ಬೆಸುಗೆ

ಧಾರಕಾರವಾಗಿ ಸುರಿಯುತ್ತಿರುವ ಮಳೆ ಮದ್ಯೆ “ಛೇ ಈ ಹಾಳು ಮಳೆ ಬೇರೆ ಹೇಗಪ್ಪಾ ಈಗ ಟ್ರೈನ್ ಹತ್ತೋದು ಜೊತೆಗೆ ಈ ಮಗು ಬೇರೆ ಯಾಕಾದ್ರು ಹುಟ್ಟುತೋ ಈ ಪಾಪದ ಮಗು ಈ ಹಾಳ್ ದೇವ್ರ ಶಾಪ ಬೇರೆ” ಎಂದು ಗೊಣಗುತ್ತ ಜಾರುತ್ತಿದ್ದ ಸೆರಗು ಸರಿಮಾಡಿಕೊಂಡು ಒಂದು ಕಂಕುಳಲ್ಲಿ ಮಗು ಮತ್ತೊಂದು ಕೈಯಲ್ಲಿ ಸೂಟ್‍ಕೇಸ್ ಹಿಡಿದು ಸ್ಟೇಷನ್ ಕಡೆ ಓಡಿ ಬಂದ ಶಾಂತಿ ಕೈಯಲ್ಲಿದ್ದ ಸೂಟ್ ಕೇಸ್‍ನ್ನು ಕೆಳಗಿಳಸಿ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಉಸ್ಸಪ್ಪ ಎಂದು ನಿಟ್ಟುಸಿರು ಬಿಟ್ಟು ಈ ದೇವ್ರು ಒಂದು ಕೊಡ್ತಾನೆ ಮತ್ತೊಂದು ಕಿತ್ಕೋತಾನೆ ಏನಪ್ಪಾ ಇವ್ನ ಲೀಲೆ ಎಂದವಳೆ ಬೇಜಾರಿನಿಂದ ಹಾಗೇಯೇ ಕುಳಿತ ಶಾಂತಿಯ ಮನದಲ್ಲಿ ನೂರಾರು ತುಮುಲಗಳು ಸಂಘರ್ಷ ಮೊಳಗಿತ್ತು.

ಮಳೆಯ ಮೋಡ ಸರಿದು ಸೂರ್ಯನ ಕಿರಣಗಳು ಭೂಮಿಯತ್ತ ಇಣಕುತ್ತಿತ್ತು. ಮಳೆಯಿಂದ ಓಡಿ ಬಂದದ್ದರಿಂದ ಆಯಾಸವಾಗಿದ್ದ ಶಾಂತಿ ಮಗುವನ್ನು ತೊಡೆಯ ಮೇಲೆ ಹಾಕಿಕೊಂಡ  ಹಾಗೇಯೇ ಕುರ್ಚಿಗೆ ಒರಗಿ ಕಣ್ಣು ಮುಚ್ಚಿಗಳು. ಇನ್ನೇನು ನಿದ್ದೆ ಆವರಿಸುವಷ್ಟರಲ್ಲಿ ಟ್ರೈನ್ ಹಾರನ್ ಶಬ್ದ ಕಿವಿಗೆ ನಾಟಿ ಎದ್ದು ಟ್ರೈನ್ ಹತ್ತಲು ಸಿದ್ದವಾದಳು. ಕೈಯಲ್ಲಿ 2ವರ್ಷದ ಮಗು ಮತ್ತೆ ಸೂಟ್ ಕೇಸ್ ಬೇರೆ ಹೆಗಪ್ಪಾ ಈಗ ಟ್ರೈನ್ ಹತ್ತೋದು ಎನ್ನುವಷ್ಟರಲ್ಲಿ ಅವಸರದಿಂದ ಓಡಿ ಬಂದ ಅಪರಿಚಿತ ವ್ಯಕ್ತಿ ತಾನು ಟ್ರೈನ್ ಹತ್ತಲು ಇವಳ ಹಿಂದೆ ನಿಂತ ಬಿಳಿಯ ಶರ್ಟ್ ಮೆಲೆ ಕಪ್ಪುಬಣ್ಣದ ಕೋಟ್‍ಗೆ ಒಪ್ಪುವಂತ ಕನ್ನಡಕ ಹಾಕಿದ್ದ ಅವನನ್ನೇ ನೋಡುತ್ತಿದ್ದ ಮಗು ಕಿಲ ಕಿಲ ನಕ್ಕು ಅವನ ಜೇಬಿನಲ್ಲಿದ್ದ ಪೆನ್ನನ್ನು ತೆಗೆದುಕೊಳ್ಳಲು ಕೈ ಹಾಕಿತು. ಇದರ ನಗುವು ಅವನನ್ನು ಯಾವುದೋ ಜನ್ಮದ ಸಂಬಂಧಿಯೆಂಬಂತೆ ಗುರುತಿಸುವಂತೆ ಇತ್ತು. ಮಗುವಿನ ಮುಗ್ದ ನಗುವಿಗೆ ಸೋತ ವ್ಯಕ್ತಿ ಅದನ್ನು ಎತ್ತಿಕೊಂಡಿದ್ದ ಶಾಂತಿಯ ಕಡೆ ನೋಡಿದ ಆಕೆಯ ಬಳಿಯ ಮೈ ಬಣ್ಣ ಅದಕ್ಕೆ ಒಪ್ಪುವಂತೆ ಹಸಿರು ಬಣ್ಣದ ಅಂಚಿನ ಸೀರೆ ಅವಳ ಸೌಂದರ್ಯವನ್ನು ಉಮ್ಮಳಿಸುವಂತೆ ಇತ್ತು. ಅವಳನ್ನೇ ನೋಡುತ್ತಿದ್ದ ವ್ಯಕ್ತಿ ಮೇಲುಧ್ವನಿಯಲ್ಲಿ “ಮೇಡಂ ಮಗು ಮತ್ತೆ ಲಗೇಜ್ ಎರಡನ್ನೂ ಎತ್ತಿಕೊಂಡು ಹತ್ತೋಕಾಗೋಲ್ಲ ಮಗೂ ಕೊಡಿ ನಾನ್ ಎತ್ತಕೋತೀನಿ” ಎಂದವನೇ ಮಗುವಿನ ಕಂಕುಳಿಗೆ ಕೈ ಹಾಕಿ ಎತ್ತಿಕೊಂಡು ಕೆನ್ನೆಗೆ ಮುತ್ತಿಟ್ಟ ಒಳಗೆ ಬಂದವನೇ ಶಾಂತಿ ಕುಳಿತಿದ್ದ ಸೀಟ್ ಹತ್ತಿರ ಬಂದು ತಗೋಳಿ ಮೇಡಂ ಪಾಪೂನ ಎಂದ ತಕ್ಷಣ ಟ್ಯಾಂಕ್ಸ್ ಎಂದವಳೇ ಮಗುವನ್ನು ಎತ್ತಿಕೊಂಡು ಕಿಟಕಿ ಕಡೆ ಮುಖ ಮಾಡಿ ಕುಳಿತಳು. ಶಾಂತಿಯ ಪಕ್ಕ ಮತ್ತೊಬ್ಬರು ಕುಳಿತುಕೊಳ್ಳಲು ಜಾಗ ಇದ್ದುದರಿಂದ ಮೇಡಂ ಯಾರಾದ್ರೂ ಬರ್ತಾರ ಎಂದ ವ್ಯಕ್ತಿಯ ಪ್ರಶ್ನಗೆ ಇಲ್ಲಾ ಎಂದು ತಲೆಯಾಡಿಸಿದ ಶಾಂತಿಗೆ ಮತ್ತೆ if you dont mind ನಾನಿಲ್ಲಿ ಕೂತ್ಕೋಬಹುದಾ ಎಂದಾಗ ಅಯ್ಯೋ ಬನ್ನಿ ಸಾರ್ ಕೂತ್ಕೋಳಿ ಎಂದು ನಕ್ಕು ಶಾಂತಿ ಪಕ್ಕಕ್ಕೆ ಜರುಗಿ ಕುಳಿತಳೂ.

ಟ್ರೈನ್ ಸ್ಟೇಷನ್ ನಿಂದ ಹೊರಟು ವೇಗವಾಗಿ ಸಾಗುತ್ತಿತ್ತು. ಶಾಂತಿ ಕಿಟಕಿಯ ಆಚೆ ಹಸಿರು ಮರ, ಮನೆ, ಹೊಲ ಗದ್ದೆ ಎಲ್ಲವನ್ನು ನೋಡುತ್ತಾ ಮೌನವಾಗಿ ಕುಳಿತಿದ್ದಳು ಅದರೆ ಮಗು ಮಾತ್ರ ಯಾವಾಗಲೂ ತನ್ನನ್ನು ಎತ್ತಿಕೊಂಡು ಬಂದ ವ್ಯಕ್ತಿಯ ಮುಖವನ್ನೇ ನೋಡುತಿತ್ತು. ಶಾಂತಿಗೆ ಮಗು ಅವನ ಮುಖ ಎಲ್ಲಿ ಕೀಳುವುದೋ ಎಂದು ಭಯದಿಂದ ಮಗುವಿನ ಮುಖವನ್ನು ಕಿಟಕಿಯ ಕಡೆ ತಿರುಗಿಸಿ ಅಲ್ಲಿ ನೋಡು ಚಿನ್ನು ಎಷ್ಟು ದೊಡ್ಡ ಮರ ಹಸು ನೋಡು ಎಷ್ಟು ಚೆನ್ನಾಗಿದೆ ಎಂದು ಆ ಕಡೆ ತಿರುಗಿಸುತ್ತಿದ್ದಳು. ಇದನ್ನು ನೋಡುತ್ತಿದ್ದ ವ್ಯಕ್ತಿ ಬಿಡಿ ಮೇಡಂ ನಂಗೂ ಒಬ್ಬ ಮಗ ಇದ್ದಾನೆ ಅವ್ನು ಇದೇ ಥರ ತುಂಟ ಯಾರ್ನಾದ್ರು ನೋಡಿದ್ರೆ ಒಂದಲ್ಲಾ ಒಂದ್ ರೀತಿ ತೀಟೆ ಮಾಡ್ತಾನೇ ಇರ್ತಾನೆ ಎಂದವನೇ ಕೊಡಿ ನಾನ್ ಸ್ವಲ್ಪ ಹೊತ್ತು ಎತ್ಕೋತೀನಿ ಎಂದು ಮಗುವನ್ನು ಎತ್ತಿಕೊಂಡು ಏನ್ ಪುಟ್ಟ ನಿನ್ ಹೆಸರು ಎಂದು ಅದರ ತಾಯಿಯ ಕಡೆ ತಿರುಗಿ ಕೇಳಿದ ಪ್ರಶ್ನೆಗೆ ಶಾಂತಿ ರಮ್ಯಾ ಎಂದವಳೇ ಪುನಃ ಕಿಟಕಿ ಆಚೆ ನೋಡುತ್ತಾ ಕುಳಿತಳು. ರಮ್ಯಾ ಹೆಸರು ತುಂಬಾ ಚೆನ್ನಾಗಿದೆ ಬಹಳ ತುಂಟಿ ಇವಳು ಎನ್ನುತ್ತಾ ಮೇಡಂ ನೀವು ಎಲ್ಲಿಗೆ ಹೋಗ್ಬೇಕು ಎಂದವನ ಮುಖ ನೋಡಿ ಶಿವಮೊಗ್ಗ ಸರ್ ನೀವ್ ಎಲ್ಲಿಗೆ ಹೋಗ್ತಿದ್ದೀರಾ ಎಂದು ಕೇಳಿದಳು. ನಾನು ಶಿವಮೊಗ್ಗೆಕ್ಕೆ ಹೋಗ್ಬೇಕು ಒಳ್ಳೇದಾಯ್ತು ಬಿಡಿ ದಾರೀಲಿ ಬೇಜಾರಾಗುತ್ತೆ ಅಂದ್ಕೊಂಡಿದ್ದೆ ಈ ರಮ್ಯಾ ಪುಟ್ಟಿ ಇದ್ದಾಳಲ್ಲಾ ಸದ್ಯ ಊರು ಸಿಗೋವರ್ಗೂ ನಮ್ಗೆ ಕಂಪನಿ ಕೊಡ್ತಾಳೆ ಎಂದವನೇ ಮೇಡಂ ನಿಮ್ ಹೆಸರು, ನೀವ್ ಏನ್ ಕೆಲ್ಸ ಮಾಡ್ತಿದ್ದೀರಾ ಎಂದು ಕೇಳಿದ ಇದಕ್ಕೆ ಶಾಂತಿ ಥೂ ಈ ಹಾಳು ಗಂಡಸರೋ ಯಾರಾದ್ರು ಹುಡ್ಗಿ ಸಿಕ್ಕರೆ ಸಾಕು ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಾರೆ, ಹಲ್ಲು ಗಿಂಜ್ತಾರೆ ಎಂದು ಮನದಲ್ಲೇ ಶಪಿಸುತ್ತಾ ನನ್ ಹೆಸರು ಶಾಂತಿ ಅಂತ ನಾನ್ ಬ್ಯಾಂಕ್‍ನಲ್ಲಿ ಕೆಲಸ ಮಾಡ್ತಿದ್ದೀನಿ ಈ ಗ ನನಗೆ ರಜಾ ಇದ್ದಿದರಿಂದ ತವರು ಮನಗೆ ಹೋಗ್ತ ಇದ್ದೀನಿ ಎಂದು ಎಲ್ಲಾ ಪ್ರಶ್ನೆಗಳಿಗೂ ನಗುನಗುತ್ತಾ ಉತ್ತರಿಸಿದಳೂ. ಪುನಃ ಆ ವ್ಯಕ್ತಿ ‘ಮೇಡಂ ನಿಮ್ ಯಜಮಾನ್ರು ಏನ್ ಕೆಲ್ಸ ಮಾಡ್ತರೆ’ಎಂದ ಪ್ರಶ್ನೆಗೆ ತುಂಬಾ ಬೇಜಾರಾದ ಶಾಂತಿ ವ್ಯಕ್ತಿಯ ಮುಖವನ್ನೇ ನೋಡುತ್ತಾ ಉಕ್ಕಿ ಬಂದ ದುಃಖವನ್ನು ತಡೆದು ‘ಅವ್ರೂ ಬ್ಯಾಂಕ್‍ನಲ್ಲಿ ಕೆಲ್ಸ ಮಾಡ್ತಿದ್ದರು ಆದ್ರೆ ಈಗ ಇಲ್ಲ ಅವ್ರು ಸತ್ತು 2 ವರ್ಷ ಆಯ್ತು ಅವರ ಕೆಲ್ಸನೆ ಈಗ ನಂಗೆ ಸಿಕ್ಕಿರೋದು’ ಈ ಮಗು ಯಾವ ಘಳಿಗೇಲಿ ಹುಟ್ತೋ ಗೊತ್ತಿಲ್ಲ ನನ್ನ ಜೀವನದ ಶಾಂತಿಯೆಲ್ಲಾ ಅಶಾಂತಿಯಾಗೋಯ್ತು ಎನುವಷ್ಟರಲ್ಲಿ ಕಣ್ಣಿನಿಂದ ಬಂದ ನೀರ ಹನಿ ನೆಲಕ್ಕೆ ತಾಕಿತ್ತು.

ಸಾರಿ ಮೇಡಂ ಹೀಗೆ ಅಂತ ಗೊತ್ತಿದ್ರೆ ಈ ಪ್ರಶ್ನೆ ಕೇಳ್ತಾನೆ ಇರ್ಲಿಲ್ಲ ಎಂದವನೇ ಮಗುವಿನ ಕಡೆ ನೋಡಿದ ಸೆರಗಿನಿಂದ ಕಣ್ ಒರೆಸಿದ ಶಾಂತಿಯ ಮನದ ದುಃಖವೆಲ್ಲಾ ನೀರಾಗಿ ಹೋಗಿತ್ತು. ಈಗ ಆ ವ್ಯಕ್ತಿಯ ಮೇಲಿನ ಕೋಪ ಕಡಿಮೆಯಾಗಿತ್ತು. ಸರ್ ನನ್ ಬಗ್ಗೇನೇ ಎಲ್ಲಾ ಹೇಳ್ತಾ ಇದ್ದೀನಿ ನಿಮ್ ಬಗ್ಗೆ ಏನೂ ಹೇಳಲೇ ಇಲ್ಲಾ ಸರ್ ನಿಮ್ ಹೆಸರು ಶಾಂತಿ ಕೇಳಿದ ಪ್ರಶ್ನೆಗೆ ನಕ್ಕ ವ್ಯಕ್ತಿ ಸುನೀಲ್ ಅಂತ ಮೇಡಂ ಖಿeಟeಠಿhoಟಿe ಆಫೀಸಿನಲ್ಲಿ ಕೆಲ್ಸ ಮಾಡ್ತಿದ್ದೀನಿ ನನ್ನದೂ ನಿಮ್ಮದೂ ಒಂದೇ ರೀತಿಯ ಕಷ್ಟ ಮೇಡಂ ನನ್ ಹೆಂಡ್ತಿ ಕ್ಯಾನ್ಸರ್ ಖಾಯಿಲೆಯಿಂದ ತೀರ್ಕೊಂಡಳು ಈಗ 5 ವರ್ಷದ ಮಗ ಇದ್ದಾನೆ ಮನೇಲಿ ಎಲ್ರೂ ಇನ್ನೊಂದು ಮದ್ವೆ ಆಗು ಅಂತ ಹೆಳ್ತಿದ್ದಾರೆ ನಂಗೇನೋ ಒಳ್ಳೆ ಹೆಂಡ್ತಿ ಸಿಗಬಹುದು ಆದ್ರೆ ನನ್ ಮಗೂಗೆ ಒಳ್ಳೆ ತಾಯಿ ಸಿಗ್ಬೇಕಲ್ಲಾ. ಈ ಕಾಲದಲ್ಲಿ ಎಲ್ಲರೂ ಅವರ ಸುಖ ಸಂತೋಷ ನೋಡ್ತಾರೆ, ನನ್ ಮಗ ನಂಗೆ ಮಗ ಆದ್ರೆ ಬೇರೆಯವಳಿಗೆ ಏನೂ ಅಲ್ವಲ್ಲಾ, ಅದ್ದರಿಂದ ನಾನು ಇವೊತ್ತು ನಾಳೆ ಅಂತಾನೇ ಕಾಲ ತಳ್ತಿದ್ದೀನಿ. ಅಂತ ಒಳ್ಳೆ ಹುಡುಗಿ ಸಿಗ್ತಾಳೋ ಇಲ್ವೋ ಎಂದವನೇ ನಿಟ್ಟುಸಿರು ಬಿಟ್ಟ ಹಾಗೆಯೇ ಸೀಟೋರಗಿ ಕುಳಿತ.

ವೇಗವಾಗಿ ಸಾಗುತ್ತಿದ್ದ ಟ್ರೈನ್ ನಿಧಾನವಾಗಿ ನಿಂತಿತು ಅದರಲ್ಲಿದ್ದವರೆಲ್ಲಾ ರೈಲ್ವೆ ಕ್ರಾಸಿಂಗ್ ಇರೋದ್ರಿಂದ ಇನ್ನೂ 30 ನಿಮಿಷ ಆಗಬಹುದು ಎಂದು ಮಾತಾಡುತ್ತಾ ಇಳಿಯುತ್ತಿದ್ದರು. ಛೇ ಏನಾಪ್ಪಾ ಮಾಡೋದು ಹೊರಟಾಗ ನೋಡಿದ್ರೆ ಮಳೆ ಇಲ್ಲಿ ಕ್ರಾಸಿಂಗ್ ಏನು ಕಾದಿದೆಯೋ? ಮನೆ ತಲುಪೋ ವಷ್ಟರಲ್ಲಿ ಕತ್ತಲಾಗುತ್ತೇ ಎಂದು ಗೊಣಗುತ್ತಾ ಕುಳಿತಳು ಅಷ್ಟರಲ್ಲಿ ಸುನೀಲನ ತೊಡೆಯ ಮೇಲೆ ಆಡÀುತ್ತಿದ್ದ ರಮ್ಯಾ ಅಮ್ಮ ಹಾಲು ಎಂದು ಅಳಲಾರಂಭಿಸಿದಳೂ. ತಡೀ ಚಿನ್ನು ಕೊಡ್ತೀನಿ ಹೊಟ್ಟೆ ಹಸೀತಾ ಬರುವಾಗ ಏನಾದ್ರು ತಿನ್ನು ಅಂತ ಬಲವಂತ ಮಾಡಿದ್ರೂ ತಿನ್ಲಿಲ್ಲ ಎಂದ ಶಾಂತಿ ಸೂಟ್ ಕೇಸ್ ತೆರೆದು ಹಾಲಿನ ಬಾಟಲ್ ತೆಗೆಯಲು ಹೋದಳು ಆದರೆ ಹೊರಟ ಅವಸರದಲ್ಲಿ ಹಾಲಿನ ಬಾಟಲ್ ಕೂಡ ತರೋದನ್ನು ಮರೆತಿದ್ದಳು. ಛೇ ಈಗೇನು ಮಾಡೋದು ಹಾಲು ಮರೆತು ಬಂದೆ ಎಂದು ಮನದಲ್ಲಿ ನೊಂದುಕೊಳ್ಳುತ್ತಿದ್ದಾ ಶಾಂತಿಯನ್ನು ನೋಡಿದ ಸುನೀಲ್ ಮೇಡಂ ಅಲ್ಲಿ ಅಂಗಡಿ ಇದೆ ನೋಡಿ ನಾನಲ್ಲಿ ಹೋಗಿ ಹಾಲು ತರ್ತೀನಿ ತಗೋಳಿ ಮಗೂನ ಎಂದವನೇ ರಮ್ಯವನ್ನು ಶಾಂತಿಗೆ ಕೊಟ್ಟು ಸರಸರ ಟ್ರೈನ್ ಇಳಿದು ಅಂಗಡಿಯ ಕಡೆ ಬರುತ್ತಿದ್ದವನ ಹಿಂದಿನಿಂದಲೇ ನೋಡುತ್ತಿದ್ದ ಶಾಂತಿ ಎಷ್ಟು ಒಳ್ಳೇ ಗುಣಾ ಇವನದು. ನನ್ ಗಂಡ ಇದ್ದಿದ್ರೆ ನಂಗೆ ಈ ಕಷ್ಟ ಬರ್ತಿತ್ತಾ ಎಂದು ಅಳುವ ಮಗುವನ್ನು ಎತ್ತಿಕೊಂಡು ತಡೀ ಚಿನ್ನು ಅಂಕಲ್ ಇನ್ನೇನು ಹಾಲು ತರ್ತಾರೆ ಎಂದು ಸಮಾಧಾನ ಪಡಿಸುತ್ತಾ ಕುಳಿತಳು. “ಛೇ ಈ ದೇವರು ನಮ್ಮಿಬರಿಗೂ ಒಂದೇ ಶಿಕ್ಷೆ ಕೊಟ್ಟ”. ಸುನೀಲ ತಂದ ಹಾಲಿನ ಪ್ಯಾಕನ್ನು ಒಡೆದು ಲೋಟಕ್ಕೆ ಹಾಕುತ್ತ ಹೇಳಿದ ಮಾತು ಶಾಂತಿಯ ಕಿವಿಗೆ ತಾಕಿತ್ತು.

ಘಂಟೆ 3 ಆಗಿತ್ತು ಟ್ರೈನ್ ಸರ ಸರ ಹೊರಡಲು ಪ್ರಾರಂಭಿಸಿತು. ಹೊಟ್ಟೆ ತುಂಬಿದ್ದಿರಿಂದ ರಮ್ಯಾ ಸುನೀಲನ ತೊಡೆಯ ಮೇಲೆ ಹಾಗೆ ನಿರಾಳವಾಗಿ ಮಲಗಿದಳು. ಬೆಳಗ್ಗೆಯಿಂದ ಆಯಾಸ ವಾಗಿದ್ದ ಶಾಂತಿಯು ಕಿಟಿಕಿಯ ಕಂಬಿಯನ್ನು ಒರಗಿ ಹೊರಗಿನಿಂದ ಬರುತ್ತಿದ್ದ ತಂಪಾದ ಗಾಳಿಗೆ ಮುಖವೊಡ್ಡಿ ನಿಟ್ಟುಸಿರು ಬಿಡುತ್ತಾ ಹಾಗೆಯೇ ಕಣ್ಣು ಮುಚ್ಚಿದಳು. ಅವಳಿಗೆ ತನ್ನ ಜೀವನದ ಪ್ರತಿಯೊಂದು ಘಟನೆಯೂ ಕಣ್ಣ ಮುಂದೆ ಸುಳಿದಾಡಲಾರಂಭಿಸಿತು.

ಶಾಂತಿ ಡಿಗ್ರಿ ಓದುವಾಗ ಅವಳ ಊರಿಗೆ ಕೆಲಸದ ನಿಮಿತ್ತ ಬಂದಿದ್ದ ರಾಹುಲ್ ಇವರ ಮನೆಯಲ್ಲೇ ಬಾಡಿಗೆ ಮನೆ ಮಾಡಿ ಇದ್ದ. ಶಾಂತಿಯ ಸೌಂದರ್ಯಕ್ಕೆ ಮಾರು ಹೋಗಿ ಅವಳನ್ನು ಪ್ರೀತಿಸಿ ಮದುವೆಯಾಗಿದ್ದ. ಒಳ್ಳೆಯ ಕೆಲಸ ಇದ್ದಿದ್ರಿಂದ ಇವರ ವಿವಾಹಕ್ಕೆ ಯಾರು ಅಡ್ಡ ಬಂದಿರಲಿಲ್ಲ. ಶಾಂತಿ ಮದುವೆಯಾಗಿ ಕೆಲವು ವರ್ಷದಲ್ಲಿಯೇ ರಮ್ಯಾಗೆ ತಾಯಿಯಾಗಿದ್ದಳು. ಇದರ ಸಂತೋಷಕ್ಕೆ ಪಾರವೇ ಇರಲಿಲ್ಲ. ಇವರ ಸಂತೋಷದ ಬಗ್ಗೆ ಯಾರಿಗೆ ಅಸೂಯೆ ಮೂಡಿತೋ ಎಂಬಂತೆ ರಮ್ಯಾ ಹುಟ್ಟಿ 2 ವಾರದಲ್ಲಿಯೇ ರಾಹುಲ್ ಅಪಘಾತದಿಂದ ಸಾವನ್ನಪ್ಪಿದ. ಇದಕ್ಕೆ ಬಂದ ಸುದ್ದಿ ಯಾರೋ ಮಾಟ ಮಾಡಿಸಿದ್ದಾರೆ ಎಂದು. ಯಾರು ಏನ್ ಮಾಡಿಸಿದ್ರೋ ಇಲ್ವೋ ಶಾಂತಿಯ ಜೀವನ ಮಾತ್ರ ಹಾಳಾಗಿತ್ತು. ಶಾಂತಿಗೆ ಗಂಡ ಇಲ್ಲದ ನೋವು ಒಂದು ಕಡೆ ಆದ್ರೆ ಎಳೆಯ ಮಗು ಮತ್ತೊಂದು ಕಡೆ ಜೊತೆಗೆ ಪಾಪಿ ಚಾಂಡಾಳಿ ಯಾವ ಘಳಿಗೇಲಿ ನಮ್ ಮನೇಗೆ ಕಾಲಿಟ್ಟಳೆ ಮನೆ ಎಲ್ಲಾ ಸ್ಮಶಾಣ ಆಯ್ತು .ನನ್ ಮಗನ್ನ ಕಿತ್ಕೊಂಡ್ಳು ಎಂಬ ಪ್ರತಿದಿನ ಚುಚ್ಚುವ ಅತ್ತೆಯ ಮಾತುಗಳು ಬೇರೆ. ಇವರನ್ನೆಲ್ಲಾ ಬಿಟ್ಟು ತವರು ಮನೇಗೆ ಹೋಗೋಣ ಅಂದ್ರೆ ಇನ್ನೂ ಮದುವೆಯಾಗದ ತಂಗಿ ತಮ್ಮ ಬೇರೆ ಶಾಂತಿಗೆ ಇರಲು ಸಾದ್ಯವಾಗದೇ ಮಗಳನ್ನು ಬಿಟ್ಟು ಸಾಯಲೂ ಸಾದ್ಯವಾಗದ ಸ್ಥಿತಿ ಎಲ್ಲವನ್ನೂ ಮನದಲ್ಲೇ ನೆನೆಯುತ್ತಾ ಅಯ್ಯೋ ದೇವರೇ ಎನ್ನುವಷ್ಟರಲ್ಲಿ ಟ್ರೈನ್ ಸ್ಟೇಷನ್ ನಲ್ಲಿ ಮತ್ತೆ ನಿಧಾನವಾಗಿ ನಿಂತಿತ್ತು. ಇಳಿಯಾವವರೆಲ್ಲಾ ಸರಸರ ಇಳಿಯುತ್ತಿದ್ದರು. ಶಾಂತಿ ಕಣ್ಣು ಬಿಟ್ಟು ಸುನೀಲನ ತೊಡೆಯ ಮೇಲೆ ಮಲಗಿದ್ದ ರಮ್ಯಾಳನ್ನು ನೋಡಿ ಇವಳು ಎಷ್ಟು ಬೇಗ ಅವರನ್ನು ಇಷ್ಟು ಹಚ್ಚಿಕೊಂಡಿದ್ದಾಳೆ. ಯಾವ ಜನ್ಮದಲ್ಲಿ ಇವರು ನಮ್ಮ ಬಂಧುವಾಗಿದ್ದರೋ ಈ ಜನ್ಮದಲ್ಲಿ ನಮಗೆ ಪರಿಚಯವಾಗಿದ್ದಾರೆ ಎಂದು ಸುನೀಲನ ಮುಖವನ್ನೇ ನೋಡುತ್ತಿದ್ದ ಶಾಂತಿಗೆ ಆಗ ತಾನೆ ಕಣ್ಣು ಬಿಟ್ಟ ಸುನೀಲನ ದೃಷ್ಟಿ ಶಾಂತಿಯ ಮುಖಕ್ಕೆ ಹೊಡೆದಂತಿತ್ತು ತಟ್ಟನೆ ಎಚ್ಚೇತ್ತ ಶಾಂತಿ ಏನೂ ತಿಳಿಯದವಳಂತೆ ಕಿಟಕಿಯ ಕಡೆ ತಲೆ ತಿರುಗಿಸಿ ಆಚೆ ನೋಡುತ್ತಾ ಕುಳಿತಳು.

ಶಾಂತಿ ಸುನೀಲನ ಗುಣಕ್ಕೆ ಮಾರು ಹೋಗಿದ್ದಳು ಜೀವನದಲ್ಲಿ ನೊಂದು ಬೆಂದಿದ್ದ ಇವಳಿಗೆ ಮತ್ತೊಬ್ಬರ ಆಸರೆ ಬೇಕೆಸಿಸಿತ್ತು. ತನಗಲ್ಲದಿದ್ದರೂ ತನ್ನ ಮಗಳಿಗೆ ತಂದೆ ಸ್ಥಾನ ತುಂಬುವಂತ ವ್ಯಕ್ತಿಯ ಅವಶ್ಯಕತೆ ಇತ್ತು. ಶಾಂತಿ ಮನದಲ್ಲಿ ಸುನೀಲ ನನ್ನ ಬಾಳಿಗೆ ಆಸರೆಯಾದರೆ ಇಬ್ಬರ ಬಾಳಿಗೂ ನೆಮ್ಮದಿ ಸಿಕ್ಕಂತಾಗುತ್ತದೆ. ನಾನು ಹೇಗೆ ಅವರ ಹತ್ರ ಈ ವಿಷಯದ ಬಗ್ಗೆ ಮಾತಾಡಲಿ ಎಂದು ಚಿಂತಿಸುತ್ತಾ ಹಾಗೆಯೇ ಸೀಟೊರಗಿ ಮಗಳ ಮುಖ ನೋಡಿ ಹಣೆಗೆ ಮುತ್ತಿಟ್ಟು ಕುಳಿತಳು.

ಇತ್ತ ಸುನೀಲನ ಮನದಲ್ಲಿಯೂ ನೂರಾರು ಸಂಘರ್ಷಗಳು ಸುಳಿದಾಡಲಾರಂಭಿಸಿದವು. ಅವನು ಮೊದಲೇ ಶಾಂತಿಯ ರೂಪಕ್ಕೆ ಮನಸೋತಿದ್ದ ಈಗ ಅವಳಿಗೆ ಗಂಡ ಇಲ್ಲ ಎಂಬುದು ತಿಳಿದ ನಂತರ ನಾನು ಇವಳನ್ನು ಮದುವೆಯಾದರೆ ನನ್ನ ತಂದೆ ತಾಯಿಯರ ಆಸೆಯೂ ಈಡೇರುತ್ತದೆ ಜೊತೆಗೆ ನನ್ನ ಮಗನಿಗೆ ಒಳ್ಳೇಯ ತಾಯಿ ಸಿಗುತ್ತಾಳೆ ಎಂದು ಮನದಲ್ಲೇ ಚಿಂತಿಸುತ್ತಾ ಹೇಗೆ ಶಾಂತೀನ ಕೇಳೋದು ಅವ್ಳು ಮೊದಲೇ ಜೀವನದಲ್ಲಿ ನೊಂದಿದ್ದಾಳೆ ನನ್ನನ್ನು ಕೆಟ್ಟವರು ಎಂದು ತಿಳಿದಕೊಂಡರೆ ಬೇಡಪ್ಪಾ ಎಂದವನೇ ನಿಟ್ಟುಸಿರು ಬಿಡುತ್ತಾ ಹಾಗೆಯೇ ಕುಳಿತ.

ಘಂಟೆ 7 ಇನ್ನೇನು ಟ್ರೈನ್ ಶಿವಮೊಗ್ಗ ತಲುಪಲು ಕೇವಲ ಐದಾರು ಕಿ.ಮೀ ಮಾತ್ರ ಉಳಿದಿತ್ತು. ಆಗತಾನೆ ನಿದ್ದೆಯಿಂದ ಎದ್ದ ಮಗು ಶಾಂತಿಯ ಗಲ್ಲವನ್ನು ಮುಟ್ಟಿ ಸವರುತ್ತಿತ್ತು. ಇಬ್ಬರು ಒಬ್ಬರಿಗೊಬ್ಬರು ಹೇಳಲು ಸಾಧ್ಯವಾಗದೇ ಚಡಪಡಿಸುತ್ತಾತಮ್ಮ ಪಾಡಿಗೆ ತಾವು ಕುಳಿತಿದ್ದರು. ಟ್ರೈನ್ ಶಿವಮೊಗ್ಗ ತಲುಪಿ ನಿಧಾನವಾಗಿ ನಿಂತಿತು ಅದರಲ್ಲಿದ್ದವರೆಲ್ಲಾ ಒಬ್ಬೊಬ್ಬರಾಗಿ ಇಳಿಯಲು ಸಿದ್ದರಾಗುತ್ತಿದ್ದರು. ಅಷ್ಟರಲ್ಲಿ ಶಾಂತಿ ಸುನೀಲನ ತೊಡೆಯ ಮೇಲೆ ಕುಳಿತಿದ್ದ ರಮ್ಯಾಳನ್ನು ಎತ್ತಿಕೊಂಡು ಅವನ ಮುಖವನ್ನೇ ನೋಡುತ್ತಾ Thanks.. sಸುನೀಲ್ ಯಾವಾಗಲಾದ್ರು ನಮ್ ಮನೆ ಹತ್ರ ಬನ್ನಿ ಎಂದು ಹೇಳಿ ರಮ್ಯ ಅಂಕಲ್‍ಗೆ ಟಾಟಾ ಮಾಡು ಚಿನ್ನಾ ಎಂದವಳೆ ಏಳಲು ಸಿದ್ದಳಾದಳು. ಆದರೆ ತನ್ನ ಸೀರೆ ಸೆರಗನ್ನು ಯಾರೋ ಹಿಡಿದು ಎಳದಂತೆ ಇತ್ತು. ತಿರುಗಿ ನೋಡಿದರೆ ಸುನೀಲನ ಕೈ ವಾಚ್ ಲಿಂಕ್‍ಗೆ ಸೆರಗು ಸಿಕ್ಕಿಹಾಕಿ ಕೊಂಡಿತ್ತು. ಅದನ್ನು ತೆಗೆಯಲು ಪ್ರಯತ್ನಿಸಿದ ಶಾಂತಿಯ ಕೈಯನ್ನು ನಿಧಾನವಾಗಿ ಹಿಡಿದ ಸುನೀಲ್ ಭಯದಿಂದ ಮೆಲುಧ್ವನಿಯಲ್ಲಿ ನಿನ್ನ ಮಗಳಿಗೆ ತಂದೆಯ ಸ್ಥಾನ ಕೊಡಬಹುದಾ ಎಂದವನ ಮನದಲ್ಲಿ ಆತಂಕ ತುಂಬಿತ್ತು. ಸುನೀಲನ ಮಾತನ್ನು ಕೇಳಿದ ಶಾಂತಿಯ ಕಣ್ಣಗಳಲ್ಲಿ ಬಂದ ಆನಂದ ಬಾಷ್ಪ ಇನ್ನೇನು ಕೆನ್ನೆಯ ಮೇಲೆ ಬೀಳುವಷ್ಟರಲ್ಲಿ ಸುನೀಲನ ಕೈ ಸೇರಿತ್ತು.ಅವನ ಮುಖವನ್ನೇ ನೋಡುತ್ತಿದ್ದ ಶಾಂತಿ ಸಂತೋಷದ ನಗೆ ಬೀರಿದಳು. ಇದನ್ನು ನೋಡಿದ ಸುನೀಲನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಟ್ಯಾಂಕ್ಸ್‍ಗಾಡ್ ಎಂದವನೇ ಶಾಂತಿಯ ಕೈಯಿಂದ ರಮ್ಯಾಳನ್ನು ಎತ್ತಿಕೊಂಡು ಪ್ರೀತಿಯಿಂದ ಮುತ್ತು ಕೊಟ್ಟು ಅಪ್ಪಿ ಕೈಯಲ್ಲಿ ಸೂಟ್ ಕೇಸ್ ಹಿಡಿದು ನಿಧಾನವಾಗಿ ಕೆಳಗೆ ಇಳಿದ ಹಿಂದೆ ಶಾಂತಿ ನಿಧಾನವಾಗಿ ಸುನೀಲನ ದಾರಿಯಲ್ಲೇ ಹೆಜ್ಜೆ ಇಡುತ್ತಾ ಕೆಳಗೆ ಇಳಿದಳು ಎಲ್ಲೆಡೆಯೂ ಮುಸ್ಸಂಜೆ ಆವರಿಸಿತ್ತು. ಮುಸ್ಸಂಜೆ ಸುನೀಲ್ ಮತ್ತೆ ಶಾಂತಿಯ ಬೆಸುಗೆಯನ್ನು ಬೆಸೆದಂತೆ ಇತ್ತು.

  • ವೀಣಾ ನಾಗರಾಜುಶಿಕ್ಷಕಿ ಹೆಬ್ಬತ್ತನಹಳ್ಳಿ
    ಮಲ್ಲಸಂದ್ರ ಅಂಚೆ
    ತುಮಕೂರು ಜಿಲ್ಲೆ ಮತ್ತು ತಾಲೂಕು