ಪಿಸ್ತೂಲು-ಲೇಖನಿಯ ಸಹಬಾಳ್ವೆಯಲ್ಲಿ ಕಂಡ “ಬರಡು ಭೂಮಿಯ ಸತ್ಯಗಳು”

‘ನನ್ನ ಹುಟ್ಟಿನೊಂದಿಗೆ

ಅಂಟಿಕೊಂಡು ಬಂದ

ಸತ್ಯಗಳು

ಕಾಲಕಾಲಕ್ಕೆ

ನನ್ನನ್ನುಪ್ರಶ್ನಿಸುವ

ಸತ್ಯಗಳು

ಹಸಿವು ಹಂಬಲಿಸಿದಾಗ

ಜೀವ ಸತ್ವವ ತುಂಬಿ

ಪುಟಿದೇಳುವ ಸತ್ಯಗಳು

ನನ್ನ ಅಂತರಂಗದ

ಸತ್ಯಗಳು

ಬರಡುಭೂಮಿಯ

ಸತ್ಯಗಳು.

--ಯಾವನೊಬ್ಬ ಮನುಷ್ಯನ ವ್ಯಕ್ತಿತ್ವದಲ್ಲಿಯೇ ಅಂತರ್ಗತವಾಗಿರುವ ಸತ್ಯದ ವಿವಿಧ ಆಯಾಮಗಳ ಸ್ವಯಂ- ಪರಿಶೋಧನೆಯ ಜಾಗೃತ ಆಶಯದೊಡನೆ ರೂಪಗೊಂಡ ‘ಬರಡು ಭೂಮಿಯ ಸತ್ಯಗಳು’ ಎಂಬ ಕವನ ಸಂಕಲನದ ಕವಿ ಪೊಲೀಸ್ ಇಲಾಖೆಯ ಓರ್ವ ಉನ್ನತ ಅಧಿಕಾರಿಯೆಂದರೆ ನಂಬುವುದು ಕಷ್ಟ! ನಿಜ , ಅಗತ್ಯ ಸಾಕ್ಷಿ-ಪುರಾವೆಗಳಿಲ್ಲದೆ ಪೊಲೀಸ್ ಇಲಾಖೆಯವರೂ ಯಾವುದನ್ನೂ ನಂಬುವುದಿಲ್ಲ.ನಿತ್ಯ ಜೀವನದಲ್ಲಿ ತಾನು ನಂಬಿಕೊಂಡಿದ್ದ ಸತ್ಯ ಸದಾ ತನ್ನ ಕೈ ಹಿಡಿಯುತ್ತದೆಯೆಂದು ನಂಬುವುದೂ ದುಸ್ತರ.  ಇವರ ‘ಸತ್ಯಮತ್ತು ಸುಳ್ಳು’ಕವಿತೆಯ ನೋವಿನ ದನಿ ಕೇಳಿ:

‘ಸತ್ಯದಾ ನೆಲೆಯಲ್ಲಿ

ಒಂಟಿಯಾಗಿ ನಿಂತು

ಸತ್ಯ ಹರಿಶ್ಚಂದ್ರ ನಾನಾದರೂ

ಅದೃಷ್ಟಹೀನತೆಯ

ಈ ಕಿಚ್ಚು ಬೆನ್ನಟ್ಟಿ ಬರುವಾಗ

ನಾನು ಹೇಳಿದ ಸತ್ಯ

ದಿಕ್ಕೆಟ್ಟು ಓಡಿತ್ತು”........

ತಮ್ಮ ಕವನಗಳ ಮೂಲಕ ಮನುಷ್ಯನ ಒಂದು ರೀತಿಯ ಆತ್ಮಶೋಧನೆಯನ್ನೇ ನಡೆಸಿದಂತಿರುವ ಕವಿ ಡಾ.ರಾಜಪ್ಪನವರ ನಿಜದನಿಗೆ ‘ವ್ಹಾ’ ಎನ್ನಬೇಕೆನಿಸುತ್ತದೆ! ಓರ್ವ ಪೊಲೀಸ್ ಅಧಿಕಾರಿಯಲ್ಲಿ ಇಷ್ಟೊಂದು ಅಭಿವ್ಯಕ್ತಿಸಾಮಥ್ರ್ಯವಿರುವುದು ಸಾಧ್ಯವೇ-ಎಂದು ಕೆಲವರಿಗೆ ಸಂದೇಹವುಂಟಾಗಬಹುದು. ಡಾ.ರಾಜಪ್ಪನವರ ಈ ಪುಸ್ತಕಕ್ಕೆ ಮುನ್ನುಡಿ ಬರೆದ ಪ್ರಖ್ಯಾತ ಕವಿ ಜಿ.ಎಸ್.ಶಿವರುದ್ರಪ್ಪಾವರ ಪ್ರಕಾರ  “ಕೆಲವು ವೇಳೆ ಕವಿತೆ ಕೆಲವರ ಪಾಲಿಗೆ ಬೆನ್ನು ಹತ್ತಿದ ಬೇತಾಳ.ಈ ಸಂಕಲನದ ಮಟ್ಟಿಗೆ ಅದು ಹಿಡಿದುಕೊಂಡಿರುವುದು ಒಬ್ಬ ಪೊಲೀಸ್ ಅಧಿಕಾರಿಯನ್ನು.ಪೊಲೀಸ್ ಅಧಿಕಾರಿಯಾದರೇನು, ಯಾರಾದರೇನು? ಅವನೂ ಒಬ್ಬ ಮನುಷ್ಯ; ಹೃದಯವನ್ನು ಕಳೆದುಕೊಳ್ಳದ ಮನುಷ್ಯ; ಸೂಕ್ಷ್ಮ ಸಂವೇದನಾಶೀಲನಾದ ಮನುಷ್ಯ.ಇಂಥ ಮನುಷ್ಯನನ್ನು ಸುತ್ತಣ ಜಗತ್ತು ನೂರು ಬಗೆಯಲ್ಲಿ ಕಾಡುತ್ತದೆ; ಅವನೊಳಗೆ ಸ್ಪಂದಿಸುತ್ತದೆ. ಇಂಥ ಹಲವೊಂದು ಮಾನವೀಯ ಸ್ಪಂದನಗಳನ್ನು ಕಾವ್ಯರೂಪದಲ್ಲಿ ಪವಣಿಸಿದ ಪೆÇಲೀಸ್ ಅಧಿಕಾರಿ ಡಾ.ರಾಜಪ್ಪನವರ ಕಲಾಭಿವ್ಯಕ್ತಿ ಅಭಿಮಾನಸ್ಪದವಾಗಿದೆ.   ಈ ಕವಿ ಪೊಲೀಸ್ ಇಲಾಖೆಯ ಖಾಕಿ ಸಮವಸ್ತ್ರದಲ್ಲಿ ಹುದುಗಿರುವ ಮಾನವೀಯ ಗುಣದ ಆರಾಧಕರಾಗಿದ್ದಾರಲ್ಲದೆ, ದೀನ-ದಲಿತರ ಪಕ್ಷಪಾತಿಯಾಗಿದ್ದಾರೆಂಬುದನ್ನು ಸಾಬೀತುಗೊಳಿಸುವ  ಹಲವೊಂದು ಕವಿತೆಗಳು ಈ ಸಂಕಲನದಲ್ಲಿವೆ. ಉದಾ ‘ಅಹವಾಲು’ ಎಂಬ ಕವಿತೆಯನ್ನು ನೋಡಬಹುದು:

“ಬರಿ ಮಾತಿನಲಿ

ಬೆಂದಿರುವ

ನನ್ನೊಡಲಿಗೆ ಬೇಕು

ಊಟ

ಯಾರಿಗೆ ಬೇಕು ನಿಮ್ಮ

ರಾಮರಾಜ್ಯದ

ಪಾಠ

ಅನ್ನ ಕೊಡಿ

ಮಹಾಶಯರೇ

ಅನ್ನ ಕೊಡಿ”

ನಮ್ಮ ವರಕವಿ ಬೇಂದ್ರೆಯರ “ಯಾರಿಗೆ ಬೇಕಾಗೈತಿ ನಿಮ್ಮ ಕವಿತಾ/ ಇದ್ರ ಬ್ರೆಡ್ ತಾ/ಮ್ಯಾಲ ಬೆಣ್ಣೀ ತಾ” ಎಂಬ ಪ್ರಸಿದ್ಧ ವ್ಯಂಗ್ಯಗೀತೆಯನ್ನು ನೆನಪಿಸುವ ಮೇಲಿನ ‘ಅಹವಾಲು’ ಎಂಬ ಅಪ್ಪಟ ವಾಸ್ತವತೆಯನ್ನು ಧ್ವನಿಸುವ  ಕವಿತೆಯ ಸಾಲುಗಳನ್ನು ಬರೆದ ಪೊಲೀಸ್ ಅಧಿಕಾರಿಯ ಮಾನವೀಯ ಅನುಕಂಪದ ಸತ್ಯಾಸತ್ಯತೆಯನ್ನು ಶೋಧಿಸುವ ಅವಶ್ಯಕತೆಯೇ ಇಲ್ಲ.ಇದೇ ಕವಿತೆ ಮುಂದೆ  “ಮಾತು ಮಾತಿಗೂ/ನಿಮ್ಮ ಗರೀಬಿ ಹಠಾವೋ/ರಾಮಬಾಣ/ ಅದು ಬರುವ ತನಕ/ ನಿಲ್ಲಲು ನಮ್ಮಲ್ಲಿಲ್ಲ ತ್ರಾಣ”-ಎಂದು ಬಿಸುಸುಯ್ಯುವ ಪರಿ ಸಂವೇದನಾಶೀಲ ವಾಚಕನ ಎದೆಗೆ ತಿವಿಯುತ್ತದೆ. ಇಂಥ ಸಾಮಾಜಿಕ ಕಳಕಳಿಯ ಹಲವೊಂದು ಕವಿತೆಗಳು ಈ ಸಂಕಲನದಲ್ಲಿವೆ.ಇವರ ‘ಇತಿಹಾಸ’ ಎಂಬ ಕವಿತೆ ಮನುಷ್ಯನ ಬದುಕಿನ ವಿವಿಧ ಮಗ್ಗಲುಗಳನ್ನೇ ಬಿಚ್ಚಿಟ್ಟಿರುವುದು ಗಮನಾರ್ಹವಾಗಿದೆ. ಉದಾ:

“ಸಾವಿನಂಚಿನಲಿ

ಕತ್ತಿಯಲುಗಿನಲಿ

ನಿಂತಿರುವ ಇತಿಹಾಸ

ಹಾವ ಭಾವಗಳಲಿ

ಮೈಮಾರಿ ಬದುಕುವರ

ಇತಿಹಾಸ

ಸ್ವಾರ್ಥಕ್ಕಾಗಿ ಹೆಸರಿಗಾಗಿ

ಏನೆಲ್ಲ ಮಾಡುವರ ಇತಿಹಾಸ”

ಇಂಥ ಸಾಮಾಜಿಕ ಒಳಸುಳಿಗಳ ಮೇಲೆ ಬೆಳಕು ಬೀರುವ ಹಲವು ಕವಿತೆಗಳೂ ‘ಬರಡು ಭೂಮಿಯ ಸತ್ಯಗಳಾಗಿ’ ಓದುಗರ ಎದೆ ತಟ್ಟುತ್ತವೆ. ಇನ್ನಷ್ಟು ಸಂಕ್ಷಿಪ್ತತೆ ಸಾಧಿಸಿದ್ದರೆ ಇವೇ ಕವಿತೆಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಬಹುದಿತ್ತು. ಅದು ಮುಂದಿನ ಸಾಧನೆಯ ದಾರಿ.

ನಮ್ಮ ರಾಜ್ಯದ  ಎರಡನೆಯ ರಾಜಧಾನಿಯಾದ ಬೆಳಗಾವಿಯಲ್ಲಿ  ಪೊಲೀಸ್ ಕಮೀಷನರ್ ಆಗಿರುವ ಡಾ.ಡಿ.ಸಿ. ರಾಜಪ್ಪ ಅವರೇ ಈ ಕವಿತೆಗಳ ಹಿಂದಿನ ಕ್ರಿಯಾಶಕ್ತಿ. ಅವರು ಕೇವಲ ಖಾಕಿ ಸಮವಸ್ತ್ರದಲ್ಲಿ ಕೆಳಗಿನವರ ಸೆಲ್ಯೂಟ್ ಸ್ವೀಕರಿಸುವ ಅಧಿಕಾರಿಯಾಗಿರದೆ, ಒಂದು ಸಂವೇದನಾಶೀಲ ಮತ್ತು  ಸೃಜನಶೀಲ ಹೂಹೃದಯವನ್ನು ಹೊತ್ತ ಅಧಿಕಾರಿಯಾಗಿರುವುದು ಅವರ ಕವಿತೆಗಳ ಆಧಾರದಿಂದಲೇ ಸಾಬೀತಾಗುವ ಸಂಗತಿ.  ಯಾವ ಅಧಿಕಾರದ ಅಂತಸ್ತಿಗಿಂತಲೂ ಈ ಕವಿಮನದ ಅಂತಸ್ತು ಹೆಚ್ಚಿನದೆಂಬುದಕ್ಕೆ ಅವರ ಇಲಾಖೆಯಲ್ಲಿಯೇ ಹಲವಾರು ದೃಷ್ಟಾಂತಗಳುಂಟು.ಅಂಥವರಲ್ಲಿ  ಶ್ರೀ ವಿಜಯ ಸಾಸನೂರು, ಡಾ..ಪಿ.ಎಸ್.ರಾಮಾನುಜಂ ಮೊದಲಾದವರು ಪ್ರಮುಖರು. ಅವರ ನೆನಪು  ಕನ್ನಡ ಮನಸ್ಸುಗಳಿಂದ ಮಾಸಿ ಹೋಗಿಲ್ಲ. ಈಗಲೂ ಕವಿಹೃದಯದ ಕೆಲವು ಅಧಿಕಾರಿಗಳು ಈ ಇಲಾಖೆಯಲ್ಲಿದ್ದಾರೆಂದು ಕೇಳಿದ್ದೇನೆ. ಇದೇ ಬೆಳಗಾವಿಯಲ್ಲಿ ಸೇವೆಗೈದು ವರ್ಗವಾಗಿ ಹೋದ ಶ್ರೀ ರವಿಕಾಂತೇಗೌಡ ಅಂಥವರಲ್ಲೊಬ್ಬರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದು, ಸದ್ಯ ಕರಾವಳಿ ಕಾವಲು ಪಡೆಯ ಮುಖ್ಯಸ್ಠರಾಗಿ ಸೇವೆ ಸಲ್ಲಿಸುತ್ತಿರುವ  ಎನ್.ಟಿ.ಪ್ರಮೋದ ರಾವ್ ಕನ್ನಡ ಪ್ರಾಧ್ಯಾಪಕರನ್ನೂ ಮೀರಿಸುವಂಥ ಅಸ್ಖಲಿತ ಕನ್ನಡ ವಾಗ್ಮಿಗಳು.    ಹಾಗೆ ನೋಡಿದರೆ,   ಸಾಹಿತ್ಯಕೃಷಿ ನಡೆಯುವುದೆಲ್ಲಾ ಶಿಕ್ಷಣ ಇಲಾಖೆಯ ವಿವಿಧ ಹಂತಗಳಲ್ಲೇ ಎಂಬ ಗ್ರಹಿಕೆ ನಮ್ಮ ಸಾಮಾನ್ಯ ಓದುಗನಲ್ಲಿರುವುದರಿಂದ, ಸಹಸಾ ಈ ಬಾಬತ್ತಿನಲ್ಲಿ ಪೊಲೀಸ್ ಇಲಾಖೆಯತ್ತ ಅವರ ಗಮನವೇ ಹರಿಯುವುದಿಲ್ಲ. ಆದರೆ ಮಳಲುಗಾಡಿನಲ್ಲಿ ಹೊಳೆಯುವ ಅಭ್ರಕದ ಹರಳುಗಳತ್ತ ಯಾರು ಕಣ್ಣು ಹರಿಸುತ್ತಾರೆ?

ಪ್ರಸ್ತುತ ಕವಿ ರಾಜಪ್ಪನವರ ಕುರಿತು ಇನ್ನೊಂದು ಮಾತು ಹೇಳಬೇಕೆಂದರೆ, . ಇವರು ತಮ್ಮ ವೈಯಕ್ತಿಕ ಪ್ರೀತಿ-ಪ್ರಣಯವನ್ನೊಳಗೊಂಡಂತೆ ಅನೇಕ ವಿಷಯಗಳ ಕುರಿತು ಕವನಗಳನ್ನು ರಚಿಸಿದ್ದು, ಈ ಸ್ಥಾನಿಕ ಅಥವಾ ಪ್ರಾದೇಶಿಕ ನೆಲೆಯಲ್ಲಿ ಬರೆಯುತ್ತಲೇ ಇವರ ದೃಷ್ಟಿ ವಿಶಾಲವಾಗಿ ಬೆಳೆದು, ವಿಶ್ವದñಷ್ಟಿಯಾದ ಬಗೆಯೂ ಬೆರಗುಗೊಳಿಸುವಂಥಾದ್ದು. ಉದಾ. ಅವರ ‘ಬಲು ಘೋರ’ ಎಂಬ ಕವಿತೆಯನ್ನು ಅವಲೋಕಿಸಿಸಬಹುದು: ಕವಿಯ ಮನಸ್ಸು ನಮ್ಮ ನಾಡಿನ ಗಡಿ ದಾಟಿ ಅಮೇರಿಕೆಯ ಮಹಾನಗರ ನ್ಯೂಯಾರ್ಕ್ ತಲುಪತ್ತದೆ. ಅಲ್ಲಿ ನಡೆದ ಒಂದು  ದುರ್ಘಟನೆಯ ಬಗ್ಗೆ ಅವರ ಜೀವ ಬಿಸಿಯುಸಿರು ಬಿಡುತ್ತದೆ.:

“ ವಿಶ್ವ ಮಾರುಕಟ್ಟೆಯ ಕಟ್ಟಡದ ಜೋಡಿ ಗೋಪುರಕ್ಕೆ ಅಲ್ ಕಾಯಿದಾ ಉಗ್ರರ ಜೆಂಬೋ ಜೆಟ್ ವಿಮಾನಗಳ ಅತಿ ಭಯಂಕರ  ಅಪ್ಪಳಿಕೆ ನಿಮಿಷಾರ್ಧದಲಿ ಕೊಂದಿತ್ತು ಎಣಿಸಲಾರದಷ್ಟು ಜನರ!”

ಈ ಕವಿಹೃದಯಕ್ಕೆ ವಿಶ್ವದ ಯಾವ ಮೂಲೆಯಲ್ಲಿಯೂ ಅಮಾಯಕರ ಜೀವಹಾನಿಯಾದಾಗ ಬೇಸರವೆನಿಸುತ್ತದೆ;ಒಡಲ ಕಳವಳ ಹೆಚ್ಚುತ್ತದೆ. ನ್ಯೂಯಾರ್ಕ್ ನಗರದಲ್ಲಿ ಸಂಭವಿಸಿದ  ಅಸಂಖ್ಯ ಅಮೇರಿಕನ್ ಜನರ ಸಾವು ಈ ಕವಿಹೃದಯವನ್ನು ತಟ್ಟಿದ ರೀತಿ  ಪೊಲೀಸ-ಗಿರಿಯ ಅಂತರಾಳದಲ್ಲಿ ಹುದುಗಿರುವ ವಿಶ್ವಮಾನವತೆಯ ಗುಣಾಂಶವನ್ನೇ ಗುರುತಿಸುವಂತೆ ಮಾಡುತ್ತದೆ.

ಈ ‘ಬರಡು ಭೂಮಿಯ ಸತ್ಯಗಳು’ ಸಂಕಲನದಲ್ಲಿಯ  ಕಾವ್ಯರಾಶಿ ಈ  ಕವಿಯ ಹಲವು ವರ್ಷಗಳ ಹುಟ್ಟುವಳಿ. ತನ್ನ ಪ್ರಾಯಸ್ಥ ದಿನಗಳಿಂದ ಬದುಕಿನ ಬೆಳವಣಿಗೆಯೊಡನೆ ಬಂದ ಪರಿಪಕ್ವ ಅನುಭವಗಳ ವರೆಗೆ ಇಲ್ಲಿಯ ಕವಿತೆಗಳ ಹಾಸು-ಬೀಸು ಪಸರಿಸಿರುವುದು  ಗೋಚರಿಸುವಂತಿದೆ. [ಪ್ರತಿಯೊಂದು ಮಾದರಿಯ ಕವಿತೆಗಳ ಪರಾಮರ್ಶೆ ಮಾಡುವುದರಿಂದ  ಲೇಖನದ ಮಿತಿ ಮೀರಬಹುದೆಂಬ ಅಳುಕು ನನ್ನದು].ನೇರವಾಗಿ ತಮ್ಮ ಇಲಾಖೆಯ ಅನುಭವದ ಹಿನ್ನೆಲೆಯಲ್ಲೇ ಬರೆದ ‘ಕಳ್ಳ ಮತ್ತು ಪೊಲೀಸ ನಾಯಿ’ ಎಂಬ ಮಿಶ್ರಭಾವನೆಯ ಕವಿತೆಯೊಂದು ಈ ಸಂಕಲನದ ಕೊನೆಯಲ್ಲಿದೆ.ಆ ಕವಿತೆಯ ಚೌ-ಚೌ ‘ರುಚಿ’ಯನ್ನು ಸ್ವತ:  ಓದಿಯೇ ಅನುಭವಿಸಿದರೆ ವಾಸಿ.

ಈ  ಕವಿಜೀವ ಕಂಡುಂಡ ಸತ್ಯಗಳು ಹಲವು ಕವಿತೆಗಳಲ್ಲಿ ಹಲವೊಂದು ಬಗೆಯಾಗಿ ಮುಖಾಮುಖಿಯಾಗುವ ರೀತಿ ಕೌತುಕಪೂರ್ಣವಾಗಿದೆ. ಇವರ ‘ಸಂಜೆಸಮಾಧಿ’ ಕವಿತೆಯಲ್ಲಿ ಕಾಣಿಸಿಕೊಂಡ ನಿಸರ್ಗದ ವ್ಯಾಪಾರ ಕಣ್ಮನ ತಣಿಸುವಂತಿದೆ.ಅದರಲ್ಲೂ

“ ಕರಾಳ ರಕ್ಕಸನಂತೆರಗಿ ನುಗ್ಗಿದ ಮೋಡ,

ಸೊಕ್ಕಿದ ಮದಗಜಗಳು ಬೆಳಕ ತುಂಡರಿಸಲು

ಹರಡಿತು ಸ್ಮಶಾನಮೌನ”

ಎಂಬಂಥ ಹೇಳಿಕೆಯಲ್ಲಿ ಹುದುಗಿದ ರೂಪಕಗಳು ರಸಿಕನ ಬಾಂದಳದಲ್ಲಿ ಮೆತ್ತಗೆ ಚಲಿಸಿದಂತಾಗುತ್ತದೆ. ಸೈಪಂಢರೀ ಪದವೀಧರ, ನಿಯತ್ತು, ಪ್ರಪಂಚ, ಮೈದಾನ, ಹಿಂಗಾರು-ಮುಗಾರು, ಮರೆತೆ, ಸತ್ಯ ಮತ್ತು ಸುಳ್ಳು,ದಿಗ್ಗಜರು ಇತ್ಯಾದಿ ಕವಿತೆಗಳು ತಮ್ಮ ಸಾಮಾಜಿಕ ಪ್ರಜ್ನೆಯಿಂದಾಗಿ  ಎರಡೆರಡು ಸಲ ಓದಬೇಕೆನಿಸುವಂತಿವೆ. ಇವರ ‘ಭಾರತೀಯ’ ಎಂಬ ಕವನದಲ್ಲಿ ಮಹಾಕವಿ ಕುವೆಂಪು ಅವರನ್ನು ನೆನಪಿಸುವ ರೀತಿಯಲ್ಲಿ-

“ ನೂರಾರು ಜಾತಿಗಳ

ನೂಕಾಚೆ ದೂರ

ನಾವೆಲ್ಲಾ ಭಾರತೀಯರು

ಒಂದಾಗಿ ಬಾಳೋಣ ಬಾರ”

ಎಂದು ಕರೆ ಕೊಡುತ್ತಾರೆ.ಅದೇ ಕವಿತೆಯಲ್ಲಿ -

“ ಸಹನೆ ಮೀರಿದ

ಶೋಷಣೆ ಸಹಿಸಿ

ಮುಚ್ಚಿಟ್ಟ ಸತ್ಯಗಳ

ಒಳಗೊಳಗೆ ದಹಿಸಿ

ಸೃಷ್ಟಿ ನಿಯಮಗಳ ಮೀರಿ

ಬೆಳೆವೆನೆಂಬ

ಅಟ್ಟಹಾಸವ ಮೆಟ್ಟಿ ನಿಲ್ಲಿಸಿ

ಒಂದಾಗಿ ಬಾಳೋಣ ಬಾರ.”

-ಎಂದು ಸಹಜ ಸ್ವಭಾವದ ನಿಷ್ಠಾವಂತ ಭಾರತೀಯನೊಬ್ಬನ ಕರುಳ ಮಿಡಿತಕ್ಕೆ ದನಿಗೊಟ್ಟದ್ದು ರಸಿಕಜನರು ‘ಸೈ’ ಎನ್ನುವಂತಿದೆ. ಇಂಥ ಉದಾತ್ತ ಭಾವನೆಯ ಕವಿತೆಗಳನ್ನು ಬರೆಯುತ್ತ ಬಂದ ಡಾ.ಡಿ.ಸಿ. ರಾಜಪ್ಪ ಅವರು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ, ಈಗ ನಮ್ಮ  ಬೆಳಗಾವಿಯ ಪೊಲೀಸ ವರಿಷ್ಠಾಧಿಕಾರಿಯಾಗಿ ಬಂದು ಕೆಲವು ದಿನಗಳೇ ಸಂದಿವೆ.. ಅವರಿಗೆ ಬೆಳಗಾವಿ ನಾಡಿಗರ ಸಂಪೂರ್ಣ ಸಹಕಾರ ದೊರೆಯಲೆಂದು ನಾನು ಹಾರೈಸುತ್ತೇನೆ. ಒಂದು ವೇಳೆ ನಾನು ಅವರನ್ನು ಕಾಣುವ ಯೋಗವೇ ಕೂಡಿ ಬಂದರೆ,... ಆಗ  ನನ್ನ ಮನಸ್ಸಿನಾಳದಲ್ಲಿ  ಮಿಸುಕಾಡಬಹುದಾದ ಒಂದು ಮುಖ್ಯ ಪ್ರಶ್ನೆಯೆಂದರೆ-   ಅವರ ಕೈಯೊಳಗಿರುವ ‘ಅಧಿಕಾರ’ದ ಸಂಕೇತವಾದ ‘ಪಿಸ್ತೂಲು’ ಮತ್ತು  ‘ಸಂಸ್ಕಾರ’ದ ಪ್ರತೀಕದಂತಿರುವ ‘ಲೇಖನಿ’ಗಳ ನಡುವೆ [ಗನ್ ವರ್ಸಸ್ ಪೆನ್] ಸಮಾಜಸಂಪನ್ನತೆ ಸಾಧಿಸುವಲ್ಲಿ ಹೆಚ್ಚು ಪರಿಣಾಮಕಾರಿ ಯಾವುದು?, ಅಥವಾ ಇವೆರಡೂ ಒಂದಕ್ಕೊಂದು ಪೂರಕ ಶಕ್ತಿಗಳೇ??.

ಡಾ.ಬಿ.ಎ.ಸನದಿ,

ಶಿಂದೊಳ್ಳಿ, ಕುಮಟಾ

 

ಬೆಟ್ಟಿಂಗ್ ಧಂದೆಯ ಬ್ರಹ್ಮಾಂಡ
ಪ್ರತಿ ವರ್ಷ ನಡೆಯುವ ಐಪಿಎಲ್ ಕ್ರಿಕೆಟ್ ವೇಳೆ ಬೆಟ್ಟಿಂಗ್ ನಡೆಯುವುದು ಸರ್ವೇ ಸಮಾನ್ಯ. ಆದರೆ, ಈ ಬಾರಿ ಬೆಟ್ಟಿಂಗ್ ಆನ್‍ಲೈನ್‍ಗೊಂಡಿದ್ದು, ವೆಬ್‍ಸೈಟ್‍ಗಳ ಮೂಲಕವೇ ಬೆಟ್ಟಿಂಗ್ ದಂಧೆ ನಡೆಯುತ್ತಿರುವುದು ಸೈಬರ್ ಕ್ರೆ?ಂ ಪೊಲೀಸಸರಿಗೆ ತಲೆನೋವಾಗಿ ಪರಿಣಮಿಸಿರುವುದಂತೂ ನಿಜ.

ಇಡೀ ದೇಶವೆ ಡಿಜಟಲಿಕರಣಗೊಳ್ಳುತ್ತಿದ್ದು, ಜೂಜು ಸಹ ಆನ್‍ಲೈನ್‍ಗೊಂಡಿದೆ. ಮದ್ಯವರ್ತಿಗಳೇ ಸೃಷ್ಟಿಸಿರುವ ವೆಬ್‍ಸೈಟ್‍ಗಳಿಂದಾಗಿ ಗ್ರಾಮೀಣ ಭಾಗದಲ್ಲಿಯು ಆನ್‍ಲೈನ್ ಬೆಟ್ಟಿಂಗ್ ದಂಧೆ ಶುರುವಾಗಿದೆ. ಬ್ಯಾಂಕಿಂಗ್ ವ್ಯವಹಾರ ಮಾಡುವ ಮಾದರಿಯಲ್ಲಿಯೇ ದಂಧೆ ನಡೆಯುತ್ತಿರುವುದು ಪೊಲೀಸರ ನಿದ್ದೆ ಕಸಿದಿದೆ.

ಮಹಾನಗರ ವ್ಯಾಪ್ತಿಯಲ್ಲಿನ ಕ್ರಿಕೆಟ್ ಮದ್ಯವರ್ತಿಗಳು ಸ್ಥಳೀಯವಾಗಿಯೇ ಒಂದೊಂದು ವೆಬ್‍ಸೈಟ್ ಅನ್ನು ಸೃಷ್ಟಿಸುತ್ತಿದ್ದಾರೆ. ಈ ವೆಬ್‍ಸೈಟ್ ಲಿಂಕ್ ಅನ್ನು ಬೆಟ್ಟಿಂಗ್ ಮಾಡುವವರಿಗೆ ಸಂದೇಶದ ಮೂಲಕ ಕಳುಹಿಸಲಾಗುತ್ತದೆ. ಈ ಲಿಂಕ್ ಅನ್ನು ತೆರೆಯಲು ಖಾತೆದಾರರ ಹೆಸರು, ಪಾಸ್‍ವರ್ಡ್ ಅವಶ್ಯಕ. ಇಲ್ಲಿ ಲಿಂಕ್ ಕಳುಹಿಸುವ ಮದ್ಯವರ್ತಿಗೆ ನಗದು ಮೂಲಕ ನೀಡಿದ ಅಷ್ಟು ಹಣವನ್ನು ಈ ಲಿಂಕ್‍ನಲ್ಲಿ ಪಾಯಿಂಟ್ಸ್ ಮೂಲಕ ನೀಡಲಾಗುತ್ತದೆ. ಅಷ್ಟು ಹಣ ಖಾಲಿಯಾಗುವವರೆಗೂ ಯಾವ ತಂಡದ ಮೇಲಾದರೂ, ಬೆಟ್ಟಿಂಗ್ ಕಟ್ಟಬಹುದು. ಹಣ ಖಾಲಿಯಾದ ಬಳಿಕ ಮತ್ತೆ ಮದ್ಯವರ್ತಿಯ ಕಿಸೆ ತುಂಬಿಸಿದರೆ, ಲಿಂಕ್‍ನಲ್ಲಿಯು ಪಾಯಿಂಟ್ಸ್ ಹೆಚ್ಚಾಗುತ್ತದೆ.
ಲಿಂಕ್‍ನಲ್ಲಿ ಹಣ ಇದ್ದರೆ ಮಾತ್ರವಷ್ಟೆ ಪುಟ ತೆರೆದುಕೊಳ್ಳುತ್ತದೆ. ಇಲ್ಲವಾದರೆ, ಲೋ ಬ್ಯಾಲೆನ್ಸ್ ಎಂಬ ಸಂದೇಶದೊಂದಿಗೆ ಲಿಂಕ್ ಕಟ್ ಆಗುತ್ತದೆ. ಮದ್ಯವರ್ತಿಗೆ ಹಣನೀಡಿದ ಬಳಿಕವಷ್ಟೆ ಈ ಪುಟಗಳು ಮತ್ತೆ ತೆರೆದುಕೊಳ್ಳುತ್ತವೆ. ಇಲ್ಲಿ ಯಾವ ತಂಡದ ಮೇಲೆ ಬೇಕಾದರೂ ಬೆಟ್ಟಿಂಗ್ ಕಟ್ಟಬಹುದು. ಇಲ್ಲವೇ, ಪ್ರತಿ ಎಸೆತ, ಸಿಕ್ಸ್-ಪೊರ್‍ಗಳ ಮೇಲೆಯು ಬೆಟ್ಟಿಂಗ್ ಕಟ್ಟಬಹುದು. ಕೊನೆ ಕ್ಷಣದ ವರೆಗೂ ಗೆಲ್ಲುವ ತಂಡದ ಮೇಲೆ ಜೂಜು ಕಟ್ಟಬಹುದು. ಇಲ್ಲಿ ಗೆಲುವು ಸಾಧಿಸಿದರೆ, ವೆಬ್‍ಪುಟದಲ್ಲಿನ ಪಾಯಿಂಟ್ಸ್ ಹೆಚ್ಚಾಗುತ್ತದೆ. ಆಟ ನಿಲ್ಲಿಸಿದ ಮರು ಕ್ಷಣದಲ್ಲಿಯೇ ಇನ್ನುಳಿದ ಅಷ್ಟು ಹಣ ಜುಜೂಕೋರರ ಖಾತೆಗೆ ವರ್ಗಾವಣೆಯಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.

ಆನ್‍ಲೈನ್ ಬೆಟ್ಟಿಂಗ್ ಹಳ್ಳಿಹಳ್ಳಿಗೂ ವ್ಯಾಪಿಸಿದೆ ಎಂಬುದೇ ಆತಂಕಕಾರಿ ವಿಷಯ. ಹಳ್ಳಿಗಳಲ್ಲಿ ಜನರು ಹೆಚ್ಚು ಹಣ ಕಟ್ಟಲು ಇಚ್ಛಿಸುವುದಿಲ್ಲ. ಅವರದ್ದೆ?ನಿದ್ದರೂ 10ರಿಂದ 100 ರೂ.ನಡುವಿನ ವ್ಯವಹಾರ. ಆನ್‍ಲೈಜ್ ಜೂಜುಕೋರರು, ಈಗ ಹಳ್ಳಿಗಳಿಗೂ ದಂಧೆ ಹರಡಿ, ಸಣ್ಣಪುಟ್ಟ ಬೆಟ್ಟಿಂಗ್‍ಗಳನ್ನೂ ಕಟ್ಟಿಸಿಕೊಳ್ಳುತ್ತಿರುವುದು ಆತಂಕದ ವಿಷಯವೇ ಸರಿ.

ಆನ್‍ಲೈನ್ ಬೆಟ್ಟಿಂಗ್‍ನ ತಲೆನೋವು ಎಂದರೆ, ಇದರ ಜಾಡು ಹಿಡಿಯುವುದು ಪೆÇಲೀಸರಿಗೆ ತುಂಬಾ ಕಷ್ಟವಾಗಿದೆ. ಬೆಟ್ಟಿಂಗ್ ದಂಧೆ ಹೇಗೆ ನಡೆಯುತ್ತಿದೆ ಎಂಬುದನ್ನು ಪತ್ತೆ ಹಚ್ಚಿ, ಇದನ್ನು ಸಾಬೀತುಪಡಿಸುವುದು ಪೆÇಲೀಸರಿಗೆ ಕಷ್ಟವಾಗಿದೆ. ಬಹಳಷ್ಟು ಪೆÇಲೀಸರಿಗೆ ಈ ರೀತಿಯ ಒಂದು ದಂಧೆ ನಡೆಯುತ್ತಿರುವುದೇ ಗೊತ್ತಿಲ್ಲ.

ಎಲ್ಲವು ಆನ್‍ಲೈನ್‍ಗೊಂಡಿದೆ. ಹೀಗಿರುವಾಗ ಅಪರಾಧ ಚಟುವಟಿಕೆಗಳು ಆನ್‍ಲೈನ್‍ಗೊಂಡಿರುವುದರಲ್ಲಿ ಅಚ್ಚರಿ ಇಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಾರೆ.ಆದರೆ, ಅವರಿಗೆ ಕಾಲವಕಾಶ ಬೇಕು, ಎಲ್ಲರು ಮೊಬೈಲ್ ಹಿಡಿದು  ಕುಳಿತಿರುತ್ತಾರೆ, ಆದರೆ, ಅವರಲ್ಲಿ ಬೆಟ್ಟಿಂಗ್ ಆಡುವರಾರು ಎಂದು ಕಂಡುಹಿಡಿಯುವುದು ಪೊಲೀಸ್ ರಿಗೂ ಕಷ್ಟವೇ ಸರಿ.

ಬೆಟ್ಟಿಂಗ್ ಪ್ರಿಯರಿಗೆ ಕ್ರಿಕೆಟ್ ಅಂದ್ರೆ ಅಚ್ಚಮೆಚ್ಚು. ಅದ್ರಲ್ಲೂ ಐಪಿಲ್ ಮತ್ತು ವಿಶ್ವಕಪ್ ಟೂರ್ನಿ ವೇಳೆಯಲ್ಲಿ ಭಾರೀ ಮೊತ್ತದ ಬೆಟ್ಟಿಂಗ್ ನಡೆಯತ್ತೆ. ಸದ್ಯ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಅಂದಾಜು14 ಲಕ್ಷ ಕೋಟಿ ಬೆಟ್ಟಿಂಗ್ ನಡೆಯಲಿದೆ ಎಂದು ವಿಶ್ವ ಸಟ್ಟಾ ದಂಧೆ ಮಾರುಕಟ್ಟೆ ಅಂದಾಜು ಹಾಕಿದೆ.ಈ ಬೆಟ್ಟಿಂಗ್ ದಂಧೆ ಭಾರತದಲ್ಲೂ ವ್ಯಾಪಿಸಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಪಂದ್ಯದ ವೇಳೆ ರಾಜಧಾನಿ ದೆಹಲಿಯೊಂದರಲ್ಲೇ 100 ಕೋಟಿ ಮೊತ್ತದಷ್ಟು ಬೆಟ್ಟಿಂಗ್ ನಡೆದಿದೆ ಎಂದು ದೆಹಲಿ ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.