ಪರಿಶಿಷ್ಠರಲ್ಲಿ ಒಳಮೀಸಲಾತಿ; ಇತ್ತೀಚಿನ ವಿದ್ಯಮಾನಗಳು

ಪರಿಶಿಷ್ಠರಲ್ಲಿ ಒಳಮೀಸಲಾತಿ ಬೇಡಿಕೆ ಇಂದು, ನಿನ್ನೆಯದಲ್ಲ; 30 ವರ್ಷಗಳ ಹಿರಿಯದ್ದು. ಹಲವು ಸರಕಾರಗಳಲ್ಲಿ ಬಗೆಹರಿಯದ ಬೃಹತ್ ಸಮಸ್ಯೆ ಇದಾಗಿದೆ. ಇದಕ್ಕೊಂದುಅಂತ್ಯ ಕಂಡುಕೊಳ್ಳುವ ಸೈದ್ಧಾಂತಿಕ ಗೊಜಿಗೆ ಇಲ್ಲಿಯವರೆಗೆ ಆಗಿ ಹೋದ ಯಾವ ಸರಕಾರಗಳು ಹೋಗಿಲ್ಲ. ಆದರೂ ಹೋರಾಟದ ತೀವ್ರತೆಯು ಸ್ವಲ್ಪವೂ ಕಡಿಮೆಯಾಗಿಲ್ಲ. ಹಲವು ಪ್ರಕಾರದ ಶಾಂತಿ ಮತ್ತು ಸೌಹಾರ್ಧತೆಯ, ನ್ಯಾಯೋಚಿತ ಧ್ವನಿ ಕೇಳುತ್ತಲೆ ಇದೆ.ಇತ್ತಿಚೀನ ವಿದ್ಯಮಾನವನ್ನು ಗಮನಿಸುವುದಾದರೆ, ಕಳೆದ ಸಾಲಿನ ಕಾಂಗ್ರೆಸ್ಸ್ ಸರಕಾರವು ತನ್ನ ಕೊನೆಯ ದಿನಗಳಲ್ಲಿ ಒಳಮೀಸಲಾತಿ ನೀಡುವಂತೆ ಶಿಫಾರಸ್ಸಾಗಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಸುತ್ತಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹಬ್ಬಿತ್ತು.ದಿನಕಳೆದಂತೆ ಮತ್ತೆ ಅದು ನನೆಗೂದಿಗೆ ಬಿತ್ತು. ಇದನ್ನು ಸಹಿಸದ ಹೋರಾಟಗಾರರು ನೇರವಾಗಿ ಸರಕಾರದ ವಿರುದ್ಧತಮ್ಮ ಸಿಟ್ಟನ್ನು ಹೊರಹಾಕಿದರು.

ಚುನಾವಣೆ ಹೊಸ್ತಿಲಲ್ಲಿ ಬಂದಕಾಲದಲ್ಲಿ ಮಾದಿಗ ಸಮುದಾಯವು ನೇರವಾಗಿ ಹೀಗೆ ಹೇಳಿಕೆ ನೀಡಿತ್ತು, ‘ಕಾಂಗ್ರೆಸ್ಸ್ ಸರಕಾರವನ್ನು ಸೋಲಿಸುತ್ತೇವೆಂದು, ಇದರ ಪರಿಣಾಮವು ಕೆಲವು ರಾಜಕಾರಣಿಗಳ ಮಾತುಗಳಿಂದ ಸತ್ಯವಾಗುತ್ತದೆÉ. ಈ ಹಿಂದೆ ಕಾಂಗ್ರೇಸ್ ಕಾರ್ಯಾಧ್ಯಕ್ಷರಾಗಿದ್ದ ಎಸ್. ಆರ್.ಪಾಟೀಲರು ಕಾಂಗ್ರೆಸ್ಸ್ ಸರಕಾರದ ಸೋಲಿಗೆ ಸದಾಶಿವ ವರದಿಯ ಗಟ್ಟಿ ನಿರ್ಧಾರ ತೆಗೆದುಕೊಳ್ಳದಿರುವುದೇ ಕಾರಣ ಎಂದಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ದೆಹಲಿಯಲ್ಲಿ ಪತ್ರಿಕೆ ಹೇಳಿಕೆ ನೀಡಿ, ‘ನಾವು ಸೋಲಲು ಈ ವರದಿಯನ್ನು ಕೇಂದ್ರಕ್ಕೆ ಕಳಸದಿರುವದೆಂದು ಒಪ್ಪಿಕೊಂಡಿದ್ದಾರೆ’. ಸ್ವತಃ ಪಕ್ಷದ
ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಮಾನ್ ರಾಹುಲ್ ಗಾಂಧಿಯವರು ಈ ವರದಿಯನ್ನು ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಕಳುಸಿರಿ ಎಂದು ಹೇಳಿದರು.ಅದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೇ ಈಗ ಅಧಿಕಾರ ಕಳೆದುಕೊಂಡು ಹುಡುಕಾಡುತ್ತಿದ್ದಾರೆ. ಈಗಲಾದ್ರು ಅವರು ಮಾಡಿದ ತಪ್ಪಿನ ಅರಿವಾಯಿತಲ್ಲವೆ. ತಕ್ಷಣ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆಯೇ ಎಂಬುದು ಕಾಯ್ದು ನೋಡಬೇಕಾಗಿದೆ.

