ಬದುಕಿನ ಸೂಕ್ತ ನಿರ್ವಹಣೆಯ ಸೂತ್ರೀಕರಿಸಿಕೊಂಡ ಮುಕ್ತ ಚಿಂತನೆಗಳು

ಕೃತಿಯ ಹೆಸರು : ಸಾಕ್ಷಾತ್ಕಾರ ಗರ್ಭದಿಂದ ಗೋರಿಯವರೆಗೆ ಹದಿನೆಂಟು ಹೆಜ್ಜೆಗಳು
ಲೇಖಕರ ಹೆಸರು : ನ್ಯಾಯವಾದಿ ಎಮ್. ಬಿ. ಪಾಟೀಲ
ಪ್ರಕಾಶಕರು : ಸಪ್ನಾ ಇಂಕ್  ಬೆಂಗಳೂರು
ಪುಟಗಳು : 153, ಬೆಲೆ ರೂ. 295

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಚಾರ ಸಾಹಿತ್ಯವು ಪ್ರಮುಖ ಸ್ಥಾನ ಪಡೆಯುವಲ್ಲಿ ದಾಪಗಾಲು ಹಾಕುತ್ತ ನಡೆದಿದೆ. ಪ್ರಬಂಧ ಸಾಂದರ್ಭಿಕ ಕಥಾ ಹಂದರ ಹೊಂದಿದ ಬರಹಗಳು ವಿಚಾರ ಸಾಹಿತ್ಯ ಹೊತ್ತು ತರುತ್ತಿರುವುದು ವೈಜ್ಞಾನಿಕ, ವೈಚಾರಿಕತೆ ಚಿಂತನೆಗೆ ಸಹಕಾರಿಯಾಗುತ್ತಲಿದೆ.  ಇಂದು ಸಾಹಿತ್ಯ ಕ್ಷೇತ್ರದೊಳಗೆ ಹಲವಾರು ಗೊಂದಲಗಳು ಜನ್ಮ ತಾಳಿವೆ. ಕಾವ್ಯವೆಂದು ಪ್ರಕಟಗೊಂಡಿರುವ ಕವನಗಳಲ್ಲಿ ಕಾವ್ಯದಂಶಗಳೇ ಇಲ್ಲ. ವೈಜ್ಞಾನಿಕ ಕೃತಿ ಎಂದು ಪ್ರಕಾಶನಗೊಂಡ ಕೃತಿಯೊಳಗೆ ವೈಜ್ಞಾನಿಕತೆಯ ಗಂಧವೇ ಇರುವುದಿಲ್ಲ. ಇನ್ನೂ ಕಥೆ, ಕಾದಂಬರಿ, ನಾಟಕ, ಸಾಹಿತ್ಯಕ್ಕೂ ಒಂದು ತೆರನಾದ ಸಾಹಿತ್ಯಿಕ ಕೊರತೆವಿರುವುದುನ್ನು ಅಲ್ಲಗಳೆಯಿಕ್ಕಾಗದು ಧಾರ್ಮಿಕ ಕೃತಿಗಳಲ್ಲೂ ಅನ್ಯ ವಿಷಯಗಳ ಚರ್ಚೆ ಇರುವುದು ಗಮನಿಸಬೇಕಾದ ಸಂಗತಿ. ವಿವಾದಗಳಿಗೆ ಸಿಲುಕುವ ಭಯದಿಂದ ವಾಸ್ತವ ಮರೆಮಾಚುವಿಕೆಯು ಸಾಹಿತ್ಯ ಭಾಗವಾಗಿರುವ ಕಾಲ ಇದಾಗಿದೆ. ವ್ಯಕ್ತಿ, ಸಮಾಜ, ಧರ್ಮ, ರಾಜಕೀಯ, ಶೈಕ್ಷಣಿಕ, ಆಡಳಿತ ಕ್ಷೇತ್ರದಲ್ಲಿಯ ತಲ್ಲಣಗಳ ವಾಸ್ತವ ಚಿತ್ರಣ ಇಂದಿನ ಅಗತ್ಯವಾಗಿದೆ. ಈ ಹಿನ್ನೆಲೆಯೊಳಗೆ ‘ಸಾಕ್ಷಾತ್ಕಾರ’ ಕೃತಿಯನ್ನು ಗ್ರಹಿಸಬಹುದಾಗಿದೆ.
ಈ ಕೃತಿಯ ವಿವಿಧ ಅಧ್ಯಾಯಗಳಲ್ಲಿ ಬದುಕಿನ ತಿರುಳು ತಿಳಿಸಲು ಮತ್ತು ಸಾಕ್ಷಾತ್ಕಾರದ ಅರಿವು ಮೂಡಿಸಲು ತೂಗಿಕೊಂಡ ಕೆಲ ವಿಚಾರಗಳನ್ನು ಆಯ್ದು ಇಲ್ಲಿ ಕೊಡಲಾಗಿದೆ.

* ನಾವು ಮಕ್ಕಳ ಭಾವನೆಗಳನ್ನು ಹತ್ತಿಕ್ಕಬಾರದು. ಅವರ ಭಾವನೆಗಳಿಗೆ ಅವರ ವಿಚಾರಗಳಿಗೆ ಸ್ಪಂದಿಸಬೇಕು.
ನಾನು ಮಕ್ಕಳು ಕೇಳುವ ಪ್ರಶ್ನೆಗಳಿಗೆ ತಪ್ಪು ಉತ್ತರಗಳನ್ನು ಎಂದಿಗೂ ಕೊಡಬಾರದು.
ನಮ್ಮ ಮಕ್ಕಳನ್ನು ಮಾಧ್ಯಮಗಳ ಮುಂದೆ ಕೊಡ್ರಿಸಿ ಭಯಾನಕ ಘಟನೆಗಳನ್ನು ತೋರಿಸಿ, ನಮ್ಮ ಕೈಯಾರೆಯೇ ಹತ್ಯೆ ಮಾಡುತ್ತಿದ್ದೇವೆ. ಇದಕ್ಕೆ ನಾವೇ ಕಾರಣ ಎಂಬುದನ್ನು ಮರೆಯಬಾರದು.
(ಮಗು ಎಂಬ ಶುಭ್ರ ಹಾಳೆ)
* ಸ್ನೇಹದಲ್ಲಿ ಆಶೆ ಆಕಾಂಕ್ಷೆಗಳಿಲ್ಲ. ಅಲ್ಲಿ ಕೇವಲ ಎರಡು ಹೃದಯಗಳ ಸಂಗಮವಾಗಿರುತ್ತವೆ.
(ಸ್ನೇಹದ ಸಂಜೀವಿನಿ)
* ಪಾಪಿ ಮತ್ತು ಪುಣ್ಯಾತ್ಮರು ಇಬ್ಬರು ತಾಯಿಯ ಗರ್ಭದಿಂದ ರಕ್ತಮಾಂಸವನ್ನು ಹಂಚಿಕೊಂಡು ಒಂದೇ ಮಾರ್ಗದಿಂದ ಬಂದರೂ ಸಹಿತ ನಡೆ ಮತ್ತು ನುಡಿಯ ಮುಖಾಂತರ ಒಬ್ಬ ಪಾಪಿಯಾಗುತ್ತಾನೆ. ಇನ್ನೊಬ್ಬನು ಪುಣ್ಯಾತ್ಮನಾಗುತ್ತಾನೆ. (ಪಾಪಿ ಮತ್ತು ಪುಣ್ಯಾತ್ಮ)
* ಧರ್ಮ ಮತ್ತು ಕಾನೂನಿನ ಗುರಿ ಮನುಷ್ಯನ ರಕ್ಷಣೆ, ಸಮಾಜದ ರಕ್ಷಣೆ ಆಗಿದೆ. (ಧರ್ಮ ಮತ್ತು ಕಾನೂನು)
* ಮನುಷ್ಯ ಸುಖದ ಬೆನ್ನು ಹತ್ತಿ ಸಂತೃಪ್ತಿಯನ್ನು ಮರೆಯಬಾರದು (ಸಂತೃಪ್ತಿ)
* ಪ್ರಾಣಿ ಪಕ್ಷಿಗಳು ಎಂದೂ ಭ್ರಷ್ಟಾಚಾರ ಮಾಡಿದ ಉದಾಹರಣೆಗಳಿಲ್ಲ (ಭ್ರಷ್ಟಾಚಾರದ ಮೂಲ ಹುಡುಕುತ್ತ)
* ಮರೆವು ಎಂಬ ಪದಕ್ಕೆ ಇನ್ನೊಂದು ಅರ್ಥವೇ ಕ್ಷಮೆ (ಮರೆವು ಮತ್ತು ಮಾಧ್ಯಮಗಳು)
* ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ನೋಡಿ ನಾವು ಎಷ್ಟು ನ್ಯಾಯಯುತವಾಗಿ ಸಾಕ್ಷಿ ನುಡಿಯುತ್ತೇವೆ ಎಂಬುದನ್ನು ಯೋಚಿಸಬೇಕಾಗಿದೆ. (ಸಾಮಾಜಿಕ ಸಾಕ್ಷಿ ಪ್ರಜ್ಞೆ)
* ಜಗತ್ತಿನ ಬಹಳಷ್ಟು ಜನರು ನಿದ್ರೆಯಲ್ಲದೆ ಪರದಾಡುತ್ತಿದ್ದಾರೆ (ನಿದ್ರೆಯೋ ಪರಮಾನಂದ)

ಲೇಖಕರಾದ ಎಂ.ಬಿ.ಪಾಟೀಲ ಅವರು ಪ್ರತಿಯೊಂದು ಅಧ್ಯಾಯನದಲ್ಲಿ ಅನೇಕ ಘಟನೆಗಳನ್ನು ಪ್ರಸ್ತಾಪಿಸಿ ವಿಷಯ ಮನನಕ್ಕೆ ಅಸ್ಪದ ಮಾಡಿ ಕೊಟ್ಟಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಈ ಕೃತಿಯೊಳಗೆ ದಾಖಲಾಗಿರುವ ವಿವಿಧ ಘಟನೆಗಳು, ಪ್ರಸಂಗಗಳು ಉಪಕಥೆಗಳು ವಿವಿಧ ವಿಷಯಗಳ ಮೇಲೆ ಬೆಳಕು ಚಲ್ಲಿ, ಚಿಂತನೆಗೆ ಒಳಗೊಳ್ಳುವಷ್ಟು ಪರಿಣಾಮಕಾರಿಯಾಗಿರುವುದು ವಿಶೇಷವೆಂದು ಹೇಳಬಹುದು. ಸಾಕ್ಷಾತ್ಕಾರ ಕೃತಿ ರಚನೆಯ ಆಶಯವನ್ನು ಲೇಖಕರಾದ ಎಂ.ಬಿ. ಪಾಟೀಲ ಹೇಳಿಕೊಂಡಿದ್ದು ಇಲ್ಲಿ ಉಲ್ಲೇಖನಿಯ. ಈ ಕೃತಿಯಲ್ಲಿ ಬರುವ ಹದಿನೆಂಟು ಅಂಕಣಗಳು ಸುಂದರ ಬಾಳಿನ ನಂಟ ಎಂದು ಭಾವಿಸಿದ್ದೇನೆ” ಇವರು ‘ಸವಿನುಡಿ’ ಎಂಬಲ್ಲಿ ಬೆಲ್ಲದ ರುಚಿಯನ್ನು ಅನುಭವಿಸಿಯೇ ತಿಳಿಯುವಂತೆ ಪುಸ್ತಕ ಓದಿಯೇ ಆನಂದಿಸಬೇಕು ಎಂದು ಹೇಳಿದ್ದು ಮಾರ್ಮಿಕವಾಗಿದೆ.
‘ಸಾಕ್ಷಾತ್ಕಾರ’ ಕೃತಿಯ ಮುಖಪುಟ ಪುಸ್ತಕ ವಿನ್ಯಾಸ ಎಲ್ಲವೂ ಆಕರ್ಷಕವಾಗಿವೆ. ‘ಸಾಕ್ಷಾತ್ಕಾರ’ ಕೃತಿಯ ಮೇಲುಗಾರಿಕೆಯು ವಿಷಯ ಸಂಗ್ರಹ ಮತ್ತು ಬದುಕಿನಲ್ಲಿ ಕಂಡ, ಓದಿದ, ಕೇಳಿದ ದೃಶ್ಯ ಮಾಧ್ಯಮದಲ್ಲಿ ನೋಡಿದ ಘಟನೆಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡಿದ್ದಾಗಿದೆ. ಇದೊಂದು ಹಲವು ವಿಷಯಗಳನ್ನು ಒಳಗೊಂಡ ಕೃತಿಯಾಗಿ ಮತ್ತು ಬದುಕಿನ ವಿವಿಧ ಸಂದರ್ಭಗಳನ್ನು  ಸಕರಾತ್ಮಕವಾಗಿ ನಿಭಾಯಿಸಲು ಮಾರ್ಗಸೂಚಿಯಾಗಿ ಮೂಡಿ ಬಂದಿದೆ. ಬದುಕಿನ ವಿವಿಧ ಮಗ್ಗುಲುಗಳನ್ನು ತಿಳಿಯಲು ಸಹಕಾರಿಯಾಗಿರುವ ಈ ಕೃತಿ ಸಂಗ್ರಹ ಯೋಗ್ಯವಾಗಿದೆ.

ಶುಭ ಹೇಳಲು ಸಂದ ಮೌನದೊಳಗಿನ ಮಾತು

ಕೃತಿಯ ಹೆಸರು : ಮೌನದೊಳಗಿನ ಮಾತು (ಕವನ ಸಂಕಲನ)
ಕವಿಯ ಹೆಸರು : ಬಾಳಕೃಷ್ಣ ಜಂಬಗಿ
ಪ್ರಕಾಶಕರು : ಬಾಳಕೃಷ್ಣ ಜಂಬಗಿ
ಆದಿಗಂಗಾ ನಿವಾಸ, ಕಾಲೇಜು ರಸ್ತೆ
ಹಾರೂಗೇರಿ -59122, ಜಿ: ಬೆಳಗಾವಿ
ಪುಟಗಳು : 94 ಬೆಲೆ ರೂ. 60/-

‘ಕಾವ್ಯ ಇದು ಇಂದು ಅತ್ಯಂತ ಜನರ ನಿಕಟಗೊಂಡು ಅನುಭವಗಳನ್ನು ಅಭಿವ್ಯಕ್ತಿಗೊಳಿಸುವ ಮಾಧ್ಯಮವಾಗಿ ಜನಜನಿತಗೊಂಡಿದೆ. ಮನುಷ್ಯನು ಮೂಲತಃ ಭಾವನಾ ಜೀವಿಯಾಗಿದ್ದು, ಹಲವಾರು ವಿದ್ಯಮಾನಗಳಿಗೆ ಸ್ಪಂದಿಸುವ ಸ್ವಭಾವ ಹೊಂದಿದ್ದಾನೆ. ಈ ತುಡಿತ-ಮಿಡಿತಕ್ಕೆ ಕಾವ್ಯ ಪ್ರಕಾರವನ್ನು ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲಿದೆ. ಇಂಥ ತುಡಿತ- ಮಿಡಿತಗಳ ಮೂಲಕ ಕಾವ್ಯ ಪ್ರಪಂಚವು ವಿಸ್ತರಗೊಳ್ಳುತ್ತಿರುವುದರ ಜೊತೆಗೆ ಭಾಷೆಯ ಬರವಣಿಗೆ ಉಳಿದುಕೊಳ್ಳಲು ಸಹಕಾರಿಯಾಗಿದೆಂದು ಹೇಳಬಹುದಾಗಿದೆ. ಪ್ರಸ್ತುತ `ಮೌನದೊಳಗಿನ ಮಾತು’ ಕೃತಿಯ ಕವಿ ಬಾಳಕೃಷ್ಣ ಜಂಬಗಿ ಅವರು ತಮ್ಮ ಅನುಭವಗಳನ್ನು ಕಾವ್ಯ ಮೂಲಕ ಪಸರಿಸಲು ಮುಂದಾಗಿ,  ಕಾವ್ಯ ಲೋಕಕ್ಕೆ ಮೆರಗು ತರಲು ಹೊರಟಿದ್ದಾರೆ. ಈ ಸಂಕಲದೊಳಗಿನ ಕವನಗಳು, ಪ್ರಕೃತಿಯ ಪ್ರೀತಿಯನ್ನು ಅದರ ಸ್ಪೋಟಕ ಗುಣಗಳನ್ನು ಜನಮನಕ್ಕೆ ಬಿಂಬಿಸುವ ಸದಾಶಯ ಹೊಂದಿ, ಗಮನಾರ್ಹವಾಗಿವೆ.

ಬದುಕಿನ ವಿವಿಧ ಮಗ್ಗುಲು ನೋವು, ನಲಿವು ಮತ್ತು ಪ್ರಕೃತಿಯ ಸ್ಥಿತಿ- ಗತಿಯೊಂದಿಗೆ ಸಾಮಾಜಿಕ, ಆರ್ಥಿಕ ಪರಿಸರ ಪರಿಚಯಿಸುವ ಕವನಗಳ ಕೆಲ ಸಾಲುಗಳನ್ನು ಇಲ್ಲಿ ಆಯ್ದು ಕೊಡಲಾಗಿದೆ.
* ಕಡಲಲ್ಲಿ ಕಂಡ ಏರಳಿತಗಳು
ಕಣ್ಣಲ್ಲಿ ಇಬ್ಬನ್ನಿಯ ಹನಿಗಳು (ಹಾಡು ಬಾ ಕೋಗಿಲೆ)
ಸಂಖ್ಯೆಯಲ್ಲಿ ನಾವು ಅಸಂಖ್ಯೆಗಳು
ಗರ್ದಿ ಗಮ್ಮತ್ತಿನ ದಿನಗಳು (ನಮ್ಮ ಹಾಡುಗಳು)
* ಮಳೆ ಬಿದ್ದರೆ ಏನೆಲ್ಲ
ಇಲ್ಲದಿದೆ ಏನಿಲ್ಲ (ಮಳೆ)
* ಮಳೆಯಲ್ಲಿ ಮಿಂದು ಕುಣಿಯುವ ಮಕ್ಕಳಿಗೆ
ಇಲ್ಲ ನಾಳಿನ ಚಿಂತೆ (ಇಂದು ನಾಳೆ)
* ತಳಕಾಣದ ಆಳ ನೆಲೆ ನಿಂತ ಸಾಗರ
ಕದ್ದಲೆ ಬಂದು ಒಂದಾಗುವ ನದಿಗಳು (ಸೌಂದರ್ಯ)
* ಬೆನ್ನಟ್ಟಿ ಬರುವ ಸುಖ-ದುಃಗಳಿಗೆ
ಹೇಳೋಣ ಬನ್ನಿ ಧನ್ಯವಾದ (ಸುಖ- ದುಃಖ)
* ಅಂತಸ್ತು ಅಧಿಕಾರ ಸದಾ ಇರಬೇಕು
ಎಂದು ಹುಚ್ಚು ಹಚ್ಚಿಕೊಂಡರೆ
ಶಾಂತಿ ಸಿಕ್ಕೇತು ಹೇಗೆ ?
* ಹೊಸ್ಮಾಲಗಿತ್ತಿಯರು ಎದುದಾದರೆ
ಹೊಸ ಅನುಭವದ ಪಿಸು ಮಾತು (ಮಾತು)

ಈ ಸಂಕಲನದೊಳಗೆ ಮಾತುಗಳಿವೆ. ಭಾವ- ಭಾವನೆಗಳ ಜೊತೆಗೆ ಜೀವನದೊಳಗೆ ಕಂಡ ಸತ್ಯಾಸತ್ಯೆತಯ ನುಡಿಗಳು ಸಾಕಷ್ಟಿವೆ. ಕಾವ್ಯ ಎಂಬುದು ಮಾತು ಎಂದು ಮೀಮಾಂಸಕರು ಹೇಳಿದ್ದರೆ ಕವಿ ಬಾಳಕೃಷ್ಣ ಜಂಬಗಿ ಅವರು ಕವನಗಳಿಗೆ ಮೌನದೊಳಗಿನ ಮಾತಾಗಿ ಹಿಡಿದ್ದಿಟ್ಟೆದ್ದಾರೆಂದು ಹೇಳಬಹುದು.

ಸಾಂದರ್ಭೀಕ ಮುನ್ನೋಟ ಕವಿತೆ ಕಟ್ಟುವಿಕೆಗೆ ಸಜ್ಜಾದ ಮನಸ್ಸಿನ ಓಟ

* ಸಂಕಲನದ ಹೆಸರು : ಗುಬ್ಬಿ ಗುಬ್ಬಿ ಮರಿಯ ಮಾತುಕಥೆ ಮಕ್ಕಳ ಕವಿತೆಗಳು
* ಕವಿಯ ಹೆಸರು : ಚಂದ್ರಕಾಂತ ಕರದಳ್ಳಿ * ಪ್ರಕಾಶಕರು : ಚಂದ್ರಕಾಂತ ಕರದಳ್ಳಿ
* ವಿಚಾರ ಪ್ರಕಾಶನ ‘ಶಿವಪ್ರಸಾದ’ * ಲಕ್ಷ್ಮೀ ನಗರ ಶಹಪೂರ- 585223
* ಮೊ.ನಂ. 9448565212 *  ಪುಟಗಳು 72 ಬೆಲೆ ರೂ. 60

ಕನ್ನಡ ಕಾವ್ಯ ಪರಂಪರೆಯಲ್ಲಿ ಮಕ್ಕಳಿಗಾಗಿ ರಚಿತಗೊಂಡ ಕಾವ್ಯ, ಜನಪದ ಸಾಹಿತ್ಯದೊಂದಿಗೆ ಥಳಕು ಹಾಕಿಕೊಂಡಿದ್ದನ್ನು ಮರೆಯಬಾರದು. ಮಕ್ಕಳ ಲಾಲನೆ- ಪಾಲನೆಯ ಜೊತೆ- ಜೊತೆಗೆ ತಾಯಂದಿರು, ಅಜ್ಜಂದಿರು, ಸಹೋದರಿಯರು ಮಕ್ಕಳ ಮನ ತಣಿಸಲು, ಹಾಡುಗಾರಿಕೆಯನ್ನು ಅವಲಂಬಿಸಿದದ್ದು ಒಂದು ಪರಂಪರೆಯ ಭಾಗವೇ ಆಗಿದೆ. ಹೀಗಾಗಿ ಮಕ್ಕಳ ಕಾವ್ಯ ಪರಂಪರೆಗೆ ಗರತಿ ಹಾಡುಗಳು ಮೂಲವಾಗಿ ನಿಲ್ಲುತ್ತವೆ. ಮಕ್ಕಳ ಆಶೋತ್ತರಗಳನ್ನು ಬಿಂಬಿಸುವ ಮಕ್ಕಳಿಗೆ ತನ್ನ ಸುತ್ತ- ಮುತ್ತಲಿನ ಪರಿಸರ ಪರಿಚಯಿಸುವ ಜನರ ಬದುಕಿಗೆ ಅಣಿಗೊಳಿಸುವ ಹವಣಿಕೆ ಹೊತ್ತ ಶಿಕ್ಷಣ ಪದ್ಧತಿಯ ಭಾಗವಾಗಿಯೂ ಮಕ್ಕಳ ಕವಿತೆಗಳು ಪ್ರಚಲಿತಕ್ಕೆ ಬಂದವು. ಶಿಕ್ಷಣ ಕ್ರಮದ ಭಾಗವಾದ ಪಠ್ಯದೊಳಗೆ ಮಕ್ಕಳ ಬುದ್ಧಿಮತ್ತೆ ಮತ್ತು ಗ್ರಹಿಸುವ ಶಕ್ತಿಯ ಗುಣವಾಗಿ ಮಕ್ಕಳಲ್ಲಿ ಭಾಷಾ ಜ್ಞಾನ ಹೆಚ್ಚಿಸಲು ಕವಿತೆಗಳು ಸಹಕಾರಿ ಎಂದು ಭಾವಿಸಿ, ಕವಿತೆಗಳನ್ನು ರಚಿಸುವ ಕಾರ್ಯಕ್ಕೆ ಹೆಚ್ಚಿನ ಅವಕಾಶ ದೊರೆತವು. ಮಕ್ಕಳೊಂದಿಗೆ ನಂಟು ಬೆಸೆದುಕೊಂಡ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಮನೋಗತವನ್ನು ಅರಿತು ಮಕ್ಕಳ ಕವಿತೆಗಳು ರಚಿಸಲು ಮುಂದಾದರು ಆ ಪರಂಪರೆ, ಇಂದಿಗೂ ಮುಂದುವರಿದಿದೆ.
ಇಂದು ಮಕ್ಕಳ ಕವಿತೆಗಳು ಕೇವಲ ಪಠ್ಯಕ್ಕೆ ಸೀಮಿತವಾಗಿರದೆ ಮಕ್ಕಳ ಓದಿನ ಹಸಿವನ್ನು ಜ್ಞಾನದ ಹಸಿವೆಯನ್ನು ಹಿಂಗಿಸುವ ಭಾಗವಾಗಿ ಪ್ರಚಲಿತದಲ್ಲಿವೆ. ಹೀಗಾಗಿ ಮಕ್ಕಳ ಕವಿತೆಗಳ ರಚನೆ ಒಂದು ಅರ್ಥದಲ್ಲಿ ವಿಸ್ತಾರಗೊಂಡಿದೆ ಮತ್ತು ವೈವಿದ್ಯಮಯಗೊಂಡಿದೆ.
ಇಂದಿನ ಮಕ್ಕಳು ಅನೇಕ ಮಾಹಿತಿಗಳಿಂದ ಸುತ್ತವರಿಯಲ್ಪಟ್ಟಿದ್ದಾರೆ. ದೂರದರ್ಶನ ಮತ್ತು ಚರವಾಣಿಗಳ ಸೌಲಭ್ಯದಿಂದಾಗಿ ಅವರ ಜ್ಞಾನದ ಬಲ ವಿಸ್ತಾರಗೊಂಡಿದೆ. ದೃಶ್ಯ ಮಾಧ್ಯಮದೊಳಗೆ ಬರುವ ಕಾರ್ಯಕ್ರಮಗಳು ಅವರ ಬದುಕನ್ನು ಒಂದು ತೆರನಾದ ಇಕ್ಕಟ್ಟಿಗೂ ಸಿಲುಕಿದೆ. ಮಕ್ಕಳ ಮನದೊಳಗೆ ಅನೇಕ ವಿಪರಾಸ್ಯಗಳು ಕೋಪ- ತಾಪಗಳು, ಅಸಹನೆಗಳು, ಅಸಹಾಯಕತೆಗಳು ಗೊತ್ತಿಲ್ಲದಂತೆ ನುಸಿಳಿಗೊಂಡಿವೆ. ಇಂದಿನ ಮಕ್ಕಳಲ್ಲಿ ಮನೆ ಮಾಡಿರುವ ನಕಾರಾತ್ಮಕತೆ, ಅಸಹನೆ ಸಿಟ್ಟು ಸೆಡುಗಳನ್ನು ತೊಲಗಿಸಿ ನಿಸರ್ಗದತ್ತ ಹರುಷದತ್ತ ಅಸಕ್ತಿ ಹೊಂದುವಂತೆ ಮಾಡಬೇಕಿದೆ. ಈ ದಿಶೆಯಲ್ಲಿ ಇಂದಿನ ಮಕ್ಕಳ ಕವಿತೆಗಳು ರಚಿತಗೊಳ್ಳಬೇಕಲ್ಲದೆ ನಿಸರ್ಗದತ್ತ ಈ ಬದುಕನ್ನು ಸಂತಸದಿಂದ ಕಳೆಯುವಂತೆಯೂ ಮಾಡಬೇಕಿದೆ. ಮಕ್ಕಳ ಜೊತೆ ಹಲವು ವರ್ಷ ಕಳೆದು ಅವರನ್ನು ತಿದ್ದಿತೀಡಿ, ನಾಗರಿಕರನ್ನಾಗಿಸುವ ಕಾರ್ಯದಲ್ಲಿ ತೊಡಗಿ ಸಾಹಿತ್ಯ ಕೃಷಿಯೊಳಗೂ ಅಸಕ್ತಿ ಹೊಂದಿರುವ ಕವಿ ಚಂದ್ರಕಾಂತ ಕರದಳ್ಳಿ ಅವರು ಇದನ್ನೆಲ್ಲ ಗಮನಿಸಿ “ಗುಬ್ಬಿ -ಗುಬ್ಬಿ ಮರೆಯ ಮಾತುಕಥೆ” ಕವನ ಸಂಕಲನವನ್ನು ರಚಿಸಿ ಪ್ರಕಾಶಿಸಿದ್ದಾರೆಂದು ಹೇಳಬಹುದು.

“ಗುಬ್ಬಿ -ಗುಬ್ಬಿ ಮರೆಯ ಮಾತುಕಥೆ” ಈ ಕೃತಿಯೊಳಗೆ 30 (ಮೂವತ್ತು) ಕವಿತೆಗಳಿವೆ. ಈ ಕವಿತೆಗಳಲ್ಲಿ ಬಹುಪಾಲು ಮಳೆ, ಮೋಡ ಕುರಿತು ಇವೆ. ಇದಲ್ಲದೆ ಶಾಲೆ, ಆಟ, ನೋಟ, ಹುಡುಗಾಟ, ಹುಡುಕಾಟ, ಚಂದ್ರ, ರೈಲು, ಬಸ್ಸು, ಮುಂತಾದ ವಸ್ತು- ವಿಷಯ ಹೊತ್ತು ತಂದ ಕವಿತೆಗಳಿವೆ.

“ಗುಬ್ಬಿ -ಗುಬ್ಬಿ ಮರೆಯ ಮಾತುಕಥೆ” ಈ ಸಂಕಲನದೊಳಗಿರುವ ಎಲ್ಲ ಕವಿತೆಗಳು ಒಂದೊಂದು ವಿಶಿಷ್ಟವಾದ ರೇಖಾಚಿತ್ರ ಹೊಂದಿದ್ದು ವಿಶೇಷವಾಗಿ ಗಮನಿಸಬಹುದಾಗಿದೆ. ಹೀಗಾಗಿ ಈ ಸಂಕಲನವು ಮಕ್ಕಳ ಮನಸ್ಸನ್ನು ಹಿಡಿದಿಡಲು ಮತ್ತು ಅವರಿಗೆ ಸುಲಭವಾಗಿ ವಸ್ತು-ವಿಷಯ ಅರ್ಥೈಸಿಕೊಳ್ಳಲು ವಿಫುಲ ಅವಕಾಶ ನೀಡಿದೆ. ಮಕ್ಕಳ ಕವನಗಳ ಸಂಕಲನದೊಳಗೆ ಚಿತ್ರಗಳಿರುವುದು ಸಾಹಿತ್ಯದ ಭಾಗವಾಗಿರುವುದನ್ನು ಕವಿ ಚಂದ್ರಕಾಂತ ಕರದಳ್ಳಿ ಮನಗಂಡದ್ದನ್ನು ಇದು ಸೂಚಿಸುತ್ತದೆ.

ಮಕ್ಕಳ ಬದುಕಿನ ಸುತ್ತ- ಮುತ್ತವಿರುವ ವಿಷಯ ಆಯ್ದುಕೊಂಡು ರಚಿತಗೊಂಡಿರುವ “ಗುಬ್ಬಿ -ಗುಬ್ಬಿ ಮರೆಯ ಮಾತುಕಥೆ” ಕೃತಿಯು ಮಕ್ಕಳಲ್ಲಿ ಪರಿಸರ ಪ್ರೀತಿ ಮತ್ತು ಪ್ರಯಾಣದ ಮಜಾವನ್ನು ಬಿಂಬಿಸುವಲ್ಲಿಯೇ ಹೆಚ್ಚಿನ ಅಸಕ್ತಿ ತೋರಿಸಿದ್ದು ಎದ್ದು ಕಾಣುತ್ತದೆ.
ಕಾಲಮಾನದ ಮಕ್ಕಳ ಆಶೋತ್ರಗಳು ಕಲ್ಪನೆಗಳು ಆಲೋಚನೆಗಳು ಆದ್ಯತೆಗಳು ಅತ್ಯಂತ ವೇಗದೊಳಗೆ ಬದಲಾಗುತ್ತಿರುವುದು ಸಹ ಇಂದಿನ ಮಕ್ಕಳ ಕವಿತೆಗಳಲ್ಲಿ ಒಡಮೂಡಿ ಬರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕವಿ ಚಂದ್ರಕಾಂತ ಕರದಳ್ಳಿ ಸೃಜನಶೀಲರಾಗುವದು ಅಷ್ಟೇ ಮುಖ್ಯವಾಗಿದೆ.

 

ಸ. ರಾ. ಸುಳಕೂಡೆ,
ರಾಮತೀರ್ಥ ನಗರ, ಬೆಳಗಾವಿ

( ಸಮಾಜದ ಹಲವು ಕ್ಷೇತ್ರಗಳ ವಸ್ತು ಸ್ಥಿಯನ್ನು ತೋರಿಸಿರುವ ನ್ಯಾಯವಾದಿ ಎಮ.ಬಿ.ಪಾಟೀಲರ ಸಾಕ್ಷಾತ್ಕಾರ ಪುಸ್ತಕ, ಮೌನವಾಗಿಯೇ ಕಾವ್ಯದ ಮೂಲಕ ಹೇಗೆ ಮನುಷ್ಯ ತನ್ನ ಭಾವನೆಗಳನ್ನು ವ್ಯಕ್ತ ಪಡಿಸುತ್ತಾನೆ ಎಂಬುದನ್ನು ಹೇಳುವ ಬಾಳಕೃಷ್ಣ ಜಂಬಗಿಯವರ ಮೌನದೊಳಗಿನ ಮಾತು ಕವನ ಸಂಕಲದ ಪುಸ್ತಕ ಮತ್ತು ಮಕ್ಕಳಿಗಾಗಿ ಸಮಾಜದಲ್ಲಿಯ ವಸ್ತು ವಿಷಯದ ಮೇಲೆ ಚಂದ್ರಕಾಂತ ಕರದಳ್ಳಿಯವರು ರಚನೆ ಮಾಡಿರುವ ಗುಬ್ಬಿ ಗುಬ್ಬಿ ಮರಿಯ ಮಾತುಕಥೆ ಮಕ್ಕಳ ಕವಿತೆಗಳು ಎಂಬ ಪುಸ್ತಕದ ಪರಿಚಯವನ್ನು ಇಲ್ಲಿ ಮಾಡಿಕೊಡಲಾಗಿದೆ. ಮೂರು ಪುಸ್ತಕಗಳ ಒಳ ಹೊರ ಪರಿಚಯ ಇಲ್ಲಿದೆ. ಪುಸ್ತಕದ ಹೆಸರು, ಬೆಲೆ, ಲೇಖಕರು, ಪ್ರಕಾಶಕರು ಮುಂತಾದ ವಿವರಗಳೊಂದಿಗೆ, ಪುಸ್ತಕದಲ್ಲಿರುವ ಲೇಖನ, ಕವನಗಳ ಬಗ್ಗೆ ತಮ್ಮ ಅನಿಸಿಕೆಯನ್ನು ಸ.ರಾ.ಸುಳಕೂಡೆವರು ಇಲ್ಲಿ ನೀಡಿದ್ದಾರೆ. )