ್ರೇಯಸು ಬಸವಣ್ಣನವರಿಗೆ ಸಲ್ಲುತ್ತದೆ. ಆ ಈ ದೇವರ ಹಂಗು ಹರಿದುಕೊಂಡು ಬದುಕುವ ಧೈರ್ಯ ತುಂಬಿದ ಅವರು ಸಮಾನತೆಯ ಜ್ಯೋತಿಯನ್ನು ಹೊತ್ತಿಸಿದರು. ನಾನಾ ವಿಧದ ದೇವರುಗಳನ್ನು ಪೂಜಿಸುತ್ತ, ಭಜಿಸುತ್ತ ಜೀವನದಲ್ಲಿ ಹಿಂಸೆಯನ್ನು ಪಸರಿಸಿಕೊಂಡವರ ನಾಲಿಗೆಯ ಮೇಲೆ ಅಯ್ಯ, ಅಯ್ಯಾ, ಇವ ನಮ್ಮವ, ಇವ ನಮ್ಮವ, ಎಂದೆನುವಂತೆ ಮಾಡಿದರು.

“ಗುಡಿಯೊಳಗಿರ್ದು ಗುಡಿಯ ನೇಣ ಕೊಯಿದರೆ
ಗುಡಿಯ ದಡಿ ಬಿದ್ದು ಹೊಲ್ಲು ಹೋಹುದು ನೋಡಾ
ಪೊಡವಿಗೀಶ್ವರನ ಗರ್ಭಾಸನದೊಳಗಿರ್ದು
ನುಡಿವರು ಎತ್ತೊಂದು ದೈಯವುಂದೆಂದು ತುಡಗುಣಿ ನಾಯನು ಹಿಡಿ ತಂದು ಸಾಕಿದರೆ ತನ್ನೊಡೆಯಂಗೆ ಬಗುಳುವಂತೆ ಕಾಣಾ ಕೂಡಲಸಂಗಮದೇವಾ! ”.
ಜೀವನ ಸಾರ್ಥಕ್ಯವು ಬಹುವಿಧ ದೇವರು, ದೇವತೆಗಳ ಪೂಜೆಯೊಳಗಿಲ್ಲೆಂದು ದೃಢ ಪಡಿಸಿದ ಬಸವಣ್ಣನವರು ಗುಡಿ, ಗುಂಡಾರ, ಗಿಡ, ಮರ ಸುತ್ತುವುದು ತರವಲ್ಲೆಂದು ನಡೆದುಕೊಂಡರು.
ಕಣ್ಣಳು ತುಂಬಿದ ಬಳಿಕೆ ನೋಡಲಿಲ್ಲ, ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ. ಮನ ತುಂಬಿದ ಬಳಿಕ ನೆನೆಯಲಿಲ್ಲ.
ಮಹಂತ ಕೂಡಲಸಂಗಮದೇವನ
ಲಿಂಗವ ಪೂಜಿಸಿ ಫಲವೇನಯ್ಯ
ಸಮರತಿ ಸಮಕಳೆ ಸಮ ಸುಖವರೆಯದನ್ನಕ್ಕ
ಲಿಂಗವ ಪೂಜಿಸಿ ಫಲವೇನವೂ
ಕೂಡಲಸಂಗಮ ದೇವರ ಪೂಜಿಸಿ
ನದಿಯೊಳಗೆ ನದಿಯ ಬೆರಸಿದಂತಾಗದನ್ನಕ್ಕು?.

ಮಾನವೀಯತೆಯ ಮಧುರ ಕ್ಷಣಗಳಲ್ಲಿಯೇ ನಿರಂತರ ಜೀವನ ವಿಹರಿಸುವಂತೆ ಪ್ರತ್ಯಕ್ಷ ಪ್ರಮಾಣಿಸಿ ಸಾಧಿಸಿ, ಸಿದ್ಧಿಸಿದ ಬಸವಣ್ಣವರು ದಾಸೋಹ, ಕಾಯಕ, ಸತ್ಯದ ನಡೆ ನುಡಿಗಳೇ ದೇವರು, ಕೈಲಾಸವೆಂದು ಅರುಹಿದ್ದು ಮಾನವ ಕುಲಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಬಸವಣ್ಣವರು ದೇವರು ನಮ್ಮೊಳಗೆ ಅಡಗಿಕೊಂಡಿದ್ದನ್ನು ಅರುಹಿದ ರೀತಿಯು ಅನನ್ಯವಾಗಿದೆ, ಅನುಕರಣೀಯಲಾಗದೆ. ಕಾಯಕ ನಿಷ್ಠೆಯನ್ನೇ ಕೈಲಾಸವನ್ನಾಗಿಸಿದ ಬಸವಣ್ಣನವರು ಕಾಯದೊಳಗೆ ದೇವರು ಸನ್ನಿಹಿತವೆಂದು ಸಿದ್ಧಿಸಿದ್ದಾರೆ. ಬಸವಣ್ಣನವರು ಅಂದಿನ ಸಮಾಜದಲ್ಲಿ ಇದ್ದ ದೇವರುಗಳನ್ನು ಸುವಿಸ್ತಾರವಾಗಿ ಮನನ ಮಾಡಿಕೊಂಡು ಛತ್ತೀಸ ಕೋಟಿ ದೇವರುಗಳ ಒಳ- ಹೊರಗುಗಳನ್ನು ಜನಸಾಮಾನ್ಯರಿಗೆ ನಿವೇದಿಸಿದ್ದಾರೆ. ಬಸವಣ್ಣನವರು, ಸರಿ ಸಮಾನತೆಯ ಹಾಗೂ ಏಕತೆಗೆ ಸಂಕೇತವಾಗಿ ಹೊರಹೊಮ್ಮಿದ ಇಷ್ಟಲಿಂಗದಲ್ಲಿ ನಿಷ್ಠೆ ಹೊಂದಲು ಹೇಳಿದ್ದಾರೆ. ದೇವರು, ದೇವರು ಎಂಬ ಜಗ್ಗಾಟದ ಜಗಳವನ್ನು ಬಿಡಿಸಿದ್ದಾರೆ.
ದೇವರ ಜಟಿಲತೆಯು ಇಂದಿಗೂ ನಮ್ಮ ಮುಂದಿದೆ. ಸಕಲ ಜೀವಾತ್ಮರಿಗೆ ಲೇಸನ್ನು ತರುವುದೇ ಇಂದಿನ ತುರ್ತು ಕಾರ್ಯವಾಗಿದೆ, ಮಾನವೀಯತೆಯ ಮಮಕಾರ, ಮಮತೆಯುಳ್ಳ ನಡೆ - ನುಡಿಗೆ ಅವಕಾಶ ಕೊಡುವ ದೇವರು ಒಬ್ಬನೆಂಬುದನ್ನು ಅರಿಯಬೇಕಿದೆ.
ಸಕಲರನ್ನು ಒಂದಾಗಿಸುವ ದೇವರು ನಮಗೆ ಬೇಕಾಗಿದೆ. ಸರ್ವರನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ದೇವರು ಮತ್ತು ಸತ್ಸಂಗದ ಅನುಭವಜನ್ಯತೆಯನ್ನು ನಮಗೆ ಕೊಟ್ಟ ಮೊದಲ ಮಹಾನುಭವ ಬಸವಣ್ಣ.

ಬಸವಣ್ಣನವರ ಜೀವನ ಪರವಾಗಿ ನಿಲ್ಲುವ ನಡೆ-ನುಡಿಗಳನ್ನೇ ದೈವತ್ವಕ್ಕೆ ಏರಿಸಿದರು. ಬಸವಣ್ಣನವು ದೇವರ ಕಲ್ಪನೆಯನ್ನು ಸಹಜವಾಗಿ ಬಿಂಬಿಸಿದ್ದು ಅತ್ಯಂತ ಸರಳ ವಿರಳ ಸಜ್ಜನಿಕೆಯ ಹೆಗ್ಗುರುತಾಗಿದೆ.ಜೀವನವನ್ನು ಅತ್ಯಂತ ಸರಳ ಸುಗಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಅಗತ್ಯವಿರುವ ಅಂಶಗಳನ್ನು ಹೆಚ್ಚೆಚ್ಚು ಒತ್ತು ನೀಡಿದ ಬಸವಣ್ಣವರು, ಈ ಲೋಕದಲ್ಲಿಯೇ ದೇವಲೋಕದ ಸ್ವರ್ಗ ನರಕಗಳು ಇರುವುದನ್ನು ಪ್ರತಿಪಾದಿಸಿದ್ದಾರೆ. ಈ ಬದುಕನ್ನು ಅತ್ಯಂತ ಉನ್ನತ ಮಟ್ಟದಲ್ಲಿ ಬೆಳೆಯಲು, ಬೆಳಗಲು ಅವರು ಜನಜೀವನವನ್ನು ಅಣಿಗೊಳಿಸಿದ್ದು ಧಾರ್ಮಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಜನರ ಬದುಕು ಬೆಳಕಿನತ್ತ ಸಾಗುವ ಮಾರ್ಗವನ್ನು ಸುಗಮಗೊಳಿಸಿದ ರೀತಿಯು ಸಾಮಾಜಿಕ ಧಾರ್ಮಿಕ, ಬೌದ್ಧಿಕ ಕ್ಷೇತ್ರದೊಳಗೆ ಅನುಕರಣೀಯವಾಗಿದೆ ಸಾಮರಸ್ಯಕ್ಕೆ ಮಾದರಿಯಾಗಿದೆ.

ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯ
ನಿನ್ನ ಸುತ್ತಿಪ್ಪುದು ಎನ್ನ ಮನ, ನೋಡಯ್ಯ !
ನೀನು ಜಗಕ್ಕೆ ಬಲ್ಲಿದನು; ಅನು ನಿನಗೆ ಬಲ್ಲಿರನು, ಕಂಡಯ್ಯ !
ಕರಿಯು ಕನ್ನಡಿಯೊಳಗಡಗಿದಂತಯ್ಯ,
ಎನ್ನೊಳಗೆ ನೀನಡಗಿದೆ, ಕೂಡಲಸಂಗಮದೇವಾ
ನಾವು ದೇವರು, ದೈವತ್ವ ಪಾವಿತ್ರ್ಯ ಎಲ್ಲವನ್ನು ಎಲ್ಲೆಲ್ಲೂ ಹುಡುತ್ತಲೇ ಇದ್ದೇವೆ. ಆದರೆ ನಮ್ಮೊಳಗಿರುವ ದೇವರು,ದೈವತ್ವವನ್ನು ಗಮನಿಸಿಕೊಳ್ಳದೇ ಹೋಗಿದ್ದರ ಪರಿಣಾಮವೇ ಇಂದು ಅನಾಹುತ, ಅನಾರೋಗ್ಯ ಅಹಂಕಾರ, ಅಂಧಕಾರ ಅಜ್ಞಾನಗಳನ್ನು ಅನುಭವಿಸುತ್ತಿದ್ದೇವೆ. ನಮ್ಮೊಳಗಿರುವ ದೇವರತ್ತ ಗಮನ ಹರಿಸುವುದೇ ಬಸವಣ್ಣನವರ ದೇವರು ದೈವತ್ವಕ್ಕೆ ಸಾಕ್ಷಿಯಾಗಿದೆ.
ಬಸವಣ್ಣನವರು ದೇವರು, ದೈವತ್ವ ಎಲ್ಲವನ್ನು ಸಮಾಭಾವದ ಸಮಚಿತ್ತ, ಸುವಿಚಾರ, ವಿವೇಕ, ಅಚಾರದೊಳಗೆ ಕಂಡುಕೊಂಡು ನಾವೆಂದುಕೊಂಡಿರುವ ದೇವರಾಚೆ ನಮ್ಮ ಗಮನ ಸೆಳೆದುದ್ದು ವಿಚಾರಣಯವಾಗಿದೆ.
ಕಾಳಿಯ ಕಣ್ ಕಾಣದಿಂದ ಮುನ್ನ, ತ್ರಿಪುರಸಂಹಾರದಿಂದ ಮುನ್ನ,
ಹರಿವಿರಂಚಿಗಳಿಂದ ಮುನ್ನ, ಉಮೆಯ ಕಲ್ಯಾಣದಿಂದ ಮುನ್ನ,
ಮುನ್ನ, ಮುನ್ನ, ಮುನ್ನ................
ಅಂದಿಂಗಳೆಯ ನೀನು, ಹಳೆಯ ನಾನು ; ಮಹಾದಾನಿ ಕೂಡಲಸಂಗಮದೇವಾ.

ಬಸವಣ್ಣನವರು ನಂಬಿರುವ ನಂಬಿಸಿರುವ ಇಷ್ಟಲಿಂಗ ನಿತ್ಯವೂ ವಿನೂತನ, ವಿನೂತನ ಕಾಯಕದೊಳಗಿರುವ ಆಸಕ್ತಿ, ಅನುಭಕ್ತಿ, ಅನುಭಾವ ಅನಂತತೆಯ ಜೊತೆಗೆ ನಿತ್ಯ ಹೊಳೆವ ಸೂರ್ಯನ ಕಿರಣಗಳಷ್ಟೇ ಎಳೆಯ, ಎಳೆಯ ಎಂಬುದಾಗಿದೆ. ಬಸವಣ್ಣನವರು ದೇವರು, ದೈವತ್ವವನ್ನು ತಮ್ಮೊಳಗೆ ಕಂಡುಕೊಂಡರಲ್ಲದೆ ಹೃದಯದ ಅಂತ:ಕರಣ ಹೆಚ್ಚಿಸಿಕೊಂಡು ಜಗದ ಅಹಂಕಾರ ಹೆಚ್ಚಿಸುವ ದೇವರು ದೇವರು ಸೃಷ್ಠಿಸಿಕೊಂಡು ಬದುಕುವವರ ಬಣ್ಣ ಬಯಲು ಮಾಡಿದು ವಿಶೇಷ. ನಮ್ಮ ಸುತ್ತ - ಮುತ್ತ ದೇವರು, ದೇವರ ಪ್ರತೀತಿಯ ಪ್ರಚಾರಕರ ವಸ್ತ್ರ, ಅನ್ನ, ಧನ, ಸಂಪತ್ತು ನೋಡಿ ಪ್ರಭಾವಿತರಾಗದಂತೆ ಬಸವಣ್ಣನವರು ಎಚ್ಚರಿಸಿರುವುದು ಗಮನಾರ್ಹವಾಗಿದೆ.

ಉಟ್ಟು ತೊಟ್ಟು ಪೂಜ್ಯವಾಗಿ ಬಂದ ಜಂಗಮ ವಿಶೇಷವೆಂದು
ಕಂತೆ ಜೊಂತೆಯ ಜಂಗಮ ಬಂದಡೆ ಹೀನವೆಂದು
ಕಂಡೆನಾದಡೆ ಪಂಚಮಹಾಪಾತಕ,
ಇದು ಕಾರಣ ಅನ್ನ, ವಸ್ತ್ರ ಧನ ಮಾಟದಲ್ಲಿ
ಎರಡಾಗಿ ಕಂಡೆನಾದಡೆ ನರಕದಲ್ಲಿಕ್ಕುವಿ,
ಕೂಡಲಸಂಗಮದೇವಾ.

ದೇವರ ಸಂತೃಪ್ತಿಗಾಗಿ, ನಾವು ಇಂದಿಗೂ ಅನ್ನ ವಸ್ತ್ರ, ಧನ, ಇನ್ನೂ ಏನೇನೋ ಅರ್ಪಿಸುವ ಹಂತದಲ್ಲಿಯೇ ಇದ್ದೇವೆ ನಮಗೆ ನಮ್ಮೊಳಗಿರುವ ಅಂತ:ಕರಣ, ಕರುಣೆಗಳನ್ನೂ ಸೀಮಿತಗೊಳಿಸಿಕೊಂಡು ಅಹಂಕಾರವನ್ನು ಹೊತ್ತಿಸಿಕೊಂಡು ಹೆಗ್ಗಳಿಕೆಯೊಳಗಿರುವುದೇ ದೊಡ್ಡಸ್ತಿಕೆಯಾಗಿದೆ. ಇದು ದೇವರ ನಿಜ ಚಿಂತನೆಗೂ ಪೂರಕವಾಗಿಲ್ಲ. ಇಂಥ ದೇವರು ದೈವತ್ವ ಆರಾಧಿಸುವುದು, ನರಕಕ್ಕೆ ಹೋಗುವ ದಡ್ಡತನವಲ್ಲದೆ ಬೇರಲ್ಲ.

ನಮ್ಮೊಳಗೆ ಅಡಗಿಕೊಂಡಿರುವ ದೇವರ, ದೈವತ್ವವನ್ನು ಪ್ರಮಾಣಿಸಿಕೊಂಡರೆ, ಅಹಂಕಾರ, ಅಂಧಕಾರ ದಾಟುವುದು ಸುಲಭ.
ಅಹಂಕಾರ ಮಾನವನಿಂಬುಗೊಂಡಲ್ಲಿ ಲಿಂಗ ತಾನೆಲ್ಲಪ್ಪುದೊ?
ಅಹಂಕಾರಕ್ಕೆ ಎಡೆಗೊಂಡದೆ ಲಿಂಗತನುವಗಿರ ಬೇಕು.
ಅಹಂಕಾರರಹಿತವಾದಲ್ಲಿ ಸನ್ನಹಿತ ಕಾಣಾ
ಕೂಡಲಸಂಗಮದೇವ.

ಅನಂತ ಈ ವಿಶ್ವದೊಳಗೆ ಮನುಷ್ಯನು ಅನನ್ಯ ಪ್ರಾಣಿ ಎಂದು ಕರೆಯಿಸಿಕೊಂಡು ಅಲ್ಲಸಲ್ಲದ ಅನಾಚಾರಗಳಿಗೆ ಬೆನ್ನು ಹತ್ತದೆ, ಅನ್ನ ವಸ್ತ್ರ, ಬೇಡುವ, ಯಜ್ಞ, ಯಾಗಾದಿ ಮೊರೆ ಹೋಗದಿರುವದೇ ಬಸವಣ್ಣನವರ ದೇವರಾಗಿದೆ. ಕಾಯಕ, ದಾಸೋಹ ಸತ್ಸಂಗಗಳೇ ದೇವರು, ದೈವತ್ವವೂ ಆಗಿದೆ.

ಬಸವಣ್ಣನವರು ಬದುಕಿನೊಂದಿಗೆ ಜೋಡಿಸಿದ ದೇವರು, ದೈವತ್ವವನ್ನು ನಂಬಿಕೆ ಅಸಂಖ್ಯಾತರು ದೇವರು ಸನ್ನಿಹಿತಗೊಂಡ ನೆಲೆಯನ್ನು ಗುರುತಿಸಿಕೊಂಡು, ವಿಶ್ವವನರಿದು ನೋಡಿದ್ದು, ನಂಬಿದ್ದು ವೈಚಾರಿಕತೆಗೆ ಹಿಡಿದ ಕನ್ನಡಿಯಾಗಿದೆ.
ಘನಗಂಭೀರ ಮಹಾವಾರುಥಿಯಲ್ಲಿ
ಫೇನ ತರಂಗ ಬುದ್ಬುದಂಗಳಾದವಲ್ಲದೆ ಬೇರಾಗಬಲ್ಲವೆ?
ಆತ್ಮನೆಂಬ ಅಂಭುದಿಯಲ್ಲಿ
ಸಕಲ ಬ್ರಹ್ಮಾಂಡಕೋಟಿಗಳಾದವಲ್ಲದೆ ಬೇರಾಗಬಲ್ಲುದೆ ?
ಇದು ಬೇರೆಂಬ ಅರೆಮರುಳುಗಳ ನಾನೇನೆಂಬೆ?
ವಿಶ್ವವನರಿದು ನೋಡಲು
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗ ಬೇರಿಲ್ಲ.

ಕಾಯಕನಿಷ್ಠೆಯೊಳಗೆ ವಿಶ್ವವನರಿದು ತಮ್ಮ ಬದುಕಿನಲ್ಲಿ ಕಂಡ ಸತ್ಯಗಳನ್ನು ಕ್ರೋಢಿಕರಿಸಿಕೊಂಡು, ಈ ಘನಗಂಭೀರ ಮಹಾವಾರುಧಿಯನ್ನು ಸಹಜದೊಳಗೆ ದಾಟಿದ ಶರಣರು, ಬಸವಣ್ಣನವರು ತೋರಿಸಿದ ದೇವರು ತನ್ನೊಳಗೆ, ಬೇರೆಲ್ಲೂ ಇಲ್ಲೆಂದು ಪ್ರಮಾಣಿಸಿ ನುಡಿದಿದ್ದಾರೆ. ಆ ನುಡಿಗಳೆಲ್ಲವೂ ಬಸವಣ್ಣನವರು ಬದುಕಿನ ಧಾರಣತೆಯ ದೇವರಾಗಿ, ದೈವತ್ವವಾಗಿ ಉಳಿದಿದೆ.
ಶಾಸ್ತ್ರ, ಪುರಾಣ, ಆಗಮ, ರಾಮಾಯಣ, ಮಹಾಭಾರತ, ಭಾಗವತ ವಿವಿಧ ಸಂದರ್ಭಗಳಲ್ಲಿ, ಪ್ರಾಣ ಪ್ರತಿಷ್ಠಾನ ಮಾಡಿದ, ಸ್ವಯಂಭೂ, ಉದ್ಭವಿಸಿದ ದೇವಾನುದೇವತೆಗಳ ವಾಸಸ್ಥಾನ ಪುಣ್ಯ ಕ್ಷೇತ್ರದೊಳಗಿನ ದೇವರು ಒಂದೆಡೆಯಾದರೆ ಕರಸ್ಥಳಕ್ಕೆ ಬಂದ ದೇವರು ಚುಳುಕಾಗಿದ್ದು ವಿಶೇಷ ಉಲ್ಲೇಖನೀಯ ಇದನ್ನು ಬಸವಣ್ಣನವರು ನಿವೇದಿಸಿದ್ದು ಚೇತೋಹಾರಿಯಾಗಿದೆ.

ಜಗದಗಲು ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದವೆ ಆತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದುವೆ ಅತ್ತತ್ತ ನಿಮ್ಮ ಶ್ರೀಮುಕುಟ
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ

ಕಾಲಮಾನದ ಸ್ಥಿತಿಗತಿಗಳನ್ನು ದಾಟಿದ ಅಗಮ್ಯ, ಅಗೋಚರ ಅಪ್ರತಿಮಗೊಂಡು, ಕರಸ್ಥಲಕ್ಕೆ ಬಂದ ಚುಳುಕಾದ ದೇವರ ಪರಿಯು ಸ್ಥಾವರ ದೇವರುಗಳಾಚೆಯ ಬೆಳಕೆಂದಿರುವÀ ಬಸವಣ್ಣನವರ ದೇವರು ಸರ್ವಸಮಾನತೆಗೆ ಪಥವಾಗಿದೆ.
ಬಸವಣ್ಣನವರು ಅಂಗೈಯೊಳಗೆ, ಅಂಗದೊಳಗೆ ಅಳವಡಿಸಿರುವ ಇಷ್ಟಲಿಂಗವು, ಆಕಾರ, ನಿರಾಕಾರ ದೇವರೊಂದಿಗೆ ಸಮಸ್ತ ಜೀವಕುಲದ ಲೇಸಿನ ಬದ್ಧತೆಯಾಗಿದೆ. ಇತರೇ ದೇವರುಗಳಂತೆ, ಇಷ್ಟಲಿಂಗಕ್ಕೆ ಕಥೆ, ಉಪಕಥೆ, ಪರಾಕ್ರಮ, ಸಂಹಾರ, ಅವತಾರ ವರ ಕೊಡುವ ಪವಾಡ, ಪ್ರತೀತ ಹಮ್ಮು- ಬಿಮ್ಮುಗಳಿಲ್ಲ. ಇದಲ್ಲದೆ ಪರಂಪರೆ, ಸಂಪ್ರದಾಯ ತಿಥಿ, ನಕ್ಷತ್ರಗಳೂ ಇಲ್ಲ. ಇಷ್ಟಲಿಂಗ ಎಂಬುದು ನಡೆ- ನುಡಿಯೊಳಗೆ ಸದಾಚಾರ ಕಾಪಾಡಿಕೊಂಡು ಸತ್ಯಶುದ್ಧ ಕಾಯಕ, ದಾಸೋಹ, ಸತ್ಸಂಗ, ಸಚ್ಚಾರಿತ್ರ್ಯ ಹೊಂದಿ ಬದುಕುವ, ಬದುಕಿಸುವ ವಚನವಾಗಿದೆ. ಬಸವಣ್ಣನವರ ದೇವರು, ಉಪಮಾತೀತ, ಜಾತ್ಯಾತೀತ, ಲಿಂಗಭೇದ, ಮೇಲು- ಕೀಳಿನ ತಾರತಮ್ಯದ ತೋಳಲಾಟ ದಾಟಿಸಿದ ಮತ್ತು ಶ್ರಮ ಸಂಸ್ಕøತಿಯನ್ನೇ ನಂಬಿ ಬದುಕುವ ಚೈತನ್ಯವಾಗಿ, ಸಕಲ ಜೀವಾತ್ಮರಿಗೆ ಲೇಸನ್ನೇತರುವ ಚುಳುಕಾಗಿದೆ, ಬೆಳಕಾಗಿದೆ.

  • . ರಾ. ಸುಳಕೂಡೆ,