ಅಂದಿನ ಕಾಂಗ್ರೆಸ್ಸ್ ಸರಕಾರವು ಜನರ ಪ್ರಬಲವಾದ ವಿರೋಧದ ನಡುವೆಯು ಕೆಲ ಜ್ವಲಂತಮಯ ಸಮಸ್ಯೆಗಳನ್ನು ಪರಿಹಾರಕ್ಕೆ ಕೈಗೆತ್ತಿಕೊಳ್ಳುತ್ತದೆ.ಅದರಲ್ಲಿ ಲಿಂಗಾಯತಧರ್ಮ, ಟಿಪ್ಪುಜಯಂತಿಯ ವಿಚಾರವಿರಬಹುದು.ಈ ಎರಡಕ್ಕೂ ಕರ್ನಾಟಕದ ರಾಜಕಾರಣದಲ್ಲಿ ಮತ್ತು ಜನಸಾಮಾನ್ಯರಲ್ಲಿ ಒಳಗೂ-ಹೊರಗೂ ಪ್ರಬಲವಾದ ವಿರೋಧವಿತ್ತು. ಆದರೆ ಇವುಗಳನ್ನು ಲೆಕ್ಕಿಸದೆ ತಕ್ಷಣ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇವು ಅವರ ಸ್ವಂತ ಸಮಸ್ಯೆಗಳೆಂದು ಈ ವಿರೋಧ, ಟೀಕೆ ಟಿಪ್ಪಣಿಗಳನ್ನು ಎದುರಿಸುತ್ತಾರೆ. ಆದರೆ ಸದಾಶಿವ ಆಯೋಗದ ಶಿಫಾರಸ್ಸನ್ನು ಹಲವು ಸಲ ಚರ್ಚಿಸಿ ಸಂಪುಟದ ಮುಂದೆ ತಂದು, ಹೋರಾಟಗಾರರೊಂದಿಗೆ ಸಾಕಷ್ಟು ಬಾರಿ ಮಾತನಾಡಿ ಇಂದು ಅಥವಾ ನಾಳೆ ಶಿಫಾರಸ್ಸು ಮಾಡುತ್ತಾರೆ ಎನ್ನುವ ನಿರೀಕ್ಷೆಯ ಸಂದರ್ಭದಲ್ಲಿ ಮತ್ತೆ ಅದನ್ನು ಮರೆತು ಮೌನವಾಗುತ್ತಾರೆ.ಎನಿರಬಹುದು ರಾಜಕೀಯ ತಂತ್ರ, ಹುನ್ನಾರ ಲಿಂಗಾಯತ ಧರ್ಮ ಮತ್ತು ಟಿಪ್ಪು ಜಯಂತಿಯ.ಎರಡು ನಿರ್ಧಾರದ ತುರ್ತಿನಂತೆ ಸರಕಾರದಿಂದ ಸದಾಶಿವ ವರದಿ ಏಕೆ ಜಾರಿತು? ನಾಯಕರ ಇಚ್ಛಾಶಕ್ತಿಯ ಕೊರತೆ ಇದೆಯೇ, ಪ್ರಬಲ ರಾಜಕಾರಣದ  ವಿರೋಧವಿದೆಯೇ? ಪರಿಶಿಷ್ಠ ಸಮುದಾಯದ ಕೆಲವು ಆಕ್ಷೇಪವಿದೆಯೇ? ಎಂದು ಶೋಧಿಸಿದಾಗ ಈ ಎಲ್ಲ ಶಕ್ತಿಗಳು ಇದರ ಹಿಂದೆ ಕೆಲಸ ಮಾಡುತ್ತಲಿವೆ. ಹೀಗಾಗಿ ತುಳಿತಕ್ಕೊಳಗಾದ ಸಮುದಾಯದ ನಿಷ್ಕಾಳಜಿಯು ಎದ್ದು ಕಾಣುತ್ತದೆ.

ಮೀಸಲಾತಿಯಿಂದ ಮುಂದುವರೆದು ಸಮಾಜಿಕವಾಗಿ, ರಾಜಕೀಯ, ಅರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಿರುವವರು ಇತರರಿಗೆ ಮೀಸಲಾತಿಯ ಅಥವಾ ಸರ್ವಕ್ಷೇತ್ರದ ಸೌಲಭ್ಯಗಳು ದೊರಕದಂತೆ ನೋಡಿಕೊಳ್ಳುತ್ತಿದ್ದಾರೆ ಎನಿಸುತ್ತದೆ. ಅಧಿಕಾರ ಅವರ ಮನೆಯಲ್ಲಿಯೇ ಇರಬೇಕು. ಒಬ್ಬರು ಎಂ.ಪಿ.ಆದರೆ ಮತ್ತೊಬ್ಬರುಎಂ.ಎಲ್.ಎ ಆಗಬೇಕು. ಆಯ್.ಎ.ಎಸ್,ಆಯ್.ಪಿ.ಎಸ್ ದಂತಹ ಉನ್ನತ ಅಧಿಕಾರಿಗಳು ಆಗಬೇಕು ಬೇರೆ ಕುಟುಂಬದವರು ಅವರ ಮನೆಯ ಕಸಗುಡಿಸುವ ಮತ್ತು ನಾಯಿ ಮೈತೊಳಿಯುವುದರಲ್ಲಿ ನಿರತರಾಗಿ ಆಯುಷ್ಯವನ್ನು ಇದರಲ್ಲಿ ಕಳೆಯಬೇಕು ಎನ್ನುವ ನೀಚ ಬುದ್ದಿಯು ಈ ವರದಿಯನ್ನು ತಡೆದು ನಿಲ್ಲಿಸಿದೆ ಎಂದು ಹಲವರು ವಿಶ್ಲೇಷಿಸುತ್ತಾರೆ.

ಕೆಲವರು ಈ ವರದಿಯನ್ನು ಅವೈಜ್ಞಾನಿಕವೆಂದು ವಿರೋಧಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಹಿಂದುಳಿದ ಸಮುದಾಯದಲ್ಲಿ ಇಂತಹ ಒಳಮೀಸಲಾತಿ ವ್ಯವಸ್ಥೆಯು 1962 ರಲ್ಲಿಯೇ ಅಸ್ತಿತ್ವಕ್ಕೆ ಬಂದು ಅದು ಈಗಲೂ ಜಾರಿಯಲ್ಲಿದೆ. ಹಿಂದುಳಿದ ವರ್ಗಗಳಲ್ಲಿ ಬರುವ ಎಲ್ಲಾ ಜಾತಿಗಳ ಶೇಕಡಾ 32% ರಷ್ಟು ಮೀಸಲಾತಿಯನ್ನು ಹಲವಾರು ಜಾತಿಗಳು ಹಂಚಿಕೊಂಡು ಸಮನಾದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಪರಿಶಿಷ್ಠರಲ್ಲಿ ಈ ವ್ಯವಸ್ಥೆಯು ಅವೈಜ್ಞಾನಿಕವೆಂದು ಕೆಲವು ರಾಜಕಾರಣಿಗಳು ಸೌಲಭ್ಯಗಳನ್ನು ಪಡೆದು ಮುಂದುವರೆದವರು ಹೇಳುತ್ತಿದ್ದಾರೆ. ಆದರೆ ಹಲವಾರು ಕಾನೂನು ತಜ್ಞರು ಈ ವರದಿಯು ಶಿಫಾರಸ್ಸುಗೆ ಯೋಗ್ಯವೆಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಹಲವು ರಾಜ್ಯಗಳಲ್ಲಿ ಪರಿಶಿಷ್ಠರ ಒಳ ಮೀಸಲು ಜಾರಿಯಲ್ಲಿದೆ. ಇದಕ್ಕೆ ಪೂರಕವಾಗಿ ಸಂವಿಧಾನತಜ್ಞ ರವಿವರ್ಮಕುಮಾರರು  “ಜಸ್ಟಿಸ್ ಸದಾಶಿವ ಆಯೋಗ ಒಂದು ಆಗಾಧ ಕಾರ್ಯವನ್ನು ಸಾಧಿಸಿದೆ.ಆಯೋಗ ನಡೆಸಿದ ವಿಸ್ತøತ ಸರ್ವೆಕಾರ್ಯ ಮೆಚ್ಚುವಂಥದ್ದು, ಅಂತೆಯೇ ಶಿಫಾರಸ್ಸಿನ ವರ್ಗೀಕರಣ ವೈಜ್ಞಾನಿಕವಾಗಿದೆ ಹಾಗೂ ಆಚರಣೆಗೆ ಯೋಗ್ಯವಾಗಿದೆ.ಲಭ್ಯವಿರುವ ಮೀಸಲಾತಿ ಸೌಲಭ್ಯವನ್ನು ಸಮಾನವಾಗಿ ಹಂಚಿಕೆ ಮಾಡಲಿಕ್ಕೆ ಇದರಿಂದ ಸಹಕಾರಿಯಾಗುತ್ತದೆ” ಎಂದು ವಾದಿಸುತ್ತಾರೆ. ಇಷ್ಟಕ್ಕೂ ಒಳಮೀಸಲಾತಿಯು ಪಂಜಾಬ್, ಉತ್ತರ ಪ್ರದೇಶ,
ಆಂದ್ರಪ್ರದೇಶ, ತಮಿಳನಾಡು ಮುಂತಾದ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಯಾವುದೆ ತಾರತಮ್ಯವಿಲ್ಲದೆ ಈ ಸೌಲಭ್ಯವನ್ನು ಪರಿಶಿಷ್ಠ ಸಮುದಾಯ ಪಡೆಯುತ್ತಲಿದೆ.ಇಷ್ಟು ಸತ್ಯನಿದರ್ಶನಗಳಿದ್ದರೂ, ಪರಿಶಿಷ್ಠ ಸಮುದಾಯದ ಅದೆಷ್ಟೋ ಬುದ್ಧಿ ಜೀವಿಗಳು ಈ ಸಮಸ್ಯೆಯ, ಸಾಧಕ-ಬಾದಕಗಳನ್ನು ತಿಳಿದಿದ್ದರೂ, ನ್ಯಾಯಪರಧ್ವನಿಯನ್ನು ಎತ್ತಿರುವುದೆ ವಿರಳ. ಸಮಾಜ ಕೆಟ್ಟ ಮಾರ್ಗದಲ್ಲಿ ನಡೆದರೆ ಅದಕ್ಕೆ ಸರಿ ಮಾರ್ಗತೋರಿಸುವ ಎಲ್ಲಾ ಜವಾಬ್ದಾರಿಗಳು ಇವರ ಮೇಲಿವೆ. ಆದರೆ ಮಾದಿಗ,ಹೊಲೆಯ(ಚಲವಾದಿ) ಎರಡೂ ಸಮುದಾಯದ ಬುದ್ಧಿಜೀವಿಗಳು, ಬರಹಗಾರರು ಮೌನ ಪ್ರದರ್ಶಿಸುತ್ತಿದ್ದಾರೆ. ಕೆಲವರು ಗೋಡೆಯ ಮೇಲೆ ದೀಪವನ್ನು ಇಡುವಂತೆ ತಮ್ಮ ವಿಚಾರವನ್ನು ಮಂಡಿಸುತ್ತಾರೆ.

ಇತ್ತೀಚಿಗೆ ಇತರೆ ಸಮುದಾಯದ ಸಾಹಿತಿಗಳು, ಚಿಂತಕರಾದ ಪ್ರೊ.ಚಂದ್ರಶೆಖರ ಪಾಟೀಲ,ಕೆ.ಎಸ್ ಭಗವಾನ್ ಮತ್ತು ನ್ಯಾಯವಾದಿಗಳಾದ ದ್ವಾರಕಾನಾಥರು ಈ ಕಗ್ಗಂಟು ಕುರಿತು ನೇರವಾಗಿ ಗಟ್ಟಿ ಧ್ವನಿಯ ಮೂಲಕ ಬಲವಾಗಿ ಪ್ರತಿಪಾದನೆ ಮಾಡಿದ್ದಾರೆ.ಈ ಹೋರಾಟಕ್ಕೆ ನ್ಯಾಯದೊರಕಲೇ ಬೇಕು, ಸರಕಾರದ ಸೌಲಭ್ಯಗಳು ಶೋಷಿತರಿಗೆ ದೊರಕದೆ ಅದು ಮತ್ತ್ಯಾರಿಗೆ ಇದರಿಂದ ಪ್ರಯೋಜನ, ಇದು ಯಾರ ಮನೆಯ ಸ್ವತ್ತಲ್ಲ. ನ್ಯಾಯೋಚಿತವಾದ ಬೇಡಿಕೆಯನ್ನು ನಾವು ಸಂಪೂರ್ಣ ಬೆಂಬಲಿಸಿದ್ದೇವೆಂದು ಹೊರಾಟಕ್ಕೆ ಬೆಂಬಲ ಸೂಚಿಸಿ ಅದರಲ್ಲಿ ಪಾಲ್ಗೊಂಡಿದ್ದಾರೆ ಇದರಿಂದ ನೋವಿನ ಧ್ವನಿಗೆ ಸಹಾಯ, ಸಹಕಾರ, ನ್ಯಾಯಯುತ ಶಕ್ತಿ ಬಂದಂತಾಗಿದೆ. ಇಷ್ಟಾದರೂ ಪರಿಶಿಷ್ಠ ಸಾಹಿತಿಗಳು ತುಟಿಯನ್ನು ಬಿಚ್ಚುವ ಪ್ರಯತ್ನವನ್ನೇ ಮಾಡಿಲ್ಲ. ಏಕೆಂದರೆ, ಸಾಮಾನ್ಯರ ಸಮಸ್ಯೆ ಅವರಿಗೆ ಸಂಬಂಧಿಸಿದ್ದಿಲ್ಲವೆಂದಿರಬೇಕು.

ಈಗಾಗಲೇ ಅವರು ಸ್ವಲ್ಪ ಮುಂದುವರೆದ ರಾಜಕಾರಣಿಗಳ ಜೊತೆ ಶಾಮಿಲಾಗಿ ಕಾಲಕಾಲಕ್ಕೆ ಬರುವ ಅಧಿಕಾರ, ಪ್ರಶಸ್ತಿ, ಸ್ಥಾನಮಾನಗಳನ್ನು ಪಡೆಯುತ್ತಿದ್ದಾರೆ. ಅವರಿಗೇಕೆ ಈ ಸಾಮಾನ್ಯರ ಸಮಸ್ಯೆಯ ಗೂಡವೆÀ ಎನ್ನುವದಾಗಿದೆ. ಮುಂದುವರೆದ ಬೋವಿ, ಲಂಬಾಣಿ, ಕೂರಚ, ಕೊರಮ ಸಮುದಾಯಗಳು 1976 ರಲ್ಲಿ ರಾಜಕೀಯ ಕಾರಣಕ್ಕಾಗಿ ಸೇರ್ಪಡೆಗೊಂಡಿದ್ದಾರೆ. ಇಂಥವರಿಗೆ ಅನ್ಯಾಯವಾಗದಂತೆ ಇದ್ದ ವ್ಯವಸ್ಥೆಯನ್ನು ನ್ಯಾಯಯುತವಾಗಿ ಸದುಪಯೋಗ ಪಡಿಸಿಕೊಂಡು ಸೌಲಭ್ಯಗಳನ್ನು ಪಡೆಯುತ್ತ ಮುನ್ನುಗ್ಗುತ್ತೇವೆಂದು ಮಾದಿಗ ಮತ್ತು ಹೊಲಯ ಸಮುದಾಯದ ಕೆಲವರು ಕೊನೆಯ ನಿರ್ಧಾರಕ್ಕೆ ಬಂದಿದ್ದಾರೆ. ಆದರೂ ಇದಕ್ಕೂ ಸಹಮತತೋರದೆ ಈಡೀ ಸದಾಶಿವ ಆಯೋಗದ ವರದಿಯನ್ನು ತಿರಸ್ಕಾರ ಮಾಡುವಂತೆ ಸರಕಾರದ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡುತಿದ್ದರೆ. ಕರ್ನಾಟಕದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ನ್ಯಾ.ವಿ.ಜೆ.ಸೇನ್ ಮತ್ತು ನ್ಯಾ.ಎಸ್. ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠವು ರಾಜ್ಯದ ಪರಿಶಿಷ್ಠ ಜಾತಿ ಪಟ್ಟಿಯಲ್ಲಿರುವ ಒಟ್ಟು 101 ಜಾತಿಗಳಲ್ಲಿ ಕ್ರಮವಾಗಿ 12-13-53 ಹಾಗೂ 54ನೇ ಸ್ಥಾನದಲ್ಲಿರುವ ಜಾತಿಗಳನ್ನು ಪರಿಶಿಷ್ಠ ಜಾತಿ ಪಟ್ಟಿಯಿಂದ ಕೈಬಿಡಬೇಕೆಂದು ಸರಕಾರಕ್ಕೆ ನಿರ್ದೇಶಿಸಿದೆ. ಇದನ್ನು ಸರಕಾರವು ಗಮನಿಸದೆ, ಮೌನವಹಿಸಿದೆ. ನ್ಯಾಯಾಲಯದ ಆದೇಶಕ್ಕೂ ಸರಕಾರ ಇಲ್ಲಿಯವರೆಗೂ ಸೊಪ್ಪ ಹಾಕಿಲ್ಲ.
ಮುಖ್ಯವಾಗಿ ಗಮನಿಸುವ ಅಂಶವೆಂದರೆ ಒಳಮೀಸಲಾತಿ ಕೇಳುವವರು ನ್ಯಾಯಾಲಯದ ಆದೇಶವನ್ನು ಜಾರಿಗೆ ತನ್ನಿ ಎಂದೂ ಎಲ್ಲಿಯೂ ಅಪ್ಪಿ ತಪ್ಪಿಯೂ ಕೇಳಿಲ್ಲ. ಇಂಥ ಮುಗ್ಧರನ್ನು,ಇನ್ನೂ ಅವರ ಸೌಲಭ್ಯಗಳನ್ನು ಬೇರೆಯವರು ಪಡೆದು ಕತ್ತಲ ಕೂಪಕ್ಕೆ ತಳ್ಳುತ್ತಿದ್ದಾರೆ. ಇಷ್ಟು ಸುದೀರ್ಘ ಇತಿಹಾಸದ ಹೋರಾಟವನ್ನು ನಡೆಸುತ್ತ ಬರುತ್ತಿರುವವರು ಯಾರ ವಿರುದ್ಧವು ತಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿಲ್ಲ. ಯಾರನ್ನು ತಿರಸ್ಕಾರ ಮತ್ತು ಎತ್ತಿ ಕಟ್ಟುವಂತೆ ನಡೆದುಕೊಂಡಿಲ್ಲ. ಪರಿಶಿಷ್ಟ ಪಟ್ಟಿಯಿಂದ ಕಿತ್ತೊಗೆಯುವ ಪ್ರಯತ್ನಕ್ಕೆ ಕೈ ಹಕಿಲ್ಲ . ಹೀಗೆ ಎಲ್ಲರ ವಿಕಾಸದ ಕಡೆಗೆ ಗಮನ ಹರಿಸಿ ಸಮಷ್ಟಿ ಪ್ರಜ್ಞೆಯಿಂದ ಹೋರಾಡುತ್ತಿದ್ದಾರೆ. ಆದರೆ ಅವರ ಹೋರಾಟಕ್ಕೆ ಮನ್ನಣೆ ಸಿಗದೆ ಹೋದರೆ ಮುಂದೊಂದು ದಿನ ಕೋರ್ಟಿನ ಆದೇಶವನ್ನು ಪಾಲಿಸಿರಿ ಎಂದು ಸರಕಾರಕ್ಕೆ ಗಟ್ಟಿ ಧ್ವನಿಯಿಂದ ಮಾದಿಗ-ಹೊಲೆಯ ಮತ್ತು ಸಂಬಂಧಿಸಿದ ಉಪಜಾತಿ,ಸಮುದಾಯದವರು ಬೀದಿಗಿಳಿಯಬಹುದು.

ಸಂವಿಧಾನಜಾರಿಗೆ ಬಂದಾಗ ಮೀಸಲಾತಿಯನ್ನು ಅದರಲ್ಲಿ ಸೇರಿಸಲಾದದ್ದು ಇತರೆ ಮುಂದುವರೆದ ಸಮುದಾಯದೊಂದಿಗೆ, ಹಿಂದುಳಿದವರನ್ನು ಸಮನಾಗಿ ನಿಲ್ಲಿಸುವ ಮುಖ್ಯವಾದ ಉದ್ದೇಶದಿಂದಲೇ ಆಗಿದೆ. ಆದರೆ ಇಂದು ಅದೇ ಸಮುದಾಯದ ಹಲವಾರು ಜಾತಿಗಳು ಮಾತ್ರ ಇದರ ಸದುಪಯೋಗ ಪಡೆದುಕೊಂಡಿವೆ. ಇನ್ನೂ ಹಲವು ಜಾತಿಗಳು ಇದರಿಂದ ಸ್ವಲ್ಪ ಹಿಂದಿದ್ದಾರೆ. ಹೀಗಾಗಿ ಒಳಮೀಸಲಿನ ಅವಶ್ಯಕತೆ ಎದ್ದು ಕಾಣುತ್ತದೆ ಎಂಬ ವಾದಗಳಿವೆ. ತಲುಪಬೇಕಾದ ಸಮುದಾಯಗಳಿಗೆ ಅದು ಇಲ್ಲಿಯವರೆಗೂ ದೊರಕದ ಕಾರಣಕ್ಕಾಗಿ ಈ ಹೋರಾಟ ಅನಿವಾರ್ಯವಾಗಿದೆ. ಇದಕ್ಕೆ ಪೂರಕವಾಗಿ ಹಾವನೂರ ಆಯೋಗದ ಪ್ರಕಾರ ಮಾದಿಗ  ಜನಾಂಗವು ಪರಿಶಿಷ್ಠ ಜಾತಿಗಳ ಜನಸಂಖ್ಯೆಯಲ್ಲಿ ಶೇಕಡಾ 57 ರಷ್ಟು ಇದ್ದಾರೆ. ಈ ಪ್ರಕಾರವಾಗಿ ಮಾದಿಗ ಜನಾಂಗಕ್ಕೆ ದೊರಕಬೇಕಾದ ಸ್ಥಾನಗಳು ಶೆಕಡಾ 15 ರಲ್ಲಿ 8 ರಷ್ಟು. ಆದರೆ ಇನ್ನೂ ಈ ಸೌಲಭ್ಯವನ್ನು ಎರಡಷ್ಟು ಪಡೆದಿಲ್ಲವೆನ್ನುತ್ತಾರೆ ಹೊರಾಟಗಾರರು. ಸದಾಶಿವ ಆಯೋಗವು ಪರಿಶಿಷ್ಟರನ್ನು 4 ಪ್ರಕಾರವಾಗಿ ವಿಂಗಡಿಸಿದೆ. ಮಾದಿಗರು ಮತ್ತು ಸಹಸಂಬಂದಿಗಳು, ಚಲವಾದಿ ಸಹಸಂಬಂದಿಗಳು, ಲಂಬಾಣಿ, ಬೋವಿ, ಕೊರಚ, ಕೊರಮ್ ಇತರ ಬುಡಕಟ್ಟು, ಇವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸೌಲಭ್ಯವನ್ನು ಪಡೆಯಬೇಕೆಂದು ಶಿಪಾರಸ್ಸು ಮಾಡಿದೆ.

ಮಾದಿಗರು 34 ಲಕ್ಷ - 6
ಚಲವಾದಿ 32 ಲಕ್ಷ - 5
ಲಂಬಾಣಿ, ಬೋವಿ 23 ಲಕ್ಷ - 3
ಬುಡಕಟ್ಟು/ ಅಲೆಮಾರಿ - 1
ಇದರಿಂದ ಈಗ ಚಾಲ್ತಿಯಲ್ಲಿರುವ 15% ರಲ್ಲಿ ಮಾದಿಗರಿಗೆ 6 ರಷ್ಟು ರಾಜಕೀಯ, ಸಮಾಜಿಕ, ಸರಕಾರಿ ನೌಕರಿಗಳು ದೊರಕಬೇಕು. ಪ್ರಸ್ತುತ ರಾಜಕೀಯ ವಿದ್ಯಮಾನವನ್ನು ಗಮನಿಸಿದಾಗ ಕರ್ನಾಟಕದ ವಿಧಾನ ಸಭೆಗೆ ಮೀಸಲಾದ ಒಟ್ಟು 36 ಸ್ಥಾನಗಳು-
ಕಾಂಗ್ರೆಸ್ಸ್ 12ಚಲವಾದಿ - 6, ಮಾದಿಗ 1, ಬೋವಿ 2, ಲಂಬಾಣಿ 3ಬಿಜೆಪಿ 16 ಚಲವಾದಿ - 4, ಮಾದಿಗ 5, ಬೋವಿ 3,ಲಂಬಾಣಿ 4ಜಿಡಿಎಸ್ 08 ಚಲವಾದಿ - 6, ಮಾದಿಗ 1, ಲಂಬಾಣಿ11607 0508
ಈ ರೀತಿಯಾಗಿ ಸ್ಥಾನಗಳು ದೊರೆತಿವೆ. ಮಾದಿಗ ಜನಸಂಖ್ಯೆಗೆ ಅನುಗುಣವಾಗಿ ದೊರೆಯುವ ಸ್ಥಾನಗಳು ಅರ್ಧದಷ್ಟು, ಅಂದರೆ 16 ರಿಂದ 18 ರಷ್ಟು ಆದರೆ ಈ ಪ್ರಮಾಣದ ಸ್ಥಾನಗಳು ಇವರಿಗೆ ದೊರಕಿಲ್ಲಾ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿರುವುದನ್ನು ಈ ಅಂಕಿ ಅಂಶಗಳು ಸಾದರ ಪಡಿಸುತ್ತವೆ. ಇದರಿಂದ ಕೆರಳಿದ ಪರಿಶಿಷ್ಠಜಾತಿಯ ಕೆಲವು ಸಮುದಾಯಗಳು ಒಗ್ಗಟ್ಟು ಮತ್ತು ಅರಿವಿನ ಸಹಾಯದಿಂದ ನಿರಂತರವಾಗಿ ಹೋರಾಡುತಿದ್ದಾರೆ. ಈ ಕಾರಣಕ್ಕಾಗಿ ಇಂದು ಕರ್ನಾಟಕದ ಪ್ರತಿ ಸಮುದಾಯದ ಬುದ್ಧಿ ಜೀವಿಗಳು, ರಾಜಕಾರಣಿಗಳ ಮನಸ್ಸು ಬದಲಾಗಿ, ಈ ವರಧಿಯ ಶಿಫಾರಸ್ಸಿನಿಂದ ನ್ಯಾಯವನ್ನು ಒದಗಿಸಿ ಅನ್ಯಾಯವನ್ನು ಸರಿಪಡಿಸ ಬೇಕೆನ್ನುವ ಒಕ್ಕೊರಲಿನ ಧ್ವನಿಯನ್ನು ಎತ್ತಿದ್ದಾರೆ. 30 ವರ್ಷಗಳ ಇತಿಹಾಸವಿರುವ ಈ ಹೋರಾಟದಂತಹ ಪರಂಪರೆಯು ಕರ್ನಾಟಕದ ಯಾವುದೇ ಸಮಸ್ಯೆಗೂ ಇಲ್ಲವೆಂದೇ ಹೇಳಬಹುದಾಗಿದೆ.

ಪರಿಶಿಷ್ಠರಿಗೆ ಮೀಸಲಾದ ಮತ್ತು ಅವರು ನಮ್ಮ ಸಹೋದರರೆಂದು ತಿಳಿದು ಸಹಾಯ ಸಹಕಾರವನ್ನು ಮೂಲ ನಿವಾಸಿಗಳಾದ ಮಾದಿಗ, ಹೊಲಯ ಸಮುದಾಯದಿಂದ ಪಡೆದು ಇಂದು ಒಂದು ಹೆಜ್ಜೆಯನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದೆ ಇಟ್ಟಿರುವ ಪರಿಶಿಷ್ಠ ಜಾತಿಯ ಕೆಲವರು ಜಗಲಿ ಕಟ್ಟುವವರು ಬೇಕೆ? ಇಲ್ಲವೆ ಪಾದರಕ್ಷೆ ಮಾಡುವವರು ಬೇಕೆ? ಯಾರಿಗೆ ನೀವು ಓಟು ನೀಡುತ್ತೀರೆಂದು ಇತರ ಮತದಾರರನ್ನು ಕೇಳುವ ಕ್ರೌರ್ಯದ, ಅವಮಾನ ಮಾಡುವ ಮಟ್ಟಕ್ಕೆ ಹೋಗಿದ್ದಾರೆ. ಉಂಡ ಮನೆಗೆ ಜಂತಿ ಎಣಿಸುವ ಈ ಸಮಯ ಸಾಧಕರನ್ನು ಕಂಡು ಖೇಧವಾಗುತ್ತದೆ. ಇಂಥವರನ್ನು ಇಂದು ಕೆಲ ಸಮುದಾಯದ ರಾಜಕಾರಣಿಗಳು ಇವರಿಗೆ ಬೆಂಬಲ ನೀಡಿ ಈಡೀ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಕುತಂತ್ರದ ಕಾರ್ಯ ಎಗ್ಗಿಲ್ಲದೆ ಸಾಗಿದೆ. ಇದರಿಂದ ಪ್ರಜ್ಞಾವಂತ ಸಮಾಜವು ತಲೆದಗ್ಗಿಸುವಂತಾಗಿದೆ. ಇಂಥವರು ತಮ್ಮ ಮೂಲ ಅರಿವಿಲ್ಲದೆ ಅರೆ ಪ್ರಜ್ಞಾವಂತರಾಗಿ ಅಲ್ಪ ಗಂಜಿಯನ್ನು ಪಡೆದು ಮತ್ತೊಬ್ಬರಿಗೆ ಇದು ದೊರಕದಂತೆ ನಡೆದುಕೊಳ್ಳುತ್ತಿದ್ದಾರೆ. ಇಂಥ ಗರ್ವದ ಮತ್ತು ಅಪ್ರಬುದ್ಧ ಹೇಳಿಕೆ ನೀಡುವವರು ಪರಿಶಿಷ್ಠ ಸಮುದಾಯದಲ್ಲಿ ಯಾರೆಯಾದರು ಅವರನ್ನು ಖಂಡಿಸಲೇಬೇಕು, ಅವರ ಸಂಸ್ಕøತಿ, ಪರಂಪರೆಯನ್ನು ಅರಿವು, ಪರಿಚಯ ಮಾಡಿಕೊಡಬೇಕು. ಕೆಲವೊಬ್ಬ ಪರಿಶಿಷ್ಟ ಸಮುದಾಯದ ಅತೃಪ್ತ ರಾಜಕಾರಣಿಗಳು ಇಂಥವರಿಗೆ ಬೆಂಬಲಿಸಿದ್ದಾರೆ.

ಹೀಗೆ ಹೇಳುವವರನ್ನು ಮತ್ತು ಬೆಂಬಲಿಸುವವರು ಅವರು ಪೂರ್ವಜರು ಬಂಗಾರದ ಆಭರಣಗಳನ್ನು ತಯಾರಿಸುತ್ತಿದ್ದರೇನು? ಎಂದು ಇಂದು ಪ್ರಜ್ಞಾವಂತರು ಕೇಳುತ್ತಿದ್ದಾರೆ. ಯಾವುದೇ ತಾರತಮ್ಯವಿಲ್ಲದೆ ಒಂದಾಗಿ ಹೋರಾಟ ಮಾಡುತ್ತ ಶೋಷಿತ ಸಮುದಾಯಗಳು ನೂರಾರು ವರ್ಷಗಳಿಂದ ಅನ್ಯಾಯ, ಶೋಷಣೆಯನ್ನು ಎದುರಿಸುತ್ತಿವೆ. ಆದರೆ ಇವರ ಈ ಪುಂಡಾಟದ ಹೇಳಿಕೆ ಮತ್ತು ಅನ್ಯಾಯವನ್ನು ಬೆಂಬಲಿಸುವದರಿಂದ ಶೋಷಿತ ಮನಸ್ಸುಗಳನ್ನು ಬೇರ್ಪಡಿಸುತ್ತದೆಯೇ ಅಥವಾ
ಒಂದುಗೂಡಿಸುತ್ತದೆ ಎಂಬುದನ್ನು ಅರಿತು ಜಾಗೃತಿಯಿಂದ ಎಲ್ಲರೂ ಒಟ್ಟಾಗಿ ಮುಂದುವರೆಸಬೆಕಾಗಿದೆ.

  • ಡಾ. ಹನುಮಂತಪ್ಪ ಸಂಜೀವಣ್ಣನವರ
    ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ
    ರಾಣಿಚನ್ನಮ್ಮ ವಿಶ್ವವಿದ್ಯಾಲಯ
    ಬೆಳಗಾವಿ